ನಡು ವಯಸ್ಸಿನ ಮಹಿಳೆಯರಿಗೆ ದುಡಿಯೋ ಪಾಠ ಹೇಳಿ ಕೊಟ್ಟ ಶ್ರೀ ರಸ್ತು, ಶುಭ ಮಸ್ತು ಸೀರಿಯಲ್
ನೀವೇನು ಕೆಲಸ ಮಾಡ್ತೀರಿ ಎಂದಾಗ ಹೌಸ್ ವೈಫ್. ಬರೀ ಅಡುಗೆ ಮಾಡು, ತೊಳಿ, ಬಳಿ ಅಂತಾ ಇನ್ಮುಂದೆ ಬೇಸರದಲ್ಲಿ ಹೇಳ್ಬೇಡಿ. ನಿಮ್ಮ ಅಡುಗೆ ಕಲೆಯನ್ನು ಗಳಿಕೆಗೆ ಬಳಸಿಕೊಳ್ಳಿ. ನೀವೂ ಸ್ವಾವಲಂಬಿ ಬದುಕು ಶುರು ಮಾಡಿ.
ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡೋರಿಗೆ ಸುಧಾರಾಣಿ ಪಾತ್ರ ಇಷ್ಟವಾಗಿರುತ್ತೆ. ಆರಂಭದಲ್ಲಿ ಮಾದವ್ ರೆಸಿಪಿ ಬರೆದಿಟ್ಟುಕೊಂಡು ಅದನ್ನು ಮನೆಯಲ್ಲಿ ಅಡುಗೆ ಮಾಡಲು ಪ್ರಯತ್ನಿಸುತ್ತಿದ್ದ. ತುಳಸಿ ಪಾತ್ರ ನಿರ್ವಹಿಸುತ್ತಿರುವ ಸುಧಾರಾಣಿಗೆ ಮಧ್ಯ ವಯಸ್ಸಿನಲ್ಲಿ ಕೆಲಸ ಸಿಕ್ಕಿದೆ. ಅಡುಗೆ ಕೆಲಸಕ್ಕೆ ಸುಧಾರಾಣಿಗೆ ಸಿಗ್ತಿರೋ ಸಂಬಳ ಒಂದು ಲಕ್ಷ 10 ಸಾವಿರ ರೂಪಾಯಿ. ಇದೆಲ್ಲ ಧಾರಾವಾಹಿಯಲ್ಲಿ, ಸಿನಿಮಾದಲ್ಲಿ ತೋರಿಸ್ತಾರೆ. ಅಡುಗೆ ಮಾಡಿ ನಾವು ಇಷ್ಟೆಲ್ಲ ಸಂಬಳ ಪಡೆಯೋದು ಕನಸಿನ ಮಾತು ಬಿಡಿ ಅಂತಾ ನೀವಂದುಕೊಂಡಿದ್ರೆ ನಿಮ್ಮ ಊಹೆ ತಪ್ಪು. ಅಡುಗೆ ಬರಿ ಅಡುಗೆ ಅಲ್ವೇ ಅಲ್ಲ. ಅಡುಗೆಯಿಂದ ನೀವು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ಬಹುದು. ಇದಕ್ಕೆ ಅನೇಕರು ನಮಗೆ ಉದಾಹರಣೆಯಾಗಿ ಸಿಗ್ತಾರೆ.
ಈಗ ಕೆಲಸವೆಂದ್ರೆ ಐಟಿ (IT) ಕ್ಷೇತ್ರವೆಂದೇ ಅನೇಕರು ನಂಬಿದ್ದಾರೆ. ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡೋದನ್ನು ಮಾತ್ರ ಮಹಿಳೆಯರು ಕೆಲಸ ಎಂದುಕೊಂಡಿದ್ದಾರೆ. ಹೊರಗೆ ದುಡಿಯುವ ಹೆಣ್ಣು ಮಕ್ಕಳಿಗೆ ಅಡುಗೆ ಮಾಡೋದು ಅಂದ್ರೆ ತುಂಬಾ ಸ್ಟ್ರೆಸ್. ಇನ್ನು ಮನೆಯಲ್ಲಿ ಮನೆ ಕೆಲಸ ಮಾಡ್ತಾ ಇರುವ ಮಹಿಳೆಯರು, ನಮಗೆ ಬರೀ ಅಡುಗೆ (Cooking) ಮಾತ್ರ ಬರುತ್ತೆ. ಇನ್ನೇನು ಕಲೆ, ವಿದ್ಯೆ ಗೊತ್ತಿಲ್ಲ. ಓದಿದ್ದೂ ಅಷ್ಟಕ್ಕಷ್ಟೇ. ಹಾಗಾಗಿ ದುಡಿಮೆ ಎಲ್ಲಿಂದ ಬರಬೇಕು ಅಂತಾ ಬೇಸರ ಪಟ್ಟುಕೊಳ್ತಾರೆ. ನಿಮಗೆ ಅಡುಗೆ ಬರ್ತಿರೋದೇ ದೊಡ್ಡ ವಿಷ್ಯ. ಈ ಅಡುಗೆ ಮೂಲಕ ನೀವು ನಾನಾ ವಿಧದಲ್ಲಿ ಹಣ ಗಳಿಸಬಹುದು.
ಪತ್ನಿಯ ಉಡುಗೊರೆಗಳ ಮೇಲೆ ಪತಿಗೆ ಯಾವುದೇ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಮನೆಯಲ್ಲಿ ಮಾಡೋದನ್ನೇ ಸ್ವಲ್ಪ ಹೆಚ್ಚಿಗೆ ಮಾಡಿ ಬ್ಯುಸಿನೆಸ್ (Business) ಶುರು ಮಾಡಿ:
ನಿಮ್ಮ ಮನೆಯಲ್ಲಿ ಪ್ರತಿ ನಿತ್ಯ ಅಡುಗೆ ಮಾಡ್ಲೇಬೇಕು. ಅದು ನಿಮ್ಮದೇ ಜವಾಬ್ದಾರಿ ತಾನೇ? ನಿಮ್ಮ ಅಡುಗೆ ರುಚಿಯಾಗಿದೆ. ಮನೆಯವರಿಂದ ಮೆಚ್ಚುಗೆ ಸಿಗ್ತಿದೆ ಅಂದ್ರೆ ನೀವು ಅದನ್ನೇ ಬ್ಯುಸಿನೆಸ್ ಮಾಡ್ಕೊಳ್ಳಿ. ಮನೆಯಲ್ಲಿ ನಿತ್ಯ ಮಾಡುವ ಅಡುಗೆಯನ್ನೇ ಸ್ವಲ್ಪ ಹೆಚ್ಚು ಮಾಡಿ. ಈಗಿನ ದಿನಗಳಲ್ಲಿ ಅನೇಕರು ಅಡುಗೆಯವರನ್ನು ಹುಡುಕ್ತಿರುತ್ತಾರೆ. ಕೆಲಸದ ಒತ್ತಡದಿಂದ (Working Pressure) ಅವರಿಗೆ ಅಡುಗೆ ಮಾಡಲು ಸಮಯ ಇರೋಲ್ಲ. ಅಂಥವರನ್ನು ಹುಡುಕಿ ನೀವು ಅವರಿಗೆ ನಿಮ್ಮ ಅಡುಗೆ ನೀಡಬೇಕು. ಮಧ್ಯಾಹ್ನ ಅಥವಾ ರಾತ್ರಿ ಊಟ ಮಾಡಿಕೊಡುವ ಒಪ್ಪಂದ ಮಾಡಿಕೊಂಡು, ನಿಮ್ಮ ಮನೆಯಲ್ಲೇ ಅಡುಗೆ ಮಾಡಿ ಅವರಿಗೆ ತಲುಪಿಸಬಹುದು. ಇದಕ್ಕೆ ನೀವು ದೂರಕ್ಕೆ ಹೋಗ್ಬೇಕಾಗಿಲ್ಲ. ನಿಮ್ಮ ಅಕ್ಕಪಕ್ಕದ ಮನೆಯವರನ್ನೇ ನೀವು ಗ್ರಾಹಕರಾಗಿ ಪಡೆದರೆ ಕೆಲಸ ಇನ್ನೂ ಸುಲಭ|
ಟಿಪ್ ಸರ್ವಿಸ್: ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಮಧ್ಯಾಹ್ನದ ಬಾಕ್ಸ್ ತೆಗೆದುಕೊಂಡು ಹೋಗೋದು ಕಷ್ಟ. ಹಾಗಂತ ಹೊಟೇಲ್ ಊಟ ರುಚಿಸೋದಿಲ್ಲ. ಅಂಥವರಿಗೆ ನೀವು ಊಟದ ಡಬ್ಬ (Tiffin Box) ನೀಡುವ ಕೆಲಸ ಮಾಡ್ಬಹುದು. ನಿಮಗೆ ಸಾಧ್ಯವಿದೆ ಎನ್ನುವಷ್ಟೇ ಗ್ರಾಹಕರಿಗೆ ಆರಂಭದಲ್ಲಿ ಮಧ್ಯಾಹ್ನದ ಊಟ ನೀಡಿ. ನಂತ್ರ ಇದನ್ನು ವಿಸ್ತರಿಸಬಹುದು.
ವಿವಾಹಿತ ಮಹಿಳೆಯರಿಗೆ ಕಿವಿ ಮಾತೊಂದು ಹೇಳಿದ್ದಾರೆ ಸುಧಾ ಮೂರ್ತಿ… ಏನದು ಕೇಳಿ!
ಮಕ್ಕಳಿಗೆ ಮಧ್ಯಾಹ್ನದ ಊಟ : ನಿಮ್ಮ ಮನೆ ನಗರ, ಪಟ್ಟಣದ ಸುತ್ತಮುತ್ತಲಿದ್ರೆ ನೀವು ಮಧ್ಯಾಹ್ನ ಹಾಗೂ ಸಂಜೆ ಊಟಕ್ಕಾಗಿ ಮೆಸ್ ತೆರೆಯಬಹುದು. ಶಾಲೆ, ಕಾಲೇಜಿನ ಮಕ್ಕಳ ಜೊತೆ ಕೆಲಸಕ್ಕೆ ಹೋಗುವವರು ನಿಮಗೆ ಗ್ರಾಹಕರಾಗಿ ಸಿಗ್ತಾರೆ.
ಸಿಹಿ ತಿಂಡಿ, ಚಿಪ್ಸ್, ಕೇಕ್ ಮಾರಾಟ : ಪ್ರತಿ ನಿತ್ಯ ಅಡುಗೆ ಮಾಡಿ ಮಾರಲು ಸಾಧ್ಯವಿಲ್ಲ ಎನ್ನುವವರು ಸಿಹಿ ತಿಂಡಿ, ಚಿಪ್ಸ್, ಕೇಕ್ ತಯಾರಿಸಿ ಮಾರಾಟ ಮಾಡಬಹುದು. ಮನೆಯಲ್ಲಿ ತಯಾರಾಗುವ ಆಹಾರಕ್ಕೆ ಯಾವಾಗ್ಲೂ ಹೆಚ್ಚು ಬೆಲೆ, ಬೇಡಿಕೆ ಇದೆ. ನೀವು ಬಜ್ಜಿ, ಬೋಂಡಾ ಮಾಡಿ ಕೂಡ ಮಾರಬಹುದು. ನೀವು ತಯಾರಿಸಿದ ಖಾದ್ಯಗಳನ್ನು ಹೊಟೇಲ್‌ಗೆ ಮಾರಾಟ ಮಾಡಬಹುದು. ಒಂದೇ ಒಂದು ಕಂಡೀಷನ್ ಅಂದ್ರೆ ಅದು ರುಚ್ ರುಚಿಯಾಗಿರಬೇಕು. ಮತ್ತೆ ನಿಮಗೆ ಲಾಭ ತರುವಂತೆ ಮಾಡಬೇಕೇ ಹೊರತು, ಲಾಸ್ ಆಗಲು ಬಿಡಿಬಾರದು.
ಅಡುಗೆ ಗೊತ್ತಿದ್ರೆ ಗಳಿಕೆಗೆ ನಾನಾ ವಿಧಾನಗಳಿವೆ. ನಿಮಗೆ ಯಾವುದು ಸೂಕ್ತ ಎಂಬುದನ್ನು ನೋಡಿ ನೀವು ಕಡಿಮೆ ಬಂಡವಾಳದಲ್ಲಿ ಕೆಲಸ ಶುರು ಮಾಡಿ. ಆರಂಭದಲ್ಲಿ ಹೆಚ್ಚು ಲಾಭ ಬಂದಿಲ್ಲವೆಂದ್ರೂ ನಿಧಾನವಾಗಿ ನಿಮ್ಮ ವ್ಯವಹಾರ ವಿಸ್ತರಿಸುತ್ತದೆ. ಆಹಾರಕ್ಕೆ ಯಾವ ಸಮಯದಲ್ಲೂ ಬೇಡಿಕೆ ಕಡಿಮೆಯಾಗೋದಿಲ್ಲ.