Asianet Suvarna News Asianet Suvarna News

Women's Day: ಅವಳು ಬಹುವಚನ, ಮಹಿಳಾ ದಿನವನ್ನಲ್ಲ, ಮಹಿಳಾತನವನ್ನು ಸಂಭ್ರಮಿಸಬೇಕು

ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಈ ದಿನವನ್ನು ಆಚರಿಸುವುದರ ಬಗ್ಗೆ ಮಹಿಳೆಯರ ಅಭಿಪ್ರಾಯವೇನು ತಿಳಿದುಕೊಳ್ಳೋಣ.

Womens Day, Four Different sectors womens opinion on this special day Vin
Author
First Published Mar 5, 2023, 2:52 PM IST

ಮಾರ್ಚ್‌ 8ರಂದು ಮಹಿಳಾ ದಿನಾಚರಣೆ. ಆ ಪ್ರಯುಕ್ತ ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಾಗ ಆ ನಾಲ್ಕು ಪ್ರಶ್ನೆಗಳಿಗೆ ನಾಲ್ಕು ಬೇರೆ ಬೇರೆ ಕ್ಷೇತ್ರಗಳ ಮಹಿಳೆಯರ ಉತ್ತರಗಳು ಹೇಗಿವೆ. ಅನ್ನೋ ಮಾಹಿತಿ ಇಲ್ಲಿದೆ.

ಪ್ರಶ್ನೆಗಳು
1. ಸ್ತ್ರೀ ಸ್ವಾತಂತ್ರ್ಯದ ಕುರಿತು ದಶಕಗಳಿಂದಲೇ ಚರ್ಚೆ, ಹೋರಾಟ ನಡೆಯುತ್ತಿದೆ. ಸ್ವಾತಂತ್ರ್ಯ ಸಿಕ್ಕಿದೆ ಅಂತ ಅನ್ನಿಸುತ್ತದೆಯಾ?
2. ಇನ್ನೂ ಏನೇನು ಬದಲಾವಣೆ ಆಗಬೇಕಾಗಿದೆ?
3. ಸಮಾಜದ ದೃಷ್ಟಿಕೋನ ಬದಲಾಗಿದೆ ಅನ್ನಿಸುತ್ತದೆಯಾ? ಇಲ್ಲದೇ ಹೋದರೆ ಎಲ್ಲೆಲ್ಲ ಅಸಮಾನತೆ ಕಾಣಿಸುತ್ತಿದೆ?
4. ಮಹಿಳಾ ದಿನವನ್ನು ಹೇಗೆ ಆಚರಿಸಬೇಕು ಅನ್ನುತ್ತೀರಿ?

ಮಹಿಳಾತನವನ್ನು ಸಂಭ್ರಮಿಸಬೇಕು, ಅರ್ಚನಾ ಉಡುಪ 
- ನಾನೀಗ ಮೀ ಟೈಮ್‌ ಬೇಕು ಅಂತ ಎರಡು ಮೂರು ದಿನ ಒಬ್ಬಳೇ ಯಾವ್ದೋ ಊರಿಗೆ ಹೋದೆ ಅಂತಿಟ್ಕೊಳ್ಳಿ. ಆ ಸಮಯವನ್ನು ಖುಷಿಯಿಂದ ಕಳೆಯೋದು ಬಿಟ್ಟು, ಮಕ್ಕಳು ಏನು ಮಾಡ್ತಿದ್ದಾವೋ, ಅವು ಊಟ ಮಾಡಿದ್ವೋ ಇಲ್ವೋ.. ಬಾಗಿಲು ಚಿಲಕ ಸರಿಯಾಗಿ ಹಾಕ್ಕೊಂಡಿದ್ವೋ ಇಲ್ವೋ.. ಹೀಗೆ ಯೋಚನೆ ಮಾಡ್ತಿದ್ರೆ ಅದೆಲ್ಲಿ ಸ್ವಾತಂತ್ರ್ಯ ಆಗುತ್ತೆ? ಮುಂಚೆಗೆ ಹೋಲಿಸಿದರೆ ಈಗ ಸಾಮಾಜಿಕವಾಗಿ, ಆರ್ಥಿಕವಾಗಿ ಮಹಿಳೆ ತುಂಬ ಮುಂದುವರಿದಿದ್ದಾಳೆ. ಆದರೂ ಎಲ್ಲೋ ಒಂದು ಕಡೆ ಕೈ ಕಾಲುಗಳಿಗೆ ಚೈನು ಹಾಕೇ ಇರುತ್ತೆ ಅಂತ ನನಗನಿಸುತ್ತೆ. ಮನೇಲಿ ಗಂಡನ ಜೊತೆ ಜಗಳ ಆಯ್ತು ಅಂತಿಟ್ಕೊಳ್ಳಿ. ಆಗ ಅವಳು ಹುಟ್ಟಿಬೆಳೆದ ಮನೆಗೆ ಹೋಗ್ತಾಳೆ. ಆಗ ಹೆತ್ತವರೇ, ನಾವು ಇದ್ರಲ್ಲಿ ಮೂಗು ತೂರಿಸಲ್ಲ, ಏನಿದ್ರೂ ಅನುಸರಿಸಿಕೊಂಡು ಹೋಗು ಅಂತಾರೆ. ಅವಳಿಗೆ ಬೇರೆ ಯಾವ ಆಯ್ಕೆಯೂ ಇಲ್ಲ. ಕೆಲವರು ಆರ್ಥಿಕವಾಗಿಯೂ ಸಬಲರಾಗಿರಲ್ಲ. ಆತ್ಮಸಾಕ್ಷಿ, ಆತ್ಮಗೌರವವನ್ನು ಕೊಂದುಕೊಂಡು ಮತ್ತೆ ಬರ್ತಾರೆ.

Womens Day : ಎಲ್ಲಿಂದ ಶುರುವಾಯ್ತು ಮಹಿಳಾ ದಿನಾಚರಣೆ?

- ಹೆಣ್ಣಿಗೆ ಎಲ್ಲ ಕಡೆಯಿಂದ ಸಪೋರ್ಟ್‌ ಸಿಗಬೇಕು. ಕೊಟ್ಟಹೆಣ್ಣು ಕುಲಕ್ಕೆ ಹೊರಗೆ, ಅನುಸರಿಸು, ಅಡ್ಜೆಸ್ಟ್‌ ಮಾಡ್ಕೋ, ಕಾಂಪ್ರಮೈಸ್‌ ಮಾಡು, ಸ್ಯಾಕ್ರಿಫೈಸ್‌ ಮಾಡು, ತಗ್ಗಿ ಬಗ್ಗಿ ನಡೆ ಅಂತೆಲ್ಲ ನಾನ್‌ಸೆನ್ಸ್‌ ಹೇಳೋದನ್ನು ಮೊದಲು ನಿಲ್ಲಿಸಬೇಕು. ಮನೆಯೇ ಮೊದಲ ಪಾಠ ಶಾಲೆ, ಅಲ್ಲೇ ಸಮಾನತೆಯ ಪಾಠ ಹೇಳಬೇಕು. ಗಂಡು ಮಗು ಆಗಿರಲಿ, ಹೆಣ್ಣಾಗಿರಲಿ ಸಮವಾಗಿ ನಾವು ಬೆಳೆಸುತ್ತಾ ಬಂದರೆ ಇಬ್ಬರಿಗೂ ಒಳ್ಳೆಯದು. ಹೆಣ್ಣು ಮಕ್ಕಳ ಸ್ವತಂತ್ರ ಯೋಚನೆಗಳಿಗೆ ನಾವೇ ಬೆಂಬಲವಾಗಿ ನಿಲ್ಲಬೇಕು. ಗಂಡುಮಕ್ಕಳಿಗೆ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳೋದನ್ನು ಕಲಿಸಬೇಕು, ನಿನ್ನ ಕೆಲಸ ನೀನೇ ಮಾಡ್ಕೊಂಡ್ರೆ ಅದ್ರಿಂದ ಮರ್ಯಾದೆ ಹೋಗಲ್ಲ, ನೀನು ಕಣ್ಣೀರು ಹಾಕಿದಾಕ್ಷಣ ವೀಕ್‌ ಆಗಲ್ಲ ಅನ್ನೋದನ್ನು ಮನದಟ್ಟು ಮಾಡಬೇಕು. ಅವು ಮುಂದಕ್ಕೆ ಹಾಗೇ ಬೆಳೀತವೆ.

- ನಮ್ಮ ಮನರಂಜನಾ ಕ್ಷೇತ್ರದಲ್ಲೂ ಅಸಮಾನತೆ ಇದೆ. ಎಷ್ಟೋ ಸಿನಿಮಾಗಳಲ್ಲಿ ಹೀರೋಯಿನ್‌ ಒಂಥರ ಐ ಕ್ಯಾಂಡಿ ಇದ್ದಂಗಿರ್ತಾಳೆ. ಅಬಲೆಯಾಗಿ ಅವಳು ಕಷ್ಟಕ್ಕೆ ಸಿಕ್ಕಾಕಿಕೊಳ್ಳೋದು, ಹೀರೋ ಬಂದು ಕಾಪಾಡೋದು, ಇದನ್ನೇ ಬಿಂಬಿಸುತ್ತೇವೆಯೇ ಹೊರತು ಮಹಿಳೆಯರೂ ತಮ್ಮನ್ನು ತಾವು ಕಾಪಾಡಿಕೊಳ್ಳಬಹುದು ಅಂತ ಅವಳನ್ನು ಸ್ಟ್ರಾಂಗ್‌ ಆಗಿ ತೋರಿಸಲ್ಲ. ಬದಲಾಗಿ ಹೆದರಿಕೆಯಲ್ಲೇ ಬೆಳೆಸುತ್ತಾ ಹೋಗ್ತೀವಿ. ಇಷ್ಟೊತ್ತೊಳಗೆ ಬಂದುಬಿಡು, ಹೊರಗೆ ಸಮಾಜ ಸರಿಯಿಲ್ಲ ಅಂತೀವಿ. ಅದರ ಬದಲು ಅವಳನ್ನು ಎಷ್ಟುಸಬಲೆಯನ್ನಾಗಿ ಮಾಡಬಹುದು ಅಂತ ಯೋಚನೆ ಮಾಡಬೇಕು. ಈಗಲೂ ಹೆಚ್ಚಿನೆಲ್ಲ ಕ್ಷೇತ್ರಗಳಲ್ಲಿ ಮೇಲ್‌ ಡಾಮಿನೆನ್ಸ್‌ ಇದೆ. ಹೆಣ್ಮಕ್ಕಳ ಕೈಗೆ ಕೆಳಗೆ ಕೆಲಸ ಮಾಡೋದು ಅಂದ್ರೆ ಹುಡುಗರಿಗೆ ಇಗೋ ಸಮಸ್ಯೆ ಆಗುತ್ತೆ. ಇದೆಲ್ಲ ಸರಿಹೋಗಬೇಕಿದೆ.

- ಮಹಿಳೆಯರಿಗೆ ಒಂದು ದಿನ ಅಂತಿಡೋದು ಸ್ಟುಪಿಡ್‌ ಅನಿಸುತ್ತೆ. ಯಾಕೆ ಒಂದು ದಿವಸಕ್ಕೆ ಸೀಮಿತವಾಗಬೇಕು? ಹೆಣ್ಣು ಪ್ರತೀ ದಿನ, ಪ್ರತೀ ಕ್ಷಣ ತನ್ನನ್ನು ತಾನು ಸೆಲೆಬ್ರೇಟ್‌ ಮಾಡ್ಕೊಳ್ಳಬೇಕು. ನನ್ನನ್ನು ನಾನು ಪ್ರೀತಿಸಬೇಕು. ಅದು ನಮ್ಮ ಆ್ಯಕ್ಷನ್‌ನಲ್ಲಿ ಕಾಣಲಿ. ಅರೆ, ವ್ಹಾ ನಾನು ಎಷ್ಟೆಲ್ಲ ಮಾಡ್ತೀನಲ್ಲ, ನಾನು ಸೂಪರ್‌ ಅಂತ ನಮ್ಮನ್ನು ನಾವೇ ಬೆನ್ನುತಟ್ಟಿಕೊಳ್ಳಬೇಕೇ ಹೊರತು ಬೇರೆಯವರ ಮೆಚ್ಚುಗೆ ನಿರೀಕ್ಷಿಸಬಾರದು. ಎಲ್ಲರ ಊಟ ಆದ್ಮೇಲೆ ನಾನು ಮಾಡ್ತೀನಿ, ನಾನು ತಿಂದ್ರೆ ಎಲ್ಲರಿಗೂ ಸಾಕಾಗುತ್ತಾ ಇಲ್ವಾ ಅನ್ನೋದನ್ನೆಲ್ಲ ಬಿಟ್ಟು ನಾನಿದ್ರೆ, ನಾನು ಚೆನ್ನಾಗಿದ್ರೆ ಉಳಿದವರೂ ಚೆನ್ನಾಗಿರುತ್ತಾರೆ ಅನ್ನೋ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆವಾಗ ನಿಜ ಅರ್ಥದಲ್ಲಿ ಹೆಣ್ತನದ ಸೆಲೆಬ್ರೇಶನ್‌ ಆಗುತ್ತೆ.

Women Rights : ಪ್ರತಿಯೊಬ್ಬ ಮಹಿಳೆಗೂ ತಿಳಿದಿರಬೇಕು ಈ ಕಾನೂನು

ಸ್ವಾತಂತ್ರ್ಯ ಕೊಡಬೇಕಾಗಿಲ್ಲ, ಕಂಡುಕೊಳ್ಳಬೇಕು-ಗಾನವಿ ಲಕ್ಷ್ಮಣ್‌, ನಟಿ
- ನನಗೆ ಈ ಸ್ತ್ರೀ ಸ್ವಾತಂತ್ರ್ಯ ಎಂಬುದರ ಬಗ್ಗೆಯೇ ಪ್ರಶ್ನೆಗಳು ಅಥವಾ ಏನು ಹೇಳಬೇಕೋ ಗೊತ್ತಿಲ್ಲ. ಯಾಕೆಂದರೆ ಸ್ತ್ರೀ ಸ್ವಾತಂತ್ರ್ಯ ಎನ್ನುವುದಕ್ಕಿಂತ ಇಂಡಿಫೆಂಡೆಂಟ್‌ ಥಿಂಕರ್ಸ್‌ ಅಂದುಕೊಳ್ಳಬಹುದು. ನಮ್ಮೊಳಗೆ ನಾವು ಕಂಡುಕೊಳ್ಳುವ ಪ್ರಕ್ರಿಯೆ ಸ್ವಾತಂತ್ರ್ಯ. ಸಿಕ್ಕಿದೆಯಾ ಎಂದು ಕೇಳಿದರೆ ಯಾರೋ ಕೊಡಬೇಕು ಎಂದರ್ಥ. ಕೊಡುವ ಅಗತ್ಯ ಇಲ್ಲ. ಕಂಡುಕೊಳ್ಳುವ ಅಗತ್ಯ ಇದೆ.

- ನಮ್ಮ ನಮ್ಮ ಆಲೋಚನೆಗಳು ಮೊದಲು ಬದಲಾಗಬೇಕು. ಗಂಡು- ಹೆಣ್ಣು, ಸಮಾಜ, ಸಮಾನತೆ, ಎಲ್ಲರು ಒಂದೇ ಎನ್ನುವ ವಿಚಾರಗಳನ್ನು ಮನನ ಮಾಡಿಕೊಳ್ಳುವ ಹೊತ್ತಿನಲ್ಲಿ ನಮ್ಮ ಆಲೋಚನೆಗಳು ಬದಲಾಗಬೇಕಿದೆ.

- ಖಂಡಿತ ಬದಲಾಗಿದೆ. ಹತ್ತು ವರ್ಷಗಳ ಹಿಂದೆ ಹೆಣ್ಣು ಮಕ್ಕಳ ಪರಿಸ್ಥಿತಿ, ಸ್ಥಾನ- ಮಾನ ಮತ್ತು ಅವರ ತೊಡಗಿಸಿಕೊಳ್ಳುವಿಕೆ ನೋಡಿದರೆ ಈಗ ಉತ್ತಮ ಆಗಿದೆ. ಇದು ಬದಲಾಗುತ್ತಿರುವ ದೃಷ್ಟಿಕೋನ ಎಂದುಕೊಳ್ಳಬೇಕು. ಇನ್ನು ಅಸಮಾನತೆ ಎಲ್ಲಿದೆ ಎಂದು ಕೇಳಿದಾಗ ಇದೆ ಎಂದುಕೊಂಡರೆ ನನ್ನೊಳಗೆ ನೆಗೆಟಿವ್‌ ಆಲೋಚನೆ ಆಗುತ್ತದೆ. ‘ಲೀವ್‌ ಈಟ್‌, ಮುಂದಕ್ಕೆ ಹೋಗೋಣ’ ಎನ್ನುವ ಭಾವನೆ ಬೆಳೆಸಿಕೊಂಡರೆ ಕಾಣಿಸೋ ಅಸಮಾನತೆ ಕೂಡ ಮರೆಯಾಗುತ್ತದೆ.

- ಮನುಷ್ಯರನ್ನು ಮನುಷ್ಯರಾಗಿ ನೋಡಿ. ಹೆಣ್ಣು ಮತ್ತು ಗಂಡು ಇಬ್ಬರು ಮನುಷ್ಯರೇ. ಇಬ್ಬರೂ ಪ್ರಕೃತಿಯ ಸೃಷ್ಟಿನೇ. ಸೃಷ್ಟಿಯ ಮೂಲ ಪ್ರಕೃತಿಗೆ ಗೌರವ ಕೊಡುವ ಮೂಲಕ ಮನುಷ್ಯರನ್ನ ಮನುಷ್ಯರನ್ನಾಗಿ ನೋಡುವ ನಿಟ್ಟಿನಲ್ಲಿ ಇಂಥ ದಿನಾಚರಣೆಗಳು ಆಚರಣೆ ಆಗಲಿ.

ಆದಾಯದಲ್ಲಿ ಅಸಮಾನತೆ; ಅದಿತಿ ಸಾಗರ್‌, ಗಾಯಕಿ- ನಟಿ
- ಸ್ತ್ರೀ ಸ್ವಾತಂತ್ರ್ಯ ಎಂಬುದು ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥ ಆಗುತ್ತದೆ. ಪುರುಷರ ದೃಷ್ಟಿಕೋನದಲ್ಲಿ ಒಂದು ರೀತಿ ಇದ್ದರೆ, ಮಹಿಳೆಯರ ದೃಷ್ಟಿಕೋನದಲ್ಲಿ ಒಂದು ರೀತಿ ಇರುತ್ತದೆ. ನನ್ನ ಪ್ರಕಾರ ಸ್ವಾತಂತ್ರ್ಯ ಎನ್ನುವುದಕ್ಕಿಂತ ಅವಕಾಶಗಳು ಸಿಕ್ಕಿವೆ.

- ಗಂಡು ಮತ್ತು ಹೆಣ್ಣು ಒಂದೇ ರೀತಿಯಲ್ಲಿ ಬೆಳೆಸಬೇಕು. ಹೆಣ್ಣು ಮಕ್ಕಳು ಇಂಥ ಕೆಲಸ ಮಾಡಬೇಕು, ಗಂಡು ಮಕ್ಕಳು ಇಂಥ ಕೆಲಸ ಮಾಡಬೇಕು ಎನ್ನುವ ತಾರತಮ್ಯ ಮಾಡಕೂಡದು. ಯಾವುದೇ ಕೆಲಸಕ್ಕೆ ಹೆಣ್ಣು- ಗಂಡು ಎನ್ನುವ ಭೇದವಿಲ್ಲ. ಮನೆಯಿಂದಲೇ ಈ ಬದಲಾವಣೆ ಆರಂಭವಾಗಬೇಕು. ಪೋಷಕರು ಮಗ/ಮಗಳು ಸಮಾನವಾಗಿ ನೋಡುವ ವಾತಾವರಣ ಸೃಷ್ಟಿಸಬೇಕು.

- ಹಿಂದಿಗಿಂತ ಈಗ ಬದಲಾವಣೆ ಆಗಿದೆ. ಮಹಿಳೆ ಹೊರಗೆ ಬಂದು ದುಡಿಯುವ ಹಂತಕ್ಕೆ ಬಂದಿದ್ದಾಳೆ ಎಂಬುದು ಬದಲಾವಣೆ ಎಂದುಕೊಳ್ಳಬಹುದು. ಕೆಲಸ- ಉದ್ಯೋಗ ಅಂತ ಬಂದಾಗ ಹೆಣ್ಣಿಗೊಂದು, ಗಂಡಿಗೊಂದು ಸಂಬಳ ಎನ್ನುವ ಭಾವನೆಯಲ್ಲಿ ಅಸಮಾನತೆ ಇದೆ. ದುಡಿಮೆ ಮತ್ತು ಆದಾಯ ಎರಡೂ ಹೆಣ್ಣು ಮತ್ತು ಗಂಡಿಗೂ ಸಮಾನವಾಗಿ ದಕ್ಕುತ್ತಿಲ್ಲ.

- ನಾವೂ ನಿಮ್ಮಂತೆಯೇ ಜೀವಿಗಳು. ಗೌರವ ಕೊಡಿ ಮತ್ತು ಗೌರವ ಪಡೆದುಕೊಳ್ಳುವ ಎಂದು ಹೇಳುವ ನಿಟ್ಟಿನಲ್ಲಿ ಆಚರಣೆ ಆಗಬೇಕು.

ಮೊದಲು ಸೆರಗಲ್ಲಿ ಕಣ್ಣೀರು ಒರೆಸ್ತಿದ್ರು, ಈಗ ಟಿಶ್ಯೂನಲ್ಲಿ ಒರೆಸ್ತಾರೆ ಅಷ್ಟೇ-- ಡಾ.ಹೆಚ್‌.ಎಸ್‌ ಅನುಪಮಾ, ಸಾಹಿತಿ
- ಮಹಿಳೆ ಪುರುಷ ಅಂತಲ್ಲ ಯಾರೇ ಆದರೂ ಅವರ ಬದುಕಿನ ನಿರ್ಧಾರಗಳನ್ನು ಅವರೇ ತಗೊಳ್ಳೋದಕ್ಕೆ ಸಾಧ್ಯವಾಗೋದೇ ಸ್ವಾತಂತ್ರ್ಯ. ಉದ್ಯೋಗ, ಶಿಕ್ಷಣ, ಬಾಳ ಸಂಗಾತಿಯ ಆಯ್ಕೆಯಂಥಾ ಸ್ವಾತಂತ್ರ್ಯ ಬೇಕು. ಆದರೆ ಹೆಣ್ಮಕ್ಕಳು ಇದನ್ನು ಯಾಕೆ ವಿಶೇಷವಾಗಿ ಕೇಳ್ತಿದ್ದೀವಿ ಅಂದರೆ ಇದರಿಂದ ನಮ್ಮನ್ನು ಯಾವಾಗಲೂ ವಂಚಿಸಿಕೊಂಡೇ ಬಂದಿದ್ದಾರೆ. ನಮ್ಮ ನಿರ್ಧಾರಗಳನ್ನು ನಮಗೆ ತಗೊಳ್ಳೋದಕ್ಕೇ ಬಿಡ್ತಿಲ್ಲ. ನೀನು ಇಂಥದ್ದೇ ಬಟ್ಟೆಹಾಕಬೇಕು, ಇಂಥಾ ಕೆಲಸವೇ ಮಾಡ್ಬೇಕು ಹೀಗೆ ಪ್ರತಿಯೊಂದನ್ನೂ ನಮ್ಮ ಮೇಲೆ ಹೇರಲಾಗಿದೆ. ಹೆಣ್ಣು ಅನ್ನೋದು ಸಮಾಜ ಸೃಷ್ಟಿಸಿರೋ ಚೌಕಟ್ಟೊಳಗೆ ತನ್ನನ್ನು ತುಂಬಿಸಿಕೊಂಡು ತೂರಿಸಿಕೊಳ್ತಿರೋ ಜೀವವೇ ಹೊರತು ಅವಳ ನಿಜ ಅನುಭವಗಳು ಸಮಾಜಕ್ಕೆ ಬೇಕೇ ಆಗಿಲ್ಲ. ಹಾಗಾಗಿ ಅವರಿಗೆ ಸ್ವಾತಂತ್ರ್ಯ ಇಲ್ಲ ಅನಿಸುತ್ತೆ.

- ಇದು ರಾಜಕೀಯ, ದೇಶ ಸ್ವಾತಂತ್ರ್ಯದ ಥರ ಅಲ್ಲ, ಎಲ್ರಿಗೂ ಸಿಗೋದಕ್ಕೆ. ಪ್ರತಿಯೊಬ್ಬರೂ ಹುಟ್ಟಿದಾಗಿಂದ ಸಾಯೋ ತನಕ ಇದನ್ನು ಗಳಿಸಿಕೊಳ್ತಾನೇ ಇರಬೇಕು. 70 ವರ್ಷದ ವೃದ್ಧೆ ಕೂಡ ಅವಳ ಸ್ವಾತಂತ್ರ್ಯಕ್ಕೆ ಹೋರಾಡ್ತನೇ ಇರ್ಬೇಕು. ಇಬ್ಬರ ಸ್ವಾತಂತ್ರ್ಯ ಸಂಬಂಧಿತವೇ ಅಂದರೆ ಕನೆಕ್ಟೆಡ್ಡೇ. ಆದರೆ ಆ್ಯಬ್ಸಲ್ಯೂಟ್‌ ಅಲ್ಲ.

- ಹೆಣ್ಣು ಮೊದಲು ಸೀರೆ ಉಟ್ಕೊಂಡು ಗಂಡನತ್ರ ಹೊಡೆಸ್ಕೊಂಡು ಅಳ್ತಾ ಇದ್ರು. ಈಗ ಜೀನ್ಸ್‌ ಹಾಕ್ಕೊಂಡು ಆಫೀಸರ್‌ಗಳಾಗಿ ಹೊಡೆತ ತಿಂತಿದ್ದಾರೆ. ಮೊದಲು ಸೆರಗಲ್ಲಿ ಕಣ್ಣೀರು ಒರೆಸ್ತಿದ್ರು, ಈಗ ಟಿಶ್ಯೂನಲ್ಲಿ ಒರೆಸ್ತಾರೆ ಅಷ್ಟೇ. ಬೇರೇನೂ ಬದಲಾಗಿಲ್ಲ. ಹೆಣ್ಣು, ಗಂಡು ಅನ್ನೋ ಜೆಂಡರ್‌ ರೋಲ್‌ ದೊಡ್ಡ ಮಿಥ್‌. ಹೆಣ್ಣು ಹಡೀಬೇಕು ಅನ್ನೋದು ಬಯಾಲಾಜಿಕಲ್‌, ಆದರೆ ಹೆಣ್ಣೇ ಅಡುಗೆ ಮಾಡ್ಬೇಕು, ಬಟ್ಟೆತೊಳೀಬೇಕು ಅನ್ನೋದು ಬಯಾಲಾಜಿಕಲ್ಲಾ? ಗಂಡಸರಿಗೆ ರಟ್ಟೆಯಲ್ಲಿ ಹೆಚ್ಚೇ ಶಕ್ತಿ ಇರುತ್ತೆ, ಅವರೇ ಬಟ್ಟೆತೊಳೀಬಹುದಲ್ಲಾ. ನಮ್ಮ ಜೈವಿಕ ಪಾತ್ರಗಳಾಚೆ ಹೆಣ್ತನ, ತಾಯ್ತನ ಅನ್ನೋದನ್ನು ಹೇರಿದ್ದಾರೆ. ಮೊದಲಿದ್ದಿದ್ದೆಲ್ಲ ಈಗಲೂ ಇವೆ. ಆದರೆ ಹೇಳೋ ಭಾಷೆ, ಕೇಳಬೇಕಾದ ಪರಿಸ್ಥಿತಿ ಬದಲಾಗಿರಬಹುದಷ್ಟೇ. ಹೆಣ್ಣು, ಗಂಡು ಒಂದೇ ಅನ್ನೋದು ದಿನ ಬದುಕಿಗೆ ಅನುವಾದ ಗೊಳ್ಳಬೇಕು, ಈಗ ಅದು ಕಾಗದದ ಮೇಲಷ್ಟೇ ಬಂದಿದೆ. ಲಿಂಗಗಳ ಬಗ್ಗೆ ಸಮಾಜದ ಮೂಲ ಕಲ್ಪನೆ ಬದಲಾಗದ ಹೊರತು ಏನೂ ಬದಲಾಗಲ್ಲ. ಇವತ್ತಿಗೂ 90 ಪರ್ಸೆಂಟ್‌ ಮಂದಿ ಹೆಂಗಸು ಅನ್ನೋ ಕಾರಣಕ್ಕೆ ನಿತ್ಯ ನೋವು, ನಿರ್ಲಕ್ಷ್ಯದ ಬಾಳು ಬದುಕುತ್ತಿದ್ದಾರೆ.

- ಮಾರ್ಕೆಟ್‌ ಮತ್ತು ರಾಜಕಾರಣ ಮಹಿಳಾ ದಿನ ಅನ್ನೋದನ್ನು ದಾಳದ ಥರ ಬಳಸಿಕೊಂಡು ಉರುಳಿಸ್ತಾ ಇದ್ದಾರಷ್ಟೇ. ಮತದಾನದ ಹಕ್ಕು, ಸಮಾನ ವೇತನದ ಹಕ್ಕೊತ್ತಾಯಕ್ಕೆ ಮಹಿಳಾ ದಿನ ಶುರುವಾಗಿದ್ದು. ಸೆಲೆಬ್ರೇಟ್‌ ಮಾಡೋದಕ್ಕಲ್ಲ. ನ್ಯೂಯಾರ್ಕಿನ ಬಟ್ಟೆಗಿರಣಿಗಳಲ್ಲಿ ಸಮಾನ ವೇತನಕ್ಕೆ ಹೋರಾಡಿ ನೂರಾರು ಜನ ಜೀವತೆತ್ತರಲ್ಲಾ, ಆ ನೆನಪಿಗೆ, ನಮ್ಮ ಹಕ್ಕುಗಳನ್ನು ಪಡೆಯೋದಕ್ಕೆ ಈ ದಿನಾಚರಣೆ ಶುರುವಾಗಿದ್ದು. ಆದರೆ ನಾವು ಈ ಹೋರಾಟದ, ಹಕ್ಕೊತ್ತಾಯದ ಪರಂಪರೆಯನ್ನು ಮರೆತು ಬಿಟ್ಟಿದ್ದೀವಿ. ಮಹಿಳಾ ದಿನ ಅಂದರೆ ಈಗ ಮಾರ್ಕೆಟಿಂಗ್‌ ದಿನ ಆಗಿದೆ. ಹಿಂದೆ ಪಾತಿವ್ರತ್ಯ, ಮಾತೃತ್ವದಂಥಾ ಮಿಥ್‌ಗಳಿದ್ದವು. ಈಗ ಮಾರುಕಟ್ಟೆಸಂಸ್ಕೃತಿ ಕಟ್ಟಿಕೊಡುವ ಹೊಸ ಹೊಸ ಮಿಥ್‌ಗಳು. ಕಾಲಲ್ಲಿ ಒಡಕಿದ್ರೆ ಹುಡುಗ ನಿಮ್ಮನ್ನು ಇಷ್ಟಪಡಲ್ಲ, ಫಳ ಫಳ ಅನ್ನದಿದ್ರೆ ನಿಮಗೆ ಕೆಲಸನೇ ಸಿಗಲ್ಲ.. ಇದೆಲ್ಲ ಎಂಥಾ ನಾನ್‌ಸೆನ್ಸ್‌ ಅಲ್ವಾ. ಸೌಂದರ್ಯ ಅನ್ನೋದೆ ಒಂದು ಮಿಥ್‌. ಹೆಣ್ಣು ಸಹಜವಾಗಿರೋದು ಚೆಲುವು. ಆದರೆ ಮಾರ್ಕೆಟ್‌ 36-24-36ನ ಮಾನದಂಡದಲ್ಲಿಟ್ಟು ಅವಳ ಸೌಂದರ್ಯವನ್ನು ಅಳೆಯುತ್ತೆ. ‘ಅತ್ಯುತ್ತಮ ತಾಯಿ’ ಅಂತ ಪ್ರಶಸ್ತಿ ಕೊಡ್ತಾರೆ. ಇವೆಲ್ಲ ಯಾವ ಚೌಕಟ್ಟಲ್ಲಿ ನಮ್ಮನ್ನು ಕೂರಿಸಿದ್ದಾರೋ ಅದೇ ಚೌಕಟ್ಟಲ್ಲೇ ಒತ್ತೊತ್ತಿ ಕೂರಿಸಿದ ಹಾಗಲ್ವಾ..

ನಾವು ನಮ್ಮ ಹಿರಿಯ ಹೆಣ್ಮಕ್ಕಳ ಹೋರಾಟದ ನೆನಪು ಮಾಡಿಕೊಳ್ಳೋದಕ್ಕೆ ಮಹಿಳಾ ದಿನ ಆಚರಿಸಬೇಕು. ನ್ಯೂಯಾರ್ಕ್ನ ಬಟ್ಟೆಗಿರಣಿ ಬೇಡ. ನಿಮ್ಮ ಊರಿನ ಪರಿತ್ಯಕ್ತ ಹೆಂಗಸಿನ ಹೋರಾಟಗಳನ್ನು ನೆನಪು ಮಾಡಿಕೊಂಡರೆ ಮಹಿಳಾ ದಿನ ಆಚರಣೆ ಮಾಡಿಕೊಂಡ ಹಾಗೆ. ನಮಗೆಲ್ಲ ಕನ್ನಡಕ ಹಾಕಿಸಿಬಿಟ್ಟಿದ್ದಾರೆ. ಅದರಲ್ಲಿ ಎಲ್ಲ ಫಳ ಫಳ ಕಾಣುತ್ತೆ. ಅದರಾಚೆ ಇರೋ ಖೆಡ್ಡಾ ಕಾಣಲ್ಲ. ನಾವೆಲ್ಲ ಆ ವಾಸ್ತವ ಅರ್ಥ ಮಾಡ್ಕೊಳ್ಳಬೇಕು. ನಾವು ಇದನ್ನು ಮಹಿಳಾ ಚೈತನ್ಯ ದಿನ ಅಂತ ಆಚರಿಸ್ತೀವಿ. ಮಹಿಳಾ ಚಳುವಳಿ ಹೇಳೋದು ಮೂರು ವಿಷಯ. ಸಮತೆ, ಸ್ವಾಯತ್ತತೆ, ಘನತೆಯ ಬದುಕು. ಇದು ಮೂರೂ ಎಲ್ಲ ಮಹಿಳೆಯರಿಗೂ ಸಿಗಬೇಕು. ಇದಕ್ಕೋಸ್ಕರ ಹೋರಾಟ, ಹಕ್ಕೊತ್ತಾಯ ಮಾಡಬೇಕು. ಭ್ರಮೆಗಳನ್ನು ಕಳಚಿಕೊಳ್ಳೋದಕ್ಕೆ, ವಾಸ್ತವ ಅರಿಯೋದಕ್ಕೆ, ಮುಂದಿನ ದಾರಿನ ರೂಪಿಸೋದಕ್ಕೆ ಸಾಧ್ಯವಾಗಲಿ ಅನ್ನೋದೇ ಮಾರ್ಚ್‌ 8.

Follow Us:
Download App:
  • android
  • ios