ಮಹಿಳೆಯರು ದಿನದ ಬಹುಪಾಲು ಸಮಯವನ್ನು ಕುಟುಂಬದವರು, ಮಕ್ಕಳು ಮತ್ತು ಮನೆಯವರ ಅಗತ್ಯಗಳನ್ನು ಪೂರೈಸುವುದರಲ್ಲಿ ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ ತಮಗಾಗಿ ಸ್ವಲ್ಪ ಸಮಯ ಮೀಸಲಿಡುವುದು ಅವರಿಗೆ ವಿಶೇಷ ಅನುಭವ ನೀಡುತ್ತದೆ ಎನ್ನಬಹುದು. ಆದರೆ, ಅಧ್ಯಯನಗಳು ಹೇಳುವುದೇನು? ನೋಡಿ..
ಮಹಿಳೆಯರು ಶಾಪಿಂಗ್ಗೆ ಹೋದರೆ ಗಂಟೆಗಟ್ಟಲೆ ಸಮಯ ಕಳೆಯುವುದೇಕೆ? ಇದರ ಹಿಂದೆ ಅಡಗಿದೆ ಈ ರಹಸ್ಯ!
ಶಾಪಿಂಗ್ ಮಾಲ್ಗೆ ಹೋದಾಗ ಕೆಲವರಿಗೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಅದರಲ್ಲೂ ಮಹಿಳೆಯರು ಬಟ್ಟೆ, ಆಭರಣ, ಚಪ್ಪಲಿ, ಕಾಸ್ಮೆಟಿಕ್ಸ್ ಹೀಗೆ ಒಂದೊಂದು ವಿಭಾಗವನ್ನು ಸುತ್ತಾಡುತ್ತಾ ತಮಗೆ ಇಷ್ಟವಾದ ವಸ್ತುಗಳನ್ನು ಆಯ್ಕೆ ಮಾಡುವುದರಲ್ಲಿ ಗಂಟೆಗಟ್ಟಲೆ ಕಳೆಯುತ್ತಾರೆ. ಜೊತೆಯಲ್ಲಿ ಬಂದವರಿಗೆ ಯಾವಾಗ ಶಾಪಿಂಗ್ ಮುಗಿಯುತ್ತದೋ ಎಂಬ ಆತುರ ಶುರುವಾಗಬಹುದು. ಆದರೆ ಮಹಿಳೆಯರು ಇಷ್ಟೊಂದು ಸಮಯ ಶಾಪಿಂಗ್ ಮಾಡಲು ಇಷ್ಟಪಡುವುದರ ಹಿಂದೆ (Women Shopping Habits and behind Psychology) ಕೇವಲ ಹೊಸ ವಸ್ತುಗಳನ್ನು ಖರೀದಿಸುವ ಆಸೆಯಷ್ಟೇ ಇಲ್ಲ. ಅದಕ್ಕೆ ಮಾನಸಿಕ ಸಂತೋಷ ಮತ್ತು ಒತ್ತಡ ನಿವಾರಣೆಯಂತಹ ಹಲವು ಕಾರಣಗಳಿವೆ.
ತಜ್ಞರು ಇದನ್ನು 'ರಿಟೇಲ್ ಥೆರಪಿ' (Retail Therapy) ಎಂದು ಕರೆಯುತ್ತಾರೆ. ಅಂದರೆ, ಶಾಪಿಂಗ್ ಮೂಲಕ ಮನಸ್ಸಿಗೆ ತಾತ್ಕಾಲಿಕ ಸಂತೋಷ ಮತ್ತು ನೆಮ್ಮದಿ ಪಡೆಯುವ ಪ್ರಕ್ರಿಯೆ. ಮನೆ, ಕಚೇರಿ, ಕುಟುಂಬದ ಜವಾಬ್ದಾರಿಗಳ ನಡುವೆ ದಿನವಿಡೀ ಬ್ಯುಸಿಯಾಗಿರುವ ಮಹಿಳೆಯರಿಗೆ ಶಾಪಿಂಗ್ ಒಂದು ರೀತಿಯ ವಿಶ್ರಾಂತಿಯ ಸಮಯವಾಗಬಹುದು. ಬಣ್ಣಬಣ್ಣದ ಬಟ್ಟೆಗಳನ್ನು ನೋಡುವುದು, ಹೊಸ ವಿನ್ಯಾಸಗಳನ್ನು ಗಮನಿಸುವುದು, ಇಷ್ಟವಾದ ವಸ್ತುಗಳನ್ನು ಕೈಯಲ್ಲಿ ಹಿಡಿದು ಪರಿಶೀಲಿಸುವುದು ಇವೆಲ್ಲವೂ ದಿನನಿತ್ಯದ ಒತ್ತಡದಿಂದ ಸ್ವಲ್ಪ ದೂರವಿರಲು ಸಹಾಯ ಮಾಡುತ್ತವೆ.
ಶಾಪಿಂಗ್ ಮಾಡುವ ಯೋಚನೆಯೇ ಸಂತೋಷ ನೀಡುತ್ತದೆಯೇ?
ಹೊಸ ಉಡುಪು, ಇಯರ್ ರಿಂಗ್ಸ್ ಅಥವಾ ಲಿಪ್ಸ್ಟಿಕ್ ಖರೀದಿಸಬೇಕು ಎಂದು ನಿರ್ಧರಿಸಿದಾಗಲೇ ಮನಸ್ಸಿನಲ್ಲಿ ಉತ್ಸಾಹ ಮೂಡುತ್ತದೆ. ನರವಿಜ್ಞಾನಕ್ಕೆ ಸಂಬಂಧಿಸಿದ ವಿವರಣೆಗಳ ಪ್ರಕಾರ, ಹೊಸದನ್ನು ಹುಡುಕುವ ಮತ್ತು ಖರೀದಿಸುವ ನಿರೀಕ್ಷೆಯ ಸಂದರ್ಭದಲ್ಲಿ ಮೆದುಳಿನ ಪ್ರತಿಫಲ ವ್ಯವಸ್ಥೆ ಸಕ್ರಿಯವಾಗಿ ಡೋಪಮೈನ್ನಂತಹ ರಾಸಾಯನಿಕಗಳ ಚಟುವಟಿಕೆ ಹೆಚ್ಚಾಗಬಹುದು. ಹೀಗಾಗಿ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಹುಡುಕುವ ಪ್ರಕ್ರಿಯೆಯೇ ಕೆಲವರಿಗೆ ಹೆಚ್ಚು ಖುಷಿ ನೀಡುತ್ತದೆ. ಇದೇ ಕಾರಣಕ್ಕೆ ಮನಸ್ಸು ಬೇಸರದಲ್ಲಿದ್ದಾಗ ಅಥವಾ ಕೆಲಸದ ಒತ್ತಡ ಹೆಚ್ಚಾದಾಗ ಕೆಲವರು ಶಾಪಿಂಗ್ಗೆ ಹೋಗಲು ಬಯಸುತ್ತಾರೆ.
ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ
ಮಹಿಳೆಯರು ದಿನದ ಬಹುಪಾಲು ಸಮಯವನ್ನು ಕುಟುಂಬದವರು, ಮಕ್ಕಳು ಮತ್ತು ಮನೆಯವರ ಅಗತ್ಯಗಳನ್ನು ಪೂರೈಸುವುದರಲ್ಲಿ ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ ತಮಗಾಗಿ ಸ್ವಲ್ಪ ಸಮಯ ಮೀಸಲಿಡುವುದು ಅವರಿಗೆ ವಿಶೇಷ ಅನುಭವ ನೀಡುತ್ತದೆ. ಯಾವ ಬಣ್ಣದ ಬಟ್ಟೆ ಖರೀದಿಸಬೇಕು, ಯಾವ ವಿನ್ಯಾಸ ಚೆನ್ನಾಗಿದೆ, ಯಾವ ಬ್ರ್ಯಾಂಡ್ ಆಯ್ಕೆ ಮಾಡಬೇಕು ಎಂಬುದನ್ನು ತಾವೇ ನಿರ್ಧರಿಸುವುದು ಸ್ವತಂತ್ರ ಆಯ್ಕೆಯ ಸಂತೋಷವನ್ನು ನೀಡುತ್ತದೆ.
ಅದರಲ್ಲೂ ಕನ್ನಡಿಯ ಮುಂದೆ ನಿಂತು ತಮಗೆ ಇಷ್ಟವಾದ ಉಡುಪನ್ನು ಪ್ರಯತ್ನಿಸುವುದು, ತಮಗೆ ಯಾವುದು ಚೆನ್ನಾಗಿ ಕಾಣುತ್ತದೆ ಎಂದು ಗಮನಿಸುವುದು ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಬಹುದು. ಸದಾ ಇತರರ ಬಗ್ಗೆ ಯೋಚಿಸುವ ಮಹಿಳೆಯರಿಗೆ 'ಇದು ನನಗಾಗಿ' ಎಂದು ಸಮಯ ಮೀಸಲಿಡುವ ಅವಕಾಶವೂ ಸಿಗುತ್ತದೆ.
ಸ್ನೇಹಿತರೊಂದಿಗೆ ಶಾಪಿಂಗ್ ಹೋದರೆ ಖುಷಿ ಡಬಲ್!
ಶಾಪಿಂಗ್ ಎಂದರೆ ಕೇವಲ ವಸ್ತುಗಳನ್ನು ಖರೀದಿಸುವುದಲ್ಲ, ಅದು ಸಾಮಾಜಿಕ ಒಡನಾಟಕ್ಕೂ ಒಂದು ಅವಕಾಶ. ಸ್ನೇಹಿತರು, ಸಹೋದರಿಯರು ಅಥವಾ ತಾಯಿಯೊಂದಿಗೆ ಮಾಲ್ಗೆ ಹೋದಾಗ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಬಹುದು. ಯಾವ ಬಣ್ಣ ಚೆನ್ನಾಗಿದೆ, ಯಾವ ಉಡುಪು ಹೆಚ್ಚು ಸೂಕ್ತ ಎಂಬುದರ ಬಗ್ಗೆ ಚರ್ಚಿಸುವುದರಿಂದ ಸಮಯವೂ ಸಂತೋಷದಿಂದ ಕಳೆಯುತ್ತದೆ. ಇಂತಹ ಒಟ್ಟಿನ ಅನುಭವಗಳು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಬಹುದು.
ಇನ್ನು ಶಾಪಿಂಗ್ ಮಾಲ್ನಲ್ಲಿ ವಿವಿಧ ವಿಭಾಗಗಳನ್ನು ಸುತ್ತಾಡುವುದರಿಂದ ಸ್ವಲ್ಪ ದೈಹಿಕ ಚಟುವಟಿಕೆಯೂ ದೊರೆಯುತ್ತದೆ. ಹೊಸ ವಿನ್ಯಾಸಗಳು, ಬಣ್ಣಗಳು ಮತ್ತು ಫ್ಯಾಷನ್ ಟ್ರೆಂಡ್ಗಳನ್ನು ಗಮನಿಸುವುದು ಸೃಜನಶೀಲ ಆಸಕ್ತಿಗೂ ಪ್ರೇರಣೆ ನೀಡಬಹುದು.
ಸಂತೋಷಕ್ಕಾಗಿ ದುಬಾರಿ ವಸ್ತುಗಳೇ ಬೇಕಿಲ್ಲ!
ಶಾಪಿಂಗ್ನಿಂದ ಸಂತೋಷ ಪಡೆಯಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕೆಂದಿಲ್ಲ. ₹100ರ ಗ್ಲಾಸ್, ₹50ರ ಹೇರ್ ಕ್ಲಿಪ್, ಇಷ್ಟವಾದ ಪುಸ್ತಕ ಅಥವಾ ಮನೆಯಲ್ಲಿಡಲು ಒಂದು ಪುಟ್ಟ ಗಿಡ ಕೂಡ ಮನಸ್ಸಿಗೆ ಖುಷಿ ನೀಡಬಹುದು. ಆದರೆ ಸಂತೋಷಕ್ಕಾಗಿ ಅನಗತ್ಯ ಖರೀದಿ ಮಾಡುವುದರಿಂದ ಆರ್ಥಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಇದೆ.
ಹೀಗಾಗಿ ಪ್ರತಿ ತಿಂಗಳ ಬಜೆಟ್ನಲ್ಲಿ 'ನನಗಾಗಿ' ಎಂದು ಸ್ವಲ್ಪ ಹಣ ಮೀಸಲಿಡುವುದು ಉತ್ತಮ. ಶಾಪಿಂಗ್ಗೆ ಹೋಗುವ ಮೊದಲು ಅಗತ್ಯ ವಸ್ತುಗಳ ಪಟ್ಟಿ ಸಿದ್ಧಪಡಿಸಿ, ಖರ್ಚಿನ ಮಿತಿಯನ್ನು ನಿಗದಿಪಡಿಸಿಕೊಳ್ಳಬೇಕು. ಖರೀದಿಸುವ ಮೊದಲು ಅದು ನಿಜವಾಗಿಯೂ ಅಗತ್ಯವೇ ಎಂದು ಯೋಚಿಸುವುದು ಮುಖ್ಯ.
ಒಟ್ಟಿನಲ್ಲಿ, ಮಹಿಳೆಯರಿಗೆ ಶಾಪಿಂಗ್ ಎನ್ನುವುದು ಕೇವಲ ವಸ್ತುಗಳನ್ನು ಮನೆಗೆ ತರುವ ಚಟುವಟಿಕೆಯಲ್ಲ. ಅದು ಕೆಲವರಿಗೆ ಒತ್ತಡದಿಂದ ವಿರಾಮ ಪಡೆಯುವ, ತಮ್ಮ ಇಷ್ಟಗಳಿಗೆ ಆದ್ಯತೆ ನೀಡುವ ಮತ್ತು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವ ಒಂದು ಅವಕಾಶ. ಆದರೆ ಈ ಸಂತೋಷದ ಜತೆಗೆ ಖರ್ಚಿನ ಮೇಲೂ ನಿಯಂತ್ರಣವಿದ್ದರೆ ಶಾಪಿಂಗ್ ನಿಜಕ್ಕೂ ಮನಸ್ಸಿಗೆ ಮುದ ನೀಡುವ ಅನುಭವವಾಗುತ್ತದೆ.
ವಿಶೇಷ ಸೂಚನೆ:- ಈ ಮಾಹಿತಿಯು ವೈಜ್ಞಾನಿಕ ಸಂಶೋಧನೆ, ವಿವಿಧ ಮೂಲದ ಅಧ್ಯಯನಗಳು, ವೈದ್ಯಕೀಯ ಮತ್ತು ಮಾನಸಿಕ-ದೈಹಿಕ ಆರೋಗ್ಯ ವೃತ್ತಿಪರ ಸಲಹೆಗಳು, ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಆಧಾರದ ಮೇಲೆ ಒದಗಿಸುತ್ತೇವೆ. ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಎಂದರೆ ಸೂಕ್ತ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ ಮಾರ್ಗ ಎಂಬುದನ್ನು ಮರೆಯಬಾರದು.














