ಉತ್ತರ ಪ್ರದೇಶದಲ್ಲಿ ಋತುಚಕ್ರದ ಕಾರಣಕ್ಕೆ ನವರಾತ್ರಿ ಪೂಜೆ ತಪ್ಪಿತೆಂದು ಗೃಹಿಣಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ.
ಝಾನ್ಸಿ: ಮಾಸಿಕ ಋತುಚಕ್ರದ(ಪೀರಿಯಡ್ಸ್) ವೇಳೆ ಮಹಿಳೆಯರು ಯಾವುದೇ ಪೂಜೆ ಹಾಗೂ ಶುಭ ಸಮಾರಂಭಗಳಲ್ಲಿ ಭಾಗಿಯಾಗಬಾರದು ಎಂಬ ನಿಯಮವಿದೆ. ಇದನ್ನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಋತುಚಕ್ರದ ಸಮಯದಲ್ಲಿ ಯಾರು ಕೂಡ ಪೂಜೆ ಮುಂತಾದ ದೈವಿಕ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ. ಹೀಗಾಗಿ ತುಂಬಾ ಅನಿವಾರ್ಯವಾದ ಶುಭ ಸಮಾರಂಭಗಳಿದ್ದ ಸಮಯದಲ್ಲಿ ಮಹಿಳೆಯರು ಪೀರಿಯಡ್ಸ್ ಡೇಟ್ ಮುಂದೆ ಹೋಗುವುದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವ ವಿಚಾರ ನಿಮಗೆ ಗೊತ್ತಿರಬಹುದು. ಆದರೆ ಇಲ್ಲೊಂದು ಕಡೆ ಗೃಹಿಣಿಯೊಬ್ಬಳು ಪಿರೇಡ್ಸ್‌ನಿಂದಾಗಿ ತನಗೆ ನವರಾತ್ರಿ ಪೂಜೆ ಸಿಗಲಿಲ್ಲ ಎಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 36 ವರ್ಷ ಪ್ರಿಯಾಂಶಾ ಸೋನಿ ಎಂದು ಗುರುತಿಸಲಾಗಿದೆ.
ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ಈಕೆಯನ್ನು ಕೂಡಲೇ ಮನೆಯವರು ಆಸ್ಪತ್ರೆಗೆ ಸೇರಿಸಿದರಾದರೂ ಆಕೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ, ಚಿಕಿತ್ಸೆ ವೇಳೆ ಆಕೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಪ್ರಿಯಾಂಶಾ ಸೋನಿ ಅವರು ತಮ್ಮ ಪತಿ ಮುಕೇಶ್ ಸೋನಿ ಹಾಗೂ ತಮ್ಮ ಮೂರುವರೆ ವರ್ಷದ ಪ್ರಾಯದ ಜಾನ್ವಿ ಹಾಗೂ ಎರಡೂವರೆ ವರ್ಷ ಪ್ರಾಯದ ಮಾನ್ವಿ ಎಂಬ ಎಳೆ ಪ್ರಾಯದ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದರು. ಪ್ರಿಯಾಂಶಾ ಅವರ ಪತಿ ಮುಕೇಶ್ ಅವರು ಹೇಳುವ ಪ್ರಕಾರ, ಪ್ರಿಯಾಂಶಾ ನವರಾತ್ರಿಗೆ ಬಹಳ ಉತ್ಸಾಹದಿಂದ ತಯಾರಿ ನಡೆಸುತ್ತಿದ್ದಳು ಮತ್ತು ಹಬ್ಬಕ್ಕೆ ತುಂಬಾ ಸಮರ್ಪಿತಳಾಗಿದ್ದಳು. ಆದರೆ ದುರಾದೃಷ್ಟವಶಾತ್ ಆಕೆಗೆ, ಮೊದಲ ದಿನವೇ ಅವಳಿಗೆ ಮುಟ್ಟು ಪ್ರಾರಂಭವಾಯಿತು, ಅದು ಅವಳನ್ನು ಉಪವಾಸ ಮತ್ತು ಪೂಜೆಯನ್ನು ಮಾಡದಂತೆ ತಡೆದಿದೆ. ಇದು ದೈವಭಕ್ತೆಯಾಗಿದ್ದ ಅವಳನ್ನು ಭಾವನಾತ್ಮಕವಾಗಿ ಕಂಗೆಡಿಸಿದೆ. ಪತಿ ಮುಖೇಶ್ ಅವಳನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ, ಅವಳು ಸಮಾಧಾನಗೊಳ್ಳಲಿಲ್ಲ.
ಪಿರಿಯಡ್ಸ್ ಬಗ್ಗೆ ಕೇವಲ ಭಾರತದಲ್ಲಿ ಮಾತ್ರ ಅಲ್ಲ… ಈ ದೇಶಗಳಲ್ಲೂ ಇದೆ ವಿಚಿತ್ರ ನಂಬಿಕೆ
ದೇವತೆ ಬಂದ ನಂತರ ಪೂಜೆಯನ್ನು ಪ್ರಾರಂಭಿಸುವುದಾಗಿ ಅವಳು ಹೇಳುತ್ತಲೇ ಇದ್ದಳು. ಇದಕ್ಕಾಗಿ ಎಲ್ಲಾ ಪೂಜಾ ಸಾಮಗ್ರಿಗಳನ್ನು ತರಲು ಅವಳು ನನ್ನನ್ನು ಕೇಳಿದ್ದಳು. ಆಕೆಯ ಆಸೆಯಂತೆ ನಾನು ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದೆ. ಆದರೆ ಮೊದಲ ದಿನ, ಅವಳಿಗೆ ಮುಟ್ಟು ಪ್ರಾರಂಭವಾಯಿತು ಮತ್ತು ಆಚರಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇದು ನೈಸರ್ಗಿಕ ಪ್ರಕ್ರಿಯೆ ಎಂದು ನಾನು ಅವಳಿಗೆ ವಿವರಿಸಿದರೂ ಆಕೆ ಕೇಳಲು ಸಿದ್ಧಳಿರಲಿಲ್ಲ. ಅವಳು ತುಂಬಾ ಮಹತ್ವವಾದುದ್ದನ್ನು ಕಳೆದುಕೊಂಡತೆ ಚಿಂತೆ ಮಾಡುತ್ತಿದ್ದಳು.
ಮುಟ್ಟಿನಲ್ಲಿ ಮಹಿಳೆಯರು ದೇವರ ಪೂಜೆ ಮಾಡಬಹುದೇ?
ಮರುದಿನ, ಪತಿ ಮುಖೇಶ್ ತನ್ನ ಅಂಗಡಿಯಲ್ಲಿದ್ದಾಗ, ಪ್ರಿಯಾಂಶ ವಿಷಕಾರಿ ವಸ್ತುವನ್ನು ಸೇವಿಸಿದ್ದಾಳೆ. ಇದು ಗೊತ್ತಾಗಿ ಕುಟುಂಬದವರು ಅವಳನ್ನು ಝಾನ್ಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವಳ ಸ್ಥಿತಿಯನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಆಕೆಯನ್ನು ಡಿಸ್ಚಾರ್ಜ್ ಮಾಡಿ ಮನೆಗೂ ಕರೆತಂದಿದ್ದರು. ಆದರೆ ನಂತರದಲ್ಲಿ ಆಕೆಯ ಆರೋಗ್ಯ ತೀವ್ರವಾಗಿ ಕಳೆಗುಂದಿದ್ದು, ಆಕೆಯನ್ನು ಮತ್ತೆ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದಾಳೆ. ವಿಚಾರ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಿಯಾಂಶಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಎಂಥಾ ವಿಚಿತ್ರ ನೋಡಿ, ಹಬ್ಬ ಈ ವರ್ಷ ಇಲ್ಲದಿದ್ದರೇನು ಮತ್ತೊಂದು ವರ್ಷ ಬಂದೇ ಬರುವುದು. ಆದರೆ ಆತುರದಿಂದ ತೆಗೆದುಕೊಂಡ ಜೀವ ಮತ್ತೆ ಬರುವುದೇ? ತಾಯಿಯ ಈ ಆತುರಗೆಟ್ಟ ನಿರ್ಧಾರದಿಂದ ಇಬ್ಬರು ತೀರಾ ಎಳೆ ಪ್ರಾಯದ ಹೆಣ್ಣು ಮಕ್ಕಳಿಬ್ಬರು ತಾಯಿ ಇಲ್ಲದ ತಬ್ಬಲಿಗಳಾಗಿದ್ದಾರೆ.
