ಮಹಿಳೆಯರ ದೇಹ ಬಹಳ ಸೂಕ್ಷ್ಮ. ಪ್ರತಿ ಹಂತದಲ್ಲೂ ಸಾಕಷ್ಟು ಬದಲಾವಣೆಯಾಗೋದ್ರಿಂದ ಎಚ್ಚರಿಕೆ ಮುಖ್ಯ. ಪದೇ ಪದೇ ಗರ್ಭಪಾತವಾದ್ರೆ ಅದ್ರಿಂದ ಮಹಿಳೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಜೂನಿಯರ್ ವೈದ್ಯ ಡಾ. ಹಿತಾರ್ಥ್ ಸಿಮಾರಿಯಾ ಅವರ ವಿಡಿಯೋವೊಂದು ಈಗ ಸಾಕಷ್ಟು ಚರ್ಚೆಯಾಗುತ್ತಿದೆ. NICU ಅಂದರೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎದುರಾದ ಪ್ರಕರಣವೊಂದರ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

13 ಬಾರಿ ಗರ್ಭಪಾತ

ವೈದ್ಯರು ಹೇಳಿರುವ ಪ್ರಕಾರ, ಮಹಿಳೆಯೊಬ್ಬರು 13 ಬಾರಿ ಗರ್ಭಪಾತಕ್ಕೆ ಒಳಗಾದ ಬಳಿಕ 14ನೇ ಬಾರಿ ಗರ್ಭಧರಿಸಿದ್ದರು. ಈ ಬಾರಿ ಅವರು ಅತ್ಯಂತ ಕಡಿಮೆ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಆ ನವಜಾತ ಶಿಶುವಿನ ತೂಕ ಕೇವಲ ಒಂದು ಕೆ.ಜಿ. ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಾತನಾಡಿರುವ ಡಾ. ಹಿತಾರ್ಥ್, ಪದೇಪದೇ ಗರ್ಭಧಾರಣೆ ಮತ್ತು ಗರ್ಭಪಾತದ ಸಂದರ್ಭಗಳಲ್ಲಿ ಮಹಿಳೆಯ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ಗರ್ಭಪಾತವಾದ್ರೆ ಅಪಾಯ

ಪದೇ ಪದೇ ಗರ್ಭಪಾತವಾದ್ರೆ ಮಹಿಳೆಯರ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುತ್ತದೆ. ಗರ್ಭಪಾತದ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವ ಉಂಟಾಗೋದ್ರಿಂದ ಇಂಥ ಸಮಸ್ಯೆ ಕಾಡುತ್ತದೆ. ರಕ್ತಹೀನತೆ ಹೆಚ್ಚಾದಾಗ ಸುಸ್ತು, ನಿಶ್ಶಕ್ತಿ, ತಲೆಸುತ್ತು ಮತ್ತು ನಿರಂತರ ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಗರ್ಭಾವಸ್ಥೆಯಲ್ಲೂ ತೀವ್ರ ರಕ್ತಹೀನತೆ ಇದ್ದರೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಗರ್ಭದಲ್ಲಿರುವ ಮಗುವಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ಸರಿಯಾಗಿ ದೊರೆಯುವುದು ಬಹಳ ಮುಖ್ಯ. ತಾಯಿಯಲ್ಲಿ ತೀವ್ರ ರಕ್ತಹೀನತೆ ಇದ್ದರೆ ಗರ್ಭಾವಸ್ಥೆಯ ತೊಂದರೆಗಳ ಅಪಾಯ ಹೆಚ್ಚಾಗಬಹುದು. ಕೆಲವು ಸಂದರ್ಭಗಳಲ್ಲಿ ಮಗು ಕಡಿಮೆ ತೂಕದೊಂದಿಗೆ ಜನಿಸುವ ಸಾಧ್ಯತೆಯೂ ಇರುತ್ತದೆ. ಆದರೆ ಪ್ರತಿ ಗರ್ಭಪಾತವೂ ರಕ್ತಹೀನತೆಗೆ ಕಾರಣವಾಗುವುದಿಲ್ಲ. ರಕ್ತಸ್ರಾವದ ಪ್ರಮಾಣ, ಮಹಿಳೆಯ ಆರೋಗ್ಯ ಮತ್ತು ಇತರ ವೈದ್ಯಕೀಯ ಅಂಶಗಳು ಇಲ್ಲಿ ಮುಖ್ಯವಾಗುತ್ತವೆ.

ಗರ್ಭಾಶಯದ ಮೇಲೆ ಆಗಬಹುದಾದ ಪರಿಣಾಮಗಳೇನು?

ಗರ್ಭಾಶಯದ ಒಳಪದರವನ್ನು ಎಂಡೊಮೆಟ್ರಿಯಮ್ ಎಂದು ಕರೆಯಲಾಗುತ್ತದೆ. ಗರ್ಭಪಾತದ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸುವಾಗ ಅಪರೂಪಕ್ಕೆ ಗರ್ಭಾಶಯದ ಒಳಪದರಕ್ಕೆ ಗಾಯವಾಗಬಹುದು. ಇದರಿಂದ ಗರ್ಭಾಶಯದ ಒಳಗೆ ಗಾಯದ ಅಂಗಾಂಶ ರೂಪುಗೊಳ್ಳುವ ಸಾಧ್ಯತೆಯೂ ಇದೆ. ಕೆಲವು ಸಂದರ್ಭಗಳಲ್ಲಿ ಈ ರೀತಿಯ ಗಾಯಗಳು ಭವಿಷ್ಯದಲ್ಲಿ ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದು. ಗರ್ಭಾಶಯದ ಒಳಪದರಕ್ಕೆ ಹಾನಿಯಾದರೆ ಗರ್ಭಧಾರಣೆಗೆ ತೊಂದರೆಯಾಗುವ ಅಪಾಯವಿದೆ.

ಗರ್ಭಾವಸ್ಥೆಯಲ್ಲಿ ಜರಾಯು ಗರ್ಭಾಶಯದ ಗೋಡೆಗೆ ಅಸಹಜವಾಗಿ ಅಂಟಿಕೊಂಡರೆ ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗಬಹುದು. ಆದರೆ ಪದೇಪದೇ ಗರ್ಭಪಾತವಾಗುವುದರಿಂದ ಪ್ರತಿಯೊಬ್ಬ ಮಹಿಳೆಯ ಗರ್ಭಾಶಯವೂ ದುರ್ಬಲವಾಗುತ್ತದೆ ಅಥವಾ ಇಂತಹ ಸಮಸ್ಯೆ ಕಡ್ಡಾಯವಾಗಿ ಎದುರಾಗುತ್ತದೆ ಎಂದರ್ಥವಲ್ಲ.

ಸೋಂಕು ಮತ್ತು ಬಂಜೆತನದ ಅಪಾಯ

ಗರ್ಭಪಾತವನ್ನು ಅಸುರಕ್ಷಿತ ರೀತಿಯಲ್ಲಿ ಮಾಡಿಸಿದರೆ ಅಥವಾ ಸೂಕ್ತ ವೈದ್ಯಕೀಯ ಆರೈಕೆ ಇಲ್ಲದಿದ್ದರೆ ಸೋಂಕು ಉಂಟಾಗುವ ಸಾಧ್ಯತೆ ಇದೆ. ಸೋಂಕು ಗರ್ಭಾಶಯದಿಂದ ಪೆಲ್ವಿಕ್ ಭಾಗದ ಇತರ ಅಂಗಗಳಿಗೆ ಹರಡಿದರೆ ಅದನ್ನು ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID) ಎಂದು ಕರೆಯಲಾಗುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಫೆಲೋಪಿಯನ್ ಟ್ಯೂಬ್ಗಳಿಗೆ ಹಾನಿಯಾಗಬಹುದು. ಇದರಿಂದ ಭವಿಷ್ಯದಲ್ಲಿ ಗರ್ಭಧರಿಸಲು ತೊಂದರೆಯಾಗುವ ಅಥವಾ ಬಂಜೆತನದ ಅಪಾಯ ಹೆಚ್ಚಾಗಬಹುದು. ತೀವ್ರ ಸೋಂಕಿನ ಸಂದರ್ಭಗಳಲ್ಲಿ ಇತರ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಆದರೆ ಸುರಕ್ಷಿತ ವಿಧಾನದಲ್ಲಿ, ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ನಡೆಸುವ ಗರ್ಭಪಾತವು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತದೆ. ಗರ್ಭಪಾತಗಳ ಸಂಖ್ಯೆಯೊಂದನ್ನೇ ಆಧರಿಸಿ ಮಹಿಳೆಯ ಭವಿಷ್ಯದ ಸಂತಾನೋತ್ಪತ್ತಿ ಸಾಮರ್ಥ್ಯದ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ.

ಕಡಿಮೆ ತೂಕದ ಮಗು

ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರಿಗೆ ಗರ್ಭಕಂಠದ ಸಮಸ್ಯೆಗಳು ಎದುರಾಗಬಹುದು. ಗರ್ಭಕಂಠವು ಗರ್ಭಾವಸ್ಥೆಯಲ್ಲಿ ಮಗುವನ್ನು ಗರ್ಭದಲ್ಲೇ ಸುರಕ್ಷಿತವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಗರ್ಭಕಂಠವು ಅವಧಿಗೆ ಮುನ್ನವೇ ತೆರೆದುಕೊಳ್ಳುವ ಅಥವಾ ದುರ್ಬಲವಾಗಿರುವ ಸ್ಥಿತಿಯನ್ನು ಸರ್ವೈಕಲ್ ಇನ್ಸಫಿಷಿಯನ್ಸಿ ಎಂದು ಕರೆಯಲಾಗುತ್ತದೆ. ಇದರಿಂದ ಕೆಲವು ಸಂದರ್ಭಗಳಲ್ಲಿ ಅವಧಿಪೂರ್ವ ಹೆರಿಗೆಯಾಗುವ ಅಪಾಯ ಹೆಚ್ಚಾಗಬಹುದು. ಅವಧಿಗೆ ಮುನ್ನ ಜನಿಸುವ ಮಕ್ಕಳಲ್ಲಿ ದೇಹದ ತೂಕ ಕಡಿಮೆ ಇರಬಹುದು. ಅವರ ಶ್ವಾಸಕೋಶ ಸೇರಿದಂತೆ ಕೆಲವು ಅಂಗಗಳು ಸಂಪೂರ್ಣವಾಗಿ ಬೆಳವಣಿಗೆಯಾಗಿರದೇ ಇರಬಹುದು. ಇಂತಹ ನವಜಾತ ಶಿಶುಗಳಿಗೆ ವಿಶೇಷ ವೈದ್ಯಕೀಯ ಆರೈಕೆ ಮತ್ತು ಕೆಲವೊಮ್ಮೆ NICU ಚಿಕಿತ್ಸೆಯ ಅಗತ್ಯವಿರುತ್ತದೆ.

ಮಹಿಳೆಯ ಆರೋಗ್ಯದ ಬಗ್ಗೆ ಇರಲಿ ಕಾಳಜಿ

ಈ ಪ್ರಕರಣದ ಮೂಲಕ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಗರ್ಭಪಾತದ ನಂತರ ಅತಿಯಾದ ರಕ್ತಸ್ರಾವ, ಜ್ವರ, ತೀವ್ರ ಹೊಟ್ಟೆನೋವು ಅಥವಾ ದುರ್ವಾಸನೆಯ ಸ್ರಾವ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಪದೇಪದೇ ಗರ್ಭಪಾತವಾಗುತ್ತಿದ್ದರೆ ಅದರ ಹಿಂದಿನ ಕಾರಣವನ್ನು ಪತ್ತೆಹಚ್ಚಲು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.