ಚಳಿಗಾಲದಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕುಗಳು (UTI) ಹೆಚ್ಚಾಗುತ್ತವೆ. ನೀರು ಕಡಿಮೆ ಕುಡಿಯುವುದು, ಜೀವನಶೈಲಿ ಬದಲಾವಣೆ ಮತ್ತು ರೋಗನಿರೋಧಕ ಶಕ್ತಿ ಕುಗ್ಗುವುದು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಲೇಖನವು ಇದರ ಲಕ್ಷಣಗಳು, ಅಪಾಯಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸುತ್ತದೆ.

UTI in winter season: ಚಳಿಗಾಲವು ಕೇವಲ ಉಸಿರಾಟದ ಸಮಸ್ಯೆಗಳನ್ನು ಮಾತ್ರವಲ್ಲದೆ, ಮೂತ್ರನಾಳದ ಸೋಂಕುಗಳ (Urinary Tract Infections - UTI) ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಅವಧಿಯಲ್ಲಿ ಯುಟಿಐ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ವೈದ್ಯರ ಗಮನಕ್ಕೆ ಬಂದಿದೆ. ಚಳಿಯಿಂದಾಗಿ ನೀರು ಕುಡಿಯುವುದು ಕಡಿಮೆ ಮಾಡುವುದು, ಜೀವನಶೈಲಿ ಬದಲಾವಣೆಗಳು ಮತ್ತು ರೋಗನಿರೋಧಕ ಶಕ್ತಿ ಕುಗ್ಗುವುದು ಈ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಡಾ. ಸವಿತಾ ರಾಥೋಡ್ ನಾಯಕ್ ವಿವರಿಸಿದ್ದಾರೆ.

ಮೂತ್ರನಾಳದ ಸೋಂಕು ಎಂದರೇನು?

ಮೂತ್ರನಾಳ, ಮೂತ್ರಕೋಶ, ಮೂತ್ರನಾಳಗಳು ಅಥವಾ ಮೂತ್ರಪಿಂಡಗಳಲ್ಲಿ E.coli ಸೇರಿದಂತೆ ಬ್ಯಾಕ್ಟೀರಿಯಾ ಹೆಚ್ಚಾಗಿ ವೃದ್ಧಿಯಾಗುವಾಗ ಮೂತ್ರನಾಳದ ಸೋಂಕು ಉಂಟಾಗುತ್ತದೆ. ಮಹಿಳೆಯರಲ್ಲಿ ಮೂತ್ರನಾಳ ಚಿಕ್ಕದಿರುವುದರಿಂದ ಬ್ಯಾಕ್ಟೀರಿಯಾ ಪ್ರವೇಶಿಸಲು ಸುಲಭವಾಗುತ್ತದೆ. ಹೆಚ್ಚಿನ ಸೋಂಕುಗಳು ಸಾಮಾನ್ಯವಾಗಿದ್ದರೂ, ಚಿಕಿತ್ಸೆ ಕೊಡಿಸದಿದ್ದರೆ ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.

ಚಳಿಗಾಲ–UTI ಪ್ರಕರಣಗಳ ಮೆಚ್ಚುಗೆ ಏಕೆ?

ತಜ್ಞರ ಪ್ರಕಾರ, ಚಳಿಗಾಲದಲ್ಲಿ ಯುಟಿಐ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣಗಳು ಇಂತಿವೆ:

1. ದಾಹ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆ ಮಾಡಿ ನಿರ್ಜಲೀಕರಣಕ್ಕೆ ಒಳಗಾಗುವುದು,

2. ಪ್ರಯಾಣದಂತಹ ಸಂದರ್ಭಗಳಲ್ಲಿ ಮೂತ್ರವನ್ನು ದೀರ್ಘಕಾಲ ಹಿಡಿದುಕೊಳ್ಳುವುದು,

3. ಚಳಿಗೆ ತಕ್ಕಂತೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದು.

 4. ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ಸಹಜವಾಗಿ ಕಡಿಮೆಯಾಗುವುದು. 

ಯಾರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ?

ಇನ್ನು, ನೈಸರ್ಗಿಕವಾಗಿ ಮುಟ್ಟು ನಿಂತ ನಂತರದ ಮಹಿಳೆಯರು, ಗರ್ಭಿಣಿಯರು, ಮಧುಮೇಹ (Diabetes) ಇರುವವರು, ಹಾಗೂ ಕಡಿಮೆ ನೀರು ಕುಡಿದು ಮೂತ್ರ ಹಿಡಿದಿಟ್ಟುಕೊಳ್ಳುವ ವಿದ್ಯಾರ್ಥಿನಿಯರು ಮತ್ತು ಕಾರ್ಯನಿಮಗ್ನ ಮಹಿಳೆಯರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.

ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ:

ಯುಟಿಐ ಸೋಂಕಿನ ಆರಂಭಿಕ ಹಂತವನ್ನು ಗುರುತಿಸುವುದು ಅತ್ಯಗತ್ಯ. ಮೂತ್ರವಿಸರ್ಜನೆ ವೇಳೆ ಉರಿ, ನಿರಂತರವಾಗಿ ಮೂತ್ರವಿಸರ್ಜನೆಗೆ ಹೋಗಬೇಕೆಂಬ ಅನುಭವ, ಕೆಳಹೊಟ್ಟೆ ಅಥವಾ ದ್ವಾರ ಪ್ರದೇಶದಲ್ಲಿ ನೋವು, ಮತ್ತು ದುರ್ವಾಸನೆಯ ಮೂತ್ರವು ಎಚ್ಚರಿಕೆಯ ಸಂಕೇತಗಳಾಗಿವೆ. ಒಂದು ವೇಳೆ, ಬೆನ್ನು ಅಥವಾ ಹೊಟ್ಟೆಯ ಬದಿಯಲ್ಲಿ ನೋವು ಮತ್ತು ಜ್ವರ ಕಾಣಿಸಿಕೊಂಡರೆ, ಸೋಂಕು ಮೂತ್ರಪಿಂಡಕ್ಕೆ ಹರಡಿರುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವಿಳಂಬವಾದ ಚಿಕಿತ್ಸೆಯು ಕಿಡ್ನಿ ಸೋಂಕು, ಸೆಪ್ಸಿಸ್ ಮತ್ತು ಮರುಕಳಿಸುವ ಸೋಂಕುಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ತಡೆಗಟ್ಟುವಿಕೆ ಮತ್ತು ತಜ್ಞರ ಸಲಹೆ

ಚಳಿಗಾಲದಲ್ಲಿ ಯುಟಿಐ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಕೆಲವು ಸರಳ ಜೀವನಶೈಲಿ ಬದಲಾವಣೆಗಳನ್ನು ಸೂಚಿಸುತ್ತಾರೆ:

1. ಪ್ರತಿದಿನ 6-8 ಗ್ಲಾಸ್ ನೀರನ್ನು ತಪ್ಪದೇ ಕುಡಿಯುವುದು.

2. ಮೂತ್ರವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳದಿರುವುದು.

3. ಕಾಫೀನ್ ಮತ್ತು ಸಕ್ಕರೆ ಪಾನೀಯಗಳನ್ನು ಮಿತಿಗೊಳಿಸುವುದು.

4. ಹತ್ತಿ ಮತ್ತು ಗಾಳಿ ಜಾರುವ ಒಳ ಉಡುಪು ಧರಿಸುವುದು.

5. ಶೌಚಾಲಯದ ಬಳಕೆಯ ನಂತರ ಸರಿಯಾದ ಸ್ವಚ್ಛತೆಯನ್ನು ಪಾಲಿಸುವುದು.

ಪದೇಪದೆ ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು?

ವೈದ್ಯರು ಸೂಕ್ತ ಪ್ರತಿಜೀವಕಗಳು, ಪ್ರೋಬಯೋಟಿಕ್ಸ್‌ಗಳು, ಅಥವಾ ಇತರ ತಡೆಗಟ್ಟುವ ಚಿಕಿತ್ಸೆಯನ್ನು ನೀಡುತ್ತಾರೆ. ವೈದ್ಯರ ಅಭಿಪ್ರಾಯದಂತೆ, ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಚಳಿಗಾಲದಲ್ಲಿ ಯುಟಿಐ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಮತ್ತು ದೀರ್ಘಕಾಲದ ಮೂತ್ರನಾಳದ ಆರೋಗ್ಯ ಕಾಪಾಡಿಕೊಳ್ಳಬಹುದು.