ದಿಲ್ಲಿ ಚುನಾವಣೆ ಪ್ರಚಾರ ಜೋರು ಜೋರಾಗಿ ನಡೆಯುತ್ತಿದೆ. ಒಂದು ಕಡೆ ಆಮ್‌ ಆದ್ಮಿ ಪಕ್ಷದ ನೇತಾರ ಅರವಿಂದ ಕೇಜ್ರಿವಾಲ್‌ ತಮ್ಮ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಗಳನ್ನು ಕೇಳುತ್ತಿದ್ದಾರೆ. ಕುಡಿಯುವ ನೀರು, ಕರೆಂಟ್‌, ಶಾಲೆ ಇತ್ಯಾದಿ ಕೆಲಸಗಳನ್ನು ತಾನು ಮಾಡಿರುವುದನ್ನು ದಿಲ್ಲಿ ಮತದಾರರ ಮುಂದೆ ಇಟ್ಟಿದ್ದಾರೆ. ಆದರೆ ಇನ್ನೊಂದು ಕಡೆಯಿಂದ ಕೊನೆಯ ಕ್ಷಣದ ಪ್ರಚಾರ ಜೋರಾಗಿಸಿರುವ ಬಿಜೆಪಿ ಕೇಜ್ರಿವಾಲ್‌ರ ಮೇಲೆ ಆರೋಪಗಳ ಸುರಿಮಳೆ ಮಾಡಿದೆ. ಅರವಿಂದ ಕೇಜ್ರಿವಾಲ್‌ ಒಬ್ಬ ಟೆರರಿಸ್ಟ್‌ ಅಂತ ಬಿಜೆಪಿಯ ಕೆಲವರು ಆರೋಪಿಸಿದ್ದಾರೆ. ಕೇಜ್ರಿವಾಲ್‌ ಈ ಆರೋಪಕ್ಕೆ ಕಣ್ಣೀರಾಗಿದ್ದಾರೆ. ಅವರ ಮಗಳು ಹರ್ಷಿತಾ ಕೇಜ್ರಿವಾಲ್‌ ಮಾತ್ರ ಸುಮ್ಮನಿರಲಾಗದೆ ಟೀಕಿಸುವವರಿಗೆ ಉತ್ತರ ಕೊಡಲು ಮುಂದೆ ಬಂದಳು.

ಉಗ್ರ ಪಟ್ಟಕ್ಕೆ ಕಣ್ಣೀರಿಟ್ಟ ಕೇಜ್ರಿವಾಲ್

ಆಕೆ ಹೇಳಿದ್ದು ಇಷ್ಟು: ನನ್ನ ತಂದೆ ಸದಾಕಾಲ ನನ್ನನ್ನು ಹಾಗೂ ತಮ್ಮನನ್ನು, ಅಮ್ಮನನ್ನು ಬೆಳ್ಳಂಬೆಳಗ್ಗೆ ಆರು ಗಂಟೆಗೆ ಎಬ್ಬಿಸಿ ಭಗವದ್ಗೀತೆ ಹೇಳಿಕೊಡ್ತಿದ್ದರು. ಭಜನೆ ಮಾಡಲು ಹೇಳಿ ಕೊಡುತ್ತಿದ್ದರು. ಅಮ್ಮ ಹಾಗೂ ಅಪ್ಪ ಆಗಾಗ ದೇವಸ್ಥಾನಕ್ಕೆ ಹೋಗುವಾಗ ನಮ್ಮನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ದೇವರನ್ನು ನೋಡುವುದಕ್ಕಿಂತಲೂ ಅವರಿಗೆ ಸುತ್ತಮುತ್ತಲಿನ ಅಂಗಡಿಯವರು, ಬಡವರ ನಿತ್ಯ ಜೀವನದ ದುಃಖ ಸಂಕಟ ಯಾತನೆಗಳ ಬಗ್ಗೆ ಕೇಳುವ ಆಸಕ್ತಿಯೇ ಹೆಚ್ಚಿತ್ತು. ಅವರು ಈಗಲೂ ಬಹಳ ಬೇಗನೆ ಏಳುತ್ತಾರೆ. ಯಾವಾಗಲೂ ದಿಲ್ಲಿಯ ಆಡಳಿತ, ಯಾವ ಕೆಲಸ ಆಗಬೇಕು ಎಂಬುದರ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತ ಇರುತ್ತಾರೆ. ನಮ್ಮ ಹಾಗೂ ಅಮ್ಮನ ಬಗ್ಗೆ ಚಿಂತೆ ಮಾಡುವುದೇ ಕಡಿಮೆ. ಇದೇನಾ ಟೆರರಿಸ್ಟ್‌ ಅಂದ್ರೆ? ಭಗವದ್ಗೀತೆ ಓದುವುದೇ ಟೆರರಿಸಮ್ಮಾ? ಅಂತ ಹರ್ಷಿತಾ ವ್ಯಗ್ರವಾಗಿ ಕೇಳಿದ್ದಾರೆ.

ತಾಕತ್ತಿದ್ರೆ....ಬಿಜೆಪಿಗೆ ಕೇಜ್ರಿ ಹಾಕಿದ ಸವಾಲು ನೀವು ಕೇಳಿದ್ರೆ...! 

ಹರ್ಷಿತಾಗೆ ಈಗ 24 ವರ್ಷ ವಯಸ್ಸು. ಈಕೆ ತನ್ನ ತಂದೆ ವಿದ್ಯಾಭ್ಯಾಸ ಮಾಡಿದ ದಿಲ್ಲಿಯ ಐಐಟಿಯಲ್ಲೇ ತಾನೂ ಕಲಿತವಳು. ಈಗ ಗುರುಗಾಂವ್‌ನಲ್ಲಿರುವ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾಳೆ. ಚುನಾವಣೆ ಪ್ರಚಾರ ಕಾರ್ಯದಲ್ಲಿ ತಂದೆಗೆ ನೆರವು ನೀಡುವುದಕ್ಕಾಗಿ ಮೂರು ತಿಂಗಳು ರಜೆ ತೆಗೆದುಕೊಂಡು ಬಂದಿದ್ದಾಳೆ. ಕೇಜ್ರಿವಾಲ್‌ ಪ್ರಚಾರಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಗೆ ಇರುತ್ತಾಳೆ. ತನ್ನ ಬಗ್ಗೆ ಬರುವ ಆರೋಪಗಳಿಗೆ ಸಾಮಾನ್ಯವಾಗಿ ಅರವಿಂದ್‌ ಉತ್ತರಿಸುವುದಿಲ್ಲ. ಕುಟುಂಬಸ್ಥರೂ ಉತ್ತರ ನೀಡುವುದಿಲ್ಲ. ಆದರೆ ಈ ಬಾರಿ ಟೆರರಿಸ್ಟ್ ಎಂದು ಕರೆದದ್ದು ಮಾತ್ರ ಈಕೆಗೆ ತುಂಬಾ ನೋವಾಗಿದೆ.

ಹರ್ಷಿತಾಳ ಸರಳತೆಯ ಬಗ್ಗೆ ದಿಲ್ಲಿ ಐಐಟಿಯಲ್ಲಿ ತುಂಬ ಕತೆಗಳಿವೆ. ಒಬ್ಬಾಕೆ ಹಳೆ ವಿದ್ಯಾರ್ಥಿನಿ ಕೋರಾದಲ್ಲಿ ಬರೆದುಕೊಂಡಿದ್ದು ಹೀಗಿದೆ- ಈಕೆ ಒಮ್ಮೆ ನಾಲ್ಕಾರು ಬ್ಯಾಗುಗಳನ್ನು ಹೊತ್ತುಕೊಂಡು ಮನೆಯಿಂದ ಐಐಟಿ ಹಾಸ್ಟೆಲ್‌ಗೆ ಬರುತ್ತಿದ್ದಳು. ಲಿಫ್ಟ್‌ಗೆ ಏರುವ ಸಂದರ್ಭದಲ್ಲಿ, ಅಷ್ಟನ್ನೆಲ್ಲ ಹೊತ್ತುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಸೆಕ್ಯುರಿಟಿಯಲ್ಲಿ ಯಾಚಿಸಿದರೆ, ಆತ ಸ್ಥಳ ಬಿಟ್ಟು ಕದಲುವುದಿಲ್ಲ ಎಂದ. ಆಗ ಅಲ್ಲೇ ಹಾದುಹೋಗುತ್ತಿದ್ದ ಹುಡುಗಿಯೊಬ್ಬಳು ನಾನು ಹೆಲ್ಪ್‌ ಮಾಡ್ಲಾ ಅಂತ ಕೇಳಿದಳು. ತನ್ನ ಬ್ಯಾಗ್‌ಗಳ ಜೊತೆಗೆ ಆಕೆಯ ಎರಡು ಬ್ಯಾಗ್‌ಗಳನ್ನೂ ಹೊತ್ತಳು. ಲಿಫ್ಟ್‌ನಿಂದ ಇಳಿದ ಬಳಿಕ, ನಿನ್ನ ಹೆಸರೇನು ಎಂದು ಈಕೆ ಕೇಳಿದಾಗ, ಹರ್ಷಿತಾ ಎಂದು ಆಕೆ ಉತ್ತರಿಸಿದಳು. ಈಕೆಗೆ ಅನುಮಾನ ಬಂದು, ನೀನು ಕೇಜ್ರಿವಾಲ್‌ ಮಗಳಾ ಎಂದು ಕೇಳಿದಳು. ಅದಕ್ಕೆ ಹರ್ಷಿತಾ ಮುಗುಳ್ನಕ್ಕು, ಹೌದು ಎಂದಳಂತೆ. ಹೀಗೇ ಆಕೆ ಸರಳವಾಗಿ ಆಟೋರಿಕ್ಷಾದಲ್ಲಿ ಬರುವುದನ್ನು, ಬೆಂಗಾವಲಿನವರು ಇಲ್ಲದೆ ಓಡಾಡುವುದನ್ನು, ಫ್ರೆಂಡ್ಸ್‌ ಜೊತೆಗೆ ಬೈಕ್‌ನ ಹಿಂದಿನ ಸೀಟಿನಲ್ಲಿ ಕುಳಿತು ಹೋಗುವುದನ್ನು- ಕಂಡವರು ಹಾಗೂ ಆಕೆಯ ಜೊತೆಗೆ ಒಡನಾಡಿದವರು ಸಾಕಷ್ಟು ಮಂದಿ ಹೇಳುತ್ತಾರೆ. ದಿಲ್ಲಿಯ ಸಿಎಂ ಅರವಿಂದ್ ಕೂಡ ತನ್ನ ಮಗಳಿಗೆ ಸೆಕ್ಯುರಿಟಿಯನ್ನೇನೂ ಕಲ್ಪಿಸಿಲ್ಲ ಈಗಲೂ ಈಕೆ ಸ್ವಂತ ಸಾಮರ್ಥ್ಯದಿಂದ ಓದಿ ಕಲಿತು ಕೆಲಸ ಪಡೆದ ಪ್ರತಿಭಾವಂತೆ.

'ದಿಲ್ಲಿ ಸಿಎಂ ಕೇಜ್ರಿವಾಲ್‌ ಭಯೋತ್ಪಾದಕ ಅನ್ನೋದಕ್ಕೆ ಸಾಕ್ಷ್ಯ ಇದೆ' 

ಈಕೆ ಕಾಲೇಜಿನ ಬ್ಯಾಡ್ಮಿಂಟನ್‌ ಟೀಮಿನ ಕ್ಯಾಪ್ಟನ್‌ ಆಗಿದ್ದಳು. ಒಡಿಸ್ಸಿ ಡ್ಯಾನ್ಸ್‌ ಚೆನ್ನಾಗಿ ಕಲಿತಿದ್ದಾಳೆ. rank, ಸ್ಕಾಲರ್‌ಶಿಪ್‌ ಪಡೆದ ಪ್ರತಿಭಾವಂತೆ. ಫ್ರೆಂಚ್‌ ಭಾಷೆ ಕಲಿತಿದ್ದಾಳೆ. ಕಳೆದ ವರ್ಷ ಜನವರಿಯಲ್ಲಿ ಅರವಿಂದ್‌ಗೆ ಒಂದು ಇಮೇಲ್‌ ಬಂದಿತ್ತು. ಅದರಲ್ಲಿ ನಿನ್ನ ಮಗಳನ್ನು ಕಿಡ್ನಾಪ್‌ ಮಾಡ್ತೇವೆ, ಹುಷಾರ್ ಎಂದು ಎಚ್ಚರಿಕೆ ನೀಡಲಾಗಿತ್ತು! ಆದರೂ ಆಕೆ ಸೆಕ್ಯುರಿಟಿ ಪಡೆದಿರಲಿಲ್ಲ.

ನಮ್ಮ ಕೆಲವು ಪುಢಾರಿಗಳ ಮಕ್ಕಳ ಸೊಕ್ಕಿಗೆ ಹೋಲಿಸಿದರೆ, ಈ ಹರ್ಷಿತಾ ಎಂಬ ಹುಡುಗಿ ಎಷ್ಟು ಆಪ್ತ ಅನಿಸುತ್ತಾಳೆ ಅಲ್ಲವೇ?