ಬಿಜೆಪಿಯ ಉಗ್ರ ಪಟ್ಟಕ್ಕೆ ಕಣ್ಣೀರಿಟ್ಟ ದಿಲ್ಲಿ ಸಿಎಂ ಕೇಜ್ರಿವಾಲ್
ಸಂದರ್ಶನದಲ್ಲಿ ಕಣ್ಣೀರಿಟ್ಟ ದೆಹಲಿ ಸಿಎಂ| ಉಗ್ರವಾದಿ ಎಂದು ಕರೆದಿದ್ದಕ್ಕೆ ಅರವಿಂದ್ ಕೇಜ್ರಿವಾಲ್ ಬೇಸರ| ಕೇಜ್ರಿವಾಲ್ ಅವರನ್ನು ಉಗ್ರವಾದಿ ಎಂದ ಬಿಜೆಪಿ ಸಂಸದ ಪರ್ವೇಶ್ ವರ್ಮಾ| ಐಐಟಿ ಸಹಪಾಠಿಗಳಂತೆ ನಾನೂ ವಿದೇಶದಲ್ಲಿ ನೆಲೆಸಬಹುದಿತ್ತು ಎಂದ ಕೇಜ್ರಿ| ‘ಜನಸೇವೆಗಾಗಿ ಜೀವನ ಮುಡಿಪಿಟ್ಟಿದ್ದಕ್ಕಾಗಿ ಉಗ್ರವಾದಿ ಪಟ್ಟ’| ಕುಟುಂಬ ಹಾಗೂ ಮಕ್ಕಳಿಗಾಗಿ ಏನನ್ನೂ ಮಾಡಿಲ್ಲ ಎಂದ ಕೇಜ್ರಿವಾಲ್|
ನವದೆಹಲಿ(ಫೆ.05): ಬಿಜೆಪಿ ನಾಯಕರು ತಮ್ಮನ್ನು ಉಗ್ರವಾದಿ ಎಂದು ಕರೆದಿದ್ದಕ್ಕೆ ತೀವ್ರ ಖೇದ ವ್ಯಕ್ತಪಡಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ತಮಗೆ ಉಗ್ರವಾದಿ ಪಟ್ಟ ಕಟ್ಟಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.
ಸಂದರ್ಶನದ ವೇಳೆ ಬಿಜೆಪಿ ನಾಯಕ ಪರ್ವೇಶ್ ವರ್ಮಾ ತಮ್ಮನ್ನು ಉಗ್ರವಾದಿ ಎಂದು ಕರೆದಿದ್ದರ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದ ಕೇಜ್ರಿವಾಲ್, ಏಕಾಏಕಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ನನ್ನ ಐಐಟಿ ಸಹಪಾಠಿಗಳೆಲ್ಲಾ ವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದರೆ ನಾನು ಮಾತ್ರ ಇದ್ದ ಸರ್ಕಾರಿ ನೌಕರಿಯನ್ನೂ ಬಿಟ್ಟು ಜನಸೇವೆಗಾಗಿ ಜೀವನ ಮುಡಿಪಿಟ್ಟಿದ್ದಾಗಿ ಕೇಜ್ರಿವಾಲ್ ಭಾವುಕರಾಗಿ ನುಡಿದರು.
ನನ್ನ ಕುಟುಂಬ ಹಾಗೂ ಮಕ್ಕಳಿಗಾಗಿ ನಾನು ಏನನ್ನೂ ಮಾಡಿಟ್ಟಿಲ್ಲ. ಜೀವಮಾನವೆಲ್ಲಾ ದೆಹಲಿ ಜನತೆಯ ಸೇವೆ ಮಾಡುತ್ತಾ ಸ್ವಂತ ಹಿತಾಸಕ್ತಿಯನ್ನೇ ಮರೆತಿದ್ದೇನೆ. ಆದರೆ ಅಧಿಕಾರಕ್ಕಾಗಿ ಬಿಜೆಪಿ ನಾಯಕರು ತಮ್ಮನ್ನು ಉಗ್ರವಾದಿ ಪಟ್ಟ ಕಟ್ಟಿದ್ದಾರೆ ಎಂದು ಕೇಜ್ರಿವಾಲ್ ಕಣ್ಣೀರು ಹಾಕಿದರು.
'ದಿಲ್ಲಿ ಸಿಎಂ ಕೇಜ್ರಿವಾಲ್ ಭಯೋತ್ಪಾದಕ ಅನ್ನೋದಕ್ಕೆ ಸಾಕ್ಷ್ಯ ಇದೆ'
ಸ್ವಂತ ಹಾಗೂ ಸುಖಿ ಜೀವನಕ್ಕಾಗಿ ನಾನು ವಿದೇಶದಲ್ಲೋ ಅಥವಾ ಸರ್ಕಾರಿ ನೌಕರಿಯಲ್ಲೋ ಕಾಲ ಕಳೆಯಬಹುದಿತ್ತು. ಆದರೆ ಎಲ್ಲವನ್ನೂ ತ್ಯಜಿಸಿ ಜನಸೇವೆಗಾಗಿ ಮುಂದಾಗಿದ್ದಕ್ಕೆ ಬಿಜೆಪಿ ನಾಯಕರು ನನ್ನನ್ನು ಟೆರರಿಸ್ಟ್ ಎಂದು ಕರೆಯುತ್ತಿದೆ ಎಂದು ಕೇಜ್ರಿ ಬೇಸರ ವ್ಯಕ್ತಪಡಿಸಿದರು.