ಅಮ್ಮನದ್ದೇ ನೆನಪು… ಮೊದಲಿನಂತಿಲ್ಲ ಸೀರೆ, ಆದ್ರೂ ಕಡಿಮೆಯಾಗಿಲ್ಲ ಪ್ರೀತಿ ಅಂತಾರೆ ಶಬನಾ ಆಜ್ಮಿ!
ಸೀರೆಯಲ್ಲಿ ನಾರಿ ಸೌಂದರ್ಯ ದುಪ್ಪಟ್ಟಾಗುತ್ತದೆ. ಈಗಿನ ಕಾಲದಲ್ಲಿ ವಿಶೇಷ ಸಂದರ್ಭಕ್ಕೆ ಮೀಸಲಾಗಿರುವ ಸೀರೆ ತನ್ನ ಛಾಪನ್ನು ಕಳೆದುಕೊಂಡಿಲ್ಲ. ವಿಶ್ವ ಸೀರೆ ದಿನ ನಟಿ ಶಬಾನಾ ಅಜ್ಮಿ ತೆರೆದಿಟ್ಟ ಸೀರೆ ಪ್ರೀತಿ ಇಲ್ಲಿದೆ.
ಭಾರತದ ಸಾಂಪ್ರದಾಯಿಕ ಉಡುಗೆ ಸೀರೆ. ಪ್ರತಿಯೊಬ್ಬ ಮಹಿಳೆ ಸೀರೆಯಲ್ಲಿ ಬಲು ಚೆಂದ ಕಾಣ್ತಾಳೆ. ಅನೇಕರಿಗೆ ಸೀರೆ ಅಂದ್ರೆ ಪಂಚಪ್ರಾಣ. ಈಗಿನ ದಿನಗಳಲ್ಲಿ ಹೊಸ ಹೊಸ ರೀತಿಯ ಸೀರೆ ಟ್ರೆಂಡ್ ಆಗಿದ್ರೂ ಅನಾದಿಕಾಲದಿಂದಲೂ ಮಹಿಳೆಯರು ಸೀರೆ ಉಡುತ್ತಿದ್ದಾರೆ. ಹಿಂದೆ ಸೀರೆ ಬಿಟ್ರೆ ಮಹಿಳೆಯರು ಬೇರೆ ಉಡುಗೆ ಧರಿಸ್ತಿರಲಿಲ್ಲ. ನಮ್ಮ ಮುತ್ತಜ್ಜಿ, ಅಜ್ಜಿ ಎಲ್ಲರ ಅಚ್ಚುಮೆಚ್ಚಿನ ಹಾಗೂ ಕನ್ಫರ್ಟ್ ಬಟ್ಟೆ ಸೀರೆ. ಡಿಸೆಂಬರ್ ೨೧ರಂದು ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಸೀರೆ ಮೇಲಿರುವ ತಮ್ಮ ಒಲವಿನ ಬಗ್ಗೆ ಹೇಳಿಕೊಳ್ಳೋದಿದೆ. ಬಾಲಿವುಡ್ ಹಿರಿಯ ನಟಿ ಶಬಾನಾ ಅಜ್ಮಿ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಮಾಧ್ಯಮವೊಂದರ ಜೊತೆ ಮಾತನಾಡಿದ ಶಬಾನಾ ಅಜ್ಮಿ, ತಮ್ಮ ಹಳೆ ದಿನಗಳನ್ನು ನೆನಪುಮಾಡಿಕೊಂಡರು. ತಮ್ಮ ಅಮ್ಮನಿಂದಲೇ ತಮಗೆ ಸೀರೆಯ ಪರಿಚಯವಾಗಿದ್ದು ಎಂದಿದ್ದಾರೆ. ಸೀರೆಯ ಮೇಲೆ ಅವರಿಗಿರುವ ಆಸಕ್ತಿ, ಜ್ಞಾನವನ್ನು ಹಂಚಿಕೊಂಡಿದ್ದಾರೆ.
ಅಮ್ಮನ ಸೀರೆ (Saree) : ಗತಕಾಲದ ಕನ್ನಡಿಯಲ್ಲಿ ಇಣುಕಿ ನೋಡಿದಾಗ ಅಮ್ಮನ ಮೂಲಕ ಸೀರೆಯ ಪರಿಚಯವಾಯಿತು ಎಂದು ಶಬಾನಾ ಅಜ್ಮಿ (Shabana Azmi) ಹೇಳಿದ್ದಾರೆ. ಶಬಾನಾ ಅಜ್ಮಿ ತಾಯಿ ಶೌಕತ್ ಕೈಫಿಗೆ ಸೀರೆಗಳೆಂದರೆ ಹೆಚ್ಚಿನ ಒಲವಿತ್ತು. ಶೌಕತ್ ಕೈಫಿ, ಭಾರತದ ವಿವಿಧ ನಗರಗಳಿಂದ ಉತ್ತಮವಾದ ಸೀರೆಗಳನ್ನು ಖರೀದಿಸಿದ್ದರು. ಅದನ್ನು ಶಬಾನಾ ಅಜ್ಮಿ ಇಂದಿಗೂ ಸಂರಕ್ಷಿಸಿದ್ದಾರೆ. ಆ ಕಾಲದಲ್ಲಿ ತಯಾರಿಸುತ್ತಿದ್ದ ರೇಷ್ಮೆ ಈಗ ಸಿಗುತ್ತಿಲ್ಲ ಎಂದು ಶಬಾನಾ ಹೇಳಿದ್ದಾರೆ.
ಅಲೆಲೇ.. ಮೊನ್ನೆ ಲವ್ ಲೆಟರ್ ಬರೆದ ರಶ್ಮಿಕಾಗೆ ಈಗ ಸೀರೆ ಮೇಲೆ ಲವ್ವಾಗಿದ್ಯಂತೆ!
ಸೀರೆ ಮೇಲೆ ಪ್ರೀತಿ : ಎಲ್ಲ ಮಹಿಳೆಯರಿಗೂ ಸೀರೆ ಇಷ್ಟ. ನನಗೂ ಕೂಡ ಸೀರೆ ಅಂದ್ರೆ ಇಷ್ಟ ಎಂದು ಶಬಾನಾ ಅಜ್ಮಿ, ನನ್ನ ಬಳಿ ಬೆಂಗಾಲಿ, ಗುಜರಾತಿ, ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ಸೀರೆಗಳ ದೊಡ್ಡ ಸಂಗ್ರಹವಿದೆ ಎಂದಿದ್ದಾರೆ. ಯಾವುದೇ ವಿಶೇಷ ಸಂದರ್ಭದಲ್ಲಿ ಸೀರೆ ಉಡಲು ಇಷ್ಟಪಡುತ್ತೇನೆ. ಸೀರೆಯಿಂದ ವಿಭಿನ್ನ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ ಸೀರೆ ಸೇರಿದಂತೆ ವಿಶೇಷ ಶೈಲಿಯ ಸೀರೆ ನನ್ನ ಬಳಿ ಇದೆ ಎಂದಿದ್ದಾರೆ.
ಮೊದಲಿನಂತಿಲ್ಲ ಸೀರೆ : ಹಿಂದೆ ಬರ್ತಿದ್ದ ಸೀರೆಗೂ ಇಂದು ಬರ್ತಿರುವ ಸೀರೆಗೂ ವ್ಯತ್ಯಾಸ ಕಂಡು ಹಿಡಿದ ಶಬಾನಾ ಅಜ್ಮಿ, ಹಿಂದೆ ಬರ್ತಿದ್ದ ರೇಷ್ಮೆ ಸೀರೆ ಈಗಿಲ್ಲ ಎಂದಿದ್ದಾರೆ. ಸೀರೆ ಮಾರುಕಟ್ಟೆಯಲ್ಲಿ ಚೈನೀಸ್ ದಾರದ ಪ್ರಭಾವ ಹೆಚ್ಚಾಗಿದೆ. ಅಗ್ಗದ ಸೀರೆಗಳನ್ನು ತಯಾರಿಸಲು ಚೀನಾದಲ್ಲಿ ತಯಾರಿಸಿದ ಕೆಲವು ವಸ್ತುಗಳನ್ನು ಬಳಸಲಾಯ್ತು. ಇದು ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತದೆ. ಸೀರೆಯ ಸೊಬಗು ಕಡಿಮೆಯಾಗುತ್ತದೆ ಎಂದು ಶಬಾನಾ ಅಭಿಪ್ರಾಯಪಟ್ಟಿದ್ದಾರೆ.
ಸೌಂದರ್ಯ ಹೆಚ್ಚಿಸುವ ಸೀರೆ : ಎಲ್ಲಿ ಬೇಕಾದರೂ ಧರಿಸಬಹುದಾದಂತಹ ಉಡುಪು ಸೀರೆ. ಹಬ್ಬ, ಮದುವೆ, ಮನೆ, ಪಾರ್ಟಿ ಎಲ್ಲ ಕಡೆ ಧರಿಸಬಹುದು. ನಾನು ಕಚೇರಿಗೂ ಸೀರೆ ಉಟ್ಟು ಹೋಗ್ತೇನೆ ಎನ್ನುವ ಶಬಾನಾ ಅಜ್ಮಿ, ಸೀರೆಯಲ್ಲಿ ಮಹಿಳೆಯರು ತುಂಬಾ ಸುಂದರವಾಗಿ ಕಾಣುತ್ತಾರೆ ಎಂದಿದ್ದಾರೆ. ಬಾಲಿವುಡ್ ನಟಿಯರು ಮತ್ತೆ ಸೀರೆಯತ್ತ ಮುಖ ಮಾಡಿದ್ದಾರೆ. ಆಲಿಯಾ ಭಟ್ ಶಿಫಾನ್ ಸೀರೆಯ ಲುಕ್ ಜನಪ್ರಿಯವಾಗಿದ್ದು, ಸೀರೆಯತ್ತ ಮಹಿಳೆಯರು ಮತ್ತು ಹುಡುಗಿಯರ ಕ್ರೇಜ್ ಹೆಚ್ಚಿಸಿದೆ ಎಂದು ಶಬಾನಾ ಅಜ್ಮಿ ಹೇಳಿದ್ದಾರೆ.
ವಾರಣಾಸಿಯಲ್ಲಿ ಒಲವಿನ ನಿಲ್ದಾಣ ನಟಿ ಅಮಿತಾ ಕುಲಾಲ್, ಹೋಗಿದ್ದು ಮೊದಲಲ್ಲ!
ಒಂದೇ ಸೀರೆ.. ಉಡುವ ಬಗೆ ಹಲವು : ಇನ್ನು ಸೀರೆ ಧರಿಸುವ ಬಗ್ಗೆ ಮಾತನಾಡಿದ ಶಬಾನಾ, ಪ್ರತಿ ಪ್ರಾಂತ್ಯಕ್ಕೂ ಸೀರೆ ಒಂದೇ. ಆದರೆ ಅದನ್ನು ಧರಿಸುವ ವಿಧಾನ ಬದಲಾಗುತ್ತದೆ ಎಂದಿದ್ದಾರೆ.
ಕೈಮಗ್ಗಕ್ಕೆ ಉತ್ತೇಜನ ನೀಡಬೇಕು : ಪವರ್ ಲೂಮ್ ಬದಲಿಗೆ ಕೈಮಗ್ಗಕ್ಕೆ ಉತ್ತೇಜನ ನೀಡಬೇಕು. ಕಾರಣ ಸೀರೆಯಲ್ಲಿ ಕೈಮಗ್ಗದಿಂದ ಕೆತ್ತಬಹುದಾದ ವಿನ್ಯಾಸವನ್ನು ಪವರ್‌ಲೂಮ್‌ನಿಂದ ಮಾಡಲು ಸಾಧ್ಯವಿಲ್ಲ. ಕೈಮಗ್ಗಕ್ಕೆ ಉತ್ತೇಜನ ನೀಡುವ ಅಗತ್ಯವಿದೆ. ಇದರಿಂದ ಜನರಿಗೆ ಉದ್ಯೋಗವೂ ಸಿಗಲಿದೆ. ಮುಬಾರಕಪುರ ಸೀರೆ ಮತ್ತು ನಿಜಾಮಾಬಾದ್ ಕಪ್ಪು ಕುಂಬಾರಿಕೆಯನ್ನು ಉತ್ತೇಜಿಸಲು ಸರ್ಕಾರ ಮುಂದಾಗಬೇಕು ಎಂದು ಶಬಾನಾ ಅಜ್ಮಿ ಅಭಿಪ್ರಾಯಪಟ್ಟಿದ್ದಾರೆ.