Asianet Suvarna News Asianet Suvarna News

'ಆಕೆಗಾಗಿ' ಹೈ ಹೀಲ್ಡ್‌ ಶೂ ಧರಿಸಿ ಮೈಲು ದೂರ ನಡೆದ ಪುರುಷರು: ವೀಡಿಯೋ

ಹುಡುಗಿಯರು ಹೈ ಹೀಲ್ಡ್ ಧರಿಸಿ ಬಿಂಕ ಬಿನ್ನಾಣದಿಂದ ಹೆಜ್ಜೆ ಹಾಕುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಪುರುಷರ ದೊಡ್ಡ ಸಮೂಹ ಹೈ ಹೀಲ್ಡ್‌ ಧರಿಸಿ ಮೈಲು ದೂರವನ್ನು ಕ್ರಮಿಸಿದ್ದಾರೆ.

Walk A Mile In Her Shoes These men are literally walking a mile in red high heels to stand up against rape, assault and violence against women watch video akb
Author
First Published Oct 29, 2023, 3:02 PM IST | Last Updated Oct 29, 2023, 3:02 PM IST

ಹುಡುಗಿಯರು ಹೈ ಹೀಲ್ಡ್ ಧರಿಸಿ ಬಿಂಕ ಬಿನ್ನಾಣದಿಂದ ಹೆಜ್ಜೆ ಹಾಕುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಪುರುಷರ ದೊಡ್ಡ ಸಮೂಹ ಹೈ ಹೀಲ್ಡ್‌ ಧರಿಸಿ ಮೈಲು ದೂರವನ್ನು ಕ್ರಮಿಸಿದ್ದಾರೆ. ಪ್ಯಾಂಟ್ ಶರ್ಟ್ ಧರಿಸಿದ ಪುರುಷರು ಹೈ ಹೀಲ್ಡ್ ಧರಿಸಿ ರಸ್ತೆಯಲ್ಲಿ ನಡೆದು ಹೋಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಜನ ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ. 

ಅಂದಹಾಗೆ ಇದನ್ನು ಆಯೋಜಿಸಿದ್ದು, ಒಂದು ಎನ್‌ಜಿಒ, ಮಹಿಳೆಯರ ಮೇಲಿನ ದೌರ್ಜನ್ಯ ಹಿಂಸಾಚಾರ, ಅತ್ಯಾಚಾರ ತಡೆಗಟ್ಟುವ ಸಲುವಾಗಿ ಆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ  'ವಾಕ್ ಎ ಮೈಲ್ ಇನ್‌ ಹರ್ ಶೂ' ಎಂಬ ಈ ಕಾರ್ಯಕ್ರಮವನ್ನು ಪ್ರತಿವರ್ಷವೂ ಸಂಸ್ಥೆ ಪಾಶ್ಚಿಮಾತ್ಯ ದೇಶಗಳಲ್ಲಿ ಏರ್ಪಡಿಸುತ್ತಾ ಬರುತ್ತಿದೆ. ಅದೇ ರೀತಿ ಈ ಬಾರಿ ಜಮೈಕಾದ ಮಂಡೆವಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 'ವಾಕ್ ಎ ಮೈಲ್ ಇನ್‌ ಹರ್ ಶೂ' ಎಂಬ ಈ ಜಾಥಾದಲ್ಲಿ ನೂರಾರು ಪುರುಷರು, ಸ್ತ್ರೀಯರು ಬಳಸುವ ಕೆಂಪು ಬಣ್ಣದ ಹೈ ಹೀಲ್ಡ್‌ ಶೂ ಧರಿಸಿ ಮೈಲು ದೂರ ನಡೆದರು. 

ಬೇಕಾ ಇಂಥಾ ಮಕ್ಕಳು... ಮುಂಗೋಪಿ ಮಗ ಕಿಡಿಗೇಡಿ ಮೊಮ್ಮಗ : ವೃದ್ಧ ತಾಯಿ ಮೇಲೆ ಹಿಗ್ಗಾಮುಗ್ಗಾ ಥಳಿತ

ಇದರ ವೀಡಿಯೋ ಈಗ ವೈರಲ್ ಆಗಿದೆ. ಅನೇಕರು ಸ್ವ ಇಚ್ಛೆಯಿಂದ ಈ ಜಾಥಾದಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಮಹಿಳೆಯರು ತಮ್ಮ ಶೂಗಳನ್ನು ನೀಡುತ್ತಾರೆ. ಈ ಜಾಥಾಕ್ಕೆ ಮೊದಲು ಬಂದವರಿಗೆ ಶೂ ಆಯ್ಕೆ ಮಾಡುವ ಅವಕಾಶ ಇರುತ್ತದೆ. ನಂತರ ಬಂದವರು ಇರುವ ಶೂವನ್ನೇ ಸರಿಹೊಂದಿಸಿಕೊಳ್ಳಬೇಕಾಗುತ್ತದೆ. ಈ ಜಾಥಾದಲ್ಲಿ ಭಾಗವಹಿಸುವುದಕ್ಕೆ ಪ್ರವೇಶ ಶುಲ್ಕವಿದ್ದು,  ಒಬ್ಬರಿಗೆ 17 ಡಾಲರ್, ಇಬ್ಬರು ಭಾಗವಹಿಸುವುದಾದರೆ 30 ಹಾಗೂ ನಾಲ್ವರು ಭಾಗವಹಿಸುವುದಾದರೆ 55 ಹೀಗೆ ಪ್ರವೇಶ ಶುಲ್ಕವಿದೆ.  ಕಾರ್ಯಕ್ರಮದಲ್ಲಿ ಭಾಗವಹಿಸುವವರು ಅಂದೇ ಬಂದು ನೋಂದಣಿ ಮಾಡಿಕೊಳ್ಳಬಹುದಾಗಿದೆ.  ಆದರೆ ಈ ಶುಲ್ಕದ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. 

ಇದರಲ್ಲಿ ಸಂಗ್ರಹವಾದ ಹಣವನ್ನು  ಆಯಾ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸುವ ಎನ್‌ಜಿಒಗಳು ಪಡೆದು ಕೌಟುಂಬಿಕ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರ ಮುಂತಾದ ತೊಂದರೆಗಳಿಂದ ನೊಂದ ಸಂತ್ರಸ್ತರ ಬದುಕನ್ನು ಸುಗಮಗೊಳಿಸಲು ಬಳಸಲಾಗುತ್ತದೆ. ಇದರ ಜೊತೆಗೆ ಹೈ  ಹೀಲ್ಡ್‌ ಧರಿಸಿ ವೇಗವಾಗಿ ನಡೆದು ಗುರಿಮುಟ್ಟಿದವರಿಗೆ ಪ್ರಥಮ ದ್ವಿತೀಯ ತೃತೀಯ ಹೀಗೆ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ. 

ಭಾರತದ ಬೀದಿ ನಾಯಿ ಜೊತೆ ಪ್ರೀತಿಯಲ್ಲಿ ಬಿದ್ದ ವಿದೇಶಿ ಮಹಿಳೆ: ವಿದೇಶಕ್ಕೆ ಹಾರಲಿದ್ದಾಳೆ 'ಜಯಾ'

ಹೈ ಹೀಲ್ಡ್‌ ಧರಿಸಿ ಹೆಣ್ಣ ಮಕ್ಕಳು ನಡೆದರೆ ನೋಡುವುದಕ್ಕೇನೋ ಚೆಂದವೇ ಆದರೆ ನಡೆದಾಡುವುದು ಅಷ್ಟು ಸುಲಭವಲ್ಲ. ಪೆನ್ಸಿಲ್‌ ಮೊನೆ ಚೂಪಿನಂತಹ ಹೀಲ್ಡ್ ಧರಿಸಿ ನಡೆಯುವಾಗ ಸೊಂಟದಿಂದ ಕಾಲಿನವರೆಗೂ ಬಹಳ ಜೋಪಾನವಾಗಿ ಸಮತೋಲನ ಮಾಡಬೇಕಾಗುತ್ತದೆ. ಸ್ವಲ್ಪ ಆಯತಪ್ಪಿದರು ಮುಗ್ಗರಿಸಿ ಬೀಳೋದು ಗ್ಯಾರಂಟಿ.  ಆದರೆ ನಾರಿಮಣಿಯರು ಬಹಳ ಸಲೀಸಾಗಿ ಹೆಜ್ಜೆ ಬ್ಯಾಲೆನ್ಸ್ ಮಾಡುತ್ತಾ ಹೆಜ್ಜೆ ಹಾಕುತ್ತಾರೆ. ಅದೇ ರೀತಿ ಮೇಲ್ನೋಟಕ್ಕೆ ಅನೇಕ ಹೆಣ್ಣು ಮಕ್ಕಳ ಜೀವನ ಎಷ್ಟೇ ಸಲೀಸಾಗಿ ಕಾಣಿಸಿದರೂ ಕೂಡ ಮಹಿಳೆಯರು ಮನೆಯೊಳಗೆ ನಡೆಯುವ ದೌರ್ಜನ್ಯ, ಹಲ್ಲೆ ಅತ್ಯಾಚಾರ ಮುಂತಾದ ಕಷ್ಟಗಳ ನಡುವೆ ಬದುಕನ್ನು ಬ್ಯಾಲೆನ್ಸ್‌ ಮಾಡುತ್ತಾರೆ. ಹೀಗಾಗಿ ಈ ಪೆನ್ಸಿಲ್‌ ತುದಿಯಂತಿರುವ  ಹೈ ಹೀಲ್ಡ್‌ ಮೇಲೆ ನಡೆಯುವುದಕ್ಕೆ ಮಹಿಳೆಯರ ಜೀವನವನ್ನು ಹೋಲಿಸಲಾಗಿದೆ. 

 

Latest Videos
Follow Us:
Download App:
  • android
  • ios