ಮುಟ್ಟಿನ ದಿನಗಳಲ್ಲಿ ಹಲವರು ಹೊಟ್ಟೆನೋವಿನಿಂದ ಸಂಕಟ ಪಡುತ್ತಾರೆ. ಅಂಥ ಸಂದರ್ಭದಲ್ಲಿ ರಜೆ ಕೇಳಿದ್ರೆ ಈ ವಿಶ್ವವಿದ್ಯಾಲಯವು ಅವರ ಬಟ್ಟೆಯನ್ನೇ ಬಿಚ್ಚಿಸಿ ಸಾಕ್ಷಿ ಕೇಳುತ್ತಿರುವುದು ಬೆಳಕಿಗೆ ಬಂದಿದೆ!
ವಿದ್ಯಾರ್ಥಿನಿಯೊಬ್ಬಳು ತನಗೆ ಮಾಸಿಕ ಋತುಸ್ರಾವ ಆಗಿದೆ ಎನ್ನುವ ಕಾರಣಕ್ಕೆ ರಜೆ ಕೇಳಿದ್ರೆ ಈ ವಿಶ್ವವಿದ್ಯಾಲಯದ ಅಧ್ಯಾಪಕರು ಆಕೆಯ ಪ್ಯಾಂಟ್ ಬಿಚ್ಚಿ ಸಾಬೀತು ಮಾಡುವಂತೆ ಹೇಳಿದ ಅತ್ಯಂತ ಹೇಯ, ನೀಚ ಕೃತ್ಯವೊಂದು ಇದೀಗ ಬೆಳಕಿಗೆ ಬಂದಿದೆ. ಚೀನಾದ ಬೀಜಿಂಗ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಗೆಂಗ್ಡನ್ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಬಟ್ಟೆ ಬಿಚ್ಚುವಂತೆ ಅಲ್ಲಿಯ ಕ್ಲಿನಿಕ್ ಸಿಬ್ಬಂದಿ ತಾಕೀತು ಮಾಡಿರುವುದು ತಿಳಿದುಬಂದಿದ್ದು, ಇದೀಗ ಚೀನಾ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಚೀನಾದ ಉನ್ನತ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಒಂದು ಎನ್ನಿಸಿರುವ ಖಾಸಗಿ ಸ್ವತಂತ್ರ ಪದವಿಪೂರ್ವ ಕಾಲೇಜು ಎನ್ನಿಸಿರುವ ಈ ಕಾಲೇಜಿನಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಅದೇ ವಿದ್ಯಾರ್ಥಿನಿ, ಆನ್‌ಲೈನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ತನಗಾಗಿರುವ ಅವಮಾನವನ್ನು ಬಹಿರಂಗಪಡಿಸಿದ್ದರಿಂದ ಇದು ತಿಳಿದುಬಂದಿದೆ. ವೈದ್ಯಕೀಯ ರಜೆ ಕೋರಿದಾಗ ತನ್ನ ಮುಟ್ಟಿನ ಸ್ಥಿತಿಯನ್ನು ಪರಿಶೀಲಿಸಲು ಕ್ಯಾಂಪಸ್ ಕ್ಲಿನಿಕ್‌ನಲ್ಲಿ ಬಟ್ಟೆ ಬಿಚ್ಚಲು ಸೂಚಿಸಲಾಗಿದೆ ಎಂದು ಆಕೆ ನೋವು ತೋಡಿಕೊಂಡಿದ್ದಾಳೆ. ಮೇ 15 ರಂದು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ವಿದ್ಯಾರ್ಥಿನಿಯು ತನ್ನ ಮುಟ್ಟಿನ ನೋವನ್ನು ದೃಢೀಕರಿಸಲು ಕ್ಯಾಂಪಸ್ ಕ್ಲಿನಿಕ್ ತನ್ನನ್ನು ವಿವಸ್ತ್ರಗೊಳಿಸುವಂತೆ ಒತ್ತಾಯಿಸಿದೆ ಎಂದು ಹೇಳಿಕೊಂಡಿದ್ದಾಳೆ. ಮುಟ್ಟಿನ ದಿನಗಳಲ್ಲಿ ಆಗುವ ನೋವಿಗೆ ರಜೆ ಪಡೆಯುವ ಪ್ರತಿಯೊಬ್ಬರಿಗೂ ಇದೇ ರೀತಿ ಇಲ್ಲಿ ಮಾಡಲಾಗುತ್ತಿದೆ. ಸಾಕ್ಷಿಗಾಗಿ ಬಟ್ಟೆ ಬಿಚ್ಚಿಸಲಾಗುತ್ತಿದೆ ಎನ್ನುವ ಆಘಾತಕಾರಿ ಹೇಳಿಕೆಯನ್ನೂ ಆಕೆ ಹೇಳಿದ್ದಾರೆ.
ಒಂದು ವೇಳೆ ಈ ರೀತಿ ಮಾಡದೇ ಹೋದರೆ ರಜೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ ಎಂದು ವಿದ್ಯಾರ್ಥಿ ನೋವು ತೋಡಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಮಾಡಿರುವ ವಿಡಿಯೋದಲದಲ್ಲಿ ಆಕೆ ಸಿಬ್ಬಂದಿಗೆ, "ಹಾಗಾದರೆ ನೀವು ಹೇಳುತ್ತಿರುವುದು, ತನ್ನ ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ತನ್ನ ಪ್ಯಾಂಟ್ ಅನ್ನು ತೆಗೆದು ರಜೆ ಟಿಪ್ಪಣಿಯನ್ನು ಪಡೆಯಲು ನಿಮಗೆ ತೋರಿಸಬೇಕಾ ಎಂದು ಕೇಳಿದಾಗ, ಕ್ಲಿನಿಕ್‌ನ ಮಹಿಳಾ ಸಿಬ್ಬಂದಿಯೊಬ್ಬರು, " ಹೌದು. ಇದು ನನ್ನ ವೈಯಕ್ತಿಕ ನಿಯಮವಲ್ಲ, ಇದು ವಿಶ್ವವಿದ್ಯಾಲಯದ ನಿಯಮ" ಎಂದು ಉತ್ತರಿಸಿದ್ದಾಳೆ. ನೀತಿಯ ಲಿಖಿತ ದಾಖಲಾತಿಯನ್ನು ವಿದ್ಯಾರ್ಥಿನಿ ಕೋರಿದಾಗ, ಅವರು ನೀಡಲು ನಿರಾಕರಿಸಿದ್ದಾರೆ.
ಆದರೆ, ಇದನ್ನು ವಿಶ್ವವಿದ್ಯಾಲಯ ಅಲ್ಲಗಳೆದಿದೆ. ಹಲವಾರು ವಿದ್ಯಾರ್ಥಿಗಳು ಆಗಾಗ್ಗೆ ರಜೆ ಪಡೆಯಲು ಮುಟ್ಟಿನ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲವೊಂದು ನಿಯಮ ವಿಧಿಸಲಾಗಿದೆ. ಆದರೆ ವಿದ್ಯಾರ್ಥಿನಿ ಹೇಳಿದಂತೆ ಬಟ್ಟೆ ಬಿಚ್ಚಿಸಲಾಗುತ್ತಿಲ್ಲ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ವಿದ್ಯಾರ್ಥಿನಿಯ ದೈಹಿಕ ಆರೋಗ್ಯದ ಬಗ್ಗೆ ಕೇಳಲಾಗಿತ್ತು. ಆಕೆಯ ಒಪ್ಪಿಗೆ ಪಡೆದ ನಂತರ ಹೆಚ್ಚಿನ ರೋಗನಿರ್ಣಯದೊಂದಿಗೆ ಮುಂದುವರೆಯಲಾಗಿತ್ತು. ಯಾವುದೇ ಉಪಕರಣಗಳು ಅಥವಾ ದೈಹಿಕ ಪರೀಕ್ಷೆಗಳಿಗೆ ಆಕೆಯನ್ನು ಒಳಪಡಿಸಿಲ್ಲ ಎನ್ನುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ.ಸಾಮಾಜಿಕ ಮಾಧ್ಯಮಗಳು ಪ್ರತಿಭಟನೆಯಲ್ಲಿ ಭುಗಿಲೆದ್ದಿವೆ. ಆನ್‌ಲೈನ್‌ನಲ್ಲಿ ಟೀಕೆಗಳ ಬಿರುಗಾಳಿ ಎದ್ದಿದ್ದು, ಇದೊಂದು ಅಮಾನವೀಯ ಘಟನೆ ಎಂದು ಕರೆಯಲಾಗಿದ್ದು, ಮಹಿಳೆಯರು ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
