ರಸ್ತೆಯ ಮೇಲೆ ಹೋಗುವಾರ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡಿದರೆ ಹೇಗಿರುತ್ತೆ? ಇಂಥದ್ದೇ ಒಂದು ಆಘಾತಕಾರಿ ಘಟನೆ ನಡೆದಿದೆ. ಇದರ ಬೆನ್ನತ್ತಿ ಹೋದರೆ ಆಗಿದ್ದೇ ಬೇರೆ!
ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವವನ್ನು ಹೇಗೆ ಬೇಕಾದರೂ ತೆಗೆಯಲಾಗುತ್ತಿದೆ. ಪ್ರಾಣಿ, ಕ್ರಿಮಿ ಕೀಟಗಳನ್ನು ಕೊಂದಷ್ಟೇ ಸುಲಭದಲ್ಲಿ ಮನುಷ್ಯರನ್ನು ಸಾಯಿಸುವ ಮನಸ್ಥಿತಿಯೂ ಇದೆ. ಎಲ್ಲಿ ನೋಡಿದರೂ ಕೊ*ಲೆಯ ಸುದ್ದಿಗಳೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಬಿಟ್ಟಿದೆ. ಮನುಷ್ಯನ ಕ್ರೂರತ್ವ ಎಷ್ಟರಮಟ್ಟಿಗೆ ಹೋಗಿದೆ ಎಂದರೆ ಕೊಂದು ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಜ್ನಲ್ಲಿ, ಸೂಟ್ಕೇಸ್ನಲ್ಲಿ, ಗೋಣಿಚೀಲದಲ್ಲಿ ತುಂಬಿ ಇಡಲಾಗುತ್ತಿದೆ. ಇದನ್ನು ನೋಡಿದರೆ ನಿಜಕ್ಕೂ ಇವರು ಮನುಷ್ಯರಾ ಅಥವಾ ರಾಕ್ಷಸರಾ ಎನ್ನಿಸುವುದು ಉಂಟು. ಇತ್ತೀಚಿನ ವರ್ಷಗಳಲ್ಲಿ ಇಂಥ ಪಾಪ ಕೃತ್ಯಗಳನ್ನು ಮಾಡುವಲ್ಲಿ ಮಹಿಳೆಯರೂ ಮುಂದೆ ಬಂದಿದ್ದಾರೆ ಎನ್ನುವುದು ಮಾತ್ರ ಆತಂಕಕಾರಿ ವಿಷಯವಾಗಿದೆ. ಪ್ರಿಯಕರನ ಜೊತೆಗೂಡಿ ಪತಿಯನ್ನು ಮುಗಿಸುತ್ತಿರುವ ಉದಾಹರಣೆಗಳು ಬೇಕಾದಷ್ಟು ಬರುತ್ತಿವೆ.
ಇಂಥ ಪರಿಸ್ಥಿತಿಯಲ್ಲಿ, ಇದೀಗ ನವಿ ಮುಂಬೈನಲ್ಲಿ ರಸ್ತೆಯ ಮೇಲೆ ಹೋಗುವಾಗ ಕಾರಿನ ಡಿಕ್ಕಿಯಿಂದ ಕೈಯೊಂದು ಹೊರಕ್ಕೆ ಬಂದು ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಇದನ್ನು ಯಾರೋ ಒಬ್ಬರು ವಿಡಿಯೋ ಮಾಡಿ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದರೆ ಕೈ ಮೃದುವಾಗಿರುವ ಕಾರಣ, ಯುವತಿಯ ಕೈ ಎಂದು ಎನ್ನಿಸುವುದು ಉಂಟು. ಯುವತಿ ಎಂದಾಕ್ಷಣ ಎಲ್ಲರ ಗಮನಕ್ಕೆ ಬರುವುದು ಆಕೆಯ ಮೇಲೆ ಅ*ತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎನ್ನುವುದು. ಇದೇ ರೀತಿ ಬಹುತೇಕ ಮಂದಿ ಅಂದುಕೊಂಡಿದ್ದಾರೆ. ಆದರೆ ವಿಚಿತ್ರ ಎಂದರೆ, ಇದನ್ನು ನೋಡಿದ ಮೇಲೆಯೂ ಆ ಕ್ಷಣದಲ್ಲಿ ಯಾರೂ ಪೊಲೀಸರಿಗೆ ಮಾಹಿತಿ ನೀಡುವ ಗೋಜಿಗೆ ಹೋಗಲಿಲ್ಲ. ಎಲ್ಲಿ ವಿಚಾರಣೆ ಎಂದು ಪೊಲೀಸರು ತಮ್ಮನ್ನೇ ಹಿಡಿದು ಸ್ಟೇಷನ್ ಒಳಗೆ ಕುಳ್ಳರಿಸಿಕೊಂಡು ಇಲ್ಲದ ಕಿರುಕುಳ ನೀಡುತ್ತಾರೆಯೋ ಎನ್ನುವ ಭಯ. ಅದೇ ಕಾರಣಕ್ಕೆ ವಾಹನ ಸವಾರರು ದಿಗಿಲುಗೊಂಡರೂ ಸುಮ್ಮನೇ ಹೋಗಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಎಚ್ಚೆತ್ತುಕೊಂಡು ತನಿಖೆ ನಡೆಸಿದ್ದಾರೆ. ಕಾರಿನ ಹಿಂಭಾಗದಿಂದ ನಿರ್ಜೀವ ಕೈ ನೇತಾಡುತ್ತಿರುವಂತೆ ಈ ವಿಡಿಯೋದಲ್ಲಿ ಕಾಣಿಸುತ್ತಿದೆ. ವಾಹನದ ಹಿಂದೆ ಚಾಲನೆ ಮಾಡುತ್ತಿದ್ದ ಚಾಲಕನೊಬ್ಬ ಇದನ್ನು ಸೆರೆಹಿಡಿದಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಅವರು, ಅದನ್ನು ಪೊಲೀಸರಿಗೆ ತಿಳಿಸಲು ಹೋಗಿರಲಿಲ್ಲ. ಆದರೆ ಕೊನೆಗೆ ವಿಡಿಯೋ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಅಲ್ಲಿ ಕಾರಿನ ನಂಬರ್ ಕೂಡ ರಿವೀಲ್ ಆದ ಕಾರಣದಿಂದ ಅವರಿಗೆ ಕಾರು ಮಾಲೀಕರನ್ನು ಪತ್ತೆ ಹಚ್ಚಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ನವಿ ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡವು ಕಾರ್ಯಪ್ರವೃತ್ತರಾದರು. ಕಾರಿನ ನಂಬರ್ ಪ್ಲೇಟ್ ಬಳಸಿ, ಅವರು ಎರಡು ಗಂಟೆಗಳಲ್ಲಿ ಘಾಟ್‌ಕೋಪರ್‌ಗೆ ವಾಹನವನ್ನು ಪತ್ತೆಹಚ್ಚಿದರು.
ಆದರೆ, ಅಲ್ಲಿ ಆದದ್ದೇ ಬೇರೆ. ಇದು ಯಾರ ಹೆಣವೂ ಅಲ್ಲ, ಕೊ*ಲೆಯೂ ನಡೆದಿಲ್ಲ. ಬದಲಿಗೆ ಲ್ಯಾಪ್‌ಟಾಪ್ ಮಾರಾಟವನ್ನು ಉತ್ತೇಜಿಸಲು ಉದ್ದೇಶದಿಮದ ತಮಾಷೆಗೆ ಈ ರೀತಿ ಕಾರಿನ ಮಾಲೀಕ ಮಾಡಿದ್ದು ಎನ್ನುವುದು ತಿಳಿದಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ನವಿ ಮುಂಬೈನ ಕೋಪರ್ಖೈರ್ನೆ ಪ್ರದೇಶದಲ್ಲಿ ಲ್ಯಾಪ್‌ಟಾಪ್ ಅಂಗಡಿಯನ್ನು ಹೊಂದಿರುವ ಈತ, ತನ್ನ ವ್ಯವಹಾರವನ್ನು ಉತ್ತೇಜಿಸಲು ಇತರರೊಂದಿಗೆ ಸೇರಿ ಈ ತಮಾಷೆಯನ್ನು ಯೋಜಿಸಿರುವುದು ತಿಳಿದುಬಂತು.
ಆದರೆ, ವಾಹನ ಸವಾರರು ಹಾಗೂ ಇತರ ಜನರಿಗೆ ಆಘಾತ ಉಂಟು ಮಾಡಿದ್ದರಿಂದ ಇಂಥ ಕೃತ್ಯ ಮಾಡಿದ ಮೂವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ ಈ ಸ್ಟಂಟ್ ಪ್ರಚಾರಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ಪೊಲೀಸರು ವಿವರಿಸಲಿಲ್ಲ. ಯಾರಿಗೂ ಇದು ಅರ್ಥವಾಗದ ವಿಷಯವಾಗಿಯೇ ಉಳಿದಿದೆ. ಲ್ಯಾಪ್ಟಾಪ್ಗೂ, ಹೀಗೆ ಕೈಯನ್ನು ಹೊರಕ್ಕೆ ಹಾಕಿರುವುದಕ್ಕೂ ಏನು ಸಂಬಂಧ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಬಹುಶಃ ಹೀಗೆ ಮಾಡಿದರೆ, ಅದರ ಬೆನ್ನುಹತ್ತಿ ಹೋದರೆ, ತಮ್ಮ ಅಂಗಡಿಗೆ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ಜನರು ಊಹಿಸುತ್ತಿದ್ದಾರೆ. ಅಷ್ಟಕ್ಕೂ ಇದು ಗೊಂಬೆಯ ಕೈ ಎನ್ನುವುದು ಬಳಿಕ ತಿಳಿದಿದೆ.
