ಪೆಹಲ್ಗಾಮ್ ದಾಳಿಯ ಬಳಿಕ ಹಿಂದೂಗಳನ್ನು ಗುರಿಯಾಗಿಸಿಲ್ಲ ಎಂದ ಹೇಳಿಕೆ ನೀಡಿದ್ದ ಯುವತಿಯ ಫೋಟೋ ರಾಹುಲ್ ಗಾಂಧಿಯವರ ಜೊತೆ ವೈರಲ್ ಆಗಿತ್ತು. ಇದೀಗ ಬೇಹುಗಾರಿಕೆ ಆರೋಪದಲ್ಲಿ ಬಂಧಿತಳಾಗಿರುವ ಜ್ಯೋತಿ ಮಲ್ಹೋತ್ರಾಳ ಫೋಟೋ ಕೂಡ ರಾಹುಲ್ ಜೊತೆ ವೈರಲ್ ಆಗಿದೆ. ಆದರೆ ಎರಡೂ ಫೋಟೋಗಳು ತಿರುಚಲ್ಪಟ್ಟಿವೆ ಎಂದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.

ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರು ಹಿಂದೂ ಪುರುಷರನ್ನು ಗುರಿಯಾಗಿಸಿಕೊಂಡು ನಡೆಸಿದ ನರಮೇಧ ಭಾರತವನ್ನಷ್ಟೇ ನಲುಗಿಸಿದ್ದು, ನಿಜವಾದ ಭಾರತೀಯರ ರಕ್ತವೂ ಕುದಿಯುವಂತೆ ಮಾಡಿದೆ. ಉಗ್ರರು ಧರ್ಮ ಕೇಳಿ, ಆ ಬಳಿಕ ಹಿಂದೂಗಳನ್ನು ಗುಂಡಿಕ್ಕಿ ಸಾಯಿಸಿದ್ದನ್ನು ಖುದ್ದು ಮೃತರ ಪತ್ನಿಯರೇ ಹೇಳಿದ್ದರೂ, ಒಬ್ಬಳು ಯುವತಿ ಮಾತ್ರ ಘಂಟಾಘೋಷವಾಗಿ  ಭಾರತದಲ್ಲಿ ಮುಸ್ಲಿಮರ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ.  ಉಗ್ರರು ಸಾಯಿಸುವ ಮುನ್ನ ನೀನು ಹಿಂದೂನೋ, ಮುಸ್ಲಿಮೋ ಎಂದು ಕೇಳಿಯೇ ಇಲ್ಲ. ಎಲ್ಲವೂ ಸುಳ್ಳು ಸುದ್ದಿ. ಇಲ್ಲಿರುವ ಮುಸ್ಲಿಮರು ಎಲ್ಲರಿಗೂ ಸಹಾಯ ಮಾಡಿದ್ದಾರೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದೆಲ್ಲಾ ಕೂಗಿ ಕೂಗಿ ಹೇಳಿದ್ದಳು. ಕೊನೆಗೆ ಈ ರೀತಿ ಹೇಳುತ್ತಿರುವವಳು ಯಾರು ಎಂದು ಪರೀಕ್ಷೆ ಮಾಡಿದಾಗ, ಆಕೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಯ ಜೊತೆ ಇರುವ ಫೋಟೋ ವೈರಲ್​ ಆಗಿತ್ತು. ರಾಹುಲ್​ ಗಾಂಧಿ ಜೊತೆ ಈಕೆ ಕಾಣಿಸಿಕೊಂಡಿದ್ದು ನಿಜವಾಗಿದ್ದರಿಂದ ಅದು ಬೇರೆಯದ್ದೇ ರೂಪ ಪಡೆಯಿತು ಎನ್ನಿ.

ಆದರೆ, ಇದೀಗ ದೇಶದ್ರೋಹಿ ಜ್ಯೋತಿ ಮಲ್ಹೋತ್ರಾ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಯೂಟ್ಯೂಬ್​ ಮೂಲಕ ಪ್ರಪಂಚದ ದರ್ಶನ ಮಾಡ್ತಿದ್ದ ಈ ಸುಂದರಿಗೆ ಪಾಕಿಸ್ತಾನದ ಜೊತೆ ಭಾರಿ ಲಿಂಕ್​ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪಾಕಿಸ್ತಾನದಲ್ಲಿಯೂ ಹಲವು ಗೆಳೆಯರನ್ನು ಹೊಂದಿರುವ ಬಗ್ಗೆ ಇದಾಗಲೇ  ಆರಂಭಿಕ ತನಿಖೆಯಿಂದಲೂ ತಿಳಿದುಬಂದಿದೆ. ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಸದ್ಯ ಈಕೆಯನ್ನು ಅರೆಸ್ಟ್​ ಮಾಡಲಾಗಿದೆ.  ಕಳೆದ ವರ್ಷ  ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಇಫ್ತಾರ್ ಔತಣಕೂಟದಲ್ಲಿ ಈಕೆ ಭಾಗವಹಿಸಿದ್ದ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. ಇಫ್ತಾರ್‌ ಕೂಟದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈಕೆ ಸೋಷಿಯಲ್​  ಮೀಡಿಯಾದಲ್ಲಿ ಪೋಸ್ಟ್​ ಕೂಡ ಮಾಡಿದ್ದಳು.  ಅಷ್ಟೇ ಅಲ್ಲದೇ ತಾನು ಭೇಟಿಯಾದ ಬಹುತೇಕ ಎಲ್ಲರನ್ನೂ ಪಾಕ್‌ ವೀಸಾ ಪಡೆಯಲು ಸಹಾಯ ಮಾಡುವಂತೆ ಕೇಳಿದ್ದರೆಂಬ ವಿಚಾರವೂ ತಿಳಿದುಬಂದಿದೆ. ಕೆಲವೊಂದು ವಿಷಯಗಳನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಕೂಡ. ಆದರೆ ಇದೇ ದೇಶದ್ರೋಹಿಯ ಫೋಟೋ ಈಗ ಪುನಃ ರಾಹುಲ್​ ಗಾಂಧಿ ಜೊತೆ ಕಾಣಿಸಿಕೊಂಡು ಮತ್ತಷ್ಟು ಸಂಚಲನ ಮೂಡಿಸುತ್ತಿದೆ.

ದೇಶದ್ರೋಹಿಗಳೆಲ್ಲರೂ ರಾಹುಲ್​ ಗಾಂಧಿ ಜೊತೆಗೆ ಏಕೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದೆಲ್ಲಾ ಪ್ರಶ್ನೆ ಮಾಡಿ ಈ ಫೋಟೋಗಳನ್ನು ಹರಿಬಿಡಲಾಗುತ್ತಿದೆ. ಈ ಫೋಟೋದಲ್ಲಿ ಜ್ಯೋತಿಮಲ್ಹೋತ್ರಾ ರಾಹುಲ್​ ಗಾಂಧಿಯವರನ್ನು ಅಪ್ಪಿಕೊಂಡಿರುವುದನ್ನು ನೋಡಬಹುದಾಗಿದೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪೆಹಲ್ಗಾಮ್​  ದಾಳಿಗೂ ಕಾಂಗ್ರೆಸ್​ಗೂ ಲಿಂಕ್​ ಮಾಡುತ್ತಿದ್ದಾರೆ.  ದೇಶದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯ ಹಿಂದಿನ ಸೂತ್ರಧಾರ ರಾಹುಲ್ ಗಾಂಧಿಯೇ ಎಂದೂ ಕೇಳಲಾಗುತ್ತಿದೆ. ಆದರೆ ಇಲ್ಲಿರೋ ಅಸಲಿಯತ್ತೇ ಬೇರೆ. ಅಸಲಿಗೆ ಇದು ಫೇಕ್​ ವಿಡಿಯೋ. ಅಂದರೆ ರಾಹುಲ್​ ಗಾಂಧಿ ಜೊತೆ ಅಪ್ಪಿಕೊಂಡಿರುವ ಯುವತಿ ಜ್ಯೋತಿ ಮಲ್ಹೋತ್ರಾ ಅಲ್ಲ ಎನ್ನುವುದು ಫ್ಯಾಕ್ಟ್​ಚೆಕ್​ನಿಂದ ಬಹಿರಂಗಗೊಂಡಿದೆ. 

Jyoti Malhotra confession: ಪಾಕ್​ ಸಂಪರ್ಕದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಯೂಟ್ಯೂಬರ್​ ಜ್ಯೋತಿ ತನಿಖೆಯಲ್ಲಿ ಹೇಳಿದ್ದೇನು?

 ಭಾರತ್​ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್​ ಗಾಂಧಿಯವರು ಬೇರೆಯ ಮಹಿಳೆಯರನ್ನು ಅಪ್ಪಿಕೊಂಡಿದ್ದನ್ನೇ ಫೋಟೋಷಾಪ್​ ಮೂಲಕ ತಿರುಚಿ ಅದಕ್ಕೆ ಜ್ಯೋತಿ ಮಲ್ಹೋತ್ರಾ ಫೋಟೋ ಹಾಕಲಾಗಿದೆ. ಈ ಚಿತ್ರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಸುರೇಂದ್ರ ರಜಪೂತ್ "ಈ ಚಿತ್ರವನ್ನು ಹಂಚಿಕೊಂಡವರು ಫೋಟೋಶಾಪ್ ಮಾಡಿದ್ದಾರೆ. ಸಂಬಂಧಪಟ್ಟವರು  ಗಮನ ಹರಿಸಿ ನಕಲಿ ಚಿತ್ರವನ್ನು ಹಂಚಿಕೊಂಡ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.  ಅಷ್ಟಕ್ಕೂ ಇವರು  ಶೇರ್​ ಮಾಡಿರುವ ಚಿತ್ರದಲ್ಲಿ ಬಳಕೆದಾರರೊಬ್ಬರು "ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ರಾಹುಲ್ ಗಾಂಧಿ ಜೊತೆ, ವಿಚಿತ್ರ ಕಾಕತಾಳೀಯ ಎಂಬಂತೆ ಪ್ರತಿಯೊಬ್ಬ ದೇಶದ್ರೋಹಿ  ಕಾಣಿಸಿಕೊಳ್ಳುತ್ತಿದ್ದಾರೆ" ಎಂದು ಬರೆದಿದ್ದು ಈ ಬಗ್ಗೆ  ಸುರೇಂದ್ರ ಅವರು ಕಿಡಿ ಕಾರಿದ್ದಾರೆ. 

ಫೋಟೋದಲ್ಲಿ ರಾಹುಲ್ ಗಾಂಧಿ ಜೊತೆ ಕಾಣುತ್ತಿರುವ ಮಹಿಳೆ ಉತ್ತರ ಪ್ರದೇಶದ ರಾಯ್ ಬರೇಲಿ ಸದರ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಿ ಅದಿತಿ ಸಿಂಗ್, ಜ್ಯೋತಿ ಮಲ್ಹೋತ್ರಾ ಅಲ್ಲ. ಈ ಚಿತ್ರವು ಅದಿತಿ ಸಿಂಗ್ ಕಾಂಗ್ರೆಸ್ ಪಕ್ಷದ ನಾಯಕಿಯಾಗಿದ್ದಾಗ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾದ ಸಮಯದ್ದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಫೋಟೋವನ್ನು ಸಂಪಾದಿಸುವ ಮೂಲಕ, ಜ್ಯೋತಿ ಮಲ್ಹೋತ್ರಾ ಅವರ ಮುಖವನ್ನು ಶಾಸಕಿ ಅದಿತಿ ಸಿಂಗ್ ಅವರ ಮುಖದೊಂದಿಗೆ ಜಾಣತನದಿಂದ ಬದಲಾಯಿಸಲಾಗಿದೆ ಎನ್ನುವುದು ಬಯಲುಗೊಂಡಿದೆ. ಇನ್ನೊಂದು ಚಿತ್ರದಲ್ಲಿ ಭಾರತ್​ ಜೋಡೋ ಯಾತ್ರೆಯಲ್ಲಿ ಮಹಿಳೆ ಅಪ್ಪಿಕೊಂಡಿರುವ ಫೋಟೋಗೆ ಜ್ಯೋತಿಯ ಫೋಟೋ ಬಳಸಲಾಗಿದೆ. 

ಉಗ್ರರು ಸಾಯಿಸುವ ಮುನ್ನ 'ನೀವು ಹಿಂದೂನಾ' ಕೇಳಿದ್ದೇ ಸುಳ್ಳಂತೆ! ರಾಹುಲ್​ ಗಾಂಧಿ ಜೊತೆ ಇರುವ ಈ ಯುವತಿ ಮಾತು ಕೇಳಿ... ಯಾರೀಕೆ?