Asianet Suvarna News Asianet Suvarna News

ಮಗುವಾಯ್ತು, ಮನೆಯಲ್ಲೇ ಇರ್ಲಾ, ಕೆಲಸಕ್ಕೆ ಹೋಗ್ಲಾ?

ಮಕ್ಕಳಾದ ನಂತರ, ಮೆಟರ್ನಿಟಿ ಲೀವ್ ಮುಗಿದ ಕೂಡಲೇ ಕಚೇರಿಗೆ ಚೀಟಿ ಹಾಕುವವರು ಹಲವರು. ಪುಟ್ಟ ಮಗುವನ್ನು ಬಿಟ್ಟು ಹೋಗಲಾಗದ ಅನಿವಾರ್ಯತೆ ಅವರದು. ಆ ಬಳಿಕ ಪ್ರತಿ ದಿನವೂ ಮನೆಯಲ್ಲೇ ಇರ್ಲಾ, ಕೆಲಸಕ್ಕೆ ಹೋಗ್ಲಾ ಎಂಬ ಪ್ರಶ್ನೆ ಅವರನ್ನು ಕಾಡುತ್ತಲೇ ಇರುತ್ತದೆ. 

To stay or not to stay at home mothers think after having baby
Author
Bengaluru, First Published Dec 2, 2019, 1:18 PM IST

ಮನೆಯಲ್ಲೇ ಇರ್ಲಾ, ಕೆಲಸಕ್ಕೆ ಹೋಗ್ಲಾ?
ಮಕ್ಕಳಾದ ಬಳಿಕ ಬಹುತೇಕ ತಾಯಂದಿರ ಸಂಕಟವಿದು. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬಂಥ ಪರಿಸ್ಥಿತಿ. ಉದ್ಯೋಗಕ್ಕೆ ಮರಳಿದರೆ ಮಗುವಿಗೇನೋ ಕೊರತೆ ಮಾಡಿದೆನೇನೋ ಎಂಬ ಗಿಲ್ಟ್, ಹೋಗದಿದ್ದರೆ ನನ್ನದೆಂದು ಬದುಕೇ ಇಲ್ಲವಲ್ಲ ಎಂಬ ಕೊರಗು. ಆರ್ಥಿಕ ಸ್ವಾತಂತ್ರ್ಯವೂ ಬೇಕು, ಮಕ್ಕಳಿಗೆ ಫುಲ್ ಟೈಂ ಕೂಡಾ ಕೊಡಬೇಕು ಎಂಬ ಆಸೆ- ಹೇಗೆ ಸಾಧ್ಯವಿದು?   

ಒಮ್ಮೆ ಉದ್ಯೋಗ ಮಾಡಿ ಅಭ್ಯಾಸವಾದ ಮಹಿಳೆಯರಿಗೆ ಮನೆಯಲ್ಲೇ ಇರುವ ಸಂಕಟ ಅನುಭವಿಸಿದವರಿಗೇ ಗೊತ್ತು. ಅದೂ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಸುಲಭದ್ದಲ್ಲ. ಉದ್ಯೋಗ, ಮನೆಗೆಲಸ ಎಲ್ಲಕ್ಕಿಂತ ಹೆಚ್ಚಿನದ್ದು- ಪ್ರತಿ ನಿಮಿಷವೂ ಮಗು ಬೀಳದಂತೆ, ಬಾಯಿಗೆ ಕಸ ಹಾಕಿಕೊಳ್ಳದಂತೆ ಜಾಗರೂಕತೆ ವಹಿಸಬೇಕು. ಅದರೊಂದಿಗೆ ಆಡುವ ಜೊತೆಗೆ ಮಾತಿನಿಂದ ಹಿಡಿದು ಎಲ್ಲವನ್ನೂ ಹೇಳಿಕೊಡಬೇಕು. ತಿನ್ನಿಸುವುದು, ಗಂಟೆಗೆರಡು ಬಾರಿ ಅದರ ಮಲಮೂತ್ರ ತೆಗೆದು ಬಟ್ಟೆ ಬದಲಿಸುವುದು, ಬಟ್ಟೆ ಒಗೆಯುವುದು, ಮನೆಯ ಎಲ್ಲೆಡೆ ಸ್ವಚ್ಛತೆ ಕಾಪಾಡುವುದು, 15 ದಿನಕ್ಕೊಮ್ಮೆ ಆರೋಗ್ಯ ತಪ್ಪುವ ಮಗುವಿಗೆ ಎಕ್ಸ್ಟ್ರಾ ಕಾಳಜಿ ವಹಿಸುವುದು, ಪ್ರತಿದಿನ ಹೊರಗೆ ಕರೆದುಕೊಂಡು ಹೋಗುವುದು ಸೇರಿದಂತೆ ಯಾವ ಕೆಲಸವನ್ನೂ ಬಿಡುವಂತಿಲ್ಲ. ನಿದ್ರೆ ಆಗುವುದಿಲ್ಲ, ಮಗುವನ್ನು ಎತ್ತಿ ಇಳಿಸಿ ಕೈ ಬತ್ತಿ ಬರುತ್ತದೆ. ಆದರೂ ಎತ್ತದಿರುವಂತಿಲ್ಲ. ಬೆಳಗಿನಿಂದ ಸಂಜೆವರೆಗೆ ಕೇವಲ ಅಮ್ಮನ ಮುಖ ನೋಡಿ ಬೋರಾಗಿ ಮತ್ತಷ್ಟು ರಗಳೆ ತೆಗೆಯುತ್ತದೆ. ಏನೂ ಮಾಡುವಂತಿಲ್ಲ. ಇದರ ಮಧ್ಯೆ ಅಡುಗೆ, ಮನೆಗೆಲಸ ಆಗಲೇಬೇಕು. ಗಂಡನನ್ನು ಕಡೆಗಣಿಸುವಂತಿಲ್ಲ. ತವರು, ಗೆಳತಿಯರ ಬಳಿ ಮಾತಾಡಲು ಸಮಯ ಹೊಂದಿಸುವುದೇ ಸವಾಲು. ಇದಕ್ಕಾಗಿಯೇ ಬಹಳಷ್ಟು ಮಹಿಳೆಯರಿಗೆ 12 ಗಂಟೆ ಉದ್ಯೋಗವನ್ನಾದರೂ ಮಾಡೇನು, ಈ ಮಗುವನ್ನು ನೋಡಿಕೊಳ್ಳುವ ಕೆಲಸ ಬೇಡಪ್ಪಾ ಬೇಡ ಎನಿಸುವುದು. 

ಉದ್ಯೋಗಸ್ಥ  ನಾರಿಯ ಮಕ್ಕಳೇ ಸ್ಟ್ರಾಂಗು

ಗೊಂದಲ ಗೊಂದಲ
ಪುಟ್ಟ ಮಗುವಿನ ಮುಖ ನೋಡಿದರೆ ಹೇಗಪ್ಪಾ ಡೇಕೇರ್‌ನಲ್ಲಿ ಬಿಡುವುದು, ನನ್ನನ್ನೇ ನಂಬಿದೆಯಲ್ಲಾ ಎಂದು ಪಿಚ್ಚೆನಿಸುವುದು. ಅಲ್ಲದೆ, ಕೆಲವೊಂದು ಡೇಕೇರ್‌ನ ಕೆಲ ಹಿಂಸಾತ್ಮಕ ವಿಡಿಯೋಗಳು ಜನರನ್ನು ಸಾಕಷ್ಟು ಹೆದರಿಸಿಬಿಟ್ಟಿವೆ. ಇನ್ನು ಮನಗೆ ಮಗು ನೋಡಿಕೊಳ್ಳಲು ಕೆಲಸದ ಹೆಂಗಸರನ್ನು ಗೊತ್ತು ಮಾಡೋಣವೆಂದರೆ ಅವರ ಜೊತೆ ಇಡೀ ಮನೆ ಹಾಗೂ ಮಗುವೊಂದನ್ನೇ ಬಿಟ್ಟು ಕಚೇರಿಗೆ ಹೋಗಲು ಆಗುವುದಿಲ್ಲ. ಅದಕ್ಕಾಗಿಯೇ ಕೆಲಸದ ಆಸೆ ಬಿಟ್ಟು ಮಗು ಸ್ಕೂಲಿಗೆ ಹೋಗುವವರೆಗೆ  ಜೊತೆಗಿರೋಣ ಎಂದು ನಿರ್ಧರಿಸುವವರು ಹಲವರು. ಆದರೆ, ಆ ಎರಡು ವರ್ಷ ಕಳೆವ ಹೊತ್ತಿಗಾಗಲೇ ಅವರು ಉದ್ಯೋಗ ಕ್ಷೇತ್ರದಲ್ಲಿ ಬಹಳ ಹಿಂದುಳಿದಂತೆನಿಸಲಾರಂಭಿಸುತ್ತಾರೆ. ದಿನೇ ದಿನೇ ಬದಲಾಗುವ ಟೆಕ್ನಾಲಜಿಯ ಯುಗದಲ್ಲಿ ಅಪ್ಡೇಟ್ ಆಗುವುದು ಸುಲಭವಲ್ಲ. ಹೀಗಾಗಿ, ಹಲವರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. 

ಒಂದು ವೇಳೆ ಅತ್ತೆ, ಮಾವ ಜೊತೆಗಿದ್ದರೆ ಸಲೀಸು ಎನಿಸಬಹುದು. ಆದರೆ, ಅಮ್ಮನದಾದರೆ ಒಂದು ಮಾತು, ನೋಡಿಕೋ ಎಂದು ಆರ್ಡರ್ ಮಾಡುವಷ್ಟು ಸಲುಗೆ. ಆದರೆ, ಜೊತೆಗಿರುವುದು ಅತ್ತೆಯಾದ ಕಾರಣ, ನನ್ನ ಮಗು ನೋಡಿಕೊಳ್ಳಿ, ಆಫೀಸಿಗೆ ಹೋಗುತ್ತೇನೆ ಎನ್ನುವುದು ಕಷ್ಟ ಕಷ್ಟ. ಈ ಸಂದರ್ಭದಲ್ಲಿ ಮನೆಗೇ ಮಗು ನೋಡಿಕೊಳ್ಳಲು ಯಾರಾದರೂ ಹೆಂಗಸು ಬರುವಂತೆ ವ್ಯವಸ್ಥೆ ಮಾಡಿದರೆ ಸ್ವಲ್ಪ ಸುಲಭವಾದೀತು. ಆದರೆ, ಇವರಿಗೇ 15ರಿಂದ 30 ಸಾವಿರದಷ್ಟು ಸಂಬಳ ನೀಡಬೇಕಾಗುತ್ತದೆ. ಹೆಚ್ಚಿನ ಉದ್ಯೋಗಿ ಮಹಿಳೆಯರಿಗೆ ಬರುವ ಸಂಬಳವೂ ಇಷ್ಟೇ ಆಗಿರುತ್ತದೆ. ಹಾಗಾಗಿ, ಅವರು ಈ ಆಯ್ಕೆಯಿಂದಲೂ ದೂರವುಳಿಯುವಂತಾಗುತ್ತದೆ. 

ಒತ್ತಡ, ಖಿನ್ನತೆ  ಇರುದ್ಧ ಹೋರಾಡಿ

ಅಧ್ಯಯನ
ಅಮೆರಿಕನ್ ಸೈಕಾಲಜಿಕಲ್ ಅಸೋಸಿಯೇಶನ್ ನಡೆಸಿದ ಅಧ್ಯಯನ ವರದಿಯಂತೆ, ಮನೆಯಲ್ಲೇ ಇದ್ದು ಮಕ್ಕಳನ್ನು ನೋಡಿಕೊಳ್ಳುವ ತಾಯಂದಿರಿಗಿಂತ ವರ್ಕಿಂಗ್ ಮದರ್ಸ್ ಉತ್ತಮವಂತೆ. ಏಕೆಂದರೆ, ಅವರು ಮಾನಸಿಕವಾಗಿ ಸಂತೋಷವಾಗಿರುತ್ತಾರೆ, ಸ್ವಂತಕ್ಕೆ ಸಮಯವಿರುತ್ತದೆ, ಅವರ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೆ, ತಾವು ಮಕ್ಕಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಯೋಚನೆಯ ಕಾರಣಕ್ಕೇ ಸಿಕ್ಕಷ್ಟು ಸಮಯವನ್ನು ಸಂಪೂರ್ಣವಾಗಿ ಮಕ್ಕಳಿಗೆ ಕೊಡುತ್ತಾರೆ. ಅಂದರೆ, ಗುಣಮಟ್ಟದ ಸಮಯ ಇದಾಗಿರುತ್ತದೆ. ಜೊತೆಗೆ, ತಾಯಿ ಉದ್ಯೋಗಸ್ಥೆಯಾಗಿದ್ದರೆ ಅಂಥವರ ಮಕ್ಕಳು ಹೆಚ್ಚು ಸ್ವತಂತ್ರರಾಗಿರುತ್ತಾರೆ. ಹೆಚ್ಚು ಅವಲಂಬಿತರಾಗೋಲ್ಲ. 
ಆದರೆ, ಮನೆಯಲ್ಲೇ ಇರುವ ತಾಯಂದಿರು ಇಡೀ ದಿನ ಅದೇ ಕೆಲಸ ಮಾಡಿ, ತಮ್ಮೆಲ್ಲ ಆಸೆ, ಕನಸುಗಳನ್ನು ಬದಿಗೊತ್ತಿ ಖಿನ್ನತೆಯ ಲಕ್ಷಣಗಳನ್ನು ಹೊಂದುತ್ತಾರೆ. ಜೊತೆಗೆ, ಅವರ ಮಕ್ಕಳು ಎಲ್ಲಕ್ಕೂ ತಾಯಿಯನ್ನೇ ಅವಲಂಬಿಸುತ್ತವೆ ಎನ್ನುವುದು ಅಧ್ಯಯನ  ವರದಿ. 

ಈ ವರದಿ ಭಾರತೀಯ ಮನೆಗಳ ಸೆಟ್ಟಿಂಗ್‌ಗೆ ಅಷ್ಟೇನು ಹೊಂದುವುದಿಲ್ಲ, ಒಬ್ಬೊಬ್ಬರು ಮಗು ನಿಭಾಯಿಸುವುದು ಒಂದೊಂದು ರೀತಿ, ಮಗು ನೋಡಿಕೊಂಡು ಮನೆಯಲ್ಲಿರುವ ತಾಯಂದಿರೂ ಉದ್ಯೋಗಸ್ಥ ತಾಯಂದಿರಿಗೆ ಸಮವಾಗಿಯೇ ದುಡಿಯುತ್ತಾರೆ ಎಂದು ಈ ಅಧ್ಯಯನಕ್ಕೆ ವಿರೋಧವಾದ ಒಂದಿಷ್ಟು ನಿಲುವುಗಳು ಕೇಳಿಬಂದಿವೆ. ಹಾಗಂತ ಇದನ್ನು ಪೂರ್ತಿ ಸಾರಾಸಗಟಾಗಿ ತಳ್ಳಿ ಹಾಕಲೂ ಆಗುವುದಿಲ್ಲ. 

 


 

Follow Us:
Download App:
  • android
  • ios