ಹರ್ಯಾಣದ ಜಿಂದ್‌ನಲ್ಲಿ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದು, ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 11 ಮಕ್ಕಳನ್ನು ಹೆತ್ತ ತಾಯಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಜಿಂದ್: ಹರ್ಯಾಣದ ಜಿಂದ್‌ನಲ್ಲಿ 37 ವರ್ಷದ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ಜನನದ ನಂತರ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತೀವ್ರವಾದ ಕಾಯುವಿಕೆಯ ನಂತರ ಜನಿಸಿದ ಈ ಮಗುವಿನ ಆಗಮನದಿಂದ ಆ ಮಗುವಿನ 10 ಅಕ್ಕಂದಿರು ಹಾಗೂ ಮನೆ ಮಂದಿಯೆಲ್ಲಾ ಫುಲ್ ಖುಷಿಯಾಗಿದ್ದು, ಆ ಗಂಡು ಮಗುವಿಗೆ ದಿಲ್‌ಖುಷ್ ಎಂದು ಹೆಸರಿಟ್ಟಿದ್ದಾರೆ. ಆದರೆ ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕರು ತಾಯಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಒಂದು ಮಗು ಹೆತ್ತ ತಾಯಿಗೆ ಪ್ರಸವದ ನಂತರ ಕ್ಯಾಲ್ಸಿಯಂ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹೀಗಿರುವಾಗ 11 ಮಕ್ಕಳನ್ನು ಹೆತ್ತ ಈ ತಾಯಿಯ ಆರೋಗ್ಯ ಹೇಗಿರಬಹುದು. ಅವರ ಆರೋಗ್ಯ ಚೆನ್ನಾಗಿದೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.

ಈಗ 11ನೇ ಮಗುವಿಗೆ ಜನ್ಮ ನೀಡಿದ ತಾಯಿಗೆ 19 ವರ್ಷಗಳ ಹಿಂದೆ ಮದುವೆಯಾಗಿತ್ತು. ಈಗ ಅವರು ಜಿಂದ್ ಜಿಲ್ಲೆಯ ಉಚ್ಛಾನ ನಗರದ ಓಜಾಸ್ ಆಸ್ಪತ್ರೆ ಹಾಗೂ ಹೆರಿಗೆ ಕೇಂದ್ರದಲ್ಲಿ ತಮ್ಮ 11ನೇ ಮಗುವಿಗೆ ಜನ್ಮ ನೀಡಿದ್ದಾರೆ. ಆ ಆಸ್ಪತ್ರೆಯ ವೈದ್ಯ ಡಾ ನರ್ವೀರ್ ಶಿಯೋರಾನ್ ಅವರ ಪ್ರಕಾರ ಈ ಹೆರಿಗೆಯು ಬಹಳ ಅಪಾಯದಿಂದ ಕೂಡಿತ್ತು ತಾಯಿಗೆ ಮೂರು ಯುನಿಟ್ ರಕ್ತ ನೀಡಲಾಗಿತ್ತು. ಆದರೂ ಪ್ರಸ್ತುತ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೊಂದು ಬಹಳ ಅಪಾಯದಿಂದ ಕೂಡಿದ ಹೆರಿಗೆ ಆಗಿದ್ದರೂ ತಾಯಿ ಮಗು ಆರೋಗ್ಯವಾಗಿದೆ ಎಂದು ಅವರು ಹೇಳಿದರು.

ಈ ತಾಯಿಯನ್ನು ಜನವರಿ 3 ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನವೇ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಅದಾಗಿ ಕೆಲ ಸಮಯದಲ್ಲೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಫತೇಹಾಬಾದ್ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಮಗುವಿನ ತಂದೆ 38 ವರ್ಷದ ಸಂಜಯ್‌ ಕುಮಾರ್ ಅವರು ದಿನಗೂಲಿ ಕಾರ್ಮಿಕರಾಗಿದ್ದಾರೆ. ತಾವು ಗಂಡು ಮಗು ಬೇಕು ಎಂದು ಬಯಸಿದ್ದರೆ ನನ್ನ ಹಿರಿಯ ಹೆಣ್ಣು ಮಕ್ಕಳು ತಮಗೊಬ್ಬ ಸೋದರ ಬೇಕು ಎಂದು ಬಯಸಿದ್ದರು ಎಂದು ಅವರು ಹೇಳಿದ್ದಾರೆ. 2007ರಲ್ಲಿ ಇವರು ಮದುವೆಯಾಗಿದ್ದು, ತಮ್ಮ ಎಲ್ಲಾ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ನನ್ನ ಮೊದಲ ಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ. ತನ್ನ ನಿಯಮಿತವಾದ ಆದಾಯದ ನಡುವೆಯೂ ತಾನು ತನ್ನ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಶ್ರಮಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ನಾನು ಗಂಡು ಮಗು ಬೇಕು ಎಂದು ಬಯಸಿದೆ, ನನ್ನ ದೊಡ್ಡ ಹೆಣ್ಣು ಮಕ್ಕಳು ತಮಗೊಬ್ಬ ಸೋದರ ಬೇಕು ಎಂದು ಬಯಸಿದ್ದರು. ಇದು ನಮ್ಮ 11ನೇಯ ಮಗು, ನಮಗೀಗಾಗಲೇ 10 ಹೆಣ್ಣು ಮಕ್ಕಳಿದ್ದಾರೆ ಏನಾಗಿದೆಯೋ ಅದೆಲ್ಲವೂ ದೇವರ ಕೃಪೆ ನಾನು ಇದರಿಂದ ಖುಷಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಈ ಕುಟುಂಬದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಂಡು ಮಗು ಜನಿಸಿದ ನಂತರ ತಂದೆ ತನ್ನ ಹೆಣ್ಣು ಮಕ್ಕಳ ಹೆಸರನ್ನು ಹೇಳುವುದಕ್ಕೆ ಕಷ್ಟಪಡುತ್ತಿರುವ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಕದಿಯಲು ಬಂದು ಕಿಟಕಿಯಲ್ಲಿ ಸಿಲುಕಿಕೊಂಡ ಕಳ್ಳ: ಪೊಲೀಸರ ಕರೆಸಿ ಕಳ್ಳನ ರಕ್ಷಿಸಿದ ಮನೆಯವರು

ಮತ್ತೊಂದೆಡೆ ಸೋದರನ ಆಗಮನದಿಂದ ಖುಷಿಯಾಗಿರುವ ಸಂಜಯ್‌ಕುಮಾರ್ ಅವರ ಹೆಣ್ಣು ಮಕ್ಕಳು ತಮ್ಮ ಪುಟ್ಟ ತಮ್ಮನಿಗೆ ದಿಲ್‌ಖುಷ್ ಎಂದು ಹೆಸರಿಟ್ಟಿದ್ದಾರೆ. 19 ವರ್ಷಗಳ ಕಾಯುವಿಕೆಯ ನಂತರ ತಮ್ಮ ಕುಟುಂಬಕ್ಕೆ ಈ ಗಂಡು ಮಗುವಿನ ಆಗಮನವೂ ಬಹಳ ಖುಷಿ ನೀಡಿದೆ ಎಂದು ಅವರು ಹೇಳಿದ್ದಾರೆ. ಸಂಜಯ್ ಅವರಿಗೆ 10 ಹೆಣ್ಣು ಮಕ್ಕಳಿದ್ದು, ಅವರೆಲ್ಲರೂ ತನಗೆ ದೇವರು ನೀಡಿದ ಕೊಡುಗೆ ಎಂದು ಸಂಜಯ್ ಹೇಳಿದ್ದಾರೆ. ಇವರ ದೊಡ್ಡ ಮಗಳು ಸರೀನಾ 18 ವರ್ಷದವಾಗಿದ್ದು, 12ನೇ ಕ್ಲಾಸ್‌ನಲ್ಲಿ ಓಡ್ತಿದ್ದಾರೆ. ಇವರ ನಂತರ ಅಮೃತಾ ಜನಿಸಿದ್ದು 11ನೇ ತರಗತಿಯಲ್ಲಿ ಓದುತ್ತಿದ್ದಾರೆ, ನಂತರ ದ ಮಗಳು ಸುಶೀಲಾ 7ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಳೆ. ಸುಶೀಲಾಳ ನಂತರ ಜನಿಸಿದ ಕಿರಣಾ 6 ಕ್ಲಾಸ್, ದಿವ್ಯಾ 5ನೇ ಕ್ಲಾಸ್ ಹಾಗೂ ಮನ್ನತ್ 3ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ ಕೃತಿಕಾ 2 ನೇ ಕ್ಲಾಸ್‌ನಲ್ಲಿ ಓದುತ್ತಿದ್ದರೆ ಅಮ್ನಿಶಾ 1ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ. 9ನೇ ಮಗು ಲಕ್ಷ್ಮಿ ಹಾಗು 10ನೇ ಮಗು ವೈಶಾಲಿ ಬಳಿಕ ಈಗ ಗಂಡು ಮಗು ಜನಿಸಿದೆ.

ಇದನ್ನೂ ಓದಿ: ಹ್ಯೂಮನ್ ಬ್ಲಡ್ ಎಂಬ ಲೇಬಲ್‌ : ಸಿರಿಂಜ್ ಮೂಲಕ ಕುರಿಗಳ ರಕ್ತ ತೆಗೆದು ಮಾರುತ್ತಿದ್ದ ಖದೀಮರ ಬಂಧನ