ರಾಜಸ್ಥಾನದ ಕೋಟಾದಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನೊಬ್ಬ, ಸಣ್ಣ ಕಿಟಕಿಯಲ್ಲಿ ನುಗ್ಗಲು ಹೋಗಿ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದಾನೆ. ತೀರ್ಥಯಾತ್ರೆಯಿಂದ ಹಿಂತಿರುಗಿದ ಮನೆಯವರು ಆತನನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ರಕ್ಷಿಸಿ ಬಂಧಿಸಿದ್ದಾರೆ.
ಕಳ್ಳತನಕ್ಕೆ ಬಂದ ಕಳ್ಳನೋರ್ವ ವೃತ್ತಾಕಾರದ ಸಣ್ಣ ಕಿಟಕಿಯ ಮೂಲಕ ಮನೆಯೊಳಗೆ ನುಗ್ಗುವುದಕ್ಕೆ ಹೋಗಿ ಅಲ್ಲೇ ಸಿಲುಕಿಕೊಂಡು ತಲೆಕೆಳಗಾಗಿ ಪರದಾಡಿದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ತೀರ್ಥಯಾತ್ರೆಗೆ ಹೋಗಿದ್ದ ಆ ಮನೆಯವರು ವಾಪಸ್ ಬಂದ ಬಳಿಕವೇ ಈ ಕಳ್ಳನ ರಕ್ಷಣೆಯಾಗಿದೆ. ರಾಜಸ್ಥಾನದ ಕೋಟಾದಲ್ಲಿರುವ ಪ್ರತಾಪ್ ನಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮನೆಗೆ ಬೀಗ ಹಾಕಲ್ಪಟ್ಟಿದ್ದು, ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿದ ಕಳ್ಳರಿಬ್ಬರು ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಭಾನುವಾರ ತಡರಾತ್ರಿ ಹಾಗೂ ಮಂಗಳವಾರ ನಸುಕಿನ ಜಾವದ ಮಧ್ಯೆ ಕಳ್ಳರು ಮನೆಗಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ ಕಳ್ಳರಲ್ಲಿ ಒಬ್ಬ ಈ ಸಣ್ಣದಾದ ಕಿಟಕಿಯಲ್ಲಿ ಸಿಲುಕಿ ಹೊರಗೆ ಬರಲಾಗದೇ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸುಭಾಷ್ ಕುಮಾರ್ ರಾವತ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕ ಸುಭಾಷ್ ಕುಮಾರ್ ರಾವತ್ ಅವರು ಶನಿವಾರ ತಮ್ಮ ಮನೆಗೆ ಬೀಗ ಹಾಕಿ ಮನೆ ಮಂದಿಯ ಜೊತೆಗೆ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿರುವ ಖಾಟು ಶ್ಯಾಮ ದೇಗುಲಕ್ಕೆ ತೀರ್ಥಯಾತ್ರೆ ಹೋಗಿದ್ದರು. ಭಾನುವಾರ ರಾತ್ರಿ ಅವರು ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅವರ ಪತ್ನಿ ಮನೆಯ ಪ್ರಮುಖ ಗೇಟ್ ತೆರೆದಾಗ ಸುಭಾಷ್ ಕುಮಾರ್ ಅವರು ತಮ್ಮ ಸ್ಕೂಟರ್‌ನ್ನು ಮನೆಯ ಪಾರ್ಕಿಂಗ್ ಜಾಗದಲ್ಲಿ ಇಡುವುದಕ್ಕೆ ಹೋದಾಗ ಸ್ಕೂಟರ್‌ನ ಹೆಡ್‌ಲೈಟ್ ಬೆಳಕಿಗೆ ಅವರಿಗೆ ವ್ಯಕ್ತಿಯೊಬ್ಬನ ಕಾಲು ವಿಂಡೋದಿಂದ ಕೆಳಗೆ ನೇತಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಅವನನ್ನು ಆ ವಿಂಡೋದಿಂದ ಹೊರಗೆ ತೆಗೆದು ರಕ್ಷಣೆ ಮಾಡಿ ಬಳಿಕ ಕಸ್ಟಡಿಗೆ ಪಡೆದಿದ್ದಾರೆ.
ಇದನ್ನೂ ಓದಿ: ಹ್ಯೂಮನ್ ಬ್ಲಡ್ ಎಂಬ ಲೇಬಲ್ : ಸಿರಿಂಜ್ ಮೂಲಕ ಕುರಿಗಳ ರಕ್ತ ತೆಗೆದು ಮಾರುತ್ತಿದ್ದ ಖದೀಮರ ಬಂಧನ
ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಕಳ್ಳನ ಕಾಲು ಕಿಟಕಿ ಒಂದು ಕಡೆ ತಲೆ ಇಲ್ಲೊಂದು ಕಡೆಯಲ್ಲಿ ಕೆಳಕ್ಕೆ ನೇತಾಡುತ್ತಿದೆ. ಪೊಲೀಸರು ಆತನನ್ನು ಕೆಳಕ್ಕೆ ಇಳಿಸಲು ಶ್ರಮ ಪಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಹೀಗೆ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಆರೋಪಿಯನ್ನು ಪವನ್ ಎಂದು ಗುರುತಿಸಲಾಗಿದೆ. ಈತ ಕೋಟಾದ ದಿಗೋಡ ಗ್ರಾಮದ ನಿವಾಸಿ. ಈತನೊಂದಿಗೆ ಕಳ್ಳತನಕ್ಕೆ ಬಂದಿದ್ದ ಮತ್ತೊಬ್ಬ ಆರೋಪಿ ಮಾತ್ರ ಘಟನೆಯ ಬಳಿಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ದುಬೈನಲ್ಲಿ ಭೀಕರ ಅಪಘಾತ: ಕೇರಳದ ಒಂದೇ ಕುಟುಂಬದ ನಾಲ್ವರು ಪುಟ್ಟ ಮಕ್ಕಳು ಸಾವು
ಬೊರೆಖೇಡಾ ಎಸ್‌ಹೆಚ್‌ಒ ಅನಿಲ್ ಟೈಲರ್ ಈ ಬಗ್ಗೆ ಮಾತನಾಡಿ ಆರೋಪಿ ಪವನ್‌ನನ್ನು ಸೋಮವಾರ ಸಂಜೆ ವಿಚಾರಣೆ ನಂತರ ಬಂಧಿಸಿ ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು. ಆರೋಪಿಯ ಬಳಿ ಇದ್ದ ಕಾರು ಕೀಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯ ಬಳಿ ಇದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ವಾಹನದ ಮೇಲೆ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಲಾಗಿತ್ತು ಹಾಗೂ ಅದರಲ್ಲಿ ಬಿಳಿ ಪರದೆಗಳಿದ್ದವು. ಈತನ ಜೊತೆಗೆ ಕಳ್ಳತನಕ್ಕೆ ಬಂದಿದ್ದ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


