ಹೈದರಾಬಾದ್‌ನಲ್ಲಿ, ಜೀವಂತ ಕುರಿ ಮತ್ತು ಆಡುಗಳಿಂದ ಸಿರಿಂಜ್ ಮೂಲಕ ಅಕ್ರಮವಾಗಿ ರಕ್ತ ತೆಗೆದು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ಈ ರಕ್ತದ ಪ್ಯಾಕೆಟ್‌ಗಳ ಮೇಲೆ 'ಮಾನವ ರಕ್ತ' ಎಂದು ಲೇಬಲ್ ಮಾಡಿದ್ದರಿಂದ ಹಲವು ಅನುಮಾನಗಳು ಹುಟ್ಟಿವೆ.
ಹೈದರಾಬಾದ್: ಕುರಿ ಹಾಗೂ ಆಡುಗಳ ರಕ್ತವನ್ನು ಅಕ್ರಮವಾಗಿ ಸಿರಿಂಜ್ ಮೂಲಕ ತೆಗೆದು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೈದರಾಬಾದ್‌ನ ಕೀಸರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಬಂಧಿತರಿಂದ 130 ಪ್ಯಾಕೇಟ್ ರಕ್ತವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕೀಸರಾ ಪ್ರದೇಶದ ಸತ್ಯನಾರಾಯಣ ಕಾಲೋನಿಯೊಂದರ ಮಟನ್ ಶಾಪ್‌ನಲ್ಲಿ ಜೀವಂತ ಕುರಿ ಹಾಗೂ ಮೇಕೆಗಳಿಂದ ಸಿರೀಂಜ್ ಮೂಲಕ ಅಕ್ರಮವಾಗಿ ರಕ್ತವನ್ನು ತೆಗೆದು ಪ್ಯಾಕೇಟ್ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಈ ಕಾರ್ಯಾಚರಣೆ ಮಧ್ಯರಾತ್ರಿಯ ವೇಳೆ ನಡೆಯುತ್ತಿತ್ತು. ಹಾಗೂ ಯಾವುದೇ ಅನುಮತಿ ಅಥವಾ ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಈ ರಕ್ತವನ್ನು ಇಲ್ಲಿಂದ ಸಾಗಿಸಲಾಗುತ್ತಿತ್ತು. ಕಳೆದೊಂದು ವರ್ಷಗಳಿಂದ ಈ ಅಕ್ರಮ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿ ಪ್ರಾಣಿಯಿಂದಲೂ ಆರೋಪಿಗಳು 1000 ಎಂಎಲ್ ರಕ್ತವನ್ನು ತೆಗೆಯುತ್ತಿದ್ದರು.
ಈ ರಕ್ತವನ್ನು ಪಶುವೈದ್ಯರ ಯಾವುದೇ ಮೇಲುಸ್ತುವಾರಿ ಇಲ್ಲದೇ ಹಾಗೂ ಯಾವುದೇ ಅಧಿಕಾರಿಗಳ ಅಧಿಕೃತ ಅನುಮತಿ ಇಲ್ಲದೇ ಲೀಟರ್‌ಗೆ 2000 ರೂಪಾಯಿಗೆ ಸೇಲ್ ಮಾಡುತ್ತಿದ್ದರು. ಈ ಅಕ್ರಮ ದಂಧೆ ಕೇವಲ ರಾತ್ರಿ ಹಾಗೂ ವಾರಾಂತ್ಯದಲ್ಲಿ ಅಂದರೆ ಶನಿವಾರ ರಾತ್ರಿ ಭಾನುವಾರ ನಸುಕಿನ ಜಾವದ ಸಮಯದಲ್ಲಿ ಮಾತ್ರ ನಡೆಯುತ್ತಿತ್ತು. ಕೇಸರ್ ಪ್ರದೇಶ ಈ ಮಟನ್ ಶಾಪ್‌ಗೆ ಭಾರಿ ಸಂಖ್ಯೆಯ ಕುರಿ ಹಾಗೂ ಆಡುಗಳ ಪೂರೈಕೆ ಆದಾಗ ಈ ಕೃತ್ಯ ನಡೆಯುತ್ತಿತ್ತು. ಇನ್ನು ಆಘಾತಕಾರಿ ವಿಚಾರವೆಂದರೆ ಈ ಪ್ಯಾಕೇಟ್ ಮಾಡಿದ ರಕ್ತದ ಮೇಲೆ ಮಾನವ ರಕ್ತ ಎಂದು ಲೇಬಲ್ ಮಾಡಲಾಗಿದ್ದು, ಇದು ಈ ದಂಧೆಯ ಬಗ್ಗೆ ಮತ್ತಷ್ಟು ಅನುಮಾನ ಹಾಗೂ ಭೀತಿ ಹುಟ್ಟುವಂತೆ ಮಾಡಿದೆ. ಆರೋಪಿಗಳು ಮಾನವ ರಕ್ತದ ಹೆಸರಿನಲ್ಲಿ ಕುರಿಗಳ ರಕ್ತವನ್ನು ಮಾರುತ್ತಿದ್ದರೆ ಎಂಬ ಅನುಮಾನ ಮೂಡಿದೆ.
ಆರೋಪಿಗಳು ತಾವು ಈ ರಕ್ತವನ್ನು ಪ್ರಯೋಗಾಲಯಗಳಿಗೆ ಎಸ್‌ಬಿಎ (Sheep Blood Agar) ಸಿದ್ಧಪಡಿಸುವುದಕ್ಕೆ ನೀಡುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ. ಎಸ್‌ಬಿಎ ಎಂದರೆ ಸೂಕ್ಷ್ಮ ಜೀವವಿಜ್ಞಾನದಲ್ಲಿ ಬ್ಯಾಕ್ಟೀರಿಯಾಗಳನ್ನು ಬೆಳೆಸಲು ಮತ್ತು ಗುರುತಿಸಲು ಬಳಸುವ ಕೃಷಿ ಮಾಧ್ಯಮವಾಗಿದೆ. ಆದರೆ ಪೊಲೀಸರ ಪ್ರಕಾರ ಎಸ್‌ಬಿಎ ಮಾಡುವುದಕ್ಕೆ ರಕ್ತವನ್ನು ಕಟ್ಟುನಿಟ್ಟಾದ ಕ್ರಿಮಿನಾಶಕ ಶಿಷ್ಟಾಚಾರಗಳ ಅಡಿಯಲ್ಲಿ ಸಂಗ್ರಹಿಸಬೇಕಾಗುತ್ತದೆ, ಆದರೆ ಇಲ್ಲಿ ಅದನ್ನು ಅನುಸರಿಸಲಾಗಿಲ್ಲ.
ಇದನ್ನೂ ಓದಿ: ದುಬೈನಲ್ಲಿ ಭೀಕರ ಅಪಘಾತ: ಕೇರಳದ ಒಂದೇ ಕುಟುಂಬದ ನಾಲ್ವರು ಪುಟ್ಟ ಮಕ್ಕಳು ಸಾವು
ಅಲ್ಲದೇ ಈ ರಕ್ತವನ್ನು ಹೆಪ್ಪುವಿರೋಧಕಗಳನ್ನು ಬಳಸಿ ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸಲಾಗಿತ್ತು. ಆರೋಪಿಗಳು ಇದನ್ನು 30 ದಿನಗಳವರೆಗೆ ಸಂರಕ್ಷಿಸಬಹುದು ಎಂದು ಹೇಳಿಕೊಂಡಿದ್ದಾರೆ. ಯಾವುದೇ ಮಾನದಂಡಗಳನ್ನು ಪಾಲಿಸದೇ ಮಾಡಿದ ಇಂತಹ ಸಂಗ್ರಹಣೆಯು ಬಹು ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಗ್ಯ, ಪ್ರಾಣಿ ಕಲ್ಯಾಣ ಮತ್ತು ಆಹಾರ ಸುರಕ್ಷತಾ ಕಾನೂನುಗಳ ಉಲ್ಲಂಘನೆಯ ಜೊತೆಗೆ, ಪೂರೈಕೆ ಸರಪಳಿ, ಅಂತಿಮ ಬಳಕೆದಾರರು ಮತ್ತು ಪ್ರಯೋಗಾಲಯಗಳು ಹಾಗೂ ಈ ಜಾಲದ ಹಿಂದಿರುವ ಇತರ ಪ್ರಮುಖ ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ವಿವರವಾದ ತನಿಖೆ ನಡೆಯುತ್ತಿದೆ. ಆದರೆ ಪ್ರಾಣಿಗಳ ರಕ್ತವನ್ನು ಮಾನವನ ದೇಹಕ್ಕೆ ಯಾವುದೇ ಕಾರಣಕ್ಕೂ ಬಳಸಲಾಗುವುದಿಲ್ಲ.
ಇದನ್ನೂ ಓದಿ: ನಡುರಸ್ತೆಯಲ್ಲಿ ಗಾಡಿ ಪಾರ್ಕಿಂಗ್ ಮಾಡಿ ಎಣ್ಣೆ ಪಾರ್ಟಿ: ದಾರಿ ಬಿಡುವಂತೆ ಕೇಳಿದ ಯುವಕನ ಕೊಲೆ


