ಮೊಬೈಲ್‌ನಲ್ಲಿ ಮಗ್ನಳಾಗಿದ್ದ ತಾಯಿಯ ನಿರ್ಲಕ್ಷ್ಯದಿಂದ ಲಿಫ್ಟ್ ಬಾಗಿಲಿನಲ್ಲಿ ಮಗುವಿನ ಕೈ ಸಿಲುಕಿಕೊಂಡ ದೃಶ್ಯ ವೈರಲ್ ಆಗಿದೆ..
ಪುಟ್ಟ ಮಕ್ಕಳು ಜೊತೆ ಇದ್ದರೆ ಎಷ್ಟು ಜಾಗರೂಕರಾಗಿದ್ದರೂ ಸಾಲದು, ಅತ್ತಿತ್ತ ಸ್ವಲ್ಪ ಮೈಮರೆತರು ಮಕ್ಕಳು ಇನ್ನೇನೋ ದೊಡ್ಡ ಅನಾಹುತವನ್ನೇ ಸೃಷ್ಟಿಸಿ ಬಿಡುತ್ತಾರೆ. ಆಗಷ್ಟೆ ನಡೆಯಲು ಕಲಿತ ಮಕ್ಕಳನ್ನು ನೋಡಿಕೊಳ್ಳಲು ಎರಡು ಕಣ್ಣುಗಳು ಸಾಲದು, ಇದೇ ಕಾರಣಕ್ಕೆ ತಾಯಂದಿರು ಬಹಳ ಜಾಗರೂಕವಾಗಿರುತ್ತಾರೆ. ಪುಟ್ಟ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಆದರೂ ಇಲ್ಲೊಬ್ಬಳು ತಾಯಿ ಮೊಬೈಲ್ ನೋಡುತ್ತಾ ಮೈಮರೆತ ಪರಿಣಾಮ ಮಗುವಿನ ಕೈ ಲಿಫ್ಟ್ ಬಾಗಿಲಿಗೆ ಸಿಲುಕಿದ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಲಿಫ್ಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದ್ದು, ಪುಟ್ಟ ಮಕ್ಕಳಿರುವ ಪೋಷಕರನ್ನು ಭಯಪಡುವಂತೆ ಮಾಡಿದೆ. ವೈರಲ್ ಆದ ವಿಡಿಯೋದಲ್ಲಿ ಯುವ ತಾಯಿಯೊಬ್ಬಳು ತನ್ನ ಮಗುವನ್ನು ಕರೆದುಕೊಂಡು ಲಿಫ್ಟ್‌ನಲ್ಲಿ ಸಂಚರಿಸುತ್ತಿದ್ದಾಳೆ. ತಾಯಿ ಲಿಫ್ಟ್‌ನಲ್ಲಿ ಮೊಬೈಲ್ ನೋಡುತ್ತಾ ನಿಂತಿದ್ದರೆ, ಮಗು ಲಿಫ್ಟ್ ಮಧ್ಯದಲ್ಲಿ ನಿಂತು ಲಿಫ್ಟ್‌ನ ಬಾಗಿಲಿಗೆ ತನ್ನೆರಡು ಪುಟ್ಟ ಕೈಗಳಿಂದ ಬಡಿಯತ್ತಾ ನಿಂತಿದೆ. ಕೆಲ ಕ್ಷಣಗಳ ನಂತರ ಬಾಗಿಲು ತೆರೆದುಕೊಂಡಿದ್ದು, ಇನ್ನೇನು ತಾಯಿ ಮಗುವನ್ನು ಕರೆದುಕೊಂಡು ಲಿಫ್ಟ್‌ನಿಂದ ಹಿರ ನಡೆಯಬೇಕು ಅನ್ನುಷ್ಟರಲ್ಲಿ ಇತ್ತ ಮಗುವಿಗೆ ಬಾಗಿಲಿನ ಮೇಲಿಂದ ತನ್ನ ಕೈಯನ್ನು ತೆಗೆದುಕೊಳ್ಳಲು ಆಗಿಲ್ಲ. ಪರಿಣಾಮ ಮಗುವಿನ ಕೈ ಸಹಿತ ಲಿಫ್ಟ್ ಹಿಂದಕ್ಕೆ ಹೋಗಿದ್ದು, ಆ ಸಂಧುವಿನಲ್ಲಿ ಮಗುವಿನ ಕೈ ಸೇರಿಕೊಂಡಿದೆ.
ಈ ವೇಳೆ ಆತಂಕಗೊಂಡ ತಾಯಿ ಲಿಫ್ಟ್‌ನಲ್ಲಿರುವ ಹಲವು ಬಟನ್‌ಗಳನ್ನು ಒತ್ತುತ್ತಾ ಮಗುವಿನ ಕೈಯನ್ನು ಆ ಬಾಗಿಲಿನ ಸೆರೆಯಿಂದ ಎಳೆಯಲು ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ತಾಯಿಗೆ ಮಗುವಿನ ಕೈಯನ್ನು ಬಿಡಿಸಿ ರಕ್ಷಿಸಲು ಸಾಧ್ಯವಾಗಿಲ್ಲ, ಅಷ್ಟರಲ್ಲಿ ಈ ವೀಡಿಯೋ ಕೊನೆಗೊಂಡಿದೆ.
ಲಿಫ್ಟ್‌ನಲ್ಲಿ ಮಾಡುವ ಸಣ್ಣ ತಪ್ಪುಗಳು ಕೆಲ ಕ್ಷಣದಲ್ಲೇ ನಿಮ್ಮ ಬದುಕನ್ನು ಬದಲಿಸಿಬಿಡಬಹುದು. ನೀವು ನಿಮ್ಮ ಪುಟ್ಟ ಮಗುವಿನ ಜೊತೆ ಇದ್ದಾಗ ಪ್ರತಿ ಸೆಕೆಂಡ್ ಕೂಡ ಬಹಳ ಜಾಗರೂಕವಾಗಿರಬೇಕಾಗುತ್ತದೆ. ಒಂದು ಕ್ಷಣ ಮೈ ಮರೆತರು ಅದು ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಮಗುವಿನ ಕುತೂಹಲವೊಂದು ದೊಡ್ಡ ಅಪಾಯವನ್ನು ಸೃಷ್ಟಿಸಬಹುದು. ಇಲವೆಟರ್‌ನ ಸೆನ್ಸಾರ್‌ಗಳು ಕೆಲವೊಮ್ಮೆ ಕೆಲಸ ಮಾಡದೇ ಇರಬಹುದು.ಹೀಗಾಗಿ ಪುಟ್ಟ ಮಗುವಿನ ಜೊತೆ ಇದ್ದಾಗ ಜಾಗರೂಕರಾಗಿರಿ, ನಿಮ್ಮ ಮಗು ಏನೂ ಮಾಡುತ್ತಿದೆ ಎಂಬುದು ನಿಮ್ಮ ಗಮನದಲ್ಲಿರಬೇಕೆ ಹೋರತು ಫೋನ್‌ನ ಮೇಲೆ ನಿಮ್ಮ ಗಮನ ಇರುವುದು ಅಲ್ಲ. ನಿಮ್ಮ ಜಾಗರೂಕ ಮನಸ್ಥಿತಿ ದೊಡ್ಡ ಅನಾಹುತದಿಂದ ನಿಮ್ಮನ್ನು ಪಾರು ಮಾಡಬಹುದು ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ವೀಡಿಯೋ ನೋಡಿದ ಅನೇಕರು ಮೊಬೈಲ್ ನೋಡುತ್ತಾ ಮೈಮರೆತ ತಾಯಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವತ್ತಿನ ತಲೆಮಾರಿನ ಜನರಿಗೆ ಮೊಬೈಲ್ ಕೈಲಿದ್ದರೆ ಮುಂದೆ ಏನಾಗುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ, ನೀವು ನಿಮ್ಮೊಂದಿಗೆ ಒಂದು ಮಗುವಿದೆ ಎಂಬುದನ್ನು ಗಮನದಲ್ಲಿಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಗುವಿಗಿಂತಲೂ ಆಸಕ್ತಿಕರವಾದ ವಿಚಾರ ಫೋನ್‌ನಲ್ಲಿ ಏನು ಇತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಈಕೆ ಒಬ್ಬಳು ಕೆಟ್ಟ ತಾಯಿ ಇಷ್ಟಾದರೂ ಈಕೆ ತನ್ನ ಕೈಯಲ್ಲಿರುವ ಫೋನನ್ನು ಬಿಟ್ಟಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆ ಆ ಮಗುವಿನ ತಾಯಿ ಎಂದು ನನಗನಿಸುತ್ತಿಲ್ಲ, ಇಂತಹ ಸ್ಥಿತಿಯಲ್ಲೂ ಆಕೆ ಅಷ್ಟೊಂದು ಶಾಂತವಾಗಿ ಇರಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ತಾಯಿಯೊಬ್ಬಳ ಒಂದು ಕ್ಷಣದ ನಿರ್ಲಕ್ಷ್ಯದಿಂದ ಮಗುವೊಂದು ಅಪಾಯಕ್ಕೀಡಾಗುವಂತಾಗಿದೆ.
