ರಾಯಚೂರು: ಮಹಿಳೆಯರ ರಕ್ಷಣೆಗಾಗಿ ಬಂದಿದೆ ಸಖಿ ಒನ್ ಸ್ಟಾಪ್ ಸೆಂಟರ್..!
ರಾಯಚೂರು ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಹಿಂಸಾಚಾರದ ಪ್ರಕರಣಗಳು, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ಸೇರಿದಂತೆ ಇನ್ನಿತರ ದೌರ್ಜನ್ಯಗಳ ಪ್ರಕರಣಗಳ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಇದರಿಂದ ದೂರು ನೀಡಲು ಜನರು ಮುಂದೆ ಬರಲು ಸಾಧ್ಯವಾಗುತ್ತದೆ: ಡಿಸಿ ಎಲ್.ಚಂದ್ರಶೇಖರ ನಾಯಕ
ರಾಯಚೂರು(ಜು.06): ಮಹಿಳಾ ಸಬಲೀಕರಣದ ಉದ್ದೇಶದಿಂದ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಕುಟುಂಬ, ಸಮುದಾಯ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಾಗುವ ಹಿಂಸಾಚಾರವನ್ನು ತಡೆಗಟ್ಟುವ ಮತ್ತು ಮಹಿಳೆಯರಿಗೆ ಬೆಂಬಲಿಸುವ ಉದ್ದೇಶದಿಂದ ಸಖಿ ಒನ್ ಸ್ಟಾಪ್ ಸೆಂಟರ್ಗಳನ್ನು ಸ್ಥಾಪಿಸಲಾಗಿದ್ದು, ಮಹಿಳೆಯರಿಗೆ ಈ ಯೋಜನೆಯ ಕುರಿತು ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು(ಗುರುವಾರ) ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಇಲಾಖಾ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಹಿಂಸಾಚಾರದ ಪ್ರಕರಣಗಳು, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ಸೇರಿದಂತೆ ಇನ್ನಿತರ ದೌರ್ಜನ್ಯಗಳ ಪ್ರಕರಣಗಳ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಇದರಿಂದ ದೂರು ನೀಡಲು ಜನರು ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುದಗಲ್: 108 ಆಂಬ್ಯುಲೆನ್ಸ್ನಲ್ಲೇ ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!
ಇಲಾಖೆ ನಿರಂತರವಾಗಿ ಶಾಲಾ ಕಾಲೇಜುಗಳು ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಜಾಗೃತಿ ಮೂಡಿಸಿ ರಕ್ಷಣೆ ಕುರಿತು ಮಾಹಿತಿ ನೀಡಿದರೆ ಜನರು ಮುಂದೆ ಬಂದು ದೂರು ನೀಡಲು ಸಾಧ್ಯ, ಪ್ರತಿಯೊಬ್ಬರಿಗೂ ಜಾಗೃತಿ ಅವಶ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಸಮಸ್ಯೆಗಳನ್ನು ಆಲಿಸುವ ಕಾರ್ಯ ಮಾಡಬೇಕು ಮತ್ತು ಸಾಂತ್ವಾನ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
2023ನೇ ಸಾಲಿನ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಜಿಲ್ಲೆಯಲ್ಲಿ 19 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, 2 ಅತ್ಯಾಚಾರ ಪ್ರಕರಣ, 2 ಮಹಿಳೆಯರ ಕಳ್ಳ ಸಾಗಣೆ,( ಕಿಡ್ನಾಪ್) ಪ್ರಕರಣ, 22 ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಕೌಟುಂಬಿಕ ದೌರ್ಜನ್ಯದ ಪ್ರಕರಣದಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ರು.
ಪಿಎಂ ಫಸಲ್ ಬಿಮಾ ಯೋಜನೆಯಲ್ಲಿ ಗೋಲ್ಮಾಲ್; ರೈತರ ಹೆಸರಲ್ಲಿ ಬಂದ ಲಕ್ಷ ಲಕ್ಷ ಹಣ ಲೂಟಿ!
ಇನ್ನೂ 2023ನೇ ಸಾಲಿನ ಏಪ್ರಿಲ್ನಿಂದ ಜೂನ್ ತಿಂಗಳವರೆಗೆ ಜಿಲ್ಲೆಯಲ್ಲಿ 6 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, 5 ಅತ್ಯಾ ಚಾರ ಪ್ರಕರಣ, 2 ಕಿಡ್ನಾಪ್ ಪ್ರಕರಣ, 18 ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಕೌಟುಂಬಿಕ ದೌರ್ಜನ್ಯದ ಪ್ರಕರಣದಲ್ಲಿ ದೂರು ದಾಖಲಿಸಿ, ಕೌಟುಂಬಿಕ ದೌರ್ಜನ್ಯದ ಪ್ರಕರಣದಲ್ಲಿ 6 ಪ್ರಕರಣ ಇತ್ಯರ್ಥ ಪಡಿಸಿದೆ, ಉಳಿದ 23 ಪ್ರಕರಣಗಳಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕೆಂದು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಅಧಿಕಾರಿಗಳಿಗೆ ತಾಕೀತು ಮಾಡಿದ್ರು.
ಸಭೆಯಲ್ಲಿ ಹಿರಿಯ ಶ್ರೇಣಿ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಯಾನಂದ ಎಂ.ಬೇಲೂರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ವೃಷಬೇಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತೇದಾರ, ಮಕ್ಕಳ ರಕ್ಷಣಾಧಿಕಾರಿ ಮನ್ಸೂರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ರು.