ಜೀವನದಲ್ಲಿ ಪ್ರೀತಿ ಮಾಡೋಕೆ, ಮದುವೆಯಾಗೋಕೆ, ಕಲಿಕೆಗೆ, ಉದ್ಯೋಗಕ್ಕೆ, ಹವ್ಯಾಸಗಳಿಗೆ ವೇದಿಕೆ ಕೊಡೋಕೆ- ಬಹುತೇಕ ಯಾವುದಕ್ಕೂ ವಯಸ್ಸೊಂದು ಅಡ್ಡಿಯೇ ಅಲ್ಲ. ಮನಸ್ಸಿದ್ದರೆ ಮಾರ್ಗವಿರುತ್ತದೆ. ಆದರೆ ಪ್ರೆಗ್ನೆನ್ಸಿ ವಿಷಯಕ್ಕೆ ಬಂದರೆ ಮಾತ್ರ ವಯಸ್ಸು ಅದರಲ್ಲಿ ಪಾತ್ರ ವಹಿಸುತ್ತದೆ. ವಯಸ್ಸು ಹೆಚ್ಚಾದಂತೆಲ್ಲ ಫಲವತ್ತತೆ ಕಡಿಮೆಯಾಗುತ್ತದೆ. ಪುರುಷರೇ ಆಗಲಿ, ಮಹಿಳೆಯರೇ ಆಗಲಿ, ವಯಸ್ಸು ಜಾಸ್ತಿಯಾದಂತೆಲ್ಲ ಎಗ್ಸ್ ಹಾಗೂ ವೀರ್ಯದ ಗುಣಮಟ್ಟ ಇಳಿಕೆಯಾಗುತ್ತದೆ. ಇದೇ ಕಾರಣ ಮಗುವಿನ ಬೆಳವಣಿಗೆಗೆ ತೊಡಕಾಗಬಹುದು. 

ವಯಸ್ಸಾದಂತೆಲ್ಲ ಫಲವತ್ತತೆ ಇಳಿಯಲು ಕಾರಣವೇನು?
ಹೆಣ್ಣು ಮಗು ಹುಟ್ಟಿದಾಗಲೇ ಅದರ ದೇಹದಲ್ಲಿ ಜೀವನಪೂರ್ತಿ ಹೊಂದಬಹುದಾದಷ್ಟು ಎಗ್ಸ್ ಇರುತ್ತವೆ. ಅಂದರೆ 10ರಿಂದ 20 ಲಕ್ಷದಷ್ಟು! ಋತುಚಕ್ರ ಆರಂಭವಾಗುವ ಹೊತ್ತಿಗಾಗಲೇ ಅರ್ಧದಷ್ಟು ಕಡಿಮೆಯಾಗಿರುತ್ತದೆ. ಹಾಗೆಯೇ ವಯಸ್ಸಾದಂತೆಲ್ಲ ಎಗ್ಸ್ ಸಂಖ್ಯೆ ಕಡಿಮೆಯಾಗುತ್ತಾ ಸಾಗುತ್ತದೆ. ಅಲ್ಲದೆ, ಅವುಗಳಿಗೂ ವಯಸ್ಸಾಗುವುದರಿಂದ ಅವೆಲ್ಲವೂ ಗರ್ಭ ಕಟ್ಟಲು ತಯಾರಿರುವುದಿಲ್ಲ. ಆದರೆ, ಇಲ್ಲಿ ನೀವು ಆಶಾವಾದದಿಂದಿರಲು ಒಂದು ಕಾರಣವಿದೆ. ಅದೆಂದರೆ ಗರ್ಭ ಕಟ್ಟಲು ನಿಮಗೆ ಒಂದೇ ಒಂದು ಆರೋಗ್ಯವಂತ ಎಗ್ ಸಾಕು. 

ಪುರುಷರಿಗೆ ಗರ್ಭ ನಿರೋಧಕ ಇಂಜೆಕ್ಷನ್, ಒಮ್ಮೆ ತೆಗೆದುಕೊಂಡ್ರೆ 13 ವರ್ಷ ಮಕ್ಕಳಾಗೋಲ್ಲ

35ರ ಬಳಿಕ ಏನಾಗುತ್ತದೆ?
35ರ ಬಳಿಕ ಮಹಿಳೆಯರು ಮೆನೋಪಾಸ್‌ಗೆ ಹತ್ತಿರಾಗುತ್ತಿರುತ್ತಾರೆ. ಅಂಥ ಸಮಯದಲ್ಲಿ ಮಗುವನ್ನು ಹೊಂದುವ ಬಗ್ಗೆ ಯೋಚಿಸಬೇಕೆಂದರೆ ಹಲವು ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. 35 ದಾಟಿತೆಂದ ಮಾತ್ರಕ್ಕೆ ಮಕ್ಕಳಾಗುವುದಿಲ್ಲ ಅಥವಾ ಅನಾರೋಗ್ಯಕಾರಿ ಪ್ರಗ್ನೆನ್ಸಿ ಇರುತ್ತದೆ ಎಂದಲ್ಲ. ಆದರೆ, 35ರ ಬಳಿಕ ರಿಸ್ಕ್ ಜಾಸ್ತಿ. ಮಗುವಿನ ಆರೋಗ್ಯ, ತಾಯಿಯ ಆರೋಗ್ಯ, ಗರ್ಭ ಕಟ್ಟುವ ಚಾನ್ಸ್ ಎಲ್ಲದರಲ್ಲೂ ರಿಸ್ಕ್ ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತದೆ. ಅಷ್ಟೇ ಅಲ್ಲ, ಅಬಾರ್ಶನ್ ಆಗುವ ಸಂಭವ ಹೆಚ್ಚಾಗುತ್ತದೆ, ಮಗುವಿನಲ್ಲಿ ಬುದ್ಧಿಮಾಂದ್ಯತೆ, ಉಸಿರಾಟ ಸಮಸ್ಯೆಗಳು, ಆಟಿಸಂ ಹಾಗೂ ಹಲವು ಇತರೆ ಸಮಸ್ಯೆ ತಲೆದೋರಬಹುದು, ತಾಯಂದಿರಲ್ಲಿ ಬಿಪಿ, ಡಯಾಬಿಟೀಸ್ ತಲೆದೋರಿ ಅವಧಿಗೆ ಮುನ್ನ ಹೆರಿಗೆಯಾಗುವ ಸಂಭವಗಳೂ ಹೆಚ್ಚು. ಆದರೆ, ಹೀಗೆ 35ರ ಬಳಿಕ ಮಕ್ಕಳನ್ನು ಬಯಸುವ ತಾಯಂದಿರು ಕೆಲವೊಂದು ಟಿಪ್ಸ್ ಫಾಲೋ ಮಾಡಿದರೆ, ಒಂದಿಷ್ಟು ಮುನ್ನೆಚ್ಚರಿಕೆ ವಹಿಸಿದರೆ ಅವರ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

1. ವ್ಯಾಯಾಮ
ಪ್ರತಿದಿನ ವಾಕ್ ಹೋಗುವುದು, ಯೋಗ, ಈಜು, ಸೈಕಲ್ ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ ಆರೋಗ್ಯ ಚೆನ್ನಾಗಿರುತ್ತದೆಯಲ್ಲದೆ, ಗರ್ಭಕೋಶ ಹೆಚ್ಚು ಬಲವಾಗಿರುತ್ತದೆ. ದಿನಕ್ಕೆ ಕನಿಷ್ಠ 45 ನಿಮಿಷಗಳ ವ್ಯಾಯಾಮ ಬೇಕೇ ಬೇಕು. ಇದನ್ನು ಪತಿ ಪತ್ನಿ ಇಬ್ಬರೂ ಮಾಡುತ್ತಿದ್ದರೆ ಉತ್ತಮ. ಯೋಗ ಹಾಗೂ ವಾಕಿಂಗ್ ಕಾಂಬಿನೇಶನ್ ಪ್ರಗ್ನೆನ್ಸಿಯಲ್ಲಿ ಬೆಸ್ಟ್. 

2. ನೀರು
ದಿನದಲ್ಲಿ 10-12 ಗ್ಲಾಸ್ ನೀರು ಕುಡಿಯುತ್ತಿರಿ. ದೇಹವನ್ನು ಪದೇ ಪದೆ ಹೈಡ್ರೇಟ್ ಮಾಡುತ್ತಿದ್ದರೆ ಅದರ ಬಹುತೇಕ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಅಷ್ಟೇ ಅಲ್ಲ, ಬಹಳಷ್ಟು ಸಮಸ್ಯೆಗಳನ್ನು ಇದು ದೂರವವಿಡುತ್ತದೆ. 

3. ಚಟಗಳಿಂದ ದೂರ
ಸಿಗರೇಟ್ ಸೇವನೆ, ಆಲ್ಕೋಹಾಲ್, ತಂಬಾಕು ಹಾಕುವುದು, ಡ್ರಗ್ಸ್ ಮುಂತಾದ ಚಟಗಳು ಅಬಾರ್ಶನ್ ಸಾಧ್ಯತೆ ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಮಗುವಿನ ಮಾನಸಿಕ ಹೌಗೂ ಬೌದ್ಧಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ ಪತಿಪತ್ನಿ ಇಬ್ಬರೂ ಇಂಥ ಎಲ್ಲ ಚಟಗಳಿಂದ ಸಂಪೂರ್ಣ ದೂರವುಳಿಯಿರಿ. 

ಸಿಗರೇಟ್ ಸೇದಿದರೆ ಹೀಗಾಗುತ್ತೆ ಶ್ವಾಸಕೋಶ

4. ವಿಟಮಿನ್ಸ್ ಮುಖ್ಯ
ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು ಅಥವಾ ಮಗುವನ್ನು ಹೊಂದುವ ಆಕಾಂಕ್ಷೆವುಳ್ಳವರು ಯಾವುದೇ ವಯೋಮಾನದವರಾದರೂ ಸರಿ, ವಿಟಮಿನ್‌ಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಗರ್ಭಿಣಿಯರು ಪ್ರತಿದಿನ ಕನಿಷ್ಠ 400 ಎಂಜಿಯಷ್ಟು ಫೋಲಿಕ್ ಆ್ಯಸಿಡ್ ಸೇವಿಸಬೇಕು. ಮೊದಲ ನಾಲ್ಕು ತಿಂಗಳಲ್ಲಿ ಉತ್ತಮ ಮಟ್ಟದ ಫೋಲಿಕ್ ಆ್ಯಸಿಡ್ ಸೇವನೆಯಿಂದ ಮಗು ಹುಟ್ಟುವಾಗ ಯಾವುದೇ ಜನನ ದೋಷಗಳನ್ನು ತಡೆಯಬಹುದು. 

5. ಗರ್ಭನಿರೋಧಕ
ಯಾವಾಗ ಮಗು ಹೊಂದಬೇಕೆಂದುಕೊಳ್ಳುತ್ತೀರೋ, ಅದಕ್ಕೂ ಕನಿಷ್ಠ 6 ತಿಂಗಳು ಮುಂಚೆಯೇ ಗರ್ಭನಿರೋಧಕಗಳನ್ನು ಬಳಸುವುದನ್ನು ನಿಲ್ಲಿಸಿ. . 

6. ಆಹಾರದಲ್ಲಿ ಫೈಬರ್
ಹೆಚ್ಚು ಹೆಚ್ಚು ನಾರುಳ್ಳ ಆಹಾರ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿದ್ದು, ಮಲಬದ್ಧತೆ ತಲೆದೋರುವುದಿಲ್ಲ. ಹಣ್ಣುಗಳು, ತರಕಾರಿಗಳು, ಪ್ರೋಟೀನ್, ಡೈರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಐಸ್‌ಕ್ರೀಂ ಸೇವನೆ ಹೆಚ್ಚಿಸಿ. ಮೀನುಗಳನ್ನು ಹೆಚ್ಚು ತಿನ್ನುವುದರಿಂದ ಅವುಗಳಲ್ಲಿರುವ ಫ್ಯಾಟಿ ಆ್ಯಸಿಡ್ ಫಲವತ್ತತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಗರ್ಭಿಣಿಯರು ಮೋನೋಸ್ಯಾಚುರೇಟೆಡ್ ಫ್ಯಾಟ್ ಬಳಕೆ ಹೆಚ್ಚಿಸಬೇಕು. ಆರ್ಗ್ಯಾನಿಕ್ ಆಹಾರಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಕರಿದ ಪದಾರ್ಥಗಳ ಸೇವನೆ  ಹಾಗೂ ಜಂಕ್ ಫುಡ್‌ಗಳಿಂದ ದೂರವುಳಿಯಬೇಕು.