ನವದೆಹಲಿ (ನ. 20): ಸಂತಾನಹರಣ ಶಸ್ತ್ರಚಿಕಿತ್ಸೆ (ವ್ಯಾಸೆಕ್ಟಮಿ)ಗೆ ಬಹುತೇಕ ಪುರುಷರು ಹಿಂದೇಟು ಹಾಕುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನಿಗಳು ಪರಾರ‍ಯಯ ಮಾರ್ಗವೊಂದನ್ನು ಹುಡುಕಿದ್ದಾರೆ. ಪುರುಷರಿಗಾಗಿ ವಿಶ್ವದಲ್ಲೇ ಮೊದಲ ಬಾರಿಗೆ ಗರ್ಭ ನಿರೋಧಕ ಚುಚ್ಚುಮದ್ದನ್ನು ಸಂಶೋಧಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ಈ ಚುಚ್ಚುಮದ್ದನ್ನು ಯಶಸ್ವಿಯಾಗಿ ಕ್ಲಿನಿಕಲ್‌ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರ ಉತ್ಪಾದನೆಗೆ ಅನುಮತಿ ನೀಡುವಂತೆ ಕೋರಿ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ)ಕ್ಕೆ ರವಾನಿಸಿದ್ದಾರೆ.

ಫ್ಯಾಮಿಲಿ ಪ್ಲಾನಿಂಗ್ ಇನ್ನು ಕಿವಿಯೋಲೆ ಧರಿಸಿದಷ್ಟೇ ಸುಲಭ!

ಅರಿವಳಿಕೆ ನೀಡಿದ ಬಳಿಕ ಈ ಚುಚ್ಚುಮದ್ದನ್ನು ವೃಷಣದ ಬಳಿ ವೀರಾರ‍ಯಣು ಹೊಂದಿದ ಕೊಳವೆಗೆ ಚುಚ್ಚ ಬೇಕಾಗುತ್ತದೆ. ನೋಂದಾಯಿತ ವೈದ್ಯರೇ ಈ ಚುಚ್ಚುಮದ್ದು ನೀಡಬೇಕು. ಒಮ್ಮೆ ಈ ಇಂಜೆಕ್ಷನ್‌ ತೆಗೆದುಕೊಂಡರೆ, ಅದು 13 ವರ್ಷಗಳ ಕಾಲ ಪರಿಣಾಮ ಹೊಂದಿರುತ್ತದೆ. ಹೀಗಾಗಿ ಲೈಂಗಿಕ ಕ್ರಿಯೆ ನಡೆಸಿದರೂ ಸಂತೋನೋತ್ಪತ್ತಿಯಾಗುವುದಿಲ್ಲ ಎಂದು ಐಸಿಎಂಆರ್‌ನಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ. ಆರ್‌.ಎಸ್‌. ಶರ್ಮಾ ಅವರು ತಿಳಿಸಿದ್ದಾರೆ.

ಈಗಾಗಲೇ ಈ ಇಂಜೆಕ್ಷನ್‌ ಸಿದ್ಧವಿದೆ. ಔಷಧ ನಿಯಂತ್ರಣ ನಿರ್ದೇಶನಾಲಯದ ಒಪ್ಪಿಗೆಯಷ್ಟೇ ಬಾಕಿ ಇದೆ. ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗಾಗಿ 303 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಶೇ.97.3ರಷ್ಟುಯಶಸ್ಸು ಲಭಿಸಿದೆ. ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ ಎಂದು ವಿವರಿಸಿದ್ದಾರೆ.

ವಿಶ್ವಾದ್ಯಂತ ಚುಚ್ಚುಮದ್ದು ರೂಪದ ಗರ್ಭನಿರೋಧಕವನ್ನು ಪುರುಷರಿಗೆ ಸಂಶೋಧನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅಮೆರಿಕ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. 2016ರಲ್ಲಿ ಬ್ರಿಟನ್‌ನಲ್ಲಿ ಇಂತಹುದೇ ಪ್ರಯೋಗ ನಡೆದಿತ್ತು. ಅಡ್ಡ ಪರಿಣಾಮಗಳ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಭಾರತದಲ್ಲಿ ಶೇ.36ರಷ್ಟುಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಪುರುಷರ ಸಂಖ್ಯೆ ಶೇ.0.3ರಷ್ಟಿದೆ.

ಮಾರುಕಟ್ಟೆಗೆ ಈಗಲೇ ಇಲ್ಲ:

ಪುರುಷರಿಗಾಗಿ ಸಂಶೋಧಿಸಿರುವ ಗರ್ಭನಿರೋಧಕ ಚುಚ್ಚುಮದ್ದು ಎಲ್ಲ ಅನುಮತಿಯನ್ನು ಪಡೆದು ಉತ್ಪಾದನೆ ಆರಂಭವಾಗುವಂತಾಗಲು ಆರರಿಂದ ಏಳು ತಿಂಗಳು ಸಮಯಾವಕಾಶ ಬೇಕಾಗುತ್ತದೆ. ಡಿಸಿಜಿಐ ಇದಕ್ಕೆ ಅನುಮತಿ ಕೊಡಬೇಕು. ಅದಕ್ಕೂ ಮುನ್ನ ಆ ಸಂಸ್ಥೆ ತಾನೇ ಪರೀಕ್ಷೆ ಮಾಡುತ್ತದೆ.