ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ವೇತನ ಸಹಿತ ರಜೆ ನೀಡುವ ರಾಜ್ಯ ಸರ್ಕಾರದ ನವೆಂಬರ್ 20ರ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದೇಶಕ್ಕೆ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆಯದಿರುವ ಬಗ್ಗೆ ಕೋರ್ಟ್‌ ಪ್ರಶ್ನಿಸಿದೆ.

ಬೆಂಗಳೂರು (ಡಿ.09): ರಾಜ್ಯ ಸರ್ಕಾರವು ಮಹಿಳಾ ನೌಕರರಿಗೆ ಋತುಚಕ್ರದ (ಮುಟ್ಟಿನ) ಅವಧಿಯಲ್ಲಿ ಒಂದು ದಿನದ ವೇತನಸಹಿತ ರಜೆ ನೀಡುವ ಕುರಿತು ಹೊರಡಿಸಿದ್ದ ಮಹತ್ವದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲುಗಳ ಸಂಘ (ರಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠವು, ಸರ್ಕಾರದ ಅಧಿಸೂಚನೆಗೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು 2025ರ ನವೆಂಬರ್ 20ರಂದು ಈ ಕುರಿತು ಅಧಿಸೂಚನೆ ಹೊರಡಿಸಿ, ಮುಟ್ಟಿನ ರಜೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ಆದರೆ, ಈ ಆದೇಶದಿಂದ ಹೋಟೆಲ್‌ ಉದ್ಯಮಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತದೆ ಎಂದು ಬೆಂಗಳೂರು ಹೋಟೆಲುಗಳ ಸಂಘವು (ರಿ) ಹೈಕೋರ್ಟ್‌ ಮೊರೆ ಹೋಗಿತ್ತು.

ಹೈಕೋರ್ಟ್‌ನಿಂದ ಸರ್ಕಾರದ ಆದೇಶಕ್ಕೆ ತಡೆ ಏಕೆ?

ಅರ್ಜಿ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 'ಯಾವುದೇ ಕಾಯ್ದೆಯಲ್ಲಿ ಉಲ್ಲೇಖವಿಲ್ಲದ ನಿಯಮವನ್ನು ರಾಜ್ಯ ಸರ್ಕಾರವು ಏಕಪಕ್ಷೀಯ ಆದೇಶದ ಮೂಲಕ ಜಾರಿಗೆ ತರಲು ಹೊರಟಿದೆ. ಈ ಏಕಪಕ್ಷೀಯ ಆದೇಶದಿಂದ ಹೋಟೆಲ್ ಉದ್ಯಮಕ್ಕೆ ಗಂಭೀರ ಸಮಸ್ಯೆ ಎದುರಾಗುತ್ತದೆ. ಆದೇಶ ಹೊರಡಿಸುವ ಮುನ್ನ ಯಾವುದೇ ಸಂಘ-ಸಂಸ್ಥೆಗಳ ಅಭಿಪ್ರಾಯವನ್ನು ಸರ್ಕಾರ ಪಡೆದಿಲ್ಲ' ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಈ ವಾದವನ್ನು ಆಲಿಸಿದ ನ್ಯಾಯಾಲಯ, 'ಸರ್ಕಾರದ ಆದೇಶಕ್ಕೆ ಮುನ್ನ ಸಂಬಂಧಿತ ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿತ್ತೇ?' ಎಂದು ನೇರವಾಗಿ ಪ್ರಶ್ನಿಸಿತು. ಇದಕ್ಕೆ, ಹೋಟೆಲ್‌ ಅಸೋಸಿಯೇಷನ್ ಪರ ವಕೀಲರು 'ಇಲ್ಲ' ಎಂದು ಉತ್ತರಿಸಿದರು. ಈ ಹಿನ್ನೆಲೆಯಲ್ಲಿ, ಹೈಕೋರ್ಟ್‌ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ, ಮುಂದಿನ ವಿಚಾರಣೆ ನಡೆಯುವವರೆಗೆ ಆದೇಶಕ್ಕೆ ತಡೆಯಾಜ್ಞೆ ನೀಡಿತು.

ಸರ್ಕಾರಕ್ಕೆ ನೋಟಿಸ್‌ ಜಾರಿ; ಮಾರ್ಪಾಡಿಗೆ ಅವಕಾಶ

ನ್ಯಾಯಾಲಯವು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರದ ಪರ ವಕೀಲರಿಗೆ ನೋಟಿಸ್ ಜಾರಿ ಮಾಡಿದೆ. ಆದಾಗ್ಯೂ, ಮಧ್ಯಂತರ ತಡೆ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಸರ್ಕಾರವು ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಕ್ಕೆ ಸ್ವಾತಂತ್ರ್ಯವಿದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ. ಕಾರ್ಮಿಕ ಕಲ್ಯಾಣ ದೃಷ್ಟಿಯಿಂದ ಸರ್ಕಾರ ಹೊರಡಿಸಿದ್ದ ಈ ಪ್ರಗತಿಪರ ಆದೇಶವು, ತಾಂತ್ರಿಕ ಮತ್ತು ಕಾನೂನಾತ್ಮಕ ಅಡೆತಡೆಗಳಿಂದಾಗಿ ತಾತ್ಕಾಲಿಕವಾಗಿ ಜಾರಿಯಾಗುವುದಕ್ಕೆ ಹಿನ್ನಡೆ ಕಂಡಂತಾಗಿದೆ. ಅಂತಿಮವಾಗಿ ಸರ್ಕಾರದ ಕ್ರಮ ಕಾನೂನಿನ ಚೌಕಟ್ಟಿನಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೋರ್ಟ್ ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಿದೆ.