ಮಕ್ಕಳಿಗೆ ಇಷ್ಟ ಎಂದು ಚಾಕೋಲೆಟ್, ಪೆಪ್ಪರ್ಮಿಂಟ್ ಕೊಟ್ಟು ಸುಮ್ಮನಾಗುತ್ತೀರಾ? ಇಲ್ಲಿದೆ ನೋಡಿ ಆಘಾತಕಾರಿ ವಿಡಿಯೋ. ಪ್ರತಿಯೊಬ್ಬ ಪಾಲಕರೂ ತಿಳಿಯಲೇಬೇಕಾದ ವಿಡಿಯೋ ಇದು.
ಮಕ್ಕಳಿಗೆ ಅಷ್ಟೇ ಅಲ್ಲ ಚಾಕೋಲೆಟ್ ಎಂದರೆ ದೊಡ್ಡವರಿಗೆ ಬಹಳ ಪ್ರೀತಿಯೇ. ಆದರೆ ಮಕ್ಕಳಿಗೆ ಇವುಗಳನ್ನು ನೀಡುವಾಗ ಮೈಯೆಲ್ಲಾ ಕಣ್ಣಾಗಿ ಇರಬೇಕಾಗುತ್ತದೆ. ಅಷ್ಟಕ್ಕೂ ಮಕ್ಕಳನ್ನು ನೋಡಿಕೊಳ್ಳುವುದು ಎಂದರೆ ಅದೇನೂ ಸುಲಭದ ಮಾತಲ್ಲ. ಒಂದು ಮಗುವನ್ನು ಬೆಳೆಸಬೇಕಾದರೆ, ಪಾಲಕರು ಬಹಳ ಜಾಗರೂಕರಾಗಿ ಇರಬೇಕಾಗುತ್ತದೆ. ಅದರಲ್ಲಿಯೂ ಮಕ್ಕಳು ತುಂಬಾ ಚಿಕ್ಕವರಾಗಿದ್ದ ಸಂದರ್ಭದಲ್ಲಿ ಅವರ ಪ್ರತಿಯೊಂದು ಆಗುಹೋಗುಗಳನ್ನು ನೋಡಿಕೊಳ್ಳುವುದು ಅನಿವಾರ್ಯ. ಸ್ವಲ್ಪ ಎಡವಟ್ಟಾದರೂ ಅದು ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಬಹುದು. ಮಕ್ಕಳಿಗೆ ಯಾವುದಾದರೂ ತಿನಿಸು ನೀಡುವಾಗ ಅದರಲ್ಲಿಯೂ ಹೆಚ್ಚಾಗಿ ಚಾಕೋಲೆಟ್ನಂಥ ಪದಾರ್ಥ ನೀಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಸ್ವಲ್ಪವೇ ಎಚ್ಚರಿಕೆ ತಪ್ಪಿದರೂ ಏನು ಅನಾಹುತ ಸಂಭವಿಸುತ್ತದೆ ಎನ್ನುವುದು ಈ ವಿಡಿಯೋ ಸಾಕ್ಷಿಯಾಗಿದೆ. ಇದರಲ್ಲಿ ಬಾಲಕನೊಬ್ಬ ಪೆಪ್ಪರ್ಮೆಂಟ್ ತಿಂದಿದ್ದಾನೆ. ಅಲ್ಲಿಯೇ ಅವನ ಅಮ್ಮ ಚಿಕ್ಕಮಗುವನ್ನು ಎತ್ತಿಕೊಂಡಿದ್ದಾಳೆ. ಬಾಲಕ ನರಳಿದ್ದಾನೆ. ಮೊದಲಿಗೆ ಆತ ಆಟ ಆಡುತ್ತಿದ್ದಂತೆ ಕಾಣಿಸುತ್ತದೆ. ಬಳಿಕ ಆತ ಚಲಿಸದೇ ಬಿದ್ದುಕೊಂಡಿದ್ದಾನೆ. ಏನೋ ಅನಾಹುತ ಆಗಿದೆ ಎಂದು ಅಮ್ಮನಿಗೆ ಎನ್ನಿಸಿ ಓಡಿ ಬಂದಿದ್ದಾಳೆ. ಮಗುವನ್ನು ಅಲ್ಲಾಡಿಸಿದರೆ ಆತ ಚಲಿಸುತ್ತಿಲ್ಲ. ಇದನ್ನು ನೋಡಿದರೆ ಬಾಲಕ ಸತ್ತ ರೀತಿ ಕಾಣಿಸುತ್ತದೆ. ಮಹಿಳೆ ಕೂಡಲೇ ಪತಿಯನ್ನು ಕೂಗಿ ಕರೆದಿದ್ದಾಳೆ. ಆತ ಕೂಡ ಸಾಕಷ್ಟು ಉಪಚಾರ ಮಾಡಿದರೂ ಮಗ ಅಲುಗಾಡುತ್ತಲೇ ಇರಲಿಲ್ಲ. ಕೊನೆಗೆ ಆತ ಚಾಕೋಲೆಟ್ ತಿಂದಿರುವುದು ತಿಳಿಯುತ್ತಲೇ ಉಪಕರಣವೊಂದನ್ನು ತಂದು ಅದನ್ನು ಬಾಯಿಯಿಂದ ತೆಗೆದಾಗ ಬಾಲಕನ ಜೀವ ಉಳಿದುಕೊಂಡಿದೆ.
ಇದೊಂದು ಆಘಾತಕಾರಿ ವಿಡಿಯೋ ಆಗಿದೆ. ಪುಟ್ಟದೊಂದು ಪೆಪ್ಪರ್ಮಿಂಟ್ ಮಕ್ಕಳ ಜೀವವನ್ನೇ ತೆಗೆಯಬಹುದಾಗಿದೆ. ಅದರಲ್ಲಿಯೂ ಮನೆಯಲ್ಲಿ ಇಡುವ ಇಂಥ ವಸ್ತುಗಳನ್ನು ಮಕ್ಕಳು ತಿನ್ನುವುದು ಸಹಜ. ಎಷ್ಟೋ ಸಂದರ್ಭಗಳಲ್ಲಿ ಮನೆಯಲ್ಲಿ ಇಟ್ಟ ಕೀಶನಾಟಕಗಳನ್ನೇ ಮಕ್ಕಳು ಕುಡಿದು ಮೃತಪಟ್ಟಿರುವ ಘಟನೆಗಳು ನಡೆದಿವೆ, ನಡೆಯುತ್ತಲೇ ಇವೆ. ಅದೇ ರೀತಿ ಅಪ್ಪ-ಅಮ್ಮ ಅಥವಾ ಇನ್ಯಾರೋ ಕೊಡುವ ಚಾಕೋಲೆಟ್, ಪೆಪ್ಪರ್ಮಿಂಟ್ಗಳೇ ಮಕ್ಕಳ ಜೀವಕ್ಕೂ ಅಪಾಯ ತಂದೊಡ್ಡಬಹುದು ಎನ್ನುವುದು ಇಲ್ಲಿ ನೋಡಬಹುದಾಗಿದೆ.
ಇದನ್ನು ನೋಡಿದವರು ಮನೆಯಲ್ಲಿ ಮಕ್ಕಳು ಇದ್ದಾಗ ಎಷ್ಟು ಜಾಗರೂಕರಾಗಿ ಇರಬೇಕು ಎಂದು ವರ್ಣಿಸುತ್ತಿದ್ದಾರೆ. ಆ ಬಾಲಕ ಸತ್ತೇ ಹೋದ ಎನ್ನಿಸಿದಾಗಂತೂ ಹಲವರು ಹೃದಯ ಛಿದ್ರ ಆಗಿದೆ. ಕೊನೆಗೆ ಅಪ್ಪನ ಜಾಣ್ಮೆಯಿಂದ ಚಾಕೋಲೆಟ್ ತೆಗೆಯಲಾಗಿದೆ. ಇದು ಮನೆಯಲ್ಲಿ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಲ್ಲಿ ಗಾಬರಿಬಿದ್ದ ಅಮ್ಮ ಪುಟ್ಟ ಕಂದನನ್ನು ಹಾಸಿಗೆ ಮೇಲೆ ಇಟ್ಟ ಕಾರಣ, ಆ ಪಾಪುವಿಗೇ ಏನೋ ಆಗುತ್ತದೆ ಎಂದು ಆಘಾತವೂ ಹಲವರಿಗೆ ಆಗುವುದು ಇದೆ. ಹೀಗೆ ಇಬ್ಬರು ಚಿಕ್ಕ ಚಿಕ್ಕಮಕ್ಕಳು ಇದ್ದರೆ ಪಾಲಕರು ಅದರಲ್ಲಿಯೂ ಹೆಚ್ಚಾಗಿ ಅಮ್ಮನಾದವಳ ಜವಾಬ್ದಾರಿ ಎಷ್ಟು ಎನ್ನುವುದು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಎಸ್.ನಾರಾಯಣ್ ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ.
