ಬಡತನದ ನಡುವೆಯೂ ಉತ್ತರ ಪ್ರದೇಶದ ರಾಮ್‌ಕೆವಲ್ ಎಂಬ ಹದಿನೈದು ವರ್ಷದ ಬಾಲಕ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣನಾಗಿ ತನ್ನ ಗ್ರಾಮದಲ್ಲಿ 77 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡಿದ್ದಾನೆ. ಕೂಲಿ ಮಾಡಿ ಓದುತ್ತಿದ್ದ ಈತನಿಗೆ ಜಿಲ್ಲಾಧಿಕಾರಿಗಳು ಸಹಾಯ ಹಸ್ತ ಚಾಚಿದ್ದಾರೆ. ರಾಮ್‌ಕೆವಲ್‌ಗೆ ಎಂಜಿನಿಯರ್ ಆಗಬೇಕೆಂಬ ಹಂಬಲವಿದೆ.

ಎಲ್ಲಾ ವ್ಯವಸ್ಥೆಗಳು ಇದ್ದರೂ ಬಹುತೇಕ ವಿದ್ಯಾರ್ಥಿಗಳು ಅದಿಲ್ಲ, ಇದಿಲ್ಲ ಎಂದು ಕುಂಟು ನೆಪ ಹೇಳುವವರೇ. ಅದರಲ್ಲಿಯೂ ಯಾವುದೇ ಪರೀಕ್ಷೆಯ ಫಲಿತಾಂಶ ಬಂದಾಗಲೂ ಅದರಲ್ಲಿ ಸಾಧನೆ ಮಾಡಿದವರ ಪೈಕಿ ಟಾಪ್​ನಲ್ಲಿ ಇರುವವರು ಗ್ರಾಮೀಣ ಪ್ರದೇಶದಮಕ್ಕಳು, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿದವರೇ ಹೆಚ್ಚು ಎನ್ನುವುದು ಕೂಡ ಗಮನಾರ್ಹ. ಲಕ್ಷ ಲಕ್ಷ ಫೀಸ್​ ಕೊಟ್ಟು ದೊಡ್ಡ ದೊಡ್ಡ ಶಾಲೆಗಳಲ್ಲಿ ಸಾಲ ಸೋಲ ಮಾಡಿ ಓದಿಸಿ ಪ್ರತಿಷ್ಠೆ ತೋರುವ ಅದೆಷ್ಟೋ ಪಾಲಕರ ಮಧ್ಯೆ, ಅಲ್ಲಿ-ಇಲ್ಲಿ ಕೆಲಸ ಮಾಡಿಕೊಂಡು ಕೂಲಿ ನಾಲಿ ಮಾಡಿಕೊಂಡು ಶಿಕ್ಷಣ ಪಡೆಯುತ್ತಿರುವ ಮಕ್ಕಳೇ ಉನ್ನತ ಮಟ್ಟಕ್ಕೆ ಹೋಗುವುದು ಎನ್ನುವುದು ದೊಡ್ಡ ದೊಡ್ಡ ಸಾಧನೆ ಮಾಡಿದವರ ಹಿನ್ನೆಲೆ ಕೇಳಿದರೂ ತಿಳಿದು ಬರುತ್ತದೆ. 

ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಬಾರಾಬಂಕಿಯ ಒಂದು ಗ್ರಾಮದಲ್ಲಿ ನಡೆದಿದೆ. ಇಲ್ಲಿಯ 15 ವರ್ಷದ ಬಾಲಕ ಈ ಸಲದ ಎಸ್​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ. ಇದರಲ್ಲೇನು ವಿಶೇಷ ಎಂದುಕೊಂಡ್ರಾ? ಸ್ವಾತಂತ್ರ್ಯಾ ನಂತರ 77 ವರ್ಷಗಳಲ್ಲಿ ಈ ಗ್ರಾಮದಲ್ಲಿ ಇಲ್ಲಿಯವರೆಗೆ ಹೋಗಿ ಪಾಸಾದ ಮೊದಲಿಗ ಈ ಬಾಲಕ. ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದಿಂದ ಬಂದಿರುವ ಈ ಬಾಲಕ ಖುದ್ದು ಕೂಲಿ ಮಾಡಿಯೇ ಓದುತ್ತಿರುವವನು. ಸರಿಯಾದ ಪಾಠಶಾಲೆಯೂ ಇಲ್ಲದ ಸ್ಥಿತಿ ಈ ಗ್ರಾಮದ್ದು. ಈ ಸಾಧನೆ ಮಾಡಿರುವ ಬಾಲಕನ ಹೆಸರು ರಾಮ್‌ಕೆವಲ್. ಸುಮಾರು 30 ಕಿ.ಮೀ ದೂರದಲ್ಲಿರುವ ನಿಜಾಮ್‌ಪುರ ಗ್ರಾಮದವನಾಗಿದ್ದು, ಸುಮಾರು 300 ಜನರ ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿರುವ ಹೆಚ್ಚಿನವರು ದಲಿತ ಸಮುದಾಯದವರು. ಶಿಕ್ಷಣ ಎನ್ನುವುದು ಬಹುತೇಕರಿಗೆ ಕನಸಿನ ಮಾತೇ. ಕೂಲಿ ಮಾಡಿಕೊಂಡು ಜೀವನ ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿ ಇವರದ್ದು. 

ಆ್ಯಂಕರ್​ ಅನುಪಮಾ ಗೌಡ ಹುಟ್ಟುಹಬ್ಬ: ಸಾವಿನ ಹಾದಿ ಹಿಡಿದು ಸಾಧನೆಯ ಶಿಖರವೇರಿದ ನಟಿಯ ಜೀವನ ಗಾಥೆ...

ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯನಾದ ಬಾಲಕ ರಾಮ್‌ಕೆವಲ್, ತನ್ನ ಕುಟುಂಬವನ್ನು ಪೋಷಿಸಲು ಹಗಲಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾನೆ. ಅಪ್ಪ-ಅಮ್ಮ ಇಬ್ಬರೂ ಕೂಲಿ ಮಾಡಿ ಆ ಹೊತ್ತಿನ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ಮನೆಗೆ ಆಧಾರ ಆಗಿರುವ ಈ ಮಗನ ಮೇಲೂ ಕುಟುಂಬದ ಜವಾಬ್ದಾರಿ ಇದೆ. ಹಗಲುಪೂರ್ತಿ ದುಡಿದರೆ ರಾತ್ರಿ ಚಿಮಣಿಯ ದೀಪದಲ್ಲಿ ಓದುವ ಪರಿಸ್ಥಿತಿ. ಹಿಂದೆಲ್ಲಾ ಚಿಮಣಿ ದೀಪದಲ್ಲಿ ಓದಿದವರೇ ಇಂದು ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದರೆ ಆಗಿನ ಸ್ಥಿತಿಗೂ, ಈಗಿನ ಸ್ಥಿತಿಗೂ ಅಜಗಜಾಂತರ. ಆಗೆಲ್ಲಾ ಬಹುತೇಕ ಕಡೆಗಳಲ್ಲಿ ಇದೇ ಸ್ಥಿತಿ ಇತ್ತು. ಆದರೆ ಇಂದು ಬದಲಾಗುತ್ತಿರುವ ಭಾರತದ ನಡುವೆಯೂ ಇಂಥ ಗ್ರಾಮಗಳಲ್ಲಿ ಅದೆಷ್ಟೋ ಮಂದಿ ಇಂಥ ಕುಟುಂಬಗಳು ಜೀವ ಸವೆಸುತ್ತಿವೆ. ಅಲ್ಲಲ್ಲಿ ಬೆಂಕಿಯಲ್ಲಿ ಅರಳಿದ ಹೂವುಗಳ ರೀತಿಯಲ್ಲಿ ಇಂಥ ಬಾಲಕರು ಮುಂದಕ್ಕೆ ಬರುತ್ತಾರೆ. 

ಈತನ ಈ ಸಾಧನೆ ಬೆಳಕಿಗೆ ಬಂದದ್ದು ಸ್ಥಳೀಯ ಜಿಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ಅವರು ಬಾಲಕನನ್ನು ಗುರುತಿಸಿದಾಗ. ರಾಮ್‌ಕೆವಲ್ ಮತ್ತು ಆತನ ಪೋಷಕರನ್ನು ಈ ಸಾಧನೆಯನ್ನು ಗುರುತಿಸಿ ಅವರು ಸನ್ಮಾನಿಸಿದರು. ಬಾಲಕನ ಮುಂದಿನ ಅಧ್ಯಯನಕ್ಕೆ ಎಲ್ಲಾ ಸಹಾಯವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ರಾಮ್‌ಕೆವಲ್ ಮದುವೆ ಮೆರವಣಿಗೆಗಳಲ್ಲಿ ದೀಪಗಳನ್ನು ಹೊತ್ತುಕೊಂಡು ದಿನಕ್ಕೆ ₹250 ರಿಂದ 300 ಗಳಿಸುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ. "ರಾತ್ರಿ ತಡವಾಗಿ ಹಿಂತಿರುಗಿದರೂ, ನಾನು ಮನೆಯಲ್ಲಿ ಸೌರ ದೀಪದ ಕೆಳಗೆ ಕನಿಷ್ಠ ಎರಡು ಗಂಟೆಗಳ ಕಾಲ ಓದುತ್ತಿದ್ದೆ. ಹಳ್ಳಿಯಲ್ಲಿ ಕೆಲವರು ನನ್ನನ್ನು ಅಪಹಾಸ್ಯ ಮಾಡುತ್ತಿದ್ದರು, ನಾನು ಎಂದಿಗೂ ಪ್ರೌಢಶಾಲೆಯಲ್ಲಿ ಪಾಸಾಗುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ನನಗೆ ನನ್ನ ಮೇಲೆ ನಂಬಿಕೆ ಇತ್ತು. ಸಾಧಿಸುತ್ತೇನೆ ಎನ್ನುವ ಛಲವಿತ್ತು. ಅದನ್ನು ಮಾಡಿದ್ದೇನೆ ಎನ್ನುತ್ತಾನೆ ಬಾಲಕ.

ಈತನ ತಂದೆ ನಂಕು, "ನಾನು 8 ನೇ ತರಗತಿಯವರೆಗೆ ಓದಿದ್ದೇನೆ. ನಾನು ಹೊಲಗಳಲ್ಲಿ ಕೆಲಸ ಮಾಡುತ್ತೇನೆ, ಆದರೆ ನನ್ನ ಮಗ ಕಾರ್ಮಿಕನಾಗಿ ಉಳಿಯುವುದು ನನಗೆ ಇಷ್ಟವಿಲ್ಲ. ಶಿಕ್ಷಣವೇ ಮುಂದಿನ ದಾರಿ" ಎಂದು ಹೇಳಿದ್ದಾರೆ. ಬಾಲಕನಿಗೆ ಎಂಜಿನಿಯರ್​ ಆಗುವ ಬಯಕೆ. ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುವ ಅವರ ತಾಯಿ ಪುಷ್ಪಾ, "ನನ್ನ ಮಗ ಪಾಸಾಗುತ್ತಾನೆ ಎಂದು ನಾನು ಯಾವಾಗಲೂ ನಂಬಿದ್ದೆ. ನಾನು 5 ನೇ ತರಗತಿಯವರೆಗೆ ಮಾತ್ರ ಓದಿದ್ದೇನೆ, ಆದರೆ ನಮ್ಮ ಆರ್ಥಿಕ ತೊಂದರೆಗಳ ಹೊರತಾಗಿಯೂ ನನ್ನ ಮಕ್ಕಳು ಉನ್ನತ ಶಿಕ್ಷಣವನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ" ಎಂದು ಹೆಮ್ಮೆಯಿಂದ ಹೇಳುತ್ತಾರೆ. ರಾಮ್‌ಕೆವಾಲ್ ತಮ್ಮ-ತಂಗಿಯರು ಕ್ರಮವಾಗಿ ಒಂಬತ್ತು, ಐದು ಮತ್ತು ಒಂದು ತರಗತಿಗಳಲ್ಲಿ ಓದುತ್ತಿದ್ದಾರೆ.

ಪರೀಕ್ಷೆ ವೇಳೆಯೂ ಕೂಲ್: ಯಕ್ಷ ಪ್ರದರ್ಶನ ನೀಡುತ್ತಲೇ ಎಸ್ಸೆಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ತುಳಸಿ!