ಹಿಜಾಬ್ ಧರಿಸುವ ಬಗ್ಗೆ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಹೇಳಿದ್ದೇನು ?
ಮಿಸ್ ಯೂನಿವರ್ಸ್ ಸುಂದರಿ ಹರ್ನಾಜ್ ಸಂಧು (Harnaaz Sandhu), ಹಿಜಾಬ್ (Hijab) ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗಿಯರು ಹೇಗೆ ಡ್ರೆಸ್ ಮಾಡಬೇಕು ಎಂಬುದರ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲಎಂದು ಹೇಳಿದ್ದಾರೆ. ಮಾತ್ರವಲ್ಲ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವು ತಪ್ಪು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಹಿಜಾಬ್ ವಿವಾದ ಸುದ್ದಿಯಾಗುತ್ತಲೇ ಇದೆ. ಪರ-ವಿರೋಧ ಹೋರಾಟಗಳು ತೀವ್ರಗೊಳ್ಳುತ್ತಿದೆ. ಮತ್ತೊಂದೆಡೆ ರಾಜಕೀಯ ನಾಯಕರು, ಸೆಲೆಬ್ರೆಟಿಗಳು ಪರ ವಿರೋಧ ಹೇಳಿಕೆಯಿಂದ ಹಿಜಾಬ್ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ. ಇದೀಗ ಮಿಸ್ ಯೂನಿವರ್ಸ್ ಸುಂದರಿ ಹರ್ನಾಜ್ ಸಂಧು ಹಿಜಾಬ್ (Hijab) ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗಿಯರು ಹೇಗೆ ಡ್ರೆಸ್ ಮಾಡಬೇಕು ಎಂಬುದರ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲಎಂದು ಹೇಳಿದ್ದಾರೆ.
ಚಂಡೀಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಜಾಬ್ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು 2021ರ ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು (Miss Universe Harnaaz Sandhu) ಬಳಿ ಕೇಳಲಾಯ್ತು. ಈ ಸಂದರ್ಭದಲ್ಲಿ ಅವರು, ಯಾವ ಬಟ್ಟೆ ಧರಿಸಬೇಕು ಎಂಬುದು ಪ್ರತಿಯೊಬ್ಬ ಹುಡುಗಿಯ ಸ್ವಂತ ಆಯ್ಕೆಯಾಗಿದೆ, ಆದ್ದರಿಂದ ಭಾರತದ ಹುಡುಗಿಯರು ಹೇಗೆ ಬದುಕಬೇಕು ಮತ್ತು ಹೇಗೆ ಬಟ್ಟೆ (Cloth) ಧರಿಸಬೇಕು ಎಂಬುದರ ಕುರಿತು ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ತಪ್ಪು ಎಂದರು.
ಹಿಜಾಬ್ ಧರಿಸದೇ SSLC ಪರೀಕ್ಷೆ ಬರೆಯುವಂತೆ ಮುಸ್ಲಿಂ ಮುಖಂಡನ ಮನವಿ
ಈ ವರ್ಷದ ಜನವರಿಯಲ್ಲಿ ರಾಜ್ಯದ ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕದಲ್ಲಿ ಹಿಜಾಬ್ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಭಟನೆಯ ಸಮಯದಲ್ಲಿ, ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದಕ್ಕಾಗಿ ಕಾಲೇಜಿಗೆ ಪ್ರವೇಶವನ್ನು ನಿರಾಕರಿಸಲಾಯಿತು.
ಸಂಧು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಚಂಡೀಗಢದ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು. CMO ಪಂಜಾಬ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಸಭೆಯ ವೀಡಿಯೊವನ್ನು ಹಂಚಿಕೊಂಡಿದೆ. ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು ಅವರು ಇಂದು ಸಿಎಂ ಭಗವಂತ್ ಮಾನ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದರು. 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಪಟ್ಟವನ್ನು ಭಾರತಕ್ಕೆ ಮರಳಿ ತರುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳು ಅವರನ್ನು ಅಭಿನಂದಿಸಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ..
ಇಸ್ರೇಲ್ನ ದಕ್ಷಿಣ ಈಲಿಯಟ್ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಮಿಸ್ ಯೂನಿವರ್ಸ್ ಪಟ್ಟ ಸಿಕ್ಕಿತ್ತು. ಅಂತಿಮ ಹಂತಕ್ಕೆ ತಲುಪಿದ್ದ ಹರ್ನಾಜ್ ಸಂಧು, ತಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಸೋಲಿಸಿ ಪಂಜಾಬಿ ಹುಡುಗಿ, 2021ರ ಮಿಸ್ ಯೂನಿವರ್ಸ್ ಪಟ್ಟಗಿಟ್ಟಿಸಿಕೊಂಡಿದ್ದರು . 21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದು ಬಂದಿದೆ . ಈ ಮೂಲಕ ಶ್ಮಿತಾ ಸೇನ್, ಲಾರಾ ದತ್ತಾ ಮಿಸ್ ಯೂನಿವರ್ಸ್ ಪಟ್ಟ ಅಲಂಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ಹಲವು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಹರ್ನಾಜ್ ಸಂಧು ಮೂಲಕ ಭಾರತಕ್ಕೆ ಮಿಸ್ ಯೂನಿವರ್ಸ್ ಕಿರೀಟ ಒಲಿದು ಬಂದಂತಾಗಿತ್ತು.
ಬುರ್ಖಾ ಧರಿಸಿದ್ದ ಮಹಿಳೆಗೆ ನಿಷೇಧ, ಪ್ರಸಿದ್ಧ ರೆಸ್ಟೋರೆಂಟ್‌ಗೇ ಬಿತ್ತು ಬೀಗ!
ಭಾರತದ ರೂಪದರ್ಶಿ ಹಾಗೂ ನಟಿಯಾಗಿರುವ ಹರ್ನಾಜ್ ಸಂಧು ಪಂಜಾಬಿ ಮೂಲದವರು. ಕೇವಲ 21ನೇ ವಯಸ್ಸಿಗೆ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಟೈಮ್ಸ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ 2017ರಲ್ಲಿ ಭಾಗವಹಿಸುವುದರೊಂದಿಗೆ ಹರ್ನಾಜ್ ತಮ್ಮ ಪ್ರಯಾಣ ಆರಂಭಿಸಿದ್ದರು. ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಸೇರಿದಂತೆ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಜೊತೆಗೆ ಕೆಲವು ಪಂಜಾಬಿ ಸಿನಿಮಾಗಳಲ್ಲಿ ಹರ್ನಾಜ್ ಸಂಧು ಅಭಿನಯಿಸಿದ್ದಾರೆ.