ಮುಟ್ಟು ಬರದಂತೆ ತಡೆಯಲು ಹೋಗಿ ಸಾವಿನ ಅಪಾಯ ತಂದುಕೊಳ್ತಿದ್ದಾರೆ ಮಹಿಳೆಯರು !
ಮುಟ್ಟು (Menstruation) ನೈಸರ್ಗಿಕ ಕ್ರಿಯೆ. ಆದ್ರೆ ಸಮಾಜ ಅದನ್ನು ಬೇರೆ ರೀತಿಯಲ್ಲಿ ನೋಡುತ್ತದೆ. ಈಗ್ಲೂ ಮುಟ್ಟಾದ ಮಹಿಳೆ (Women)ಯರನ್ನು ದೂರವಿಡಲಾಗುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಹೋಗಿ ಮಹಿಳೆಯರು ತಮ್ಮ ಜೀವನನ್ನು ಪಣಕ್ಕಿಡ್ತಿದ್ದಾರೆ.
ಮುಟ್ಟು (Menstruation) ತಾಯ್ತನದ ಸೂಚಕವಾಗಿದೆ. ಪ್ರತಿ ತಿಂಗಳು ಮಹಿಳೆ (woman) ಯರ ದೇಹದಲ್ಲಿ ನಡೆಯುವ ಈ ಪ್ರಕ್ರಿಯೆಯು ಜೀವನದ ಅತ್ಯಂತ ಸಂತೋಷ (Happiness) ದಾಯಕ ಹಂತವಾದ 'ತಾಯಿಯಾಗಲು' ನೀವು ಅರ್ಹರು ಎಂಬುದಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ, ಶತಮಾನಗಳಿಂದ, ನಮ್ಮ ಸಮಾಜವು ದೇಹದಲ್ಲಾಗುವ ಈ ಬದಲಾವಣೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದೆ. ಮುಟ್ಟಿನ ಸಮಯದಲ್ಲಿ ಸ್ತ್ರೀಯರನ್ನು ಅಸ್ಪೃಶ್ಯರೆಂದು ಪರಿಗಣಿಸುವುದು, ಮನೆ ಕೆಲಸಗಳನ್ನು ಮಾಡಲು ಬಿಡದಿರುವುದು, ಪೂಜೆಗೆ ಅರ್ಹರೆಂದು ಪರಿಗಣಿಸದಿರುವುದು ಮುಂತಾದ ಅನೇಕ ಸಂಪ್ರದಾಯವಾದಿ ಚಿಂತನೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಅಚ್ಚರಿಯ ವಿಷಯವೆಂದರೆ ಮಹಿಳೆಯರೇ ಇದನ್ನು ಶಾಪವೆಂದು ಪರಿಗಣಿಸಿದ್ದಾರೆ.
ಪ್ಯಾಡ್‌ಮ್ಯಾನ್‌ನಂತಹ ಚಲನಚಿತ್ರಗಳು ಮುಟ್ಟಿನ ಬಗ್ಗೆ ಜನರ ಮನಸ್ಥಿತಿಯನ್ನು ಬದಲಿಸುವ ಪ್ರಯತ್ನ ನಡೆಸಿದೆ. ಆದ್ರೆ ಇದರ ಪರಿಣಾಮವು ನಗರ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿದೆ. ಈಗಲೂ ಹಳ್ಳಿಗಳಲ್ಲಿ ಮುಟ್ಟನ್ನು ಅಸ್ಪೃಶ ದಿಂದಲೇ ನೋಡಲಾಗ್ತಿದೆ. ಮುಟ್ಟಿಗೆ ಸಂಬಂಧಿಸಿದಂತೆ ಮಧ್ಯ ಪ್ರದೇಶದಲ್ಲಿ ಆತಂಕಕಾರಿ ವಿಷ್ಯ ಹೊರಬಿದ್ದಿದೆ. ಇಲ್ಲಿನ ಒಂದು ಹಳ್ಳಿಯಲ್ಲಿ, ಮಹಿಳೆಯರು ಸುಮಾರು 20 ವರ್ಷಗಳಿಂದ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಿರಿಯಡ್ಸ್ ಆಗದಂತೆ ತಡೆಯುವುದು ಹಾಗೂ ಮುಟ್ಟಿನ ದಿನಗಳಲ್ಲಿ ವಿಧಿಸಲಾಗುವ ನಿರ್ಬಂಧಗಳಿಂದ ಮುಕ್ತಿ ಪಡೆದು, ಎಲ್ಲರಂತೆ ಜೀವನ ನಡೆಸಬಹುದು ಎಂಬ ಕಾರಣಕ್ಕೆ ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಇದು ತುಂಬಾ ಹಾನಿಕಾರಕವೆಂದು ತಜ್ಞರು ಪರಿಗಣಿಸುತ್ತಾರೆ. ಮಹಿಳೆಯರ ಈ ಕೆಲಸದ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡ್ತೇವೆ.
Sexual Wellness Tips: ಹದಿಹರೆಯದಲ್ಲೇ ಗರ್ಭಧಾರಣೆ! Safe Sex ಬಗ್ಗೆ ತಿಳಿದುಕೊಳ್ಳೋಕೆ ಇದು ಸಕಾಲ
ಚಂದ್ರನ ಮೇಲೆ ಮಹಿಳೆಯನ್ನು ಕಳುಹಿಸುವ ತಯಾರಿ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಮುಟ್ಟಿನಿಂದ ದೂರವಾಗಲು ಜನರು ಗರ್ಭನಿರೋಧಕ ಮಾತ್ರೆ ಸೇವಿಸಿ ಸಾವಿನ ಅಪಾಯ ತಂದುಕೊಳ್ತಿದ್ದಾರೆ. ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ಮಾತ್ರವಲ್ಲ ದೇಶದ ಅನೇಕ ಹಳ್ಳಿಯ ಮಹಿಳೆಯರು ಈ ಮಾರ್ಗ ಅನುಸರಿಸುತ್ತಿದ್ದಾರೆ.
ಮಹಿಳೆರು ಮಾಲಾ-ಡಿ ಎಂಬ ಗರ್ಭನಿರೋಧಕ ಮಾತ್ರೆಗಳನ್ನು ಅನೇಕ ವರ್ಷಗಳಿಂದ ನಿಯಮಿತವಾಗಿ ಸೇವಿಸುತ್ತಿದ್ದಾರೆ. ಮುಟ್ಟು ಬರದಿರಲಿ ಎನ್ನುವ ಕಾರಣಕ್ಕೆ ಅವರು ಮಾಲಾ – ಡಿ ಸೇವನೆ ಮಾಡ್ತಿದ್ದಾರೆ. ಮನೆಯ ಎಲ್ಲ ಕೆಲಸವನ್ನು ಮಹಿಳೆಯರು ಮಾಡ್ತಾರೆ. ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಮನೆ ಕೆಲಸ ಮಾಡುವಂತಿಲ್ಲ. ಇದ್ರಿಂದಾಗಿ ಮನೆಯ ಪುರುಷರು ಮನೆ ಕೆಲಸ ಮಾಡ್ಬೇಕಾಗುತ್ತದೆ. ಇದನ್ನು ತಪ್ಪಿಸಲು, ಮನೆ ಕೆಲಸವನ್ನು ನಾವೇ ಮಾಡಲು ಮಹಿಳೆಯರು ಈ ಉಪಾಯ ಕಂಡುಕೊಂಡಿದ್ದಾರೆ.
ಮಧ್ಯಪ್ರದೇಶದ ಆ ಹಳ್ಳಿಯ ಒಂದು ಮನೆಯಲ್ಲಿ ಅಥವಾ ಒಬ್ಬ ಮಹಿಳೆ ಮಾಲಾ – ಡಿ ಸೇವನೆ ಮಾಡ್ತಿಲ್ಲ. ಗ್ರಾಮದ ಎಲ್ಲ ಮನೆಯ ಹಾಗೂ ಎಲ್ಲ ಮಹಿಳೆಯರೂ ಮಾತ್ರೆ ಸೇವನೆ ಮಾಡ್ತಿದ್ದಾರೆ. ಮನೆಯಲ್ಲಿ ಒಂದೇ ಮಹಿಳೆಯಿದ್ದರೆ ಅವರು ನಿರಂತರವಾಗಿ ಮಾತ್ರೆ ಸೇವನೆ ಮಾಡ್ತಿದ್ದಾರೆ. ಮನೆಗೆ ಅತ್ತೆ, ಸೊಸೆ ಅಥವಾ ಬೇರೆ ಯಾವುದೇ ಮಹಿಳೆ ಬಂದಾಗ ಮಾತ್ರೆ ಸೇವನೆ ನಿಲ್ಲಿಸುತ್ತಾರೆ. ಆಗ ಮುಟ್ಟು ಮತ್ತೆ ಶುರುವಾಗುತ್ತದೆ. ಮನೆಗೆ ಬಂದ ಮಹಿಳೆ, ಮನೆ ಕೆಲಸ ಮಾಡ್ತಾರೆ.
ಮಾಲಾ-ಡಿ ಉಚಿತ ಮತ್ತು ಸುಲಭವಾಗಿ ಲಭ್ಯವಾಗುವುದರಿಂದ, ಈ ಮಹಿಳೆಯರಿಗೆ ಇದು ಸುಲಭವಾದ ಅಸ್ತ್ರವಾಗಿದೆ. ಗರ್ಭನಿರೋಧಕ ಮಾತ್ರೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಮಾತ್ರೆಗಳನ್ನು ದೀರ್ಘಕಾಲದವರೆಗೆ ವೈದ್ಯಕೀಯ ಸಲಹೆಯಿಲ್ಲದೆ ಸೇವಿಸುವುದರಿಂದ ಅನೇಕ ಮಹಿಳೆಯರು ಒತ್ತಡ, ರಕ್ತದೊತ್ತಡ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಎದೆಹಾಲು ಸಾಲ್ತಿಲ್ವೇ? ಮೊಳಕೆಯೊಡೆದ ರಾಗಿ ಸೇವಿಸಿ
ಗರ್ಭನಿರೋಧಕ ಮಾತ್ರೆಗಳು ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತವೆ. ಸೀಮಿತ ಸಮಯದವರೆಗೆ ಇದರ ಸೇವನೆ ಹಾನಿಕಾರಕವಲ್ಲವಾದರೂ, ದೀರ್ಘ ಕಾಲದವರೆಗೆ ಅದರ ಸೇವನೆ ಒಳ್ಳೆಯದಲ್ಲ. ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ಋತುಚಕ್ರವನ್ನು ನಿಯಂತ್ರಿಸಲು ಹಾರ್ಮೋನ್ ಈಸ್ಟ್ರೊಜೆನ್ ಅತ್ಯಗತ್ಯವಾದರೂ, ಅದು ಅಧಿಕವಾದ್ರೆ ಸಂತಾನೋತ್ಪತ್ತಿ ಪ್ರದೇಶ, ಮೂತ್ರನಾಳ, ಹೃದಯ ಮತ್ತು ರಕ್ತನಾಳಗಳು, ಮೂಳೆಗಳು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.
ಅತಿಯಾದ ಮಾತ್ರೆ ಸೇವನೆಯಿಂದ ಮೆದುಳಿನ ಹೈಪೋಥಾಲಮಸ್ ಗ್ರಂಥಿಯ ಗಾತ್ರ ಕುಗ್ಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಹೈಪೋಥಾಲಮಸ್ ಗ್ರಂಥಿಯ ಗಾತ್ರದ ಕಡಿಮೆಯಾದ್ರೆ ಅತಿಯಾದ ಕೋಪ ಅಥವಾ ಖಿನ್ನತೆಯಂತಹ ಸಮಸ್ಯೆ ಅಪಾಯ ಹೆಚ್ಚಿರುತ್ತದೆ.