ನಮ್ಮಲ್ಲಿ ಬಹುತೇಕರಿಗೆ ಕೆನ್ನೆಯಲ್ಲಿ ಒಂದು ಮೊಡವೆಯಾದರೆ ಸಾಕು, ಮನೆ ಹೊರಗೆ ಕಾಲಿಡಲೇ ನಾಚಿಕೆ, ಬಣ್ಣ ಕಪ್ಪು ಎಂದು ಕೀಳರಿಮೆ ಬೆಳೆಸಿಕೊಂಡು ಎಲ್ಲ ವಿಷಯಗಳಲ್ಲಿ ಹಿಂದುಳಿದವರೆಷ್ಟೋ... ಐಬ್ರೋ ಮಾಡಿಸಲಿಲ್ಲ ಎಂದು ಫಂಕ್ಷನ್‌ಗಳಿಗೆ ಹೋಗದೆ ಮನೆಯಲ್ಲೇ ಉಳಿಯುವವರೂ ಇದ್ದಾರೆ! ಇನ್ನು ಕಣ್ಣ ಸುತ್ತ ಬಂದ ಕಪ್ಪು ವರ್ತುಲದಿಂದಾಗಿ ಯಾರೊಂದಿಗೂ ಕಣ್ಣಿನಲ್ಲಿ ಕಣ್ಣನಿಟ್ಟು ನೋಡದವರೂ ಇದ್ದಾರೆ. ತೆಳ್ಳಗಿದ್ದೇವೆಂದು ಅಳುತ್ತೇವೆ, ದಪ್ಪಗಾದೆವೆಂದು ಕೊರಗುತ್ತೇವೆ. ಒಟ್ಟಿನಲ್ಲಿ ಸೌಂದರ್ಯದ ವಿಷಯದಲ್ಲಿ ತೃಪ್ತಿ ಎನ್ನುವುದು ಬಹುತೇಕರಿಗೆ ಇರುವುದಿಲ್ಲ.. ಇಂಥವರ ಮಧ್ಯೆ ಅಪರೂಪದಲ್ಲಿ ಅಪರೂಪದ ಸಮಸ್ಯೆ ಇದ್ದೂ ಅಪರೂಪವೆಂಬಂತೆ ಅದನ್ನೇ ಸೌಂದರ್ಯವಾಗಿ ಒಪ್ಪಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿರುವುದು ಹರ್ನಾಮ್ ಕೌರ್ ಎಂಬ 29 ವರ್ಷದ ಯುವತಿ. 

ಈ ಹರ್ನಾಮ್ ಕೌರ್ ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದಾಳೆ. ಹಾಗಂಥ ಅವಳೊಬ್ಬ ಸಾಧಕಿಯೇ ಇರಬೇಕು, ಅದಕ್ಕೇ ಆತ್ಮವಿಶ್ವಾಸ ಅವಳ ಜೊತೆಗಿದೆ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಹಾರ್ಮೋನ್ ಏರುಪೇರಿನಿಂದಾಗಿ 24 ವರ್ಷ ಮುಟ್ಟುವಾಗಾಗಲೇ 6 ಇಂಚಿನ ಗಡ್ಡ ಬೆಳೆಸಿ- ಅತಿ ಚಿಕ್ಕ ವಯಸ್ಸಿಗೆ ಪೂರ್ತಿ ಗಡ್ಡ ಬೆಳೆದ ಹೆಣ್ಣಾಗಿ ಹರ್ನಾಮ್ ಕೌರ್ ಗಿನ್ನೆಸ್ ದಾಖಲೆ ಸೇರಿದ್ದಾಳೆ. ಆದರೆ ಅವಳ ಸಾಧನೆ ಇರುವುದು ಗಡ್ಡ ಬೆಳೆಸಿದ್ದರಲ್ಲಲ್ಲ- ಅದನ್ನು ಒಪ್ಪಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾಳಲ್ಲಾ... ಅದರಲ್ಲಿ. ಆ ಆತ್ಮವಿಶ್ವಾಸವನ್ನು ಮತ್ತೂ ಸಾವಿರಾರು ಮಂದಿಗೆ ಹಂಚುತ್ತಿದ್ದಾಳಲ್ಲಾ... ಅದರಲ್ಲಿ.

#FeelFree ಮದುವೆ ಆದ್ಮೇಲೆ ಹೆಣ್ಮಕ್ಕಳು ದಪ್ಪಗಾಗೋದಕ್ಕೆ ಸೆಕ್ಸ್ ಕಾರಣವಾ?...
 

ಯಾರು ಈ ಹರ್ನಾಮ್ ಕೌರ್?
ಹರ್ನಾಮ್ ಕೌರ್ ಎಂಬ ಈ ಯುವತಿ ಬ್ರಿಟಿಶ್ ಆ್ಯಂಟಿ ಬುಲ್ಲೀಯಿಂಗ್ ಆ್ಯಕ್ಟಿವಿಸ್ಟ್, ಲೈಪ್ ಕೋಚ್ ಅಷ್ಟೇ ಅಲ್ಲ, ಮೋಟಿವೇಶನಲ್ ಸ್ಪೀಕರ್ ಕೂಡಾ. 1990ರ ನವೆಂಬರ್ 29ರಂದು ಜನಿಸಿದ ಹರ್ನಾಮ್ 11 ವರ್ಷಕ್ಕೆ ಬೆಳೆವವರೆಗೂ ಎಲ್ಲ ಮಕ್ಕಳಂತೆ ಸಾಮಾನ್ಯವಾಗಿಯೇ ಇದ್ದಳು. ಆದರೆ, 11 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಆಕೆಯ ಮುದ್ದು ಮುಖ ಮುಚ್ಚುವಂತೆ ಗಡ್ಡದ ಕೂದಲು ಬೆಳೆಯಲಾರಂಭಿಸಿತು. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಆಕೆಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇರುವುದು ತಿಳಿದುಬಂತು. ಈ ಸಮಸ್ಯೆ ಇದ್ದವರಲ್ಲಿ ಇತರೆ ಹೆಣ್ಣುಮಕ್ಕಳಿಗಿಂತ ಅತಿ ಹೆಚ್ಚು ಪ್ರಮಾಣದಲ್ಲಿ ಟೆಸ್ಟೆಸ್ಟೋರೋನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಪುರುಷರಲ್ಲಿ ಗಡ್ಡಮೀಸೆಯ ಬೆಳವಣಿಗೆಗೆ ಕಾರಣವಾಗುವುದು ಇದೇ ಹಾರ್ಮೋನ್. 

ಹದಿಹರಯ
12ನೇ ವರ್ಷ ಎಂದರೆ ಆಗ ತಾನೇ ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಮೂಡುವ ಹೊತ್ತು. ತನ್ನ ಬಗ್ಗೆ ಅತಿ ಹೆಚ್ಚು ಯೋಚನೆಗಳು ಸುಳಿದಾಡುವ ಸಮಯ. ಇಂಥ ಸಮಯದಲ್ಲೇ ಸೌಂದರ್ಯಕ್ಕೆ ಎರವಾಗುವಂತೆ ಗಡ್ಡ ಬೆಳೆದರೆ ಹೆಣ್ಣುಮಗಳೊಬ್ಬಳ ಮನಸ್ಥಿತಿ  ಹೇಗಾಗಬೇಡ? ಕೇವಲ ಅಷ್ಟೇ ಅಲ್ಲವಲ್ಲ, ಸಮಾಜ ಆಕೆಯನ್ನು ಹೇಗೆ ನೋಡುತ್ತದೆ, ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಶತ್ರುವಿಗೂ ಬೇಡದಂಥ ದುಸ್ಥಿತಿ. ಹರ್ನಾಮ್ಳ ಮನಸ್ಥಿತಿ ಹಾಗೂ ಅನುಭವಗಳು ಕೂಡಾ ಇದಕ್ಕಿಂತ ಭಿನ್ನವಾಗಿರಲಿಲ್ಲ. 

ಆರಂಭದಲ್ಲಿ ಮುಖದ ಮೇಲೆ ಕೂದಲು ಬೆಳೆದಂತೆಲ್ಲ ಶೇವ್ ಮಾಡಿಕೊಂಡು ಶಾಲೆಗೆ ಹೋದಳು. ಅಷ್ಟಾಗಿಯೂ ಮುಚ್ಚಿಡಲಾಗದ ಮುಖದ ಕೂದಲಿನಿಂದಾಗಿ ಯಾರೂ ಆಕೆಯ ಗೆಳೆಯರಾಗಲಿಲ್ಲ, ಸಹಪಾಠಿಗಳು ದೂರ ಕುಳಿತುಕೊಳ್ಳುವುದಷ್ಟೇ ಅಲ್ಲ, ಆಕೆಯನ್ನು ನೋಡಿ ನಗುವುದು, ಅಪಹಾಸ್ಯ ಮಾಡುವುದು ಆರಂಭಿಸಿದರು. ಇದರಿಂದ ಅತಿಯಾಗಿ ಮುದುಡಿ ಹೋಯಿತು ಹರ್ನಾಮ್ಳ ಎಳೆ ಮನಸ್ಸು. ಆಕೆ ಮನೆಯಿಂದ ಹೊರ ಹೋಗುವುದಿಲ್ಲ ಎಂದು ಹಟ ಹಿಡಿದಳು. ಮತ್ತೂ ಕುಗ್ಗು ಖಿನ್ನತೆಗೊಳಗಾಗಿ ತನ್ನ ಮೇಲೆ ತಾನೇ ಗಾಯ ಮಾಡಿಕೊಳ್ಳಲಾರಂಭಿಸಿದಳು. ಕಡೆಗೊಂದು ದಿನ ಆತ್ಮಹತ್ಯೆಯತ್ತಲೂ ಮುಖ ಮಾಡಿದ್ದಳು. ಅದೃಷ್ಟವಶಾತ್ ಅದು ಫಲಿಸಲಿಲ್ಲ. 

ಚೀನಾದಲ್ಲಿ ಪಿರಿಯಡ್ಸ್ ಆಗದಂತೆ ಇಂಜೆಕ್ಷನ್, ಇದು ಕೊರೋನಾ ಎಫೆಕ್ಟ್!...

ವಿಶಿಷ್ಠತೆಯ ಅಪ್ಪುಗೆ
ಹರ್ನಾಮ್ಳ ಈ ಸಮಸ್ಯೆ ಹೋಗಿದ್ದು ಯಾವಾಗ ಗೊತ್ತಾ? ಆಕೆಯ ಗಡ್ಡ ಉದುರಿ ಬೀಳುವಂಥ ಔಷಧವೇನೂ ಸಿಗಲಿಲ್ಲ, ಬದಲಿಗೆ ಅವಳು ತನ್ನ ಸಮಸ್ಯೆಯ ಸಹಿತವಾಗಿ ತನ್ನನ್ನು ತಾನು ಒಪ್ಪಿಕೊಂಡಾಗ. ತನ್ನನ್ನು ತಾನು ಒಪ್ಪಿಕೊಂಡರೆ ಮಾತ್ರ ಇತರರೂ ತನ್ನನ್ನು ಒಪ್ಪಿಕೊಳ್ಳುತ್ತಾರೆಂಬುದನ್ನು ಅನುಭವದಿಂದ ಕಂಡುಕೊಂಡಾಗ. ನಿಧಾನವಾಗಿ ಆಕೆ ತನ್ನದು ಕುರೂಪ ಎಂದುಕೊಳ್ಳುವ ಬದಲಿಗೆ, ಅದೊಂದು ವಿಶಿಷ್ಠ ರೂಪ ಎಂದು ಒಪ್ಪಿಕೊಂಡಳು. ಬಳಿಕ ಬಾಡಿ ಪಾಸಿಟಿವ್ ಮೂವ್ಮೆಂಟ್ ಬಗ್ಗೆ ಸಭೆಸಮಾರಂಭಗಳಲ್ಲಿ ಮಾತನಾಡುವಷ್ಟು ಆತ್ಮವಿಶ್ವಾಸ ತುಂಬಿಸಿಕೊಂಡಳು. ಯಾವಾಗ ಆಕೆ ಈ ಬಗ್ಗೆ ಮಾತನಾಡತೊಡಗಿದಳೋ, ಜನ ಅವಳನ್ನು ಹೀರೋಯಿನ್ ತರ ನೋಡಲಾರಂಭಿಸಿದರು. 2014ರಲ್ಲಿ ಲಂಡನ್ ಫ್ಯಾಶನ್ ವೀಕ್‌ನಲ್ಲಿ ರ್ಯಾಂಪ್ ವಾಕ್ ಮಾಡಿ ಹೆಸರಾದಳು. ಸಧ್ಯ ಹಲವಾರು ಬ್ರ್ಯಾಂಡ್‌ಗಳಿಗೆ, ಉತ್ಪನ್ನಗಳಿಗೆ ಅಂಬಾಸಿಡರ್ ಆಗಿರುವ ಹರ್ಮಾನ್ ಫೇಸ್ಬುಕ್, ಟ್ವಿಟ್ಟರ್, ಯೂಟ್ಯೂಬ್ ಮುಂತಾದ ಜಾಲತಾಣಗಳ ವೇದಿಕೆಯಲ್ಲಿ ಸಕ್ರಿಯಳಾಗಿದ್ದಾಳೆ. ಸೆಲ್ಫ್ ಲವ್ ಹಾಗೂ ಅಕ್ಸೆಪ್ಟೆನ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆಕೆ ತನ್ನ ಗಡ್ಡಕ್ಕೆ 'ಸುಂದ್ರಿ' ಎಂದು ಹೆಸರಿಟ್ಟು, ಅದೊಂದು ಸ್ತ್ರೀಲಿಂಗದಂತೆ ಭಾವಿಸಿ ಕರೆಯುತ್ತಾಳೆ. 

ಕೀಳರಿಮೆಯಲ್ಲಿ ತೇಲಾಡಿದ ಪುಟ್ಟ ಹುಡುಗಿಯೊಬ್ಬಳು ಆತ್ಮವಿಶ್ವಾದ ಕಡಲಾಗಿ ಬೆಳೆದ ಪರಿ ಎಲ್ಲರಿಗೂ ಸ್ಪೂರ್ತಿದಾಯಕವಲ್ಲವೇ?