ನಿವೃತ್ತ ಸೇನಾ ಲೇಡಿ ಅಧಿಕಾರಿಯೊಬ್ಬರು ತಮ್ಮ 79ನೇ ವಯಸ್ಸಿನಲ್ಲಿ ಆಹಾರ ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಶಿಸ್ತುಬದ್ಧ ಜೀವನದ ಜೊತೆ ಅವಿವಾಹಿತೆಯಾಗಿರುವ ಇವರು, ಮದುವೆಯಾಗದ ಕಾರಣವನ್ನೂ ನೀಡಿದ್ದಾರೆ. ಇದು ಹಲವು ಮಹಿಳೆಯರ ಶ್ಲಾಘನೆಗೆ ಕಾರಣವಾಗಿದೆ. ಏನಿವರ ಕಥೆ? 

ಮಧ್ಯಪ್ರದೇಶದ ಇಂದೋರ್‌ನ ಜನನಿಬಿಡ ಬೀದಿಗಳಿಗೆ ಹೋದಾಗ ಅಲ್ಲೊಬ್ಬ ವೃದ್ಧೆ ಇಡ್ಲಿ-ಸಾಂಬಾರ್, ಚೋಲೆ ಭಟೋರೆ, ಆಲೂ ಪರಾಠಗಳು ಮತ್ತು ಹೆಸರುಕಾಳುಗಳಂತಹ ರುಚಿಕರವಾದ ಭಕ್ಷ್ಯಗಳನ್ನು ಬಡಿಸುವುದನ್ನು ಕಾಣಬಹುದು. 79 ವಯಸ್ಸಿನ ಈ ವೃದ್ಧೆಯ ಚಟುವಟಿಕೆ, ಅವರ ಉತ್ಸಾಹವನ್ನು ನೋಡಿದರೆ ಎಂಥವರೂ ಒಮ್ಮೆ ಅಬ್ಬಾ ಎನ್ನುವಂತಿದೆ. ಸಾಮಾನ್ಯ ಯಾವುದೋ ಅಜ್ಜಿ ಹೊಟ್ಟೆಪಾಡಿಗಾಗಿ ಈ ಉದ್ಯೋಗವನ್ನು ಮಾಡುತ್ತಿದ್ದಾರೆ ಎಂದುಕೊಳ್ಳುವವರೂ ಹಲವರು. ಈ ಇಳಿ ವಯಸ್ಸಿನಲ್ಲಿಯೂ ಹೀಗೆ ಕಷ್ಟಪಡಬೇಕಾ ಎಂದು ನೊಂದುಕೊಳ್ಳುವವರು ಕೆಲವರು. ಮಕ್ಕಳು ಇವರನ್ನು ಈ ಸ್ಥಿತಿಗೆ ತಂದೊಡ್ಡಿರಬಹುದು ಎಂದು ಮಕ್ಕಳನ್ನು ಶಪಿಸುವವರು ಮತ್ತೆ ಕೆಲವರು. ಆದರೆ ಈ ವೃದ್ಧೆಯನ್ನು ಮಾತನಾಡಿಸಿದಾಗಲೇ ತಿಳಿಯುವುದು ಈಕೆ ಅಂತಿಂಥ ಮಹಿಳೆಯಲ್ಲ, ಬದಲಿಗೆ ಭಾರತೀಯ ಸೇನೆಯಲ್ಲಿದ್ದ ನಿವೃದ್ಧಿ ಅಧಿಕಾರಿಯೆಂದು!

ಇವರು ಜೀವನದ ಉದ್ದೇಶ, ಜೀವನದಲ್ಲಿರುವ ಉತ್ಸಾಹ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ. ಅಂದಹಾಗೆ ಇವರು ಅವಿವಾಹಿತರು. ಇಂಥ ಉನ್ನತ ಸ್ಥಾನದಲ್ಲಿ ಇದ್ದರೂ, ತಮ್ಮ ಕನಸುಗಳನ್ನು ಮುಂದುವರೆಸಲು, ಸೇನೆಯಲ್ಲಿ ತಮ್ಮ ಕರ್ತವ್ಯ ನಿಭಾಯಿಸುವ ಸಲುವಾಗಿ ಮದುವೆಯೇ ಆಗಿಲ್ಲವೆನ್ನುತ್ತಾರೆ. ಜೀವನದಲ್ಲಿ ಮಹತ್ತರ ಒಂದನ್ನು ಸಾಧಿಸಬೇಕಾದರೆ, ಅದೂ ಸೇನೆಯಲ್ಲಿ ಇರುವಂಥ ಸಮಯದಲ್ಲಿ ಜೀವನದ ಉದ್ದೇಶವನ್ನು ಪೂರೈಸಲು ಮದುವೆಯಾಗಲೇಬೇಕೆಂದೇನೂ ಇಲ್ಲ, ಮದುವೆ ಇಲ್ಲದೆಯೇ ಹೆಣ್ಣೊಬ್ಬಳು ಏನನ್ನಾದರೂ ಸಾಧಿಸಬಹುದು, ಉನ್ನತ ಸ್ಥಾನವನ್ನು ಏರಬಹುದು, ಯಾರ ಹಂಗೂ ಇಲ್ಲದೇ ತನ್ನತನವನ್ನು ಸ್ಥಾಪಿಸಿಕೊಳ್ಳಬಹುದು ಎನ್ನುವುದು ಇವರ ಮಾತು.

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಇವರ ಮಾತನ್ನು ಕೇಳಿದವರು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದನ್ನು ನೋಡಿದರೆ ಮದುವೆಯಾದ ಮಹಿಳೆಯರು ಅದೆಷ್ಟು ಹತಾಶರಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುವಂತಿದೆ. ಮದುವೆಯಾದ ಮೇಲೆ ತಮ್ಮ ಜೀವನದ ಬಗ್ಗೆ ಕೆಲವರು ನೋವು ತೋಡಿಕೊಂಡಿದ್ದರೆ, ಸಮಾಜದ ಮೂದಲಿಕೆ ಮಾತಿಗಾಗಿ ಮದುವೆಯಾಗಿ ತಪ್ಪು ಮಾಡಿರುವುದು ಈಗ ತಿಳಿಯುತ್ತಿದೆ, ನಿಮ್ಮಂಥವರೇ ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂದು ಹಲವರು ಕಮೆಂಟ್​ಗಳಲ್ಲಿ ತಿಳಿಸುತ್ತಿದ್ದಾರೆ! ಮತ್ತೆ ಕೆಲವರು ಕೆಲವೇ ಕೆಲವು ಅದೃಷ್ಟವಂತ ಮಹಿಳೆಗೆ ಮಾತ್ರ ಮದುವೆಯಾದ ಮೇಲೂ ಆಕೆಯ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ, ಇದು ಹಲವರ ಪಾಲಿಗೆ ಕನಸಿನ ಮಾತೇ ಎಂದಿದ್ದಾರೆ.

ಭಾರತೀಯ ಸೇನೆಯಲ್ಲಿ ದಶಕಗಳ ಶಿಸ್ತಿನ ಸೇವೆಯ ನಂತರ, ಇವರು, ಈಗ ಆಹಾರ ನೀಡುತ್ತಿದ್ದಾರೆ. ಅಡುಗೆಯ ಮೇಲಿನ ತಮ್ಮ ಪ್ರೀತಿಯನ್ನು ಇತರರಿಗೆ ಉಣಬಡಿಸುತ್ತಿದ್ದಾರೆ. "ನನ್ನ ಹವ್ಯಾಸಗಳನ್ನು ಬೆನ್ನಟ್ಟಲು ನಾನು ಮದುವೆಯಾಗಲಿಲ್ಲ. ನಾನು ಮದುವೆಯಾಗಿದ್ದರೆ, ನಾನು ಈ ರೀತಿ ನನ್ನ ಉತ್ಸಾಹವನ್ನು ಅನುಸರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿರುವ ಅವರ ವಿಡಿಯೋ ವೈರಲ್​ ಆಗುತ್ತಿದೆ. ಪ್ರತಿದಿನ ಬೆಳಿಗ್ಗೆ, ಅವರು ಇಂದೋರ್‌ನ ಶಾಂತ ಮೂಲೆಯಲ್ಲಿ ತಮ್ಮ ಅಂಗಡಿಯನ್ನು ತೆರೆಯುತ್ತಾರೆ. ಅದರಲ್ಲಿ ಅವರು, ತಾಜಾ, ಮನೆ ಶೈಲಿಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಹೇಳಿ ಕೇಳಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರುವ ಜೀವ ಅವರದ್ದು. ಇನ್ನು ಕೇಳಬೇಕೆ, ಅಂಗಡಿಯಲ್ಲಿಯೂ ಅದೇ ಶಿಸ್ತು, ಅದೇ ನೈರ್ಮಲ್ಯ. ಇದೇ ಕಾರಣಕ್ಕೆ ಇವರ ಆಹಾರಕ್ಕೆ ಜನ ಕ್ಯೂ ನಿಂತು ಸೇವಿಸುತ್ತಾರೆ. ಈ ವಯಸ್ಸಿನಲ್ಲಿಯೂ ಅವರ ಉತ್ಸಾಹ ಕೂಡ ಎಲ್ಲರಿಗೂ ಮಾದರಿ.

View post on Instagram