ಮಗಳಿದ್ದರೆ ನಿನ್ನಂಥ ಮಗಳಿರಬೇಕು! ಲಾಲುಗೆ ಕಿಡ್ನಿ ಕೊಟ್ಟ ಮಗಳಿಗೊಂದು ಚಪ್ಪಾಳೆ
ಇಂಟ್ರೋ: ಮಗಳೆಂದರೆ ಒಂದು ಆಪ್ತತೆ. ಗೌರವ, ಒಂದು ಹಿಡಿ ಪ್ರೀತಿ ಹೆಚ್ಚು. ಪೋಷಕರು ಮಗಳೇ ಬೇಕೆಂದು ಏಕೆ ಹಾತೊರೆಯುತ್ತಾರೆ ಎಂಬುವುದಕ್ಕೆ ಇದೀಗ ಹೊಸ ಉದಾಹರಣೆ ಲಾಲುಪ್ರಸಾದ್ ಮಗಳು ರೋಹಿಣಿ. ಹೆಣ್ಣು ಮಕ್ಕಳು ಇಲ್ಲದವರು ಮತ್ತಷ್ಟು ಹಲಬುವಂತೆ ಮಾಡಿದ್ದಾಳೆ ಈ ಮಾತೆ. ಏಕೆ?
- ಶೋಭಾ ಎಂ.ಸಿ, ಏಷ್ಯಾನೆಟ್ ಸುವರ್ಣನ್ಯೂಸ್
ಹೆಣ್ಮಕ್ಕಳ ಮೊದಲ ಹೀರೋ ಅಪ್ಪ. ಮಗಳಿಗೆ ಅಪ್ಪನೇ ಉಸಿರು. ಅಪ್ಪನ ಪಾಲಿಗೆ ಆಕೆ ಅಕ್ಷರಶಃ ತಾಯಿಯೇ. ಎಷ್ಟೋ ತಂದೆಯರು, ತನ್ನ ಮಗಳಲ್ಲೇ ಅಗಲಿದ ತಾಯಿ ಕಂಡಿದ್ದಾರೆ. ಅಂಥ ಅಮ್ಮ- ಮಗಳ ಭಾಂದವ್ಯಕ್ಕೆ ಸಾಕ್ಷಿಯಾಗಿದ್ದು ಬಿಹಾರದ ಮಾಜಿ ಸಿಎಂ ಲಾಲೂಪ್ರಸಾದ್ ಯಾದವ್, ಮಗಳು ರೋಹಿಣಿ ಆಚಾರ್ಯ. ಸಾವಿನ ಬಾಗಿಲಲ್ಲಿ ನಿಂತಿದ್ದ 74 ವರ್ಷದ ಅಪ್ಪನಿಗೆ 40ರ ಹರಯದ ಲಾಲೂ ಎರಡನೇ ಮಗಳು ರೋಹಿಣಿ ಆಚಾರ್ಯ ಕಿಡ್ನಿ ದಾನ ಮಾಡಿದ್ದಾಳೆ. ಶ್ರೀಮಂತ ರಾಜಕಾರಣಿ ಲಾಲೂಗೆ ದುಡ್ಡಿಗೇನು ಬರ. ಕೋಟಿಗಟ್ಟಲೆ ದುಡ್ಡು ಕೊಟ್ಟು ಕಿಡ್ನಿ ದಾನ ಪಡೆಯಬಹುದಿತ್ತು, ಯಾರು ಬೇಕಾದರೂ ಕಿಡ್ನಿ ಕೊಡ್ತಿದ್ರು. ಮಗಳೂ ಸಹ, ಕಿಡ್ನಿ ದಾನಿಗಳನ್ನು ಹುಡುಕಿ, ಅಪ್ಪನಿಗೆ ಕಿಡ್ನಿ ಕೊಡಿಸಬಹುದಿತ್ತು. ಆದ್ರೆ, ರೋಹಿಣಿ ಹಾಗೇ ಯೋಚಿಸಲೂ ಇಲ್ಲ. ತನ್ನಪ್ಪನಿಗೆ ಕಿಡ್ನಿ ವೈಫಲ್ಯವಾಗಿದೆ ಎಂಬ ವಿಷಯ ತಿಳಿದಿದ್ದೇ, ರೋಹಿಣಿ ಹಿಂದೆ ಮುಂದೆ ಯೋಚಿಸಲೂ ಇಲ್ಲ. ತನ್ನ ಕಿಡ್ನಿಯನ್ನೇ ಅಪ್ಪನಿಗೆ ದಾನವಾಗಿ ನೀಡುವ ಗಟ್ಟಿ ನಿರ್ಧಾರ ಮಾಡಿಬಿಟ್ಟರು. ಆ ಮೂಲಕ, ಲಕ್ಷಾಂತರ ಅಪ್ಪಂದಿರ ಪಾಲಿಗೆ ಮಹಾತ್ಯಾಗಿ ಎನ್ನಿಸಿಬಿಟ್ಟಳು. ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇಡೀ ದೇಶದಲ್ಲಿ ರೋಹಿಣಿಯದ್ದೇ ಸುದ್ದಿ.
'ನನಗೆ ಮಗಳಿಲ್ಲ, ನನಗ್ಯಾಕೆ ಹೆಣ್ಣು ಮಗಳನ್ನು ಕೊಡಲಿಲ್ಲ ಅಂತ ದೇವರೊಂದಿಗೆ ಜಗಳವಾಡಬೇಕು ಅನ್ನಿಸ್ತಿದೆ' - ಲಾಲೂ ಯಾದವ್ರ ಕಟು ಟೀಕಾರರ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ , ರೋಹಿಣಿಯ ತ್ಯಾಗದ ಬಗ್ಗೆ ಹೇಳಿದ ಮಾತು.
ಲಾಲೂ ಪ್ರಸಾದ್ ಯಾದವ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, ಮಗಳಿಂದಲೇ ಕಿಡ್ನಿ ದಾನ!
ರೋಹಿಣಿಯ ಕಿಡ್ನಿ ದಾನದ ಸುದ್ದಿ ಓದಿದ ಪ್ರತಿಯೊಬ್ಬರ ಅಂತರಾಳದ ಮಾತು ಇದೇ ಆದರೂ ಅಚ್ಚರಿ ಇಲ್ಲ. ಮಮತೆ, ವಾತ್ಸಲ್ಯದ ಪ್ರತಿರೂಪವೇ ಮಗಳು. ಅದರಲ್ಲೂ ಅಪ್ಪನೆಂದರೆ ಒಂದು ಹಿಡಿ ಪ್ರೀತಿ ಹೆಚ್ಚು. ಅಪ್ಪನಿಗೂ ಮಗಳೇ ಜೀವ. ಅವನ ಪ್ರಪಂಚವೇ ಅವಳಾದರೂ ಅಚ್ಚರಿ ಇಲ್ಲ. ಅಪ್ಪ ಬಡವನೇ ಆಗಿರಲಿ, ಶ್ರೀಮಂತನೇ ಆಗಿರಲಿ ಮಗಳ ಪ್ರೀತಿಯಲ್ಲಿ ಸಾಸಿವೆ ಕಾಳಿನಷ್ಟೂ ಕಡಿಮೆಯಾಗಲಾರದು. ಮೊದಲು ಮಗಳು ಹುಟ್ಟಿದ್ರೆ, ಅವಳೊಂದಿಗೆ ಒಬ್ಬ ಅಪ್ಪನೂ ಹುಟ್ಟುತ್ತಾನೆ ಎಂಬ ಮಾತು ಅಕ್ಷರಶಃ ಸತ್ಯ.
ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಒಂದು ಸ್ಪೆಷಲ್ ಸ್ಪೇಸ್. ಅವಳ ಮಾತೇ ಫೈನಲ್. ಅಪ್ಪನ ಎದೆ ಮೇಲೆ ಮಲಗಿ ಮುದ್ದುಗೆರೆಯುವ ಮಗಳು, ಅಷ್ಟೇ ಧೈರ್ಯದಿಂದ ಅಪ್ಪನಿಂದ ಕೇಳಿ ದುಡ್ಡು ಪಡೆಯುವಷ್ಟು ಸ್ವತಂತ್ರೆ. ಆಫೀಸ್ನಿಂದ ಅಪ್ಪ ಬರೋವರೆಗೂ ಊಟ ಮಾಡದೇ ಕಾದು ಕುಳಿತವಳು, ಅಪ್ಪನ ಆರೋಗ್ಯದಲ್ಲಿ (Health) ಏರುಪೇರಾದರೂ ಕಳವಳಗೊಳ್ಳುವಳು. ಸದಾ ಅಪ್ಪನ ಪರ ನಿಂತು ಅಮ್ಮನನ್ನು ಖಂಡಿಸುವವಳು 'Daddy's lill girl’ ಟ್ಯಾಟು ಹಾಕಿಸಿಕೊಂಡು ಬೀಗುವವಳು. ತನ್ನ ಗೆಳೆಯನೂ ಅಪ್ಪನಂಥವನೇ ಇರಬೇಕೆಂದು ಕನಸು ಕಾಣುವವಳು, ಅಪ್ಪನ ಆಸೆ ಈಡೇರಿಸಲು ತನ್ನ ಕನಸಿಗೆ ಕೊಳ್ಳಿ ಇಟ್ಟುಕೊಳ್ಳುವವಳು, ಅಣ್ತಮ್ಮಂದಿರು ಅಪ್ಪ- ಅಮ್ಮನನ್ನು ಕೈಬಿಟ್ಟಾಗ, ತನ್ನ ಕುಟುಂಬದ ಜತೆಗೆ ಹೆತ್ತವರನ್ನು ಬೆನ್ನಿಗೆ ಕಟ್ಟಿಕೊಂಡು ನಿಲ್ಲುವವಳು...ಅಬ್ಬಬ್ಬಾ, ಅವಳ ಪ್ರೀತಿ, ವಾತ್ಸಲ್ಯಕ್ಕೆ ಎಣೆಯುಂಟೇ?
ಬಿಸ್ಲೆರಿಯನ್ನು ಮಾರಿ, ಮಗಳಿಗೆ ಅವಳಾಸೆಯಂತೆ ಬದುಕಲು ಬಿಟ್ಟ ರಮೇಶ್ ಚೌಹಾಣ್!
ಮಗಳೆಂದರೆ, ಹುಟ್ಟಿನಿಂದ, ಮದುವೆಯಾಗೋವರೆಗೂ ಖರ್ಚು, ಖರ್ಚು. ಮದುವೆ, ಚಿನ್ನ, ಒಡೆವೆ, ಸೀರೆ. ಆಮೇಲೆ ಬಾಣಂತನ, ಅವಳ ಮಕ್ಕಳನ್ನು ಸಾಕಿ ಸಲಹಿ ಕೊಡೋ ಜವಾಬ್ದಾರಿ. ಇಷ್ಟೆಲ್ಲ ಮಾಡಿಸಿಕೊಂಡು ಗಂಡನ ಮನೆಗೆ ಸೇರಿಬಿಡ್ತಾಳೆ. ಗಂಡು ಮಕ್ಕಳಾದ್ರೆನೂ ಭಾಗ್ಯ? ಕೊನೆಗಾಲದಲ್ಲಿ ಅಪ್ಪ- ಅಮ್ಮನಿಗೆ ನಾವೇ ಗತಿ ಅಂತ ಗೊಣಗೋ ಗಂಡು ಮಕ್ಕಳು ಕಡಿಮೆ ಇಲ್ಲ. ಆದ್ರೆ, ಹೆತ್ತವರ ಸಂಕಟದ ಸಮಯದಲ್ಲಿ ಆಧಾರವಾಗೋದು ಹೆಣ್ಮಕ್ಕಳೇ ಅನ್ನೋದು ಪದೇ ಪದೇ ನಿರೂಪಿತ.
ಹೆಣ್ಮಕ್ಕಳ ತ್ಯಾಗದ ಚರಿತ್ರೆಗೆ ಲಾಲೂ ಮಗಳು ರೋಹಿಣಿ ಹೊಸ ಸೇರ್ಪಡೆ. ದೇಶವೇ ರೋಹಿಣಿಯನ್ನು ಹಾಡಿ ಹೊಗಳುತ್ತಿದ್ರೆ, ಅಪ್ಪನಿಗೆ ಕಿಡ್ನಿ ದಾನ (Kidney Donation) ಕೊಟ್ಟ ಬಳಿಕ ರೋಹಿಣಿ ಏನಂಥ ಟ್ವೀಟ್ ಮಾಡಿದ್ರು ಗೊತ್ತಾ ? ‘ಇದು ನನ್ನ ತಂದೆಗೆ ನಾನು ನೀಡಲು ಬಯಸುವ ಒಂದು ಸಣ್ಣ ಮಾಂಸದ ತುಂಡು. ನಾನು ಅವರಿಗಾಗಿ ಏನು ಬೇಕಾದರೂ ಮಾಡಬಲ್ಲೆ. ದಯವಿಟ್ಟು ನನ್ನ ತಂದೆ ಮತ್ತೆ ಫಿಟ್ ಆಗಲಿ ಎಂದು ಪ್ರಾರ್ಥಿಸಿ,’ ಇಂಥ ಮಾತು ಮಗಳಿಂದಷ್ಟೇ ಬರಲು ಸಾಧ್ಯ.
ಹೆಣ್ಣೆಂಬ ಸೃಷ್ಟಿಗೆ ಜೀವ ಕೊಟ್ಟ ಅಪ್ಪನಿಗೆ ಮರು ಜೀವ ಕೊಡುವುದು ಮಗಳಲ್ಲದೇ ಬೇರಾರು..?