ಇಂದು ದೇಶದಲ್ಲಿ ಮಾರಾಟವಾಗಿರುವ ಪ್ರತಿ ಮೂರು ಬಾಟಲ್‌ ನೀರಿನಲ್ಲಿ, ಒಂದು ಖಂಡಿತವಾಗಿ ಬಿಸ್ಲೆರಿಯದ್ದಾಗಿರುತ್ತದೆ. ಇಟಲಿಯ ಉದ್ಯಮಿಯಿಂದ 1969ರಲ್ಲಿ ಬರೀ ನಾಲ್ಕು ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ ರಮೇಶ್‌ ಚೌಹಾಣ್‌, ಇಂದು ಉದ್ಯಮವನ್ನು ಮುನ್ನಡೆಸುವ ವಾರಸುದಾರರಿಲ್ಲದೆ ಅದನ್ನು ಟಾಟಾಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇಲ್ಲಿ ಕಂಪನಿಯ ಮಾರಾಟಕ್ಕಿಂತ ಹೆಚ್ಚಾಗಿ ಮಗಳ ಮೇಲಿನ ಅವರ ಪ್ರೀತಿಯೇ ಹೆಚ್ಚಾಗಿ ಕಾಣುತ್ತಿದೆ.

ನವದೆಹಲಿ (ನ.25): ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡೋದಾ..? ಅದನ್ನ ಯಾರು ತಗೋತಾರೆ..? ಸುಮ್ನೆ ದುಡ್ಡು ಹಾಳು ಮಾಡ್ತಾನೆ.. ಎಂದು ಎಲ್ಲರೂ ಅಂದುಕೊಂಡಿದ್ದ ಸಮಯದಲ್ಲಿ 1969ರಲ್ಲಿ ಇಟಲಿಯ ಉದ್ಯಮಿಯೊಬ್ಬರಿಂದ ಬರೀ 4 ಲಕ್ಷ ರೂಪಾಯಿಗೆ ಬಿಸ್ಲೆರಿ ಎನ್ನುವ ಪ್ಯಾಕೇಜ್ಡ್‌ ವಾಟರ್‌ ಬಾಟಲಿ ಕಂಪನಿಯನ್ನು ಖರೀದಿ ಮಾಡಿದ್ದರು ರಮೇಶ್‌ ಚೌಹಾಣ್‌. ತನ್ನ 27ನೇ ವಯಸ್ಸಿನಲ್ಲಿ ಇಂಥದ್ದೊಂದು ಸಾಹಸ ಮಾಡಿದ್ದ ರಮೇಶ್‌ ಚೌಹಾಣ್‌, ಸಾವಿರಾರು ಕೋಟಿ ಲಾಭ ಬರುವಂಥ ಕಂಪನಿಯನ್ನಾಗಿ ಮಾಡಿದ್ದರು. 5 ದಶಕಗಳ ಕಾಲ ಭಾರತದಲ್ಲಿ ಬಿಸ್ಲೆರಿ ಸಾಧಿಸಿದ್ದ ಪ್ರಭುತ್ವದ ಹಿಂದಿನ ಏಕೈಕ ಶಕ್ತಿಯಾಗಿ ಇದ್ದಿದ್ದು ರಮೇಶ್‌ ಚೌಹಾಣ್‌ ಮಾತ್ರ. ಇಂದು ದೇಶದಲ್ಲಿ ಪ್ಯಾಕೇಜ್ಡ್‌ ವಾಟರ್‌ ಉದ್ಯಮ ಅಂದಾಜು 20 ಸಾವಿರ ಕೋಟಿ ಇರಬಹುದು. ಅದರಲ್ಲಿ ಶೇ. 60ರಷ್ಟು ಅಸಂಘಟಿತವಾದದ್ದು. ಉಳಿದ ಶೇ.40ರಷ್ಟು ಸಂಘಟಿತ ವಲಯದಲ್ಲಿ ಬಿಸ್ಲೆರಿಯ ಪಾಲು ಶೇ.32ರಷ್ಟು. ಇಂದು ದೇಶದಲ್ಲಿ ಮಾರಾಟವಾಗುವ ಪ್ರತಿ 3 ಬಾಟಲ್‌ ನೀರಿನಲ್ಲಿ ಒಂದು ಖಂಡಿತವಾಗಿ ಬಿಸ್ಲೆರಿಯದ್ದಾಗಿರುತ್ತದೆ. ಆದರೆ, ಮಗಳಿಗೆ ಉದ್ಯಮದ ಮೇಲೆ ಆಸಕ್ತಿಯಿಲ್ಲ ಎನ್ನುವ ಕಾರಣಕ್ಕಾಗಿ ರಮೇಶ್‌ ಚೌಹಾಣ್‌, ಬಿಸ್ಲೆರಿಯನ್ನು ಟಾಟಾ ಕಂಪನಿಗೆ ಮಾರಾಟ ಮಾಡಲು ನಿರ್ಧಾರ ಮಾಡಿದ್ದಾರೆ.

ಯಾರೀಕೆ ಜಯಂತಿ ಚೌಹಾಣ್‌: ಬಿಸ್ಲೆರಿಯ ಸಂಸ್ಥಾಪಕ ರಮೇಶ್‌ ಚೌಹಾಣ್‌ ಅವರ ಏಕೈಕ ಪುತ್ರಿ ಜಯಂತಿ ಚೌಹಾಣ್‌. ಬಿಸ್ಲೆರಿ ಇಂಟರ್‌ನ್ಯಾಷನಲ್‌ನ ಉಪಾಧ್ಯಕ್ಷೆ. ತಮ್ಮ ಹೈಸ್ಕೂಲ್‌ ವಿದ್ಯಾಭ್ಯಾಸ ಮುಗಿಸ ಬಳಿಕ, ಉತ್ಪನ್ನ ಅಭಿವೃದ್ಧಿ ವಿಷಯದಲ್ಲಿ ಲಾಸ್ ಏಂಜಲೀಸ್‌ನ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಮರ್ಚಂಡೈಸಿಂಗ್ (ಎಫ್‌ಐಡಿಎಂ) ನಲ್ಲಿ ಕಲಿತಿದ್ದರು. ಆ ಬಳಿಕ ಮಿಲಾನೋದ ಇಸ್ಟಿಟುಟೊ ಮರಂಗೋನಿಯಲ್ಲಿ ಫ್ಯಾಷನ್‌ ಡಿಸೈನಿಂಗ್‌ಅನ್ನು ಕಲಿತಿದ್ದು, ಲಂಡನ್ ಕಾಲೇಜ್ ಆಫ್ ಫ್ಯಾಶನ್‌ನಿಂದ ಫ್ಯಾಷನ್ ಸ್ಟೈಲಿಂಗ್ ಮತ್ತು ಫೋಟೋಗ್ರಫಿಯನ್ನೂ ಕಲಿತಿದ್ದಾರೆ. ತಮ್ಮ24ನೇ ವರ್ಷದಲ್ಲಿಯೇ ಜಯಂತಿ ಅಪ್ಪನೊಂದಿಗೆ ಬಿಸ್ಲೆರಿಯ ಜೊತೆ ಭಾಗಿಯಾಗಿದ್ದರು. ಆದರೆ, ಅವರ ಆಸಕ್ತಿ ಎಂದಿಗೂ ಬ್ಯುಸಿನೆಸ್‌ ಆಗಿರಲಿಲ್ಲ.

ಟ್ರಾವೆಲ್‌ ಹಾಗೂ ಫೋಟೋಗ್ರಫಿಯಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದರು. ಹಾಗಿದ್ದರೂ, ಅಪ್ಪನ ಆಸೆಗೆ ಕಟ್ಟುಬಿದ್ದು 24ನೇ ವರ್ಷದಲ್ಲಿ ದೆಹಲಿ ಕಚೇರಿಯ ನೇತೃತ್ವ ವಹಿಸಿಕೊಂಡಿದ್ದರು. ತಳಮಟ್ಟದಿಂದಲೇ ಉತ್ಪನ್ನದ ಅಭಿವೃದ್ಧಿ ವಿಚಾರವಾಗಿ ಕೆಲಸ ಮಾಡಿದರು. ಬಿಸ್ಲೆರಿ ಕಂಪನಿಯನ್ನು ಸಂಪೂರ್ಣವಾಗಿ ನವೀಕರಣ ಮಾಡಿದರೂ, ಹಣಕಾಸಿನ ಹೆಚ್ಚಿನ ಜವಾಬ್ದಾರಿ ತಂದೆ ರಮೇಶ್‌ ಚೌಹಾಣ್‌ ಅವರೇ ನಿವರ್ಹಿಸುತ್ತಿದ್ದರು. 2011 ರಲ್ಲಿ ಅವರು ಮುಂಬೈ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಹೊಸ ಉತ್ಪನ್ನ ಅಭಿವೃದ್ಧಿಯ ಜೊತೆಗೆ, ಅವರು ಹಳೆಯ ಉತ್ಪನ್ನಗಳ ಕಾರ್ಯಾಚರಣೆಯನ್ನು ಸುಗಮಗೊಳಿಸುವಲ್ಲಿ ತೊಡಗಿಸಿಕೊಂಡಿದ್ದರು.

2010ರಲ್ಲಿ ಮುಂಬೈ ಕಚೇರಿಯ ಜವಾಬ್ದಾರಿ ಸಿಕ್ಕರೂ ಅದರ ಬೆನ್ನಲ್ಲಿಯೇ ಅವರು ಕಂಪನಿಯನ್ನು ತೊರೆದು ಲಂಡನ್‌ನ ಓರಿಯೆಂಟಲ್ ಮತ್ತು ಆಫ್ರಿಕನ್ ಅಧ್ಯಯನಗಳ ಕಾಲೇಜಿನಲ್ಲಿ ಅರೇಬಿಕ್‌ನಲ್ಲಿ ಮಾಸ್ಟರ್ಸ್‌ ಮಾಡಿದ್ದರು. 2011ರಲ್ಲಿ ಮರಳಿ ಮುಂಬೈ ಕಚೇರಿಯ ಚುಕ್ಕಾಣಿ ಪಡೆದುಕೊಂಡಿದ್ದ ಜಯಂತಿ ಚೌಹಾಣ್‌ ತಮ್ಮ ಮೊದಲ ಸಂದರ್ಶನದಲ್ಲಿಯೇ, 'ನಾನು ಬದುಕಿರುವವರೆಗೂ ಬಿಸ್ಲೆರಿ ಎನ್ನುವ ಬ್ರ್ಯಾಂಡ್‌ ಮಾರಾಟವಾಗಲು ಬಿಡೋದಿಲ್ಲ. ನನಗೆ ಕೇವಲ ನಾಲ್ಕು ವರ್ಷ ನೀಡಿ ನೀವು ಹೊಸ ಅವತಾರದ ಬಿಸ್ಲೆರಿಯನ್ನು ಖಂಡಿತಾ ನೋಡುತ್ತೀರಿ' ಎಂದು ಹೇಳಿದ್ದರು. ಅಂದು ಈ ಮಾತು ಹೇಳಿದ್ದ ಜಯಂತಿ, ಇಂದು ಕಂಪನಿಯ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಕಾರಣಕ್ಕಾಗಿ ಅವರ ತಂದೆ ಮಾರಾಟ ಮಾಡಲು ಸಿದ್ಧವಾಗಿದ್ದಾರೆ.

ಮಗಳಿಗೆ ಬ್ಯುಸಿನೆಸ್‌ ಮೇಲೆ ಆಸಕ್ತಿಯಿಲ್ಲ, ಅದಕ್ಕಾಗಿ ಬಿಸ್ಲೆರಿ ಮಾರಾಟ: ಮಾಲೀಕ ರಮೇಶ್‌ ಚೌಹಾಣ್‌!

2009ರಲ್ಲಿ ಮೊದಲ ಬಾರಿಗೆ ಮಗಳಿಗೆ ಕಂಪನಿಯ ಜವಾಬ್ದಾರಿ ನೀಡಲು ನಿರ್ಧಾರ ಮಾಡಿದ್ದರು. ಕಂಪನಿಯ ಆಗುಹೋಗುಗಳ ತಿಳಿಸಿಕೊಡಲು ಪ್ರಯತ್ನ ಮಾಡಿದ್ದರು. ಆದರೆ, ನೀರಿನ ಉದ್ಯಮದಲ್ಲಿ ಹಂಸದತೆ ಇರುವುದು ಅವರಿಗೆ ಸಾಧ್ಯವಾಗಲಿಲ್ಲ. ದೆಹಲಿ ಕಚೇರಿಯಲ್ಲಿ ಖಿನ್ನತೆ ಮೂಡಲು ಪ್ರಾರಂಭವಾಗಿತ್ತು. ಅಲ್ಲಿನ ವ್ಯವಹಾರದ ಜಂಜಾಟಗಳಿಂದ ಹೊರಬಂದ ಜಯಂತಿ 2010ರ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹಾರಿದ್ದರು. 2011ರ ಸೆಪ್ಟೆಂಬರ್‌ನಲ್ಲಿ ಮಗಳು ಮತ್ತ ವಾಪಾಸ್‌ ಬಂದು ಉದ್ಯಮ ನೋಡಿಕೊಳ್ಳುವ ಆಸಕ್ತಿ ತೋರಿದಾಗ ರಮೇಶ್‌ ಚೌಹಾಣ್‌ಗೂ ಸಂತಸವಾಗಿತ್ತು. ಬಂದವರೇ ಬಿಸ್ಲೆರಿಯ ದೆಹಲಿ ಕಚೇರಿಯನ್ನು ಮುಂಬೈನೊಂದಿಗೆ ವಿಲೀನ ಮಾಡಿ, ಮುಂಬೈನಿಂದಲೇ ಏಕೀಕೃತವಾಗಿ ವ್ಯವಹಾರ ನೋಡಿಕೊಳ್ಳಲು ಆರಂಭ ಮಾಡಿದ್ದರು. ಇದಾದ ಬಹುಶಃ 10 ವರ್ಷಗಳ ಬಳಿಕ ಮಗಳಿಗೆ ಉದ್ಯಮದ ವಿಚಾರವಾಗಿ ಅಷ್ಟಾಗಿ ಆಸಕ್ತಿ ಇಲ್ಲ ಎನ್ನುವುದನ್ನು ತಂದೆ ಗಮನಿಸಿದ್ದಾರೆ. 

ಬಿಸ್ಲೆರಿ ಮಾರಾಟಕ್ಕಿದೆ, ಖರೀದಿ ಮಾಡ್ತಿರೋ ಕಂಪನಿ ಇದು!

ಮಗಳಿಗೆ ಜಗತ್ತು ಸುತ್ತುವ ಆಸೆ, ಫ್ಯಾಷನ್‌ ಡಿಸೈನಿಂಗ್‌ನೊಂದಿಗೆ, ಫೋಟೋಗ್ರಫಿಯ ಆಸಕ್ತಿ ಕೂಡ ಆಕೆಯಲ್ಲಿದೆ ಎನ್ನುವುದನ್ನು ರಮೇಶ್‌ ಚೌಹಾಣ್‌ ಮೊದಲಿನಿಂದಲೂ ಗುರುತಿಸಿದ್ದರು. ಈ ವಿಚಾರದಲ್ಲಿ ಮಗಳು ತೋರಿಸುವ ಆಸಕ್ತಿ ಬ್ಯುಸಿನೆಸ್‌ ವಿಚಾರದಲ್ಲಿ ತೋರಿಸುತ್ತಿಲ್ಲ ಎನ್ನುವುದು ತಂದೆಗೆ ಗೊತ್ತಾಗುತ್ತಿತ್ತು. ಅದಕ್ಕಾಗಿ ಮಗಳಿಗೆ ಅವರ ಆಸೆಯಂತೆ ಬದುಕಲು ಬಿಟ್ಟು ಲಾಭದಾಯಕವಾಗಿದ್ದ ಬಹುಕೋಟಿಯ ಉದ್ಯಮವನ್ನು ಟಾಟಾಗೆ ಮಾರಾಟ ಮಾಡಲು ನಿರ್ಧಾರ ಮಾಡಿದ್ದಾರೆ.