ತಮ್ಮದೇ ಬ್ಯೂಟಿ ಪ್ರೊಡಕ್ಟ್ಸ್ ಇರೋ ಕೃತಿ ಸನೂನ್ ಮಾತ್ರ ಬಳಸೋದು ಕೊಬ್ಬರಿಯಣ್ಣೆಯಂತೆ!
ಸುಂದರ, ಶೈನಿಂಗ್ ಕೂದಲಿಗೆ ನಟಿ ಕೃತಿ ಸನೋನ್ ಕೊಬ್ಬರಿ ಎಣ್ಣೆಯ ನೈಸರ್ಗಿಕ ಟಿಪ್ಸ್ ಕೊಟ್ಟಿದ್ದಾರೆ. ಕೂದಲ ಸ್ವಭಾವಕ್ಕೆ ತಕ್ಕಂತೆ ಅದರ ಉಪಯೋಗ ಮಾಡುವ ಬಗೆಯನ್ನು ನಟಿ ಹೇಳಿದ್ದಾರೆ.
ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಫಿಟ್ ನಟಿಯರಲ್ಲಿ ಒಬ್ಬರು. ತಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳುವ ನಟಿ, ಆಗಾಗ್ಗೆ ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಗಳನ್ನೂ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಸೌಂದರ್ಯದ ಗುಟ್ಟು, ಫಿಟ್ನೆಸ್ ಗುಟ್ಟುಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಅಂದರೆ ಇದೇ 27ರಂದು ನಟಿ ಕೃತಿ 33ನೇ ವರ್ಷಕ್ಕೆ ಕಾಲಿಟ್ಟರು. ಈ ಸಮಯದಲ್ಲಿ ಅವರು ತಮ್ಮದೇ ಸೌಂದರ್ಯ ಬ್ರಾಂಡ್ ಹೈಫನ್ ಅನಾವರಣಗೊಳಿಸಿದ್ದಾರೆ. ಅದರ ವಿಡಿಯೋ ಅನ್ನು ಶೇರ್ ಮಾಡಿಕೊಂಡಿದ್ದರು. ತಮ್ಮ ನಿರ್ಮಾಣ ಸಂಸ್ಥೆಯಾದ ಬ್ಲೂ ಬಟರ್‌ಫ್ಲೈ ಫಿಲ್ಮ್ಸ್ ಅನ್ನು ಪ್ರಾರಂಭಿಸಿರೋ ನಟಿ, ಈ ಬಗ್ಗೆ ಹುಟ್ಟುಹಬ್ಬದ ದಿನ ಇನ್ಸ್ಟಾಗ್ರಾಮ್ನಲ್ಲಿ ವಿವರಿಸಿದ್ದರು. ಈ ಮೂಲಕ ತಮ್ಮದೇ ಬ್ರಾಂಡ್ನ ಮೊದಲ ಜಾಹೀರಾತನ್ನು ಶೇರ್ ಮಾಡಿಕೊಂಡಿದ್ದರು.
ಇಷ್ಟೆಲ್ಲಾ ತಮ್ಮ ಸೌಂದರ್ಯದ ಪ್ರಾಡಕ್ಟ್ ಬಗ್ಗೆ ಹೇಳಿಕೊಂಡಿದ್ದ ನಟಿ, ಈಗ ಈ ಕೆಮಿಕಲ್ಸ್ಗಿಂತ ನೈಸರ್ಗಿಕವಾಗಿರುವ ಪ್ರಾಡಕ್ಟ್ಗಳೇ ಶ್ರೇಷ್ಠ ಎನ್ನುವಂಥ ಹೇಳಿಕೆಯೊಂದನ್ನು ನೀಡಿದ್ದಾರೆ. ನೇರವಾಗಿ ಅವರು ಈ ಮಾತನ್ನು ಹೇಳದಿದ್ದರೂ, ಇದೀಗ ಅವರು ಕೊಬ್ಬರಿ ಎಣ್ಣೆಯ ಮಹತ್ವವನ್ನು ಸಾರುವ ಸಂದೇಶ ನೀಡಿದ್ದಾರೆ. ತಮ್ಮದೇ ಬ್ಯೂಟಿ ಪ್ರೊಡಕ್ಟ್ಸ್ ಏನೇ ಮಾಡಿದರೂ ಅಜ್ಜಿ ಮದ್ದೇ ಸೌಂದರ್ಯದ ಸೀಕ್ರೆಟ್ (beaty Secret) ಎನ್ನುವ ರೀತಿಯಲ್ಲಿ ಅವರು ಕೊಬ್ಬರಿ ಎಣ್ಣೆಯ ಮಹತ್ವವನ್ನು ಸಾರಿದ್ದಾರೆ. ಕೊಬ್ಬರಿ ಎಣ್ಣೆಯನ್ನು ತಲೆಗೂದಲಿಗೆ ಹೇಗೆ ಬಳಸಬೇಕು, ಅದನ್ನು ತಯಾರಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.
ಇಷ್ಟು ಫಿಟ್ ಆಗಿರೋ ಕೃತಿ ಸನೋನ್ ಹೊಟ್ಟೆಗೇನು ತಿಂತಾರೆ?
ಅಷ್ಟಕ್ಕೂ ನಟಿ ಹೇಳಿರುವುದೇನು ಎಂದು ನೋಡೋಣ:
ಒಣ ಕೂದಲಿಗೆ ತೆಂಗಿನೆಣ್ಣೆ, ಜೇನುತುಪ್ಪ ಮತ್ತು ಮೊಟ್ಟೆಯ ಮಾಸ್ಕ್
ಹವಾಮಾನ ಬದಲಾವಣೆಯಿಂದ ಕೂದಲು ಒಣಗುವಂತೆ ಆಗಿದ್ದರೆ ಕೊಬ್ಬರಿ ಎಣ್ಣೆಯನ್ನು ಹೀಗೆ ಉಪಯೋಗಿಸಬೇಕು: 2 ಚಮಚ ತೆಂಗಿನ ಎಣ್ಣೆಯನ್ನು ಒಲೆಯ ಮೇಲೆ ಅಥವಾ ಮೈಕ್ರೊವೇವ್‌ನಲ್ಲಿ ಕರಗಿಸಿ. ಪ್ರತ್ಯೇಕ ಬಟ್ಟಲಿನಲ್ಲಿ ಮೊಟ್ಟೆಯನ್ನು ಬೀಟ್ ಮಾಡಿ, ನಂತರ ಮೊಟ್ಟೆಯನ್ನು ತುಸು ಬಿಸಿಮಾಡಿದ ತೆಂಗಿನ ಎಣ್ಣೆಯೊಂದಿಗೆ ಸೇರಿಸಿ. 1 ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಮಿಶ್ರಣವು (Mixure) ಸ್ಥಿರವಾಗುವವರೆಗೆ ಮತ್ತೆ ಬೀಟ್ ಮಾಡಿ. ಸ್ವಚ್ಛವಾದ, ಒದ್ದೆಯಾದ ಕೂದಲನ್ನು ಭಾಗಗಳಾಗಿ ವಿಂಗಡಿಸಿದ ನಂತರ, ಕೂದಲಿನ ಬೇರುಗಳಿಂದ ತುದಿಯವರೆಗೆ ಪ್ರತಿ ವಿಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಪ್ರತಿ ವಿಭಾಗಕ್ಕೂ ಇದು ಸರಿಪ್ರಮಾಣದಲ್ಲಿ ಲೇಪನ ಮಾಡಿಕೊಳ್ಳಿ. ಕೂದಲನ್ನು ಶವರ್ ಕ್ಯಾಪ್, ಟಿ-ಶರ್ಟ್ ಅಥವಾ ಟವೆಲ್‌ನಲ್ಲಿ 30 ನಿಮಿಷಗಳ ಕಾಲ ಕಟ್ಟಿಕೊಳ್ಳಿ. ನಂತರ ಶಾಂಪೂಗಳಿಂದ ಚೆನ್ನಾಗಿ ನೀರು ಹಾಕಿ ತೊಳೆಯಿರಿ.
ಮಂದ ಕೂದಲಿಗೆ ತೆಂಗಿನೆಣ್ಣೆ ಮತ್ತು ಆಪಲ್ ಸೈಡರ್ ವಿನೆಗರ್ ಮಾಸ್ಕ್
ಕೂದಲು ತೇವಾಂಶದಿಂದ ಕೂಡಿದ್ದರೆ ತೆಂಗಿನ ಎಣ್ಣೆ (Coconut Oil) ಉತ್ತಮ ಔಷಧ. ಇದರ ಹೊರತಾಗಿ ಆಪಲ್ ಸೈಡರ್ ವಿನೆಗರ್ ಕೂಡ ಒಳ್ಳೆಯ ಪೋಷಕಾಂಶ ಒದಗಿಸುತ್ತದೆ. ಈ ಡಬಲ್-ಬೆನಿಫಿಟ್ ಹೇರ್ ಮಾಸ್ಕ್ ಮಾಡಲು, ತೆಂಗಿನ ಎಣ್ಣೆಯನ್ನು ಕರಗಿಸಿ ಮತ್ತು ಅದನ್ನು 1 ಚಮಚ ಆಪಲ್ ಸೈಡರ್ ವಿನೆಗರ್ ನೊಂದಿಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಒದ್ದೆಯಾಗಿರುವ ಕೂದಲನ್ನು ವಿಭಾಗಗಳಾಗಿ ಕತ್ತರಿಸಿ, ಪ್ರತಿ ವಿಭಾಗಕ್ಕೂ ಸರಿಪ್ರಮಾಣದಲ್ಲಿ ಬುಡದಿಂದ ತುದಿಯವರೆಗೆ ಸಮನಾಗಿ ಈ ಮಿಶ್ರಣವನ್ನು ಲೇಪನ ಮಾಡಿಕೊಳ್ಳಿ. 15 ರಿಂದ 20 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ನಿಮ್ಮ ದಿನನಿತ್ಯದ ಶಾಂಪೂ ಮತ್ತು ಕಂಡಿಷನರ್ ಬಳಿಕ ವಾಷ್ ಮಾಡಿ.
ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುತ್ತೆ ಅನ್ನೋದು ನಿಜಾನ?
ಕರ್ಲಿ ಅಥವಾ ಫ್ರಿಜ್ಜಿ ಕೂದಲಿಗೆ ಬಾಳೆಹಣ್ಣು ಅಥವಾ ಆವಕಾಡೊ ಮಾಸ್ಕ್ ಜೊತೆಗೆ ತೆಂಗಿನೆಣ್ಣೆ
ಕೂದಲು ತುಂಬಾ ಕರ್ಲಿ ಆಗಿದ್ದರೆ ಆವಕಾಡೊ ಮತ್ತು ಬಾಳೆಹಣ್ಣಿನ ಸಂಯೋಜನೆಯು ಉತ್ತಮ ಔಷಧವಾಗಿದೆ. ಇದರ ಮಿಶ್ರಣವನ್ನು ತಯಾರಿಸಲು, 1 ಮಾಗಿದ ಬಾಳೆಹಣ್ಣು ಮತ್ತು 1 ಮಾಗಿದ ಆವಕಾಡೊವನ್ನು ನಯವಾದ ಪೇಸ್ಟ್ ರೂಪುಗೊಳ್ಳುವವರೆಗೆ ಮ್ಯಾಶ್ ಮಾಡಿ. ನಂತರ, ಮಿಶ್ರಣಕ್ಕೆ 2 ಚಮಚ ಜೇನುತುಪ್ಪ ಮತ್ತು 1 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸ್ವಚ್ಛವಾದ, ಒದ್ದೆಯಾದ ಕೂದಲನ್ನು ಭಾಗಗಳಾಗಿ ವಿಂಗಡಿಸಿದ ನಂತರ, ಕೂದಲಿನ ಬುಡದಿಂದ ತುದಿಯವರೆಗೆ ಪ್ರತಿ ವಿಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಪ್ರತಿ ವಿಭಾಗವನ್ನು ಸಮವಾಗಿ ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನಂತರ ನಿಮ್ಮ ಕೂದಲನ್ನು 30 ನಿಮಿಷಗಳ ಕಾಲ ಶವರ್ ಕ್ಯಾಪ್ ಅಥವಾ ಟವೆಲ್‌ನಲ್ಲಿ ಸುತ್ತಿ, ನಂತರ ತೊಳೆಯಿರಿ. ಜೇನುತುಪ್ಪವು (Honey) ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಏಕೆಂದರೆ ಇದು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ತಲೆಹೊಟ್ಟು ಮತ್ತು ಇತರ ನೆತ್ತಿಯ ಸ್ಥಿತಿಯನ್ನು ತಡೆಯಲು ಸಹಾಯ ಮಾಡುತ್ತದೆ.