Intimate Health: ಮುಟ್ಟಿನ ಸಮಯದಲ್ಲಿ ದದ್ದು ಬೆವರು ಕಾಣಿಸಿಕೊಳ್ತಿದ್ರೆ ಪ್ಯಾಡ್ ಬದಲಿಸಿ
ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳೋದು ಸಾಮಾನ್ಯ. ಅದ್ರ ಜೊತೆ ತುರಿಕೆ, ಉರಿ ಕಾಣಿಸಿಕೊಳ್ತಿದ್ದರೆ ಇದು ನಿಮ್ಮ ಯೋನಿ ಆರೋಗ್ಯ ಹಾಳುಮಾಡುತ್ತೆ. ನಿಮಗೂ ಈ ಸಮಸ್ಯೆಯಿದ್ರೆ ಮೊದಲೇ ಎಚ್ಚೆತ್ತುಕೊಳ್ಳಿ. ಬಳಸ್ತಿರುವ ಪ್ಯಾಡ್ ಪರೀಕ್ಷಿಸಿ.
ಯೋನಿ ಆರೋಗ್ಯದ ಬಗ್ಗೆ ಮಹಿಳೆ ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ. ಇದು ಆಕೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯಕರ ಸಂತಾನೋತ್ಪತ್ತಿಗೆ ಮುಟ್ಟಿನ ಸಮಯದಲ್ಲಿ ಮಹಿಳೆ ಕಾಪಾಡಿಕೊಳ್ಳುವ ನೈರ್ಮಲ್ಯವೂ ಮಹತ್ವ ಪಡೆಯುತ್ತದೆ. ಮುಟ್ಟಿನ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಮಾಡದಂತೆ ತಜ್ಞರು ಸಲಹೆ ನೀಡ್ತಾರೆ. ಹಾಗೆಯೇ ನೀವು ಯಾವ ಪ್ಯಾಡ್ ಧರಿಸುತ್ತೀರಿ ಎಂಬುದು ಕೂಡ ಯೋನಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮುಟ್ಟಿ (Period ) ನ ಸಮಯದಲ್ಲಿ ಪ್ಯಾಡ್ (Pad) ಧರಿಸುವ ಮಹಿಳೆಯರು ಹೆಚ್ಚು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಕಡಿಮೆ ಬೆಲೆಯಲ್ಲಿ ಸಿಗುತ್ತೆ ಎನ್ನುವ ಕಾರಣಕ್ಕೆ ಅಥವಾ ಆತುರದಲ್ಲಿ ಯಾವುದೋ ಪ್ಯಾಡ್ ಧರಿಸಿದ್ರೆ ಯೋನಿ (Vagina) ಸುತ್ತಮುತ್ತ ದುದ್ದು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇದು ಯೋನಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪ್ಯಾಡ್ ಗಳನ್ನು ಖರೀದಿಸುವಾಗ ನಾವು ಅನೇಕ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುವ ಮೊದಲು ಏನೇಲ್ಲ ನೆನಪಿಟ್ಟುಕೊಳ್ಳಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
Intimate Health: ಒಳ ಉಡುಪಿಗೆ ಗುಡ್ ಬೈ ಯಾವಾಗ ಹೇಳಬೇಕು?
ಪ್ಯಾಡ್ ಖರೀದಿ ವೇಳೆ ಈ ವಿಷ್ಯ ನೆನಪಿಟ್ಟುಕೊಳ್ಳಿ :
ಬ್ಲೀಡಿಂಗ್ : ಪ್ಯಾಡ್ ಖರೀದಿ ಮಾಡುವ ವೇಳೆ ನೀವು ನಿಮ್ಮ ದೇಹದ ಗಾತ್ರ ಮತ್ತು ಬ್ಲೀಡಿಂಗ್ ಬಗ್ಗೆಯೂ ಗಮನಹರಿಸಿ. ಹೆಚ್ಚು ರಕ್ತ ಸ್ರಾವವಾಗ್ತಿದ್ದರೆ ಅದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಪ್ಯಾಡ್ ಖರೀದಿ ಮಾಡಿ. ಕಡಿಮೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಪ್ಯಾಡ್ ಬಳಸಿದ್ರೆ ನೀವು ಪದೇ ಪದೇ ಪ್ಯಾಡ್ ಬದಲಿಸಬೇಕಾಗುತ್ತದೆ. ಹೆಚ್ಚು ಬ್ಲೀಡಿಂಗ್ ಆಗುವ ದಿನ ಬೇರೆ ಪ್ಯಾಡ್ ಹಾಗೂ ಕಡಿಮೆ ರಕ್ತಸ್ರಾವವಾಗುವ ದಿನ ಬೇರೆ ಗಾತ್ರದ ಪ್ಯಾಡ್ ಧರಿಸೋದು ಉತ್ತಮ.
ಉಸಿರಾಡುವ ಸಾಮರ್ಥ್ಯ : ಹತ್ತಿ ಮತ್ತು ಪ್ಲಾಸ್ಟಿಕ್‌ನಿಂದ ಮಾಡಿದ ಪ್ಯಾಡ್‌ಗಳು ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿವೆ. ಮುಟ್ಟಿನ ಸಮಯದಲ್ಲಿ ಪ್ಯಾಡ್ ಖರೀದಿ ಮಾಡುವ ವೇಳೆ ನೀವು ನಿಮಗೆ ಹಿತವೆನ್ನಿಸುವ ಪ್ಯಾಡ್ ಗೆ ಆದ್ಯತೆ ನೀಡ್ಬೇಕು. ಪ್ಯಾಡ್ ನಲ್ಲಿರುವ ವಸ್ತುವಿನಲ್ಲಿ ಗಾಳಿ ಆಡುವಂತಿರಬೇಕು. ಚರ್ಮಕ್ಕೆ ಗಾಳಿಯಾಡಲು ಅವಕಾಶವಿಲ್ಲದೆ ಹೋದ್ರೆ ಚರ್ಮದ ಸೋಂಕು ಕಾಡಲು ಶುರುವಾಗುತ್ತದೆ. ಬೇಸಿಗೆಯಲ್ಲಿ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
Intimate Health : ಬೇಸಿಗೆಯಲ್ಲಿ ಪ್ಯುಬಿಕ್ ಹೇರ್ ತೆಗೆಯೋದು ಹೇಗೆ?
ಪ್ಯಾಡ್ ಗಾತ್ರ : ಆರಂಭದ ಎರಡು ದಿನ ರಕ್ತ ಸ್ರಾವ ಹೆಚ್ಚಾಗಿರುವ ಕಾರಣ ನೀವು, ಪ್ಯಾಡ್ ಖರೀದಿ ವೇಳೆ ಗಾತ್ರವನ್ನು ಗಮನಿಸಿ. ಹಗಲು ರಾತ್ರಿಯನ್ನು ಗಮನದಲ್ಲಿಟ್ಟುಕೊಂಡು ಪ್ಯಾಡ್ ಆಯ್ಕೆ ಮಾಡಿ. ಹಗಲಿನಲ್ಲಿ 17 ಸೆಂ.ಮೀ ನಿಂದ 25 ಸೆಂ.ಮೀ ಪ್ಯಾಡ್ ಅನ್ನು ಬಳಸಬಹುದು. ರಾತ್ರಿಯಲ್ಲಿ ದೊಡ್ಡ ಗಾತ್ರದ ಪ್ಯಾಡ್ ಅನ್ನು ಬಳಸಿ. ರಾತ್ರಿ ನಿದ್ರೆಯಲ್ಲಿ ಹೊರಳಾಡುವ ಕಾರಣ ನಿಮ್ಮ ಪ್ಯಾಡ್ ಗಾತ್ರ ಚಿಕ್ಕದಿದ್ದರೆ ಸೈಡ್ ಲೀಕೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಹೀರಿಕೊಳ್ಳುವ ಸಾಮರ್ಥ್ಯ : ಪ್ಯಾಡ್ ಖರೀದಿ ಮಾಡುವ ವೇಳೆ ಪ್ಯಾಡ್ ಹೀರಿಕೊಳ್ಳುವ ಸಾಮರ್ಥ್ಯವನ್ನು ಗಮನಿಸಬೇಕು. ಸಾಮರ್ಥ್ಯ ಕಡಿಮೆ ಇದ್ರೆ ನೀವು ಎದ್ದು ನಿಂತಾಗ ರಕ್ತ ಸೋರುವ ಸಾಧ್ಯತೆಯಿರುತ್ತದೆ.
ಚರ್ಮದ ಆರೋಗ್ಯ : ಎಲ್ಲರ ಚರ್ಮವೂ ಭಿನ್ನವಾಗಿರುತ್ತದೆ. ಕೆಲವರಿಗೆ ಅಲರ್ಜಿ ಎನ್ನಿಸುವ ವಸ್ತು ಇನ್ನೊಬ್ಬರಿಗೆ ಸರಿಯಾಗಬಹುದು. ಪ್ಯಾಡ್ ಬಳಸಿದ ನಂತ್ರ ತುರಿಕೆ, ದುದ್ದು, ಕೆಂಪು ಕಲೆಗಳು ಕಾಣಿಸಿಕೊಂಡ್ರೆ ಆ ಪ್ಯಾಡ್ ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವುದಿಲ್ಲ ಎಂದರ್ಥ. ಹಾಗಾಗಿ ಪ್ಯಾಡ್ ಬದಲಿಸಿ. ನಿಮ್ಮ ಚರ್ಮಕ್ಕೆ ಯೋಗ್ಯವೆನ್ನಿಸುವ ಪ್ಯಾಡ್ ಖರೀದಿ ಮಾಡಿ.
ಈ ಬಗ್ಗೆಯೂ ಇರಲಿ ಗಮನ : ಯೋನಿ ಆರೋಗ್ಯಕ್ಕಾಗಿ ನೀವು ಆಗಾಗ ಪ್ಯಾಡ್ ಬದಲಿಸಬೇಕು. 8 ಗಂಟೆಗಿಂತ ಹೆಚ್ಚು ಸಮಯ ಒಂದೇ ಪ್ಯಾಡ್ ಧರಿಸಿ ಇರಬಾರದು. ರಾತ್ರಿ ಮಲಗುವ ಮುನ್ನ ಪ್ಯಾಡ್ ಬದಲಿಸಲು ಮರೆಯಬಾರದು. ಮುಟ್ಟಿನ ಸಮಯದಲ್ಲಿ ಯೋನಿಯ ಸ್ವಚ್ಛತೆಗೆ ಹೆಚ್ಚುವರಿ ಗಮನ ನೀಡಬೇಕು.