ಮ್ಯಾಚ್‌ಮೇಕರ್ ಒಬ್ಬರು ತಮಗಾದ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ. ವರ್ಷಕ್ಕೆ 11 ಲಕ್ಷ ದುಡಿಯುವ ಯುವತಿಯೊಬ್ಬಳು, ತನಗಿಂತ ಹಲವು ಪಟ್ಟು ಹೆಚ್ಚು ಆದಾಯವಿರುವ ವರ ಬೇಕೆಂದು ಪಟ್ಟು ಹಿಡಿದಿದ್ದಳು. ಈ ಅತಿಯಾಸೆಯ ಬೇಡಿಕೆಯಿಂದಾಗಿ ಮ್ಯಾಚ್‌ಮೇಕಿಂಗ್ ಸಂಸ್ಥೆಯು ಆಕೆಯನ್ನು  ಬ್ಯಾನ್ ಮಾಡಿದೆ.

ಹುಡುಗನಿಗೆ ಹುಡುಗಿನೇ ಸಿಕ್ತಾ ಇಲ್ಲ ಕಣ್ರೀ ಎಂದು ಎಷ್ಟೋ ಅಪ್ಪ-ಅಮ್ಮ ಗೋಳಾಡ್ತಿದ್ರೆ, ಅದೇ ಇನ್ನೊಂದೆಡೆ, ಹುಡುಗಿಗೆ ಹುಡುಗನೇ ಸಿಕ್ತಾ ಇಲ್ಲ ಎನ್ನೋದು ಮಗಳ ಅಪ್ಪ-ಅಮ್ಮನ ನೋವು. ಹಾಗಿದ್ರೆ ಹುಡುಗಿನೂ ಇದ್ದಾಳೆ, ಹುಡುಗನೂ ಇದ್ದಾನೆ. ಆದ್ರೆ ಯಾಕೆ ಮದ್ವೆಯಾಗ್ತಿಲ್ಲ ಎನ್ನೋ ಪ್ರಶ್ನೆ ಬಂದರೆ ಅಲ್ಲಿ ಜಾತಿ, ಕುಲ, ಗೋತ್ರ, ಪ್ರಸಾದ, ಜಾತಕ ಎಲ್ಲಕ್ಕಿಂತಲೂ ಮುಖ್ಯವಾಗಿ ಎದುರಾಗೋದು ಆದಾಯ ಎನ್ನುವುದು ಅಧ್ಯಯನದಿಂದ ಕೂಡ ತಿಳಿದುಬಂದಿದೆ. ಅದರಲ್ಲಿಯೂ ಹೆಚ್ಚಾಗಿ ಈಗಿನ ಹೆಣ್ಣುಮಕ್ಕಳ ಡಿಮಾಂಡ್​ ಕೇಳಿದ್ರೆ ಹುಡುಗನ ಕಡೆಯೋದು ಸುಸ್ತಾಗಿ ಹೋಗ್ತಾರೆ ಎನ್ನುವ ಮಾತು ಬಹಳ ಚಾಲ್ತಿಯಲ್ಲಿದೆ. ಲಕ್ಷ ಲಕ್ಷ ಎಂದರೆ ಅಲಕ್ಷ್ಯ ಆಗಿಬಿಟ್ಟಿದೆ ಹೆಚ್ಚಿನ ಹುಡುಗಿಯರಿಗೆ. ತಾವು ದುಡಿಯುತ್ತಿರಲಿ, ದುಡಿಯದೇ ಇರಲಿ. ಹುಡುಗ ಮಾತ್ರ ಸಕತ್​ ರಿಚ್​ ಆಗಿರಬೇಕು, ಅದು ಇರಬೇಕು, ಇದು ಇರಬೇಕು... ಹೀಗೆ ಬೇಕು ಬೇಕುಗಳ ದೊಡ್ಡ ಡಿಮಾಂಡ್​ ಇಡುವುದರಿಂದ ಇಬ್ಬರಿಗೂ ಮದುವೆಯಾಗುತ್ತಿಲ್ಲ ಎನ್ನುವ ಬಹುದೊಡ್ಡ ಆರೋಪ ಕೇಳಿಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನುಭವ ಹಂಚಿಕೊಂಡ ಮ್ಯಾಚ್​ ಮೇಕರ್​

ಅದರ ನಡುವೆಯೇ, ಇದೀಗ ಮ್ಯಾಚ್​ಮೇಕರ್​ ಒಬ್ಬರು ತಮಗಾಗಿರುವ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ. ದಿ ಡೇಟ್ ಕ್ರೂನ ಸಂಸ್ಥಾಪಕಿ ಓಂಡ್ರಿಲಾ ಕಪೂರ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. 28 ವರ್ಷದ ಯುವತಿ, ಬಂಗಾಳಿ ಬ್ರಾಹ್ಮಣ ಸಮುದಾಯದವಳನ್ನು ನಾವು ಬ್ಯಾನ್​ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. 'ಈಕೆಯ ಅಪ್ಪ-ಅಮ್ಮ ನಮಗೆ ಹುಡುಗಿಯ ಜಾತಕ ಕೊಟ್ಟರು. ಅದರಲ್ಲಿ ಅವಳು ವರ್ಷಕ್ಕೆ 11 ಲಕ್ಷ ದುಡಿಯುವುದಾಗಿ ತಿಳಿಸಲಾಗಿತ್ತು. ಮೊದಲಿಗೆ ಹುಡುಗ ತಮ್ಮದೇ ಜಾತಿಯವನಾಗಿರಬೇಕು ಎಂದು ಸ್ಟ್ರಿಕ್ಟ್​ ಆಗಿ ಹೇಳಿದ್ದರು, ಜೊತೆಗೆ ಆತನ ಆದಾಯ 25–50 ಲಕ್ಷ ರೂ. ಇದ್ದರೆ ಸಾಕು ಎಂದು ತಿಳಿಸಲಾಗಿತ್ತು (ಅಂದರೆ ತಿಂಗಳಿಗೆ ಸುಮಾರು 4 ಲಕ್ಷ ರೂ!). ನಾವು ಅವರ ಅನುಕೂಲಕ್ಕೆ ತಕ್ಕಂತೆ ಅವರದ್ದೇ ಜಾತಿಯ ಹಲವರ ಜಾತಕವನ್ನು ತೋರಿಸಿದರೂ, ಅವರು ರಿಜೆಕ್ಟ್​ ಮಾಡುತ್ತಲೇ ಬಂದರು. ನಮಗೆ ತುಂಬಾ ಅಚ್ಚರಿಯಾಯಿತು ಎಂದು ವಿವರಿಸಿದ್ದಾರೆ ಓಂಡ್ರಿಲಾ ಕಪೂರ್.

ಸಂದೇಹ ಬಂದು ಪರೀಕ್ಷೆ

'ಕೊನೆಗೆ ನಮಗೆ ಸಂದೇಹ ಬಂದು, ನಿಮಗೆ ಯಾವ ರೀತಿಯ ಹುಡುಗ ಇಷ್ಟ ಎನ್ನುವ ಒಂದಿಷ್ಟು ಪ್ರೊಫೈಲ್​ ಕಳುಹಿಸಿ ಎಂದು ಕೇಳಿದಾಗ, ಅವರು ಕಳುಹಿಸಿದ್ದು ನೋಡಿ ನಮಗೆ ಶಾಕ್​ ಆಗಿ ಹೋಯ್ತು. ಏಕೆಂದರೆ, ಅವರು ಕಳುಹಿಸಿದ್ದವರ ಸಂಬಳ ಎಲ್ಲವೂ ಒಂದು ಕೋಟಿ ರೂಪಾಯಿ ಮೀರಿತ್ತು. ಇದನ್ನು ನೋಡಿ ನಮ್ಮ ಸಂದೇಹ ನಿಜವಾಗಿ, ಮೊದಲಿಗೆ ಹುಡುಗಿಯ ಬಳಿ ಮಾತನಾಡಿದೆವು. ನಿಮಗೆ ಇಷ್ಟು ದುಡಿಯುವವನು ಬೇಕಾ ಎಂದಾಗ, ಆಕೆ ಹಾಗೇನೂ ಇಲ್ಲ. ಇವರೆಲ್ಲರೂ ಸಕತ್​ ಸ್ಮಾರ್ಟ್​ ಇದ್ದಾರೆ. ನೋಡಲು ಅಟ್ರ್ಯಾಕ್ಟಿವ್​ ಇದ್ದಾರೆ ಎಂದಳು' ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಸಂಸ್ಥಾಪಕಿ.

ಒಂದು ಕೋಟಿಯ ಜಾತಿ ಹುಡುಗ

ಕೊನೆಗೆ ಅಪ್ಪ-ಅಮ್ಮನ ಬಳಿ ಮಾತನಾಡಿ ಬೇರೆ ಜಾತಿಯವರು ಓಕೆನಾ ಎಂದು ಪ್ರಶ್ನಿಸಿದಾಗ, ಅವರು ಇಲ್ಲ ನಮಗೆ ನಮ್ಮದೇ ಸಮುದಾಯದ ಹುಡುಗ ಬೇಕು ಎಂದರು. ಬಳಿಕ ಅವರ ಬಳಿ ಮಾತನಾಡಿದಾಗ ಅವರಿಗೂ ತಮ್ಮದೇ ಜಾತಿಯ ಒಂದು ಕೋಟಿ ದುಡಿಯುವ ಹುಡುಗ ಬೇಕು ಎನ್ನುವುದು ಸ್ಪಷ್ಟವಾಯಿತು. ಇದು ನಮಗೆ ತುಂಬಾ ಆಶ್ಚರ್ಯ ಉಂಟುಮಾಡಿತು ಎಂದಿರುವ ಓಂಡ್ರಿಲಾ ಕಪೂರ್, ಇಂಥ ಅತಿಯಾಸೆಯನ್ನು ಇಟ್ಟುಕೊಂಡವರನ್ನು ನಮ್ಮ ಮ್ಯಾಚ್​ ಮೇಕಿಂಗ್​ನಿಂದ ಬ್ಯಾನ್​ ಮಾಡಿದ್ವಿ ಎಂದು ಹೇಳಿದ್ದಾರೆ.

ಕಮೆಂಟಿಗರು ಏನಂದ್ರು?

ಅದಕ್ಕೂ ಮೊದಲು ಇವರು ಕೊಟ್ಟಿರುವ ಹುಡುಗರನ್ನೂ ನಾವು ಕಾಂಟ್ಯಾಕ್ಟ್​ ಮಾಡಿದ್ವಿ. ಅವರದ್ದೇ ಜಾತಿಯ, ಒಂದು ಕೋಟಿ ರೂಪಾಯಿ ದುಡಿಯುವವರನ್ನೂ ಕೇಳಿದ್ವಿ. ಆದರೆ, ಹೆಣ್ಣಿನ ಕಡೆಯವರು ಅತಿ ಆಸೆಬುರಕರು ಎಂದು ಅವರಿಗೆ ತಿಳಿದಿದ್ದರಿಂದ ಅವರಲ್ಲಿ ಒಬ್ಬರೂ ಇದನ್ನು ಒಪ್ಪಲಿಲ್ಲ ಎಂದಿದ್ದಾರೆ. (ಅಷ್ಟಕ್ಕೂ ಅವರಿಗೆ ಎಷ್ಟು ದುಡಿಯುವ ಹೆಣ್ಣು ಬೇಕಿತ್ತೋ ಗೊತ್ತಿಲ್ಲ ಬಿಡಿ!). ಇದರ ಬಗ್ಗೆ ಶೇರ್​ ಮಾಡುತ್ತಲೇ ಕಮೆಂಟ್​ಗಳ ಸುರಿಮಳೆಯಾಗುತ್ತಿದ್ದು, ಹೆಣ್ಣಿನ ಕಡೆಯವರ ಡಿಮಾಂಡ್​ಗಳ ಬಗ್ಗೆ ತಮಗಾಗಿರುವ ಅನುಭವವಗಳನ್ನು ಹಲವರು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅದೇ ವೇಳೆ, ಗಂಡು ಮಕ್ಕಳು ಕೂಡ ಕಡಿಮೆ ಇಲ್ಲ, ಅವರು ಕೂಡ ಇದೇ ರೀತಿಯ ಆಸೆಯನ್ನೇ ಹೊಂದಿರುತ್ತಾರೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇದನ್ನು oendrila.kapoor ಶೇರ್​ ಮಾಡಿಕೊಂಡಿದ್ದಾರೆ.