ಪರಭಾಷೆಯಿಂದ ಬಂದು ಕನ್ನಡವನ್ನು ಅಪ್ಪಿ, ಒಪ್ಪಿ, ಇಂದು ಕನ್ನಡದ ಅಕ್ಷರಗಳಲ್ಲೇ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಿರುವ ಪೂಜಾ ಗಾಂಧಿ ಅವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಯಶ್ ಎಂಬ ಯಶೋಗಾಥೆಗೆ ಪೂಜಾ ಅವರ ಈ ಪತ್ರ ಹೊಸ ಮೆರುಗು ನೀಡಿದೆ!. ಒಮ್ಮೆ ಈ ಪತ್ರ ನೋಡಿ..

ಮಳೆ ಹುಡುಗಿ ಪೂಜಾ ಗಾಂಧಿ ಬರೆದ ಆ ಒಂದು ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು: 'ಮುಂಗಾರು ಮಳೆ' ಸಿನಿಮಾದ ಆ ಮುಗ್ಧ ಹುಡುಗಿ, ಸ್ಯಾಂಡಲ್‌ವುಡ್‌ನ 'ಮಳೆ ಹುಡುಗಿ' ಪೂಜಾ ಗಾಂಧಿ (Pooja Gandhi) ನೆನಪಿದ್ದಾರಲ್ಲ? ಅಂದು ಮಳೆಯ ಹನಿಗಳಂತೆ ಕನ್ನಡಿಗರ ಮನಸ್ಸನ್ನು ತಂಪು ಮಾಡಿದ್ದ ಈ ನಟಿ, ಇಂದು ಪಕ್ಕಾ ಕನ್ನಡಿಗನನ್ನೇ ಮದುವೆಯಾಗಿ ನಮ್ಮ ನಾಡಿನ ಹೆಮ್ಮೆಯ ಸೊಸೆಯಾಗಿದ್ದಾರೆ. ಕೇವಲ ನಟಿಯಾಗಿ ಕನ್ನಡಕ್ಕೆ ಬಂದ ಪೂಜಾ, ಇಂದು ಕನ್ನಡ ಭಾಷೆಯನ್ನು ಪ್ರೀತಿಸುವುದು ಮಾತ್ರವಲ್ಲದೆ, ಅಪ್ಪಟ ಕನ್ನಡಿಗರಿಗಿಂತಲೂ ಸೊಗಸಾಗಿ ಕನ್ನಡ ಬರೆಯುವುದನ್ನು ಕಲಿತಿದ್ದಾರೆ.

ಇತ್ತೀಚೆಗೆ ಪೂಜಾ ಗಾಂಧಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಪತ್ರ ಈಗ ಇಡೀ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದೆ. ಅದು ಅವರು ರಾಕಿಂಗ್ ಸ್ಟಾರ್ ಯಶ್ ಅವರ ಸಾಧನೆ ಮತ್ತು ಅವರ ಮುಂಬರುವ 'ಟಾಕ್ಸಿಕ್' ಸಿನಿಮಾದ ಬಗ್ಗೆ ಬರೆದ ಪ್ರೀತಿಯ ಪತ್ರ!

ಪೂಜಾ ಗಾಂಧಿ ಬರೆದ ಆ ಪತ್ರದಲ್ಲೇನಿದೆ? ರಾಕಿಂಗ್ ಸ್ಟಾರ್ ಯಶ್ ಬಗ್ಗೆ ‘ಮುಂಗಾರು ಮಳೆ’ ಸುಂದರಿ ಹೇಳಿದ್ದೇನು ಗೊತ್ತಾ?

ಪೂಜಾ ಅವರು ಯಶ್ ಅವರ ಏಳಿಗೆಯನ್ನು ಕಂಡು ತುಂಬು ಹೃದಯದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಯಶಸ್ಸಿಗಿಂತ ಸಂಕಲ್ಪವೇ ಮುಖ್ಯ ಎನ್ನುವಾಗ, ಅದನ್ನು 'ಯಶ್' ಎಂದು ಕರೆಯಬಹುದು" ಎಂದು ಬರೆಯುವ ಮೂಲಕ ಯಶ್ ಅವರ ದೃಢ ನಿರ್ಧಾರವನ್ನು ಕೊಂಡಾಡಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಕನಸು ಹೊತ್ತು ಬಂದ ಒಬ್ಬ ಸಾಮಾನ್ಯ ಯುವಕ, ಇಂದು ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಸಾಮಾನ್ಯ ಮಾತಲ್ಲ.

ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ಉಪೇಂದ್ರ, ಸುದೀಪ್ ಹಾಗೂ ದರ್ಶನ್ ಅವರಂತಹ ಮಹಾನ್ ಕಲಾವಿದರ ಪರಂಪರೆಯನ್ನು ಯಶ್ ಇಂದು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಪೂಜಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. "ಹಿಂದೆ ನಾನು ಯಶ್ ಅವರ ಪ್ರೇಮಭರಿತ ಮತ್ತು ಹಾಸ್ಯಮಯ ಚಿತ್ರಗಳ ಅಭಿಮಾನಿಯಾಗಿದ್ದೆ. ಆದರೆ ಇಂದು ಅವರ ಸಾಹಸ ಮತ್ತು ಸಾಧಿಸುವ ಹಂಬಲಕ್ಕೆ ನಾನು ದೊಡ್ಡ ಅಭಿಮಾನಿ" ಎಂದು ಪೂಜಾ ಬರೆದಿದ್ದಾರೆ.

ಟಾಕ್ಸಿಕ್ ಸಿನಿಮಾ ಬಗ್ಗೆ ಪೂಜಾ ಮಾತು:

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಲ್ಪಟ್ಟಿದ್ದರೂ, ಪೂಜಾ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. "ಪರವಾಗಿಲ್ಲ, ಈ ನಿರೀಕ್ಷೆಯೇ ಆ ಸಿನಿಮಾವನ್ನು ಇನ್ನಷ್ಟು ಮಹತ್ತರವಾಗಿಸುತ್ತದೆ. ಅಲ್ಲಿಯವರೆಗೆ ನಾವು ಕಾತುರದಿಂದ ಕಾಯುತ್ತೇವೆ" ಎಂದು ಯಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಫಿದಾ ಆದ ಅಭಿಮಾನಿಗಳು!

ಪೂಜಾ ಗಾಂಧಿ ಅವರ ಈ ಅಪ್ಪಟ ಕನ್ನಡದ ಪತ್ರ ನೋಡಿ ಅಭಿಮಾನಿಗಳು ಅಕ್ಷರಶಃ ಫಿದಾ ಆಗಿದ್ದಾರೆ. ಒಬ್ಬ ಅಭಿಮಾನಿ ಎಮೋಷನಲ್ ಆಗಿ ಕಾಮೆಂಟ್ ಮಾಡುತ್ತಾ, "ಪೂಜಾ ಅವರೇ.. ಇರೋದೇ ಒಂದು ಹೃದಯ, ಮುಂಗಾರು ಮಳೆಯಲ್ಲೇ ಅದನ್ನು ಕದ್ದಿದ್ದೀರಾ.. ಈಗ ಕನ್ನಡ ಮಾತಾಡಿ, ಬರೆಯುತ್ತಿರೋದನ್ನು ನೋಡಿದ್ರೆ ನೀವು ಎಷ್ಟು ಒಳ್ಳೆಯವರು ಅನಿಸುತ್ತೆ!" ಎಂದು ಬರೆದಿದ್ದಾರೆ. ಇನ್ನೊಬ್ಬರು "ನಿಮ್ಮ ಕನ್ನಡದ ಪ್ರೇಮ ಮತ್ತು ಯಶ್ ಅವರ ಬಗ್ಗೆ ನಿಮಗಿರುವ ಗೌರವ ಕಂಡು ಖುಷಿಯಾಯಿತು ಮೇಡಂ" ಎಂದು ಹೊಗಳಿದ್ದಾರೆ.

ಒಟ್ಟಿನಲ್ಲಿ, ಪರಭಾಷೆಯಿಂದ ಬಂದು ಕನ್ನಡವನ್ನು ಅಪ್ಪಿ, ಒಪ್ಪಿ, ಇಂದು ಕನ್ನಡದ ಅಕ್ಷರಗಳಲ್ಲೇ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಿರುವ ಪೂಜಾ ಗಾಂಧಿ ಅವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಯಶ್ ಎಂಬ ಯಶೋಗಾಥೆಗೆ ಪೂಜಾ ಅವರ ಈ ಪತ್ರ ಹೊಸ ಮೆರುಗು ನೀಡಿದೆ!