Asianet Suvarna News Asianet Suvarna News

ಯೋನಿಗೆ ಬಿಸಿ ನೀರು ಬಳಕೆ ಎಷ್ಟು ಸುರಕ್ಷಿತ, ಮಹಿಳೆಯರಿಗೊಂದಿಷ್ಟು ಕಿವಿ ಮಾತು!

ಬಟ್ಟೆಯ ಕೊಳೆ ತೆಗೆಯಲು, ಬ್ಯಾಕ್ಟೀರಿಯಾ ಹೋಗಲಾಡಿಸಲು ಬಿಸಿ ನೀರು ಬಳಸುವಂತೆ ಸಲಹೆ ನೀಡ್ತಾರೆ. ಯೋನಿಯಲ್ಲಿರುವ ಸೋಂಕು ತೆಗೆಯಲೂ ಬಿಸಿ ನೀರು ಕೆಲಸ ಮಾಡುತ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
 

Is It Ok To Use Warm Water For Vagina roo
Author
First Published Jan 6, 2024, 4:20 PM IST | Last Updated Jan 6, 2024, 4:20 PM IST

ದೇಹದ ಇತರ ಭಾಗಗಳಂತೆ ಯೋನಿಯ ಬಗ್ಗೆ ಮುಕ್ತವಾಗಿ ಮಾತನಾಡಲು ಅನೇಕರು ಹಿಂಜರಿಯುತ್ತಾರೆ. ಹಾಗಂತ ಯೋನಿಯ ಆರೋಗ್ಯವನ್ನು ನಿರ್ಲಕ್ಷಿಸುವಂತಿಲ್ಲ. ಯೋನಿಯ ಸೋಂಕಿಗೆ ಒಳಗಾಗುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ನಾವು ಬಳಸುವ ಬಟ್ಟೆ, ಸಾಬೂನು, ಸುಗಂಧ ದ್ರವ್ಯ ಮುಂತಾದವುಗಳು ಕೂಡ ಯೋನಿಗೆ ಹಾನಿಯುಂಟುಮಾಡಬಹುದು. ಹಾಗಾಗಿ ಯಾವ ವಸ್ತುವನ್ನು ಬಳಸಬೇಕಾದರೂ ವಜೈನಾ ಸುರಕ್ಷತೆಯ ಬಗ್ಗೆ ಕಾಳಜಿವಹಿಸಬೇಕು.

ದೇಹಕ್ಕೆ ವಿಪರೀತ ದಣಿವಾದಾಗ, ಕೈ ಕಾಲುಗಳಲ್ಲಿ ನೋವಿದ್ದಾಗ ಅನೇಕ ಮಂದಿ ಬಿಸಿ (Hot) ನೀರಿನ ಬಳಕೆ ಮಾಡುತ್ತಾರೆ. ಬಿಸಿ ನೀರು ದೇಹಕ್ಕೆ ಸೋಕಿದಾಗ ಆಯಾಸ (Tiredness) ನಿವಾರಣೆಯಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಎಲ್ಲರೂ ಬಿಸಿ ನೀರಿನ ಬಳಕೆ ಅಧಿಕವಾಗಿ ಮಾಡುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಬಿಸಿ ನೀರು ಬ್ಯಾಕ್ಟೀರಿಯಾ (Bacteria)  ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ ಎನ್ನುವ ಕಾರಣಕ್ಕೆ ಯೋನಿಯನ್ನು ಸ್ವಚ್ಛಗೊಳಿಸಲು ಬಿಸಿ ನೀರಿನ ಬಳಕೆ ಮಾಡುತ್ತಾರೆ. ಹೀಗೆ ನೀವು ಬಳಸುವ ಬಿಸಿ ನೀರು ಯೋನಿಯ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಗಮನಹರಿಸಬೇಕು.

HEALTH TIPS: ಭಯ ಬಿಡಿ… ನೀವು ಹೀಗಿದ್ರೆ ಹಾರ್ಟ್ ಅಟ್ಯಾಕ್ ಆಗೋ ಚಾನ್ಸೇ ಇರೋಲ್ಲ!

ಯೋನಿಯನ್ನು ಬಿಸಿನೀರಿನಿಂದ ತೊಳೆಯುವುದು ಸುರಕ್ಷಿತವೇ? : ಯೋನಿಯು ನಿರ್ದಿಷ್ಟ ಪಿಎಚ್ ಅನ್ನು ಹೊಂದಿರುತ್ತದೆ. ಇದು ಸ್ವಲ್ಪ ಆಮ್ಲೀಯವಾಗಿರುತ್ತದೆ. ಇದರಿಂದಲೇ ಯೋನಿ ಬ್ಯಾಕ್ಟೀರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಯೋನಿಯ ಚರ್ಮವೂ ಸೂಕ್ಷ್ಮವಾಗಿರುವುದರಿಂದ ನಾವು ಬಿಸಿ ನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಪಿಎಚ್ ಮಟ್ಟದಲ್ಲಿ ಅಸಮತೋಲನ ಉಂಟಾಗಿ ಸೋಂಕಿನ ಅಪಾಯ ಹೆಚ್ಚುತ್ತದೆ. ಚಳಿಗಾಲದಲ್ಲಿ ಹೆಚ್ಚು ಹೊತ್ತು ಬಿಸಿನೀರಿನಿಂದ ಸ್ನಾನ ಮಾಡಿದರೆ ಚರ್ಮದಲ್ಲಿ ಶುಷ್ಕತೆ ಉಂಟಾಗಿ ಎಸ್ಜಿಮಾ ಮತ್ತು ಉರಿಯೂತ ಸಂಭವಿಸುತ್ತದೆ.

ಬಿಸಿ ನೀರಿನ ಬಳಕೆಯಿಂದ ಯೋನಿಗೆ ಏನಾಗುತ್ತೆ ಗೊತ್ತಾ? : ಮಹಿಳೆಯರಿಗೆ ಯೋನಿಯಲ್ಲಿ ಬೆವರು, ಮುಟ್ಟಿನ ಸಮಯ, ಗರ್ಭಧಾರಣೆ, ಋತುಬಂಧ ಹೀಗೆ ಪ್ರತಿಯೊಂದು ಹಂತದಲ್ಲೂ ಯೋನಿಯ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತೀ ಅವಶ್ಯವಾಗಿರುತ್ತದೆ. ಯೋನಿಯ ನೈರ್ಮಲ್ಯ ಕಾಪಾಡಿಕೊಳ್ಳಲು ಯೋನಿಯ ಒಳಭಾಗವನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿದರೆ, ಯೋನಿಯ ಪಿಎಚ್ ಮಟ್ಟ ಬದಲಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಅಸಮತೋಲನವುಂಟಾಗಿ ಬ್ಯಾಕ್ಟೀರಿಯಾದ ಯೋನಿನೋಸಿಸ್, ಫಂಗಲ್ ಇನ್ಫೆಕ್ಷನ್, ಶ್ರೋಣಿಯ ಉರಿಯೂತ ಮುಂತಾದ ಸೋಂಕುಗಳು ಉಂಟಾಗಬಹುದು. ಹಾಗಾಗಿ ವೈದ್ಯರು ಯೋನಿಯ ಸ್ವಚ್ಛತೆಯನ್ನು ಕಾಪಾಡಲು ಬಿಸಿ ನೀರನ್ನು ಬಳಸಿ ಎಂದು ಸಲಹೆ ನೀಡುವುದಿಲ್ಲ. 

ಸ್ವಯಂ ಚಿಕಿತ್ಸೆ ಮಾಡದೇ ವೈದ್ಯರನ್ನು ಸಂಪರ್ಕಿಸಿ : ಯೋನಿಯ ಸಮಸ್ಯೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವು ಮಹಿಳೆಯರಿಗೆ ಡಿಸ್ಚಾರ್ಜ್ ಸಮಸ್ಯೆ ಇದ್ದರೆ ಇನ್ಕೆಲವರು ವಾಸನೆ, ತುರಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಸಮಸ್ಯೆ ಹೊಂದಿರುವವರು ಯೋನಿಯ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು ಹಾಗೂ ಸ್ವಯಂ ಚಿಕಿತ್ಸೆಗೆ ಮುಂದಾಗದೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಇದರಿಂದ ನೀವು ಯಾವ ರೀತಿಯ ಸೋಂಕಿಗೆ ಒಳಗಾಗಿದ್ದೀರಿ ಎನ್ನುವುದನ್ನು ತಿಳಿಯಬಹುದು ಮತ್ತು ನಿರ್ದಿಷ್ಟ ಚಿಕಿತ್ಸೆ ಅಥವಾ ಎಂಟಿಬಯೋಟಿಕ್, ಎಂಟಿಫಂಗಲ್ ಅನ್ನು ತೆಗೆದುಕೊಳ್ಳಬಹುದು.

ಐಸ್ ಬಾತ್… ಈ ಚಳೀಲಂತೂ ಕೇಳಿದ್ರೆ ಮೈ ನಡುಗುತ್ತೆ, ಆಗೋ ಉಪಯೋಗ ಒಂದೆರಡಲ್ಲ!

ಯೋನಿಯನ್ನು ಸ್ವಚ್ಛಗೊಳಿಸಲು ಸಾಮಾನ್ಯ ನೀರನ್ನು ಬಳಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಯೋನಿಯು ಸ್ವಯಂ ಶುಚಿಗೊಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿಯೇ   ಯೋನಿಯ ಒಳಭಾಗವನ್ನು ಸ್ವಚ್ಛಮಾಡಿಕೊಳ್ಳಲು ವೈದ್ಯರು ಸಲಹೆ ನೀಡೋದಿಲ್ಲ. ಯೋನಿಯ ಒಳಭಾಗಕ್ಕೆ ಯಾವುದೇ ರಾಸಾಯನಿಕ ಜೆಲ್, ಸೋಪು ಬಳಸಬಾರದು. ಯೋನಿಯ ಹೊರಚರ್ಮವನ್ನು ತಣ್ಣನೆಯ ನೀರಿನಿಂದ ನಿಧಾನವಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ಹೊರ ಭಾಗದ ಸ್ವಚ್ಛತೆಗೂ ಕೂಡ ರಾಸಾಯನಿಕ ಸೋಪು ಅಥವಾ ಜೆಲ್ ಗಳನ್ನು ಬಳಸಬಾರದು. ಸುಗಂಧ ದ್ರವ್ಯಗಳನ್ನು ಹಾಕಿದ ಒಳ ಉಡುಪುಗಳನ್ನು ಎಂದಿಗೂ ಧರಿಸಬಾರದು. 
 

Latest Videos
Follow Us:
Download App:
  • android
  • ios