'ನಾನು ಅವರ ಮೇಲೆ ಎಷ್ಟು ಅವಲಂಬಿತಳಾಗಿದ್ದೆ ಎಂದರೆ, ಅವರು ಏನು ಹೇಳಿದರೂ ಕೇಳುತ್ತಿದ್ದೆ. ಬಡತನದಿಂದ ಬಂದಿದ್ದ ನನಗೆ ಹಣ ಮತ್ತು ಜನಪ್ರಿಯತೆ ಸಿಕ್ಕಾಗ ನಾನು ಸ್ಥಿಮಿತ ಕಳೆದುಕೊಂಡಿದ್ದೆ. ಆಗಲೇ ಅವರಿಗೆ ಎರಡು ಮದುವೆಯಾಗಿದ್ದರೂ ನಾನು ಅವರನ್ನು ಮತ್ತೆ ಮದುವೆಯಾಗಲು ರೆಡಿಯಾಗಿದ್ದೆ' ಎಂದಿದ್ದಾರೆ.

'ಅಣ್ಣಯ್ಯ' ಚಿತ್ರದ ನಟಿ ಅರುಣಾ ಇರಾನಿ ಜೀವನದಲ್ಲಿ ನಡೆದಿದ್ದೇನು?

ಕನ್ನಡ ಚಿತ್ರರಂಗದ 'ಕ್ರೇಜಿ ಸ್ಟಾರ್' ರವಿಚಂದ್ರನ್ ಅಭಿನಯದ ಸಾರ್ವಕಾಲಿಕ ಹಿಟ್ ಸಿನಿಮಾ 'ಅಣ್ಣಯ್ಯ' ಯಾರಿಗೆ ತಾನೇ ನೆನಪಿಲ್ಲ? ಆ ಸಿನಿಮಾದಲ್ಲಿ ಅಣ್ಣಯ್ಯನ ತಾಯಿಯಾಗಿ ನಟಿಸಿ ಕರ್ನಾಟಕದ ಮನೆಮಾತಾದವರು ಬಾಲಿವುಡ್‌ನ ಹಿರಿಯ ನಟಿ ಅರುಣಾ ಇರಾನಿ. ತೆರೆಯ ಮೇಲೆ ಗಂಭೀರ ಪಾತ್ರಗಳಲ್ಲಿ ಮಿಂಚುವ ಈ ನಟಿಯ (Aruna Irani) ನಿಜ ಜೀವನ ಮಾತ್ರ ಸಿನೆಮಾ ಕಥೆಗಿಂತಲೂ ರೋಚಕ ಮತ್ತು ಅಷ್ಟೇ ನೋವಿನಿಂದ ಕೂಡಿದೆ. ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿರುವ ಅರುಣಾ ಇರಾನಿ, ಬಾಲಿವುಡ್‌ನ ಅಂದಿನ ಖ್ಯಾತ ಹಾಸ್ಯ ನಟ ಮೆಹಮೂದ್ ಅಲಿ ಅವರು ತಮ್ಮ ಜೀವನವನ್ನು ರೂಪಿಸಿದಷ್ಟೇ ವೇಗವಾಗಿ ಹೇಗೆ ಹಾಳು ಮಾಡಿದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಬಾಲಿವುಡ್‌ನ ಹಾಸ್ಯ ಚಕ್ರವರ್ತಿ ಎಂದೇ ಹೆಸರಾಗಿದ್ದ ಮೆಹಮೂದ್ ಮತ್ತು ಅರುಣಾ ಇರಾನಿ ನಡುವೆ ದಶಕಗಳ ಕಾಲ ಗಾಢವಾದ ಸಂಬಂಧವಿತ್ತು. ಅರುಣಾ ಇರಾನಿ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ತೀವ್ರ ಬಡತನದಲ್ಲಿದ್ದರು. ಕೈಯಲ್ಲಿ ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾಗ ಅವರಿಗೆ ಆಸರೆಯಾದವರು ಮೆಹಮೂದ್. 'ಔಲಾದ್', 'ಹಮ್ಜೋಲಿ' ಮತ್ತು 'ನಯಾ ಜಮಾನಾ' ಅಂತಹ ದೊಡ್ಡ ಸಿನಿಮಾಗಳಲ್ಲಿ ಅರುಣಾ ಅವರಿಗೆ ಅವಕಾಶ ಕೊಡಿಸಿ, ಅವರು ಬೆಳೆಯಲು ಮೆಹಮೂದ್ ಕಾರಣರಾದರು. ಆ ಸಮಯದಲ್ಲಿ ಮೆಹಮೂದ್ ನನಗೆ ಕೇವಲ ಮಾರ್ಗದರ್ಶಕರಾಗಿರಲಿಲ್ಲ, ನನ್ನ ಸರ್ವಸ್ವವಾಗಿದ್ದರು ಎಂದು ಅರುಣಾ ನೆನಪಿಸಿಕೊಂಡಿದ್ದಾರೆ.

ಆ ಸ್ಟಾರ್ ನಟ ನನ್ನ ಜೀವನ ಹಾಳು ಮಾಡಿದ್ದಕ್ಕೆ ಕಾರಣ ಇದೇ!

ಆದರೆ, ಈ ಪ್ರೀತಿ ಮತ್ತು ಸಹಕಾರದ ಹಿಂದೆ ಒಂದು ಕರಾಳ ನೆರಳು ಕೂಡ ಇತ್ತು. ಅರುಣಾ ಮತ್ತು ಮೆಹಮೂದ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಅಂದು ಬಾಲಿವುಡ್‌ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಈ ಬಗ್ಗೆ ಅರುಣಾ ಹೇಳುವುದೇನೆಂದರೆ, "ಆ ಸುದ್ದಿ ಹಬ್ಬಿದಾಗ ಅದನ್ನು ನಿರಾಕರಿಸುವ ಧೈರ್ಯ ನನಗಿರಲಿಲ್ಲ. ಅಚ್ಚರಿಯೆಂದರೆ, ಮೆಹಮೂದ್ ಕೂಡ ಆ ವದಂತಿಯನ್ನು ಎಲ್ಲೂ ಸುಳ್ಳು ಎಂದು ಹೇಳಲಿಲ್ಲ.

ಇದರಿಂದಾಗಿ ಇತರ ನಿರ್ಮಾಪಕರು ನಾನು ಮೆಹಮೂದ್ ಅವರ ಪತ್ನಿ ಎಂದು ಭಾವಿಸಿ, ನನ್ನನ್ನು ತಮ್ಮ ಸಿನಿಮಾಗಳಿಗೆ ಕರೆಯುವುದನ್ನೇ ಬಿಟ್ಟರು. ನಾನು ಮೆಹಮೂದ್ ಅವರ ಅಪ್ಪಣೆ ಇಲ್ಲದೆ ಯಾವುದೇ ಕೆಲಸ ಮಾಡುವುದಿಲ್ಲ ಎಂಬ ತಪ್ಪು ಕಲ್ಪನೆ ಮೂಡಿತು. ಇದರಿಂದ ನನಗೆ ಬರಬೇಕಿದ್ದ ಹತ್ತಾರು ದೊಡ್ಡ ಅವಕಾಶಗಳು ಕೈತಪ್ಪಿ ಹೋದವು. ಮೆಹಮೂದ್ ನನ್ನನ್ನು ಬೆಳೆಸಿದರು ನಿಜ, ಆದರೆ ಅದೇ ಮೆಹಮೂದ್ ಅವರ ಮೌನ ನನ್ನ ಕೆರಿಯರ್‌ಗೆ ಕೊಡಲಿ ಪೆಟ್ಟು ನೀಡಿತು."

ತಮ್ಮ ಮತ್ತು ಮೆಹಮೂದ್ ನಡುವಿನ ಸಂಬಂಧದ ಬಗ್ಗೆ ಮತ್ತಷ್ಟು ಆಘಾತಕಾರಿ ವಿಷಯ ಹಂಚಿಕೊಂಡ ಅರುಣಾ, "ನಾನು ಅವರ ಮೇಲೆ ಎಷ್ಟು ಅವಲಂಬಿತಳಾಗಿದ್ದೆ ಎಂದರೆ, ಅವರು ಏನು ಹೇಳಿದರೂ ಕೇಳುತ್ತಿದ್ದೆ. ಬಡತನದಿಂದ ಬಂದಿದ್ದ ನನಗೆ ಹಣ ಮತ್ತು ಜನಪ್ರಿಯತೆ ಸಿಕ್ಕಾಗ ನಾನು ಸ್ಥಿಮಿತ ಕಳೆದುಕೊಂಡಿದ್ದೆ. ಮೆಹಮೂದ್ ಆಗಲೇ ಎರಡು ಮದುವೆಯಾಗಿದ್ದರು. ಆದರೂ ನಾನು ಅವರನ್ನು ಮದುವೆಯಾಗಲು ಬಯಸಿದ್ದೆ. ಅವರು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಆದರೆ ಕೊನೆಯಲ್ಲಿ ಕೈಕೊಟ್ಟರು. ಒಂದು ವೇಳೆ ನಾನು ಅವರನ್ನು ಮದುವೆಯಾಗಿದ್ದರೆ ನನ್ನ ಜೀವನ ಮತ್ತಷ್ಟು ನರಕವಾಗುತ್ತಿತ್ತು, ಹಾಗಾಗಿ ಅವರು ಮದುವೆಯಾಗದಿರುವುದೇ ಒಳ್ಳೆಯದಾಯಿತು" ಎಂದು ನೋವಿನಿಂದಲೇ ನುಡಿದಿದ್ದಾರೆ.

ಬಳಸಿ ಲಾಭ ಮಾಡಿಕೊಂಡರು

ಮೆಹಮೂದ್ ಅವರು ತಮ್ಮ ಹೆಸರನ್ನು ಬಳಸಿ ಲಾಭ ಮಾಡಿಕೊಂಡರು ಮತ್ತು ತಮ್ಮ ಕೆರಿಯರ್ ಹಾಳಾಗಲು ಕಾರಣರಾದರು ಎಂಬುದು ಅರುಣಾ ಇರಾನಿ ಅವರ ಗಂಭೀರ ಆರೋಪ. ಅಂದು ಆ ಸ್ಟಾರ್ ನಟನ ಪ್ರೀತಿಯ ಬಲೆಯಲ್ಲಿ ಸಿಲುಕಿ ಜೀವನದ ಹಲವು ವರ್ಷಗಳನ್ನು ವ್ಯರ್ಥ ಮಾಡಿಕೊಂಡೆ ಎಂದು ಅರುಣಾ ಇಂದಿಗೂ ಮರುಗುತ್ತಾರೆ. ಅಂದಿನ ಆ ಗ್ಲಾಮರ್ ಲೋಕದ ಹಿಂದೆ ಇಂತಹದೊಂದು ಕರಾಳ ಸತ್ಯ ಅಡಗಿದೆ ಎಂಬುದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.