89ನೇ ವಯಸ್ಸಿನಲ್ಲೂ ಪಂಚಾಯತ್ ಅಧ್ಯಕ್ಷೆಯಾಗಿರುವ ಈ ಅಮ್ಮನ ಸಿಕ್ರೆಟ್ ಏನು?
89ನೇ ವಯಸ್ಸಿನಲ್ಲಿ ಒಂದು ಪಂಚಾಯತ್ ಅಧ್ಯಕ್ಷ ಸ್ಥಾನ ಸಂಭಾಳಿಸೋದು ಸಾಮಾನ್ಯ ಕೆಲಸವಲ್ಲ. ಎಲ್ಲರ ಮೆಚ್ಚುಗೆ ಗಳಿಸಿ, ಗಟ್ಟಿಗಿತ್ತಿ ಎನ್ನಿಸಿಕೊಂಡಿರುವ ಈಕೆ ಕೆಲಸಕ್ಕೆ ಒಂದು ಸಲಾಮ್. ಯಾರು ಅವರು, ಅವರ ಈ ಉತ್ಸಾಹದ ಗುಟ್ಟೇನು ಎಂಬುದು ಇಲ್ಲಿದೆ.
ವಯಸ್ಸು ಬರೀ ಲೆಕ್ಕಕ್ಕೆ ಮಾತ್ರ ಎಂಬುದು ಮತ್ತೆ ಮತ್ತೆ ಸಾಭೀತಾಗ್ತಿದೆ. ವಯಸ್ಸು ಹೆಚ್ಚಾದಂತೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ, ಕಲಿಕೆ ಸಾಧ್ಯವಿಲ್ಲ, ವಿಶ್ರಾಂತಿ ಕಾಲ ಅದು ಎಂಬುದೆಲ್ಲ ಬರಿ ಮಾತಷ್ಟೆ. ಕೈಲಾಗದವರು, ಆಲಸ್ಯದ ವ್ಯಕ್ತಿಗಳು ಇದನ್ನು ಸೃಷ್ಟಿಮಾಡಿಕೊಂಡಿದ್ದಾರೆ ಎಂದ್ರೂ ತಪ್ಪಾಗಲಾರದು. ಮನಸ್ಸಿದ್ದರೆ ಯಾವ ವಯಸ್ಸಿನಲ್ಲಿಯೂ ಕಲಿಕೆ, ಕೆಲಸ ಮಾಡಿ ಉಳಿದವರಿಗೆ ಸ್ಪೂರ್ತಿ ನೀಡ್ಬಹುದು. ಇದಕ್ಕೆ ತಮಿಳುನಾಡಿನ ಮಧುರೈನ 89 ವರ್ಷದ ವೀರಮ್ಮಾಳ್ ಅಮ್ಮ ಸಾಕ್ಷಿ. ವೀರಮ್ಮಾಳ್ ಅಮ್ಮ ಈ ವಯಸ್ಸಿನಲ್ಲಿ ಪಂಚಾಯತ್ ಅಧ್ಯಕ್ಷೆ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸ್ಪೂರ್ತಿದಾಯಕ ಕಥೆಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ. ಇದರಿಂದ ಪ್ರತಿಯೊಬ್ಬರೂ ಜೀವನ (Life) ದಲ್ಲಿ ಕೆಲವು ಪಾಠಗಳನ್ನು ಕಲಿಯುತ್ತಾರೆ. ವೀರಮ್ಮಾಳ್ ಅಮ್ಮ (Veerammal Amma) ನ ಜೀವನ ಕೂಡ ಅನೇಕರಿಗೆ ಮಾದರಿಯಾಗಲಿದೆ. ವಯಸ್ಸಾಯ್ತು ಎನ್ನುವ ಕಾರಣಕ್ಕೆ ಆರೋಗ್ಯವಿದ್ರೂ ಮನೆಯಲ್ಲೇ ಕುಳಿತು ಆರೋಗ್ಯ ಹದಗೆಡಸಿಕೊಳ್ಳುವ ಜನರಿಗೆ ವೀರಮ್ಮಾಳ್ ಅಮ್ಮ ಸ್ಪೂರ್ತಿ ನೀಡಬಹುದು. ಐಎಎಸ್ (IAS) ಅಧಿಕಾರಿ ಸುಪ್ರಿಯಾ ಸಾಹು, ವೀರಮ್ಮಾಳ್ ಅಮ್ಮ ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ವೀರಮ್ಮಾಳ್ ಅವರ ಫಿಟ್ನೆಸ್ ಮತ್ತು ಧನಾತ್ಮಕ ವರ್ತನೆ ರಹಸ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದರ ಕೆಲ ತುಣುಕುಗಳನ್ನು ಸುಪ್ರಿಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರೈಲ್ವೆ ಮಂಡಳಿಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಜಯಾ ವರ್ಮಾ ನೇಮಕ, ಯಾರೀಕೆ?
ಅರಿಟ್ಟಪಟ್ಟಿ ಪಾಟಿ ಎಂದು ಜನಪ್ರಿಯವಾಗಿರುವ ವೀರಮ್ಮಾಳ್ ಅಮ್ಮ. ಅರಿಟ್ಟಪಟ್ಟಿ ಪಂಚಾಯತ್‌ನ 89 ವರ್ಷದ ಪಂಚಾಯತ್ ಅಧ್ಯಕ್ಷರು. ನಿಜವಾಗಿಯೂ ಸ್ಪೂರ್ತಿದಾಯಕ ಮಹಿಳೆ. ತಮಿಳುನಾಡಿನ ಅತ್ಯಂತ ಹಿರಿಯ ಪಂಚಾಯತ್ ಅಧ್ಯಕ್ಷೆ. ಆಕೆಯ ಅದ್ಭುತ ನಗು ಮತ್ತು ಮಿತಿಯಿಲ್ಲದ ಉತ್ಸಾಹ ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ ಐಎಎಸ್ ಸುಪ್ರಿಯಾ ಶೀರ್ಷಿಕೆ ಹಾಕಿದ್ದಾರೆ.
ಅಷ್ಟೇ ಅಲ್ಲ, ವೀರಮ್ಮಾಳ್ ಅಮ್ಮ ಏನು ಹೇಳಿದ್ದಾರೆ ಎಂಬುದನ್ನು ಕೂಡ ಸುಪ್ರಿಯಾ ಬರೆದಿದ್ದಾರೆ. ವೀರಮ್ಮಾಳ್ ಅಮ್ಮ ತಮ್ಮ ಈ ಫಿಟ್ನೆಸ್ ಹಾಗೂ ಸಕಾರಾತ್ಮಕ ಭಾವನೆಗೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಯಾವಾಗಲೂ ರಾಗಿ ಹಾಗೂ ಮನೆಯಲ್ಲಿ ತಯಾರಿಸಿದ ಸಮೃದ್ಧವಾಗಿರುವ ಸಾಂಪ್ರದಾಯಿಕ ಆಹಾರವನ್ನು ತಿನ್ನುತ್ತೇನೆ ಎಂದು ವೀರಮ್ಮಾಳ್ ಹೇಳಿದ್ದಾರೆ. ಅಲ್ಲದೆ ಅವರು ದಿನವಿಡೀ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇದೇ ನಾನು ಈ ವಯಸ್ಸಿನಲ್ಲೂ ಫಿಟ್ ಆಗಿರಲು ಕಾರಣವೆಂದು ವೀರಮ್ಮಾಳ್ ಅಮ್ಮ ಹೇಳಿದ್ದಾರೆ.
ವೀರಮ್ಮಾಳ್ ಅಮ್ಮನವರ ನೇತೃತ್ವದಲ್ಲಿ ಅರಿಟ್ಟಪಟ್ಟಿ, ಮಧುರೈನ ಮೊದಲ ಜೀವವೈವಿಧ್ಯ ಪರಂಪರೆಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದಾಯದ ಸಾಮರ್ಥ್ಯವನ್ನು ಹೆಚ್ಚಿಸಲು ಅವರು ಸಾಹೂ ಅವರಂತಹ ಅಧಿಕಾರಿಗಳೊಂದಿಗೆ ಸಹಕರಿಸುವುದನ್ನು ನೋಡಿದ್ರೆ ಸಮುದಾಯದ ಅಭಿವೃದ್ಧಿಗೆ ಅವರ ಅಚಲ ಬದ್ಧತೆ ಎಷ್ಟಿದೆ ಎಂಬುದು ಗೋಚರಿಸುತ್ತದೆ.
ನೀನಾದೆ ನಾ ಸೀರಿಯಲ್ ನ ಬಬ್ಲಿ ಹುಡುಗಿ ಖುಷಿ, ರಿಯಲ್ ಲೈಫಲ್ಲಿ ಯಡವಟ್ಟು ರಾಣಿಯಂತೆ
ಸಾಹೂ ಈ ಪೋಸ್ಟನ್ನು ಟ್ವಿಟ್ ಮಾಡ್ತಿದ್ದಂತೆ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಪೋಸ್ಟ್ ಆದ ಒಂದೇ ದಿನದಲ್ಲಿ ಇದನ್ನು 27,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕ್ಲಿಪ್ ಸುಮಾರು 1,000 ಲೈಕ್ಸ್ ಪಡೆದಿದೆ. ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೀರಮ್ಮಾಳ್ ಅಮ್ಮ ಟೀ ಕೂಡ ಕುಡಿಯುತ್ತಾರೆ. ಅದು ಸಕ್ಕರೆ ಬೆರಸಿದ ಟೀ. ಅದನ್ನು ಸುಪ್ರಿಯಾ ಜೊತೆ ಮಾತನಾಡುವಾಗ ವೀರಮ್ಮಾಳ್ ಅಮ್ಮ ಹೇಳಿದ್ದಾರೆ. ಬಳಕೆದಾರರೊಬ್ಬರು ಸರಳ ಜೀವನ ಅತ್ಯುತ್ತಮ ಜೀವನ ಎಂದು ಕಮೆಂಟ್ ಮಾಡಿದ್ದಾರೆ. ವೀರಮ್ಮಾಳ್ ಅಮ್ಮ ಅವರ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಐಎಎಸ್ ಅಧಿಕಾರಿ ಸುಪ್ರಿಯಾ ಮಾಡ್ತಿರುವ ಕೆಲಸವನ್ನು ಬಳಕೆದಾರರು ಹೊಗಳಿದ್ದಾರೆ. ವೀರಮ್ಮಾಳ್ ಅಮ್ಮ, ಆ ಗ್ರಾಮದ ಎಲ್ಲರಿಗೂ ಚಿರಪರಿಚಿತೆ. ಅವರ ಬಗ್ಗೆ ಎಲ್ಲರೂ ತಿಳಿದಿದ್ದರೂ ಚುನಾವಣೆ ಸಂದರ್ಭದಲ್ಲಿ ವೀರಮ್ಮಾಳ್ ಅಮ್ಮ, ಪ್ರತಿಯೊಬ್ಬರ ಮನೆಗೆ ತೆರಳಿ ಮತ ಯಾಚನೆ ಮಾಡಿದ್ದರಂತೆ.