ಮದುವೆಯಾಗಿ 15ನೇ ದಿನಕ್ಕೆ ಗರ್ಭ ಧರಿಸ್ಬೋದಾ? ಮಗುವಿನ ಹುಟ್ಟುವ ದಿನ ನಿಗದಿಯಾಗುವುದು ಹೇಗೆ? ಗರ್ಭಧಾರಣೆಯಾಗುವ ಅವಧಿ ಯಾವುದು? ಇಲ್ಲಿದೆ ವೈದ್ಯರಿಂದ ಉತ್ತರ...
ಗರ್ಭಿಣಿಯೊಬ್ಬಳು ವೈದ್ಯರ ಬಳಿ ಹೋದಾಗ ಮಗುವಿನ ಡಿಲೆವರಿ ಡೇಟ್ ಅನ್ನು ವೈದ್ಯರು ನೀಡುತ್ತಾರೆ. ನಿಖರವಾಗಿ ಅದೇ ದಿನ ಪ್ರಸವ ಆಗದೇ ಹೋದರೂ ಒಂದು ಅಂದಾಜಂತೂ ಸಿಗುತ್ತದೆ. ಹಾಗಿದ್ದರೆ ಈ ದಿನವನ್ನು ವೈದ್ಯರು ನಿರ್ಧರಿಸೋದು ಹೇಗೆ? ಅಷ್ಟಕ್ಕೂ ಮದುವೆಯಾದ ತಕ್ಷಣ ಗರ್ಭಿಣಿ ಆಗಲು ಸಾಧ್ಯನಾ? ಮದುವೆಯಾದ 15ನೇ ದಿನಕ್ಕೇ ಪಾಸಿಟಿವ್ ಬರಲು ಸಾಧ್ಯನಾ? ಇಂಥ ಹಲವು ಪ್ರಶ್ನೆಗಳಿಗೆ ಖ್ಯಾತ ವೈದ್ಯೆ ಡಾ.ಶಿಲ್ಪಾ ಜಿ.ಬಿ ಮಾಹಿತಿ ನೀಡಿದ್ದಾರೆ. ಮೊದಲನೆಯದ್ದಾಗಿ ಕೆಲವೊಮ್ಮೆ ಮದುವೆಯಾದ ಮರುತಿಂಗಳೇ ಮಹಿಳೆಯರ ಮುಟ್ಟು ನಿಂತರೆ ಕೆಲವೊಮ್ಮೆ ಇಷ್ಟು ಬೇಗ ಸಾಧ್ಯನಾ ಎನ್ನಿಸುವುದು ಇದೆ. 15ನೇ ದಿನಕ್ಕೆ ಚೆಕ್ ಮಾಡಿದಾಗ ಗರ್ಭ ಧರಿಸಿರುವುದು ತಿಳಿದು ಅರ್ಥಾತ್ ಪಾಸಿಟಿವ್ ಬಂದರೆ ಆ ಸಮಯದಲ್ಲಿ ಗಂಡ ಅಥವಾ ಆತನ ಮನೆಯವರು ಸಂಶಯದ ಪ್ರಾಣಿಗಳಾಗಿದ್ದರೆ, ಮಹಿಳೆಯ ಮೇಲೆ ಸಂಶಯ ಪಟ್ಟರೂ ಪಡಬಹುದು. ಆದರೆ ಮದುವೆಯಾದ 15ನೇ ದಿನಕ್ಕೇನೇ ಗರ್ಭ ಧರಿಸುವುದು ಅತ್ಯಂತ ಸ್ವಾಭಾವಿಕ ಎಂದಿದ್ದಾರೆ ವೈದ್ಯೆ.
ಗರ್ಭಧಾರಣೆಯ ಸಮಯವನ್ನು ಮಹಿಳೆ ಕೊನೆಯದಾಗಿ ಮುಟ್ಟಾದ ದಿನದಿಂದ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಮಹಿಳೆಯ ಮದುವೆಯ ದಿನದ ಸ್ವಲ್ಪ ಮುಂಚೆ ಅಥವಾ ದಂಪತಿ ಕೂಡುವ ಸಮಯದ ಸ್ವಲ್ಪ ದಿನಗಳ ಮುಂಚೆ ಮುಟ್ಟಾಗಿದ್ದರೆ, 15 ದಿನಗಳಲ್ಲಿಯೇ ದಂಪತಿ ಕೂಡಿದರೆ ಅಂಥ ಸಂದರ್ಭದಲ್ಲಿ ಗರ್ಭಧಾರಣೆಯಾಗುತ್ತದೆ. ಆಗ ಮದುವೆಯಾಗಿ 15ನೇ ದಿನದಲ್ಲಿಯೇ ಪಾಸಿಟಿವ್ ಬರುತ್ತದೆ ಎನ್ನುವ ಮಾಹಿತಿಯನ್ನು ವೈದ್ಯೆ ನೀಡಿದ್ದಾರೆ. ಹಾಗಿದ್ದರೆ ಮಗು ಹುಟ್ಟುವ ದಿನವನ್ನು ಹೇಗೆ ನಿರ್ಧರಿಸುತ್ತಾರೆ ಎನ್ನುವ ಬಗ್ಗೆಯೂ ವೈದ್ಯೆ ಮಾಹಿತಿ ನೀಡಿದ್ದಾರೆ. ಕೊನೆಯಾಗಿ ಮುಟ್ಟಾದ ದಿನದಿಂದ ಆರಂಭಿಸಿ 9 ತಿಂಗಳು 7 ದಿನಕ್ಕೆ ಪ್ರಸವದ ದಿನಾಂಕವನ್ನು ನೀಡಲಾಗುತ್ತದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇದು ಪ್ರಪಂಚದಾದ್ಯಂತ ಎಲ್ಲಾ ವೈದ್ಯರು ಮಾಡುವುದು ಇದನ್ನೇ. ಪ್ರಸವದ ದಿನಾಂಕದಲ್ಲಿ ಸ್ವಲ್ಪ ಹೆಚ್ಚೂಕಡಿಮೆ ಆಗಬಹುದು ಅಷ್ಟೇ. ಆದರೆ ಇದೇ ಪದ್ಧತಿಯನ್ನು ಅನುಸರಿಸುವುದು ಎಂದು ಅವರು ಹೇಳಿದ್ದಾರೆ.
ಇನ್ನು ಗರ್ಭ ಧರಿಸಲು ಯಾವ ದಿನ ಪತಿ-ಪತ್ನಿ ಕೂಡಬೇಕು ಎನ್ನುವ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವಿದೆ. ಈ ಬಗ್ಗೆ ಇದಾಗಲೇ ಹಲವು ವೈದ್ಯರು ಮಾಹಿತಿಯನ್ನೂ ನೀಡಿದ್ದಾರೆ. ಸಾಮಾನ್ಯವಾಗಿ ಮಾಸಿಕ ಋತುಸ್ರಾವ ಅರ್ಥಾತ್ ಮುಟ್ಟು 28 ದಿನಗಳಿಗೆ ಒಮ್ಮೆ ಬರುತ್ತದೆ. ಇದು ಆರೋಗ್ಯವಂತ ಹೆಣ್ಣಿನ ಲಕ್ಷಣ. ಆದ್ದರಿಂದ ಅದನ್ನೇ ಗಣನೆಗೆ ತೆಗೆದುಕೊಂಡರೆ, ಮುಟ್ಟಿನ ಮೊದಲ ದಿನದಿಂದ ಲೆಕ್ಕಹಾಕಿ 9ನೇ ದಿನದಿಂದ 19 ದಿನಗಳವರೆಗೆ ಸಂಗಾತಿ ಸಂಧಿಸಿದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು. ಏಕೆಂದರೆ ಇದನ್ನು ಫರ್ಟಿಲಿಟಿ ವಿಂಡೊ ಅರ್ಥಾತ್ ಫಲವತ್ತಾದ ದಿನಗಳು ಎನ್ನಲಾಗುತ್ತದೆ. ಹೆಣ್ಣಿನ ಅಂಡಾಣು ಮತ್ತು ಪತಿಯ ವೀರ್ಯಾಣು ಸೇರಿ ಫಲವತ್ತತೆ ಆಗಲು ಇದು ಸುಸಮಯ ಎನ್ನುವುದು ವೈದ್ಯರ ಮಾತು.
ಇದೇ ಸಮಯದಲದಲ್ಲಿ ವೈದ್ಯರು ಎಚ್ಚರಿಕೆಯನ್ನೂ ನೀಡುತ್ತಾರೆ. ಅದೇನೆಂದರೆ, ಈ ಸಮಯದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಗರ್ಭಧರಿಸುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಅವರ ಮಾತು. 28 ದಿನಗಳಿಗೆ ಒಮ್ಮೆ ಮುಟ್ಟಾಗುವುದಾದರೆ ಈ ಚಕ್ರದ ಮಧ್ಯದಲ್ಲಿ ಅಂಡೋತ್ಪತ್ತಿ ಆಗುತ್ತದೆ. ಇದರ ಅರ್ಥ ಚಕ್ರದ ಮಧ್ಯದಲ್ಲಿ 14ನೇ ದಿನದಂದು ಅಂಡಾಶಯಗಳು ಮೊಟ್ಟೆಯನ್ನು ಬಿಡುಗಡೆ ಮಾಡುತ್ತವೆ. ಇದರ ಮೊದಲ ಹಾಗೂ ಕೊನೆಯ ನಾಲ್ಕು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳನ್ನು ಫಲವಂತಿಕೆಗೆ ಸೂಕ್ತದಿನಗಳು ಎಂದು ಪರಿಗಣಿಸಲಾಗುತ್ತದೆ. ಆ ಕಾರಣಕ್ಕೆ ಈ ಸಮಯದಲ್ಲಿ ಯಾವುದೇ ಸುರಕ್ಷತೆಯನ್ನು ಬಳಸದೇ ಗಂಡು-ಹೆಣ್ಣು ಕೂಡಿದರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚು ಎನ್ನುವುದು ಅವರ ಮಾತು.
