ಸುಶ್ಮಿತಾ ಕನೇರಿ ಒರ್ವ ಸಾಫ್ಟ್‌ವೇರ್ ಇಂಜಿನಿಯರ್. ಈಗ ಅವರು ಸಾಮಾಜಿಕ ಉದ್ಯಮಿಯಾಗಿದ್ದಾರೆ. ಸದ್ಯ 'gullakaari' ಎಂಬ ಕಂಪನಿಯನ್ನು ಪ್ರಾರಂಭಿಸಿದ್ದು, ಸಾಂಪ್ರದಾಯಿಕ ಕಲೆಗೆ ಗೌರವ ಮತ್ತು ಮನ್ನಣೆ ನೀಡುವುದು ಇದರ ಉದ್ದೇಶವಾಗಿದೆ.

ಯಾವುದೇ ಉದ್ಯಮಕ್ಕೆ ಕೈ ಹಾಕುವುದೆಂದರೆ ಹುಡುಗಾಟದ ವಿಷಯ ಅಲ್ಲವೇ ಅಲ್ಲ. ಇದರಲ್ಲಿ ಸಾಕಷ್ಟು ಏಳುಬೀಳುಗಳು ಸ್ವಾಭಾವಿಕ. ಇನ್ನು ಹೆಣ್ಣುಮಕ್ಕಳು ಬ್ಯುಸಿನೆಸ್ ಗೋಜಿಗೆ ಹೋಗುವುದು ಕಡಿಮೆಯಾದರೂ ಇತ್ತೀಚಿನ ದಿನಗಳಲ್ಲಿ ಅವರ ಸಂಖ್ಯೆಯೂ ಹೆಚ್ಚಿದೆ. ಹಾಗೆಯೇ ಇಂಜಿನಿಯರ್, ವೈದ್ಯಕೀಯ ಕ್ಷೇತ್ರಗಳಿಗೆ ಕಾಲಿಟ್ಟ ಮೇಲೆ ಇತ್ತ ಕಡೆ ಯೋಚಿಸುವುದೂ ಕಡಿಮೆಯೇ. ಆದರೆ ನಾವಿಂದು ಹೇಳುತ್ತಿರುವುದು ಇಂಜಿನಿಯರ್ ಆಗಿದ್ದ ಓರ್ವ ಮಹಿಳೆಯೊಬ್ಬರು ದೊಡ್ಡ ಉದ್ಯಮಿಯಾದ ಬಗ್ಗೆ. ಹಾಗೆ ನೋಡಿದರೆ ಅವರೇನು ಹೇಳಿಕೊಳ್ಳುವಷ್ಟು ಶ್ರೀಮಂತರಲ್ಲ. ಹಾಗಾದರೆ ಸಾಮಾನ್ಯ ಮಹಿಳೆಯೊಬ್ಬರು ಈ ಮಟ್ಟಕ್ಕೆ ಬೆಳೆದಿದ್ದು ಹೇಗೆಂದು ನೋಡೋಣ ಬನ್ನಿ...

ಅವರ ಹೆಸರು ಸುಶ್ಮಿತಾ ಕನೇರಿ. ಮಹಾರಾಷ್ಟ್ರದ ಪುಣೆಯವರು. ಅವರ ಪೋಷಕರು ಯಾವಾಗಲೂ ಕಠಿಣ ಪರಿಶ್ರಮ ಮತ್ತು ಸ್ವಾವಲಂಬನೆಗೆ ಒತ್ತು ನೀಡುತ್ತಿದ್ದರು. ಸುಶ್ಮಿತಾಗೆ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಸಿದರು. ಸುಶ್ಮಿತಾ 2020 ರಲ್ಲಿ ಪುಣೆಯ ವಿಶ್ವಕರ್ಮ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಯಿಂದ ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಕೆಲಸಕ್ಕೆ ಸೇರಿಕೊಂಡರು. ಆದರೆ ಉದ್ಯಮಿಯಾಗುವ ಕಲ್ಪನೆ ಅವರ ಶಾಲಾ ದಿನಗಳಲ್ಲಿಯೇ ಮನಸ್ಸಿಗೆ ಬಂದಿತ್ತಂತೆ.

ವ್ಯವಹಾರದ ಕಲ್ಪನೆ ಹೇಗೆ ಬಂತು?
ಸುಶ್ಮಿತಾ ಹೇಳುವ ಪ್ರಕಾರ, 'ನಾನು ಶಾಲೆಯಲ್ಲಿ ತರಗತಿ ಮೇಲ್ವಿಚಾರಕಳಾಗಿದ್ದೆ. ಒಮ್ಮೆ ನಿಧಿಸಂಗ್ರಹ ಅಭಿಯಾನವನ್ನು ನಡೆಸುತ್ತಿದ್ದೆವು. ನನ್ನ ಸ್ನೇಹಿತರಿಂದ ಹಣ ಸಂಗ್ರಹಿಸಿ ಅನಾಥಾಶ್ರಮಕ್ಕೆ ದಾನ ಮಾಡುವ ಯೋಚನೆ ಬಂದಿತು. 500 ರೂ. ಸಂಗ್ರಹಿಸಿ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಖರೀದಿಸಿದೆವು. ಈ ಸಣ್ಣ ಕೆಲಸದ ಮೂಲಕ ಅನೇಕ ಜನರು ಕಷ್ಟಗಳನ್ನು ಎದುರಿಸುತ್ತಿದ್ದಾರೆಂದು ನನಗೆ ತಿಳಿದುಬಂದಿತು. ಅಂದಿನಿಂದ, ನಾನು ಸಮಾಜಕ್ಕಾಗಿ ಏನಾದರೂ ಮಾಡುವ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಆಸಕ್ತಿ ಹೊಂದಿದ್ದೇನೆ' ಎಂದು ತಿಳಿಸಿದ್ದಾರೆ.

2021 ರಲ್ಲಿ ಸುಶ್ಮಿತಾ ಕೆಲಸ ಮಾಡುವ ಬದಲು 'ಗುಲ್ಲಕ್' ಎಂಬ ಕ್ರೌಡ್‌ಫಂಡಿಂಗ್ ವೇದಿಕೆಯನ್ನು ಪ್ರಾರಂಭಿಸಿದರು. ದೇಣಿಗೆಗಳನ್ನು ಪತ್ತೆಹಚ್ಚುವುದು ಮತ್ತು ದೇಣಿಗೆಗಳು ಯಾವ ಪರಿಣಾಮವನ್ನು ಬೀರುತ್ತಿವೆ ಎಂಬುದನ್ನು ನೋಡುವುದು ಇದರ ಉದ್ದೇಶವಾಗಿತ್ತು. ಈ ಉಪಕ್ರಮವು ಜನರಿಗೆ ದಾನ ಮಾಡಲು ಅವಕಾಶವನ್ನು ನೀಡಿತು, ಆದರೆ ಕೇವಲ ದಾನ ಮಾಡುವುದು ಸಾಕಾಗುವುದಿಲ್ಲ ಎಂದು ಅವರು ಅರಿತುಕೊಂಡರು. 'ಕೇವಲ ಹಣವನ್ನು ದಾನ ಮಾಡುವುದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ. ಜನರು ಸ್ವಾವಲಂಬಿಗಳಾಗಲು ಮತ್ತು ಅವರ ಇಡೀ ಜೀವನಕ್ಕಾಗಿ ಗಳಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು' ಎನ್ನುತ್ತಾರೆ ಸುಶ್ಮಿತಾ. ನಂತರ, ಸುಶ್ಮಿತಾ ನಿರ್ಗತಿಕ ಜನರಿಗೆ ಸುಸ್ಥಿರ ಆದಾಯವನ್ನು ಗಳಿಸುವ ಅವಕಾಶವನ್ನು ಒದಗಿಸುವ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿದರು. ಕೊನೆಗೆ ಅವರು ಭಾರತದಿಂದ ಕಣ್ಮರೆಯಾಗುತ್ತಿರುವ ಕಲೆಯತ್ತ ಗಮನ ಹರಿಸಿದರು.

2021 ರಲ್ಲಿ ಅವರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯಾಯಿತು. ಅವರು ತೆಲಂಗಾಣಕ್ಕೆ ಹೋಗಿ ಅಲ್ಲಿನ ನಿರ್ಮಲ್ ಪೇಂಟಿಂಗ್ ಕಲಾವಿದರನ್ನು ಭೇಟಿಯಾದರು. ಈ ಕಲೆಯನ್ನು ಮರದ ಮೇಲೆ ಮಾಡಲಾಗುತ್ತದೆ ಮತ್ತು ಕಥೆಗಳನ್ನು ವರ್ಣಚಿತ್ರಗಳ ಮೂಲಕ ಹೇಳಲಾಗುತ್ತದೆ. "ಈ ಕಲಾವಿದರು ಹಲವು ತಲೆಮಾರುಗಳಿಂದ ಈ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆಂದು ನಾನು ನೋಡಿದೆ. ಆದರೆ ಯಾರಿಗೂ ಅವರ ಕಲೆ ಇಷ್ಟವಾಗುತ್ತಿರಲಿಲ್ಲ. ಇದರಿಂದ ನಿರಾಶೆಗೊಂಡಿದ್ದರು. ತಮ್ಮ ಶ್ರಮವನ್ನು ಯಾರೂ ಗುರುತಿಸುತ್ತಿಲ್ಲ ಮತ್ತು ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದರು. ಆದರೆ ನಾನು ಈ ಸಾಂಪ್ರದಾಯಿಕ ಕಲೆಗಳನ್ನು ಉಳಿಸಬೇಕು ಮತ್ತು ಕಲಾವಿದರಿಗೆ ಸುಸ್ಥಿರವಾಗಿ ಗಳಿಸುವ ಅವಕಾಶವನ್ನು ನೀಡಬೇಕೆಂದು ಅರಿತುಕೊಂಡೆ" ಎಂದು ಸುಶ್ಮಿತಾ ಹೇಳುತ್ತಾರೆ.

ನಿರ್ಮಲ್ ಪೇಂಟಿಂಗ್ ಕಲಾವಿದರ ಕಷ್ಟಗಳನ್ನು ನೋಡಿ ಸುಶ್ಮಿತಾ ತುಂಬಾ ದುಃಖಿತರಾದರು. ಅವರು ದೇಶಾದ್ಯಂತ ಪ್ರವಾಸ ಮಾಡಿ ಇತರ ಕಲಾವಿದರನ್ನು ಭೇಟಿಯಾಗುತ್ತಾ ಇನ್ನೊಂದು ವರ್ಷ ಕಳೆದರು. ಇದಾದ ನಂತರ ಅವರು ಏಪ್ರಿಲ್ 2023 ರಲ್ಲಿ "gullakaari" ಅನ್ನು ಪ್ರಾರಂಭಿಸಿದರು. ಈ ವೇದಿಕೆಯು ಕಲಾವಿದರನ್ನು ಗ್ರಾಹಕರೊಂದಿಗೆ ಸಂಪರ್ಕಿಸುತ್ತದೆ ಮತ್ತು ಕಣ್ಮರೆಯಾಗುತ್ತಿರುವ ಕಲಾ ಪ್ರಕಾರಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅಲ್ಲದೆ, ಇದು ಕಲಾವಿದರು ಸುಸ್ಥಿರ ರೀತಿಯಲ್ಲಿ ಗಳಿಸಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಕಲೆಗೆ ಗೌರವ ಮತ್ತು ಮನ್ನಣೆ ನೀಡುವುದು gullakaariಯ ಉದ್ದೇಶ.

gullakaari ಉಪಯೋಗವೇನು?
ಇದು ಪರಿಸರ ಸ್ನೇಹಿ ಪ್ಯಾಕೇಜಿಂಗ್ ಅನ್ನು ಬಳಸುತ್ತದೆ. ಸೂಕ್ಷ್ಮ ಉತ್ಪನ್ನಗಳನ್ನು ರಕ್ಷಿಸಲು ಅವರು ಬಬಲ್ ಹೊದಿಕೆಯ ಬದಲಿಗೆ ಹೊಟ್ಟುಗಳಂತಹ ವಸ್ತುಗಳನ್ನು ಬಳಸುತ್ತಾರೆ. ಭವಿಷ್ಯದಲ್ಲಿ ಕಂಪನಿ ಇನ್ನೂ ದೊಡ್ಡದಾಗಬೇಕೆಂಬುದು ಸುಶ್ಮಿತಾರ ಕನಸು. ಟೇಬಲ್‌ವೇರ್, ಸ್ಟೇಷನರಿ, ಪೆನ್ ಸ್ಟ್ಯಾಂಡ್‌ಗಳು, ಆರ್ಗನೈಸರ್‌ಗಳು, ಲ್ಯಾಂಪ್‌ಶೇಡ್‌ಗಳು, ಕೋಸ್ಟರ್‌ಗಳು, ಕೈಯಿಂದ ಚಿತ್ರಿಸಿದ ಡೈರಿಗಳು, ಟೋಟ್ ಬ್ಯಾಗ್‌ಗಳು ಮತ್ತು ಇನ್ನೂ ಹೆಚ್ಚಿನವು ಇವರ ಕಂಪನಿಯಿಂದ ತಯಾರಿಸುವ ಉತ್ಪನ್ನಗಳು. ಬೆಲೆಗಳು 25 ರಿಂದ 2,000 ರೂ.ಗಳವರೆಗೆ ಇರುತ್ತವೆ.

2024ರಲ್ಲಿ ಮಾತ್ರ, ಈ ವೇದಿಕೆಯು 4,000 ಕ್ಕೂ ಹೆಚ್ಚು ಕರಕುಶಲ ವಸ್ತುಗಳು ಮಾರಾಟ ಮಾಡಿತು. ಕೇವಲ ಎರಡು ವರ್ಷಗಳಲ್ಲಿ, ಅದರ ಕರಕುಶಲ ಆದಾಯವು ಒಟ್ಟು 50 ಲಕ್ಷ ರೂ.ಗಳನ್ನು ತಲುಪಿದೆ.