World Sexual Health Day: ಹವಾಮಾನ ಬದಲಾವಣೆಗೂ ಮಹಿಳೆಯರ ಲೈಂಗಿಕ ಆರೋಗ್ಯಕ್ಕೂ ಇದೆ ನಂಟು!
ಪಾಕಿಸ್ತಾನದಲ್ಲಿ ಪ್ರವಾಹದ ಮಧ್ಯವೇ ಯುವತಿಯೋರ್ವಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಪಂಚದ ಗಮನ ಸೆಳೆದಿದೆ. ಈ ದೇಶದಲ್ಲೊಂದೇ ಅಲ್ಲ, ಒಟ್ಟಾರೆ, ಹವಾಮಾನ ಬದಲಾವಣೆ ಎನ್ನುವುದು ಮಹಿಳೆಯರ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದು ನೇರವಾಗಿ ಕಣ್ಣಿಗೆ ಕಾಣುವಂಥದ್ದಲ್ಲ. ಆದರೆ, ದೀರ್ಘಕಾಲದಲ್ಲಿ ಭಾರೀ ಸಮಸ್ಯೆ ತಂದೊಡ್ಡಬಲ್ಲದು.
ಪಾಕಿಸ್ತಾನದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಸೃಷ್ಟಿಯಾಗಿದೆ. ಭೀಕರ ಸನ್ನಿವೇಶದಲ್ಲೂ ಒಂದೆರಡು ಘಟನೆಗಳು ಗಮನ ಸೆಳೆಯುತ್ತಿವೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಿಸಲೆಂದು ಬಂದವರು ಯುವತಿಯೋರ್ವಳ ಮೇಲೆ ಅತ್ಯಾಚಾರ ಗೈದಿದ್ದರು. ಹಾಗೆಯೇ ಸುತ್ತಲೂ ಪ್ರವಾಹದ ನೀರಿದ್ದರೂ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಮಹಿಳೆಯೊಬ್ಬರು ಅಲ್ಲಿನ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದರು. ಪ್ರವಾಹ ಎಲ್ಲರ ಮೇಲೂ ಒಂದೇ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದು ನಿಜವಾದರೂ ಮಹಿಳೆಯರು ಹೆಚ್ಚು ಸಂತ್ರಸ್ತರಾಗುತ್ತಾರೆ ಎನ್ನುವುದಕ್ಕೆ ಇವು ಸಾಕ್ಷಿ. ಯುದ್ಧದಲ್ಲೂ ಸಾಮಾನ್ಯವಾಗಿ ಹೀಗೆಯೇ ಸಂಭವಿಸುತ್ತದೆ. ಈಗ ನಡೆಯುತ್ತಿರುವುದು ಹವಾಮಾನ ವೈಪರೀತ್ಯದಿಂದಾಗುತ್ತಿರುವ ಅನಾಹುತಗಳ ಸರಮಾಲೆ. ವಿಶ್ವಸಂಸ್ಥೆಯ ಪ್ರಕಾರ, ಪಾಕಿಸ್ತಾನದಲ್ಲಿ 33 ಮಿಲಿಯನ್ ಜನ ಪ್ರವಾಹದಿಂದಾಗಿ ಸಂತ್ರಸ್ತರಾಗಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆ 8.2ರಷ್ಟಿದೆ. ಇವರಲ್ಲಿ ಮಕ್ಕಳನ್ನು ಹೆರುವ ವಯೋಮಾನದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 6 ಲಕ್ಷಕ್ಕೂ ಅಧಿಕ ಗರ್ಭಿಣಿಯರು ಒಂದಲ್ಲ ಒಂದು ರೀತಿಯಲ್ಲಿ ಪ್ರವಾಹದ ಪರಿಣಾಮ ಎದುರಿಸುತ್ತಿದ್ದಾರೆ. ತಿಂಗಳೊಪ್ಪತ್ತಿನಲ್ಲೇ ಹೆರುವವರ ಸಂಖ್ಯೆಯೂ ಅಧಿಕವಾಗಿದೆ. “ನೈಸರ್ಗಿಕ ವಿಕೋಪದ ಈ ಪರಿಸ್ಥಿತಿ ಮುಗಿದುಹೋಗಲಿ, ಬಳಿಕ ಹೆರಿಗೆ ಆದರಾಯ್ತುʼ ಎನ್ನುವಂತಿಲ್ಲ. ಯಾವುದೇ ಸ್ಥಿತಿ ಮುಗಿಯಲೂ ಹೆರಿಗೆ ಕಾಯುವುದಿಲ್ಲ. ಹೀಗಾಗಿ, ಹವಾಮಾನ ಬದಲಾವಣೆ ಎನ್ನುವುದು ಮಹಿಳೆಯರ ಸಂತಾನೋತ್ಪತ್ತಿಯ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತಿದೆ ಎಂದು ಸ್ವತಃ ವಿಶ್ವಸಂಸ್ಥೆಯೇ ಇದೀಗ ಗುರುತಿಸಿದೆ.
ಮಹಿಳೆಯರ ಸ್ಥಾನಮಾನಕ್ಕೆ (Woman Status) ಧಕ್ಕೆ
ಹವಾಮಾನ ಬದಲಾವಣೆ (Climate Change), ಹವಾಮಾನ ವೈಪರೀತ್ಯ, ಮಳೆಯ ಏರಿಳಿತಗಳೆಲ್ಲವೂ ನೇರವಾಗಿ ಮಹಿಳೆಯರನ್ನು (Affects Woman) ತಟ್ಟುತ್ತವೆ. ಅವರ ಬದುಕನ್ನು ಮೂರಾಬಟ್ಟೆ ಮಾಡುತ್ತವೆ. 2021ರಲ್ಲಿ ಕೀನ್ಯಾದ ರಾಷ್ಟ್ರೀಯ ಲೈಬ್ರರಿ (National Library of Kenya) ಪ್ರಕಟಿಸಿದ್ದ ಒಂದು ಅಧ್ಯಯನದ ಪ್ರಕಾರ, ಹವಾಮಾನ ಬದಲಾವಣೆಯಿಂದ ಕೃಷಿ (Agriculture) ಉತ್ಪನ್ನ ಕಡಿಮೆಯಾದರೂ ಅದರ ಪರಿಣಾಮ ಮಹಿಳೆಯರ ಮೇಲಾಗುತ್ತದೆ. ಅವರು ಅತಿ ಹೆಚ್ಚಾಗಿ ಕೌಟುಂಬಿಕ ದೌರ್ಜನ್ಯಕ್ಕೆ (Domestic Violence) ಒಳಗಾಗುತ್ತಾರೆ. ಸಂಗಾತಿಯಿಂದಲೇ (Partner) ಅತಿಯಾದ ಶೋಷಣೆಗೆ ಒಳಗಾಗುತ್ತಾರೆ ಎಂದು ಈ ಅಧ್ಯಯನ ಬಹಿರಂಗಪಡಿಸಿತ್ತು. ಅಲ್ಲದೆ, ಇಂತಹ ಪರಿಣಾಮಗಳಿಂದಾಗಿ, ಹೆಣ್ಣುಮಕ್ಕಳು ಶಾಲೆ (School) ಬಿಡುವ ಸಂಖ್ಯೆ ಹೆಚ್ಚಾಗುತ್ತದೆ. ಶಿಕ್ಷಣ ಸ್ಥಗಿತವಾಗುವುದರಿಂದ ಬಾಲ್ಯ ವಿವಾಹವೂ (Child Marriage) ಅಧಿಕವಾಗುತ್ತದೆ. ಇದರಿಂದಾಗಿ ಆಕೆ ಭವಿಷ್ಯದಲ್ಲಿ ನಾನಾ ರೀತಿಯ ಮಾನಸಿಕ (Mental Health), ಆರೋಗ್ಯ, ದೈಹಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹವಾಮಾನ ಬದಲಾವಣೆ ಮಹಿಳೆಯರ ಮೇಲೆ ಬೀರುತ್ತಿರುವ ಪರಿಣಾಮಗಳು ಏಕಾಏಕಿ ಕಣ್ಣಿಗೆ ಕಾಣುವಂಥದ್ದಲ್ಲ. ಆದರೆ, ದೀರ್ಘಕಾಲಿಕವಾಗಿ ಹೆಣ್ಣಿನ ಸ್ಥಾನಮಾನಕ್ಕೆ ಧಕ್ಕೆ ಉಂಟುಮಾಡುವಂಥದ್ದು ಎನ್ನುವುದು ಈಗ ಅರಿವಿಗೆ ಬರುತ್ತಿದೆ.
WORLD SEXUAL HEALTH DAY: ಸೆಕ್ಸ್ ಲೈಫ್ ಬಗ್ಗೆ ಓಶೋ ಏನ್ ಹೇಳ್ತಾರೆ ?
ಹವಾಮಾನದ ಬದಲಾವಣೆಯಿಂದ (Climate Change) ಸಂಭವಿಸುವ ದುರಂತಗಳಲ್ಲಿ ಹೆಣ್ಣಿಗೆ ಆರೋಗ್ಯ ವ್ಯವಸ್ಥೆ ದೊರೆಯುವುದಿಲ್ಲ. ಕುಟುಂಬದ ಪುರುಷರ ರಕ್ಷಣೆಗೆ ತೋರುವಷ್ಟು ಮುತುವರ್ಜಿ ಹೆಣ್ಣುಮಕ್ಕಳ ಜೀವರಕ್ಷಣೆಗೆ ತೋರುವುದಿಲ್ಲ. ಅಲ್ಲದೆ, ಬಹಳಷ್ಟು ಮಹಿಳೆಯರು ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲದೆ ಹೆರಿಗೆ (Give Birth) ಆಗುತ್ತಿವೆ. ಈ ಸಮಯದಲ್ಲಿ ಅವರಿಗೆ ಶುದ್ಧ ನೀರು (Pure Water) ಸಹ ಲಭ್ಯವಾಗುವುದಿಲ್ಲ.
ವಿಶ್ವದಲ್ಲಿ ಅರಿವು ಮೂಡಲಿ
ಹವಾಮಾನ ಬದಲಾವಣೆಯು ಮಹಿಳೆಯರ ಲೈಂಗಿಕ (Sexual) ಮತ್ತು ಸಂತಾನೋತ್ಪತ್ತಿ ಆರೋಗ್ಯದೊಂದಿಗೆ (Reproductive Health) ತೀರ ನಿಕಟ ಸಂಪರ್ಕ ಹೊಂದಿದೆ ಎಂದರೆ ಅಚ್ಚರಿಯಾಗಬಹುದು. ಈ ಸಮಯದಲ್ಲಿ ಹೆಣ್ಣಿಗೆ ಹೆಚ್ಚಿನ ರಕ್ಷಣೆ ಅಗತ್ಯ. ಎಚ್ಚರಿಕೆಯೂ ಅಗತ್ಯ. ಈ ಕುರಿತು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವಿಶ್ವದ ಗಮನ ಸೆಳೆಯುವ ಕೆಲಸ ಆರಂಭಿಸಿದೆ. ಏಕೆಂದರೆ, ಇದು ಕೇವಲ ಪಾಕಿಸ್ತಾನದ್ದೊಂದರ ಕತೆಯಲ್ಲ. ವಿಶ್ವದಾದ್ಯಂತ ಎಲ್ಲೇ ಹವಾಮಾನ ಬದಲಾವಣೆಯಾದರೂ ಕಾಣುವ ಗೋಳು. ಹೀಗಾಗಿ, ಇಂತಹ ಸನ್ನಿವೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ ಎನ್ನುವುದು ಅಲ್ಪ ನೆಮ್ಮದಿ ನೀಡುವ ಸಂಗತಿ.
World Sexual Health Day: ಸೆಕ್ಸ್‌ನಲ್ಲಿ ಸಕ್ರಿಯವಾಗಿದ್ದರೆ ನಿಯಮಿತ ತಪಾಸಣೆ ಮಾಡ್ಲೇಬೇಕು