ಸ್ತ್ರೀ ಸುನ್ನತಿ ಅಥವಾ ಯೋನಿ ಛೇದನ ಮಹಿಳೆಯರ ಲೈಂಗಿಕ ಆನಂದವನ್ನು ಕಸಿದುಕೊಳ್ಳುವ ಒಂದು ಕ್ರೂರ ಪದ್ಧತಿ. ಆಫ್ರಿಕಾದ ದೇಶಗಳಲ್ಲದೆ, ಭಾರತದ ದಾವೂದಿ ಬೊಹ್ರಾ ಸೇರಿದಂತೆ ಕೆಲವು ಸಮುದಾಯಗಳಲ್ಲಿಯೂ ಇದು ರಹಸ್ಯವಾಗಿ ಆಚರಣೆಯಲ್ಲಿದೆ. ಯಾಕಿದು ಅಚರಣೆಗೆ ಬಂತು? ಏನಿದರ ಹಕೀಕತ್?
ನಿಮಗೆ ʼಸ್ತ್ರೀ ಸುನ್ನತಿʼ ಅಥವಾ ʼಯೋನಿ ಛೇದನʼ ಎಂಬ ಕ್ರೂರ ಪದ್ಧತಿಯ ಬಗ್ಗೆ ಗೊತ್ತಿರಬಹುದು. ಅದು ನೈಜೀರಿಯಾ, ಉಗಾಂಡ ಮುಂತಾದ ದೇಶಗಳಲ್ಲಿ ಅತಿ ಸಾಮಾನ್ಯ ಎಂಬುದೂ ಗೊತ್ತಿರಬಹುದು. ಆದರೆ ಅದು ಭಾರತದಲ್ಲೂ ಹಲವೆಡೆ ನಡೆಯುತ್ತದೆ ಎಂಬುದು ಗೊತ್ತೆ? ಮತ್ತು, ಈ ಹೀನ ಪದ್ಧತಿಯನ್ನು ವಿರೋಧಿಸಲೆಂದೇ ವರ್ಷದಲ್ಲಿ ಒಂದು ದಿನ ಮೀಸಲಾಗಿದೆ ಎಂಬುದು ಗೊತ್ತೆ?
ಮೊದಲಿಗೆ ಸ್ತ್ರೀ ಸುನ್ನತಿ ಅಂದರೇನು ಅಂತ ಗೊತ್ತಿಲ್ಲದವರಿಗೆ ಒಂದು ಸಣ್ಣ ಪರಿಚಯ. ಮುಸ್ಲಿಮರಲ್ಲಿ ಹಾಗೂ ಯಹೂದಿಗಳಲ್ಲಿ ನಡೆಯುವ ಪುರುಷ ಸುನ್ನತಿಯ ಪರಿಚಯ ನಿಮಗಿರಬಹುದು. ಅದರಲ್ಲಿ ಶಿಶ್ನದ ಮುಂದೊಗಲನ್ನು ಕತ್ತರಿಸಿ ತೆಗೆಯಲಾಗುತ್ತದೆ. ಇದು ಶಿಶ್ನದ ಆರೋಗ್ಯ ಕಾಪಾಡಿಕೊಳ್ಳಲು ನಡೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಮಾಡದೆಯೂ ಶಿಶ್ನವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದಾಗಿದೆ.
ಇದೇ ರೀತಿ, ಕೆಲವು ಮುಸ್ಲಿಂ ದೇಶಗಳಲ್ಲಿ ಸ್ತ್ರೀಯರ ಯೋನಿಯ ಒಂದು ಭಾಗವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಆದರೆ ಇದು ಪುರುಷ ಸುನ್ನತಿಗಿಂತಲೂ ಕ್ರೂರ, ಅಮಾನವೀಯ ಕ್ರಮ. ಇಲ್ಲಿ ಮುಂದೊಗಲಲ್ಲ, ಬದಲಾಗಿ, ಸ್ತ್ರೀಗೆ ಲೈಂಗಿಕ ಆನಂದವನ್ನು ನೀಡುವ ʼಚಂದ್ರನಾಡಿʼ ಅಥವಾ ʼಭಗಾಂಕುರʼ ಎಂಬ ಪ್ರಮುಖ ಭಾಗವನ್ನೇ ಕತ್ತರಿಸಿ ತೆಗೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮಾಡುವುದು ಆಕೆ ಹದಿಹರೆಯಕ್ಕೆ ಕಾಲಿಡುವ ಸಮಯದಲ್ಲಿ. ಆಗಷ್ಟೇ ಆಕೆ ಯುವತಿಯಾಗಿ, ತನ್ನ ದೇಹದ ಲೈಂಗಿಕ ಆನಂದವನ್ನು ಕಂಡುಕೊಳ್ಳಲು ಆರಂಭಿಸಿರುತ್ತಾಳೆ. ಅಂಥ ಹೊತ್ತಿನಲ್ಲೇ ಇದಕ್ಕೆ ಕತ್ತರಿ ಹಾಕಲಾಗುತ್ತದೆ.
ಮಹಿಳೆಯ ಸುಖಕ್ಕೆ ಕತ್ತರಿ
ಇದರ ಉದ್ದೇಶವೇನು? ಸ್ತ್ರೀ ಮುಂದೆಂದೂ ಕಾಮಸುಖವನ್ನು ಅನುಭವಿಸಲೇಬಾರದು. ಅದೇನಿದ್ದರೂ ಪುರುಷನ ಆನಂದ ಮಾತ್ರ. ಲೈಂಗಿಕತೆಯಲ್ಲಿ ಇರುವ ಸುಖ ಗೊತ್ತಾದರೆ ಆಕೆ ಹಲವು ಪುರುಷರ ಹಿಂದೆ ಹೋಗಬಹುದು. ಸ್ವೇಚ್ಛೆ, ಹಾದರ ಹೆಚ್ಚಾಗಬಹುದು. ಇಡೀ ಜನಾಂಗವೇ ತಲೆತಗ್ಗಿಸಬೇಕಾಗಬಹುದು- ಎಂಬುದು ಇದರ ಹಿಂದಿರುವ ಚಿಂತನೆ. ಹಿಂದೆ ಈ ದೇಶಗಳಲ್ಲಿ ಪುರುಷರ ಸಂಖ್ಯ ಕಡಿಮೆಯಿದ್ದು, ಸ್ತ್ರೀಯರ ಸಂಖ್ಯೆ ಹೆಚ್ಚಿದ್ದಾಗ, ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲೆಂದು ತಂಡ ರೂಢಿ ಇದಾಗಿರಬಹುದು.
ಪ್ರತಿ ವರ್ಷ ಫೆಬ್ರವರಿ 6ರಂದು ವಿಶ್ವದಾದ್ಯಂತ ಮಹಿಳಾ ಜನನಾಂಗ ಹಾನಿಗೆ ಶೂನ್ಯ ಸಹಿಷ್ಣುತೆ ಅಂತರರಾಷ್ಟ್ರೀಯ ದಿನ (International Day of Zero Tolerance for Female Genital Mutilation – FGM) ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಒಂದೇ — ಮಹಿಳೆಯರು ಮತ್ತು ಬಾಲಕಿಯರ ದೇಹದ ಮೇಲೆ ನಡೆಯುವ ಈ ಹಾನಿಕಾರಕ ಆಚರಣೆಯ ವಿರುದ್ಧ ಧ್ವನಿ ಎತ್ತುವುದು. ಇದು ಕೇವಲ ಒಂದು ದಿನದ ಆಚರಣೆ ಅಲ್ಲ. ಇದು ಮೌನ ಮುರಿಯುವ, ಬದುಕು ಉಳಿಸುವ ಹೋರಾಟ.
ಎಫ್‌ಜಿಎಂ ಅಥವಾ Female Genital Mutilation (FGM) ತುಂಬ ಕ್ರೂರ. ಇದ್ನು ವೈದ್ಯರೂ ಮಾಡುವುದಲ್ಲ. ಯಾರೋ ಕುಟುಂಬದ ಹಿರಿಯ ಮಹಿಳೆ ಅಥವಾ ದಾದಿಯೇ ಯಾವ ಸುರಕ್ಷತಾ ಕ್ರಮಗಳೂ ಇಲ್ಲದೇ ಇದನ್ನು ಮಾಡುತ್ತಾರೆ. ಸುರಕ್ಷಿತವಲ್ಲದ ಬ್ಲೇಡ್, ಚೂರಿಯಿಂದ ಕತ್ತರಿಸುತ್ತಾರೆ. ಇದರಿಂದ ನೋವು ಹಿಂಸೆ ಖಚಿತ. ಕೆಲವರು ಇದರಿಂದಾಗಿ ಸೋಂಕು ರೋಗ ಉಂಟಾಗಿ ಉಲ್ಬಣಗೊಂಡು ಸತ್ತೇಹೋಗುತ್ತಾರೆ. ಇನ್ನುಳಿದವರಿಗೆ ತೀವ್ರ ನೋವು, ದೈಹಿಕ ಹಾಗೂ ಮಾನಸಿಕ ಆಘಾತ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಖಚಿತ.
ಭಾರತದಲ್ಲೂ ಯಥೇಚ್ಛ
ಜಾಗತಿಕವಾಗಿ 20 ಕೋಟಿಗಿಂತ ಹೆಚ್ಚು ಮಹಿಳೆಯರು ಮತ್ತು ಬಾಲಕಿಯರು ಎಫ್‌ಜಿಎಂಗೆ ಒಳಗಾಗಿದ್ದಾರೆ ಎಂಬ ಅಂದಾಜು ಇದೆ. ಈ ಸಮಸ್ಯೆಯನ್ನು ಸಾಮಾನ್ಯವಾಗಿ “ಭಾರತದ ಹೊರಗಿನ ದೇಶಗಳ ಸಮಸ್ಯೆ” ಎಂದು ನೋಡಲಾಗುತ್ತದೆ. ಆದರೆ ಸಂಶೋಧನೆಗಳ ಪ್ರಕಾರ ಭಾರತದಲ್ಲಿಯೂ ಈ ಆಚರಣೆ ಇದೆ. ವಿಶೇಷವಾಗಿ ಕೆಲವು ಸಮುದಾಯಗಳು ಮತ್ತು ಪ್ರದೇಶಗಳಲ್ಲಿ ಇದು ಇನ್ನೂ ಮರೆಮಾಚಲ್ಪಟ್ಟ ಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ದಾವೂದಿ ಬೊಹ್ರಾ ಸಮುದಾಯದಲ್ಲಿ, ಗುಜರಾಥಿನ ಅಲ್ವಾಯಿ ಸಮುದಾಯದಲ್ಲಿ ಇದು ಇದೆ. ಕೇರಳದಲ್ಲಿ ಕೆಲವೆಡೆ ಇದೆಯೆಂದೂ ತಿಳಿದುಬಂದಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನಗಳಲ್ಲೂ ಇದೆ.
ಹೆಚ್ಚಾಗಿ ಇದು ರಹಸ್ಯವಾಗಿ ನಡೆಯುತ್ತದೆ. ಮನೆಗಳೊಳಗೆ, ರಹಸ್ಯವಾಗಿ, ಕುಟುಂಬ ಭೇಟಿಗಳ ಸಮಯದಲ್ಲಿ, ಕೆಲವೊಮ್ಮೆ ವೈದ್ಯಕೀಯ ಪರಿಸರದಲ್ಲೇ ನಡೆಸಲಾಗುತ್ತದೆ. ಇದರಿಂದಾಗಿ ಕಾನೂನು, ಆರೋಗ್ಯ ವ್ಯವಸ್ಥೆ ಮತ್ತು ಸಮಾಜದ ಕಣ್ಣಿಗೆ ಬೀಳದೆ ಉಳಿಯುತ್ತದೆ.
ಈ ಆಚರಣೆ “ಸಂಪ್ರದಾಯ” ಎನ್ನುವ ಹೆಸರಿನಲ್ಲಿ ಮುಂದುವರಿಯಬಾರದು ಎಂಬುದೇ ಈ ದಿನದ ಮೂಲ ಸಂದೇಶ. ಇದರ ವಿರುದ್ಧ ಮಾತನಾಡುವುದು ಏಕೆ ಮುಖ್ಯವೆಂದರೆ, ಮೌನವೇ ಹಾನಿಕಾರಕ ಆಚರಣೆಗಳ ದೊಡ್ಡ ಬಲ. ಮಾತನಾಡಿದಾಗ ಮಾತ್ರ ಸಂತ್ರಸ್ತರಿಗೆ ಧೈರ್ಯ ಬರುತ್ತದೆ. ಅರಿವು ಹೆಚ್ಚಾದಾಗಲೇ ರಕ್ಷಣೆ ಸಾಧ್ಯ. ಒಬ್ಬ ಬಾಲಕಿಯ ದೇಹದ ಮೇಲೆ ನಡೆಯುವ ಹಾನಿ — ವೈಯಕ್ತಿಕ ವಿಷಯವಲ್ಲ, ಅದು ಮಾನವ ಹಕ್ಕಿನ ಪ್ರಶ್ನೆ.
Female Genital Mutilation ಎನ್ನುವುದು ಸಂಸ್ಕೃತಿಯ ಗುರುತು ಆಗಿರಬೇಕಿಲ್ಲ — ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಾಗುತ್ತಿರುವ ನೋವು, ಯಾತನೆ. ಮಕ್ಕಳ ದೇಹ ಮತ್ತು ಬದುಕು — ಯಾವ ಕೀಳು ಸಂಪ್ರದಾಯಕ್ಕೂ ಬಲಿ ಆಗಬಾರದು.


