ಮುಂಬೈ ಪೊಲೀಸ್ ಇಲಾಖೆಯ ಮೊದಲ ಮಹಿಳಾ ಜಂಟಿ ಪೊಲೀಸ್ ಕಮಿಷನರ್‌ ಆಗಿ ಇತಿಹಾಸ ಬರೆದಿದ್ದಾರೆ ಡಾ. ಆರತಿ ಸಿಂಗ್. ಅದರಲ್ಲೂ ಗುಪ್ತಚರ ಇಲಾಖೆಗಾಗಿ ಸೃಷ್ಟಿಸಿದ ಹೊಸ ಪೋಸ್ಟ್‌ ಇದು. ಈ ಲೇಡಿ ಸಿಂಗಂ ಮುಂದೆ ಮಹತ್ವದ ಜವಾಬ್ದಾರಿ ಇದೆ. 

ಮುಂಬಯಿಯಲ್ಲಿ ಮಹಾರಾಷ್ಟ್ರ ಸರಕಾರ ಪೊಲೀಸ್‌ ಇಲಾಖೆಯಲ್ಲಿ ಹೊಸದೊಂದು ಪೋಸ್ಟ್‌ ಸೃಷ್ಟಿಸಿದೆ. ಅದು ರಾಜ್ಯದ ಜಂಟಿ ಪೊಲೀಸ್ ಆಯುಕ್ತ (ಗುಪ್ತಚರ ಇಲಾಖೆ) ಹುದ್ದೆ. ಇದುವರೆಗೂ ಗುಪ್ತಚರ ಇಲಾಖೆಗೂ ಪೊಲೀಸ್‌ ಆಯುಕ್ತರೇ ಮುಖ್ಯಸ್ಥರಾಗಿದ್ದರು. ಇದೀಗ ಗುಪ್ತಚರ ಇಲಾಖೆಗಾಗಿಯೇ ಈ ಹೊಸ ಪೋಸ್ಟ್‌ ಸೃಷ್ಟಿ ಮಾಡಲಾಗಿದೆ. ಮತ್ತು ಈ ಪೋಸ್ಟ್‌ ಅನ್ನು, ಲೇಡಿ ಸಿಂಗಂ ಎನಿಸಿಕೊಂಡಿರುವ ಒಬ್ಬ ಮಹಿಳಾ ಆಯುಕ್ತರು ವಹಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ. ಅವರೇ ಡಾ. ಆರತಿ ಸಿಂಗ್. ಮುಂಬೈನ ಮೊದಲ ಜಂಟಿ ಪೊಲೀಸ್ ಆಯುಕ್ತ (ಗುಪ್ತಚರ) ಹುದ್ದೆಯನ್ನು ಅವರು ವಹಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಅವರು ಮುಂಬಯಿಯ ಮೊದಲ ಮಹಿಳಾ ಜಂಟಿ ಪೊಲೀಸ್‌ ಕಮಿಷನರ್‌ ಕೂಡ. 

ಯಾಕೆ ಈ ಹೊಸ ಹುದ್ದೆ? ಸರ್ಕಾರದ ನಿರ್ಣಯದ (GR) ಪ್ರಕಾರ, ಮುಂಬೈ ದೇಶದ ಆರ್ಥಿಕ ರಾಜಧಾನಿ. ಗುಪ್ತಚರ ಇಲಾಖೆಯ ಪಾತ್ರ ವಿಶೇಷವಾಗಿ ಇಲ್ಲಿ ನಿರ್ಣಾಯಕ. ನಗರ ಹೆಚ್ಚಿನ ಬಾರಿ ಆರ್ಥಿಕ ಅಪರಾಧ, ಭಯೋತ್ಪಾದನೆ ಬೆದರಿಕೆ ಅನುಭವಿಸಿದೆ. ದಿಲ್ಲಿಯಂತೆಯೇ ಇಲ್ಲೂ ಸಾವಿರಾರು ವಿವಿಐಪಿಗಳು ಮತ್ತು ಗಣ್ಯರು ಇದ್ದಾರೆ. ಭಾರತದ ರಾಷ್ಟ್ರಪತಿ, ಉಪಾಧ್ಯಕ್ಷ, ಪ್ರಧಾನಿ ಮತ್ತು ಇತರ ಪ್ರಮುಖ ವ್ಯಕ್ತಿಗಳು ಆಗಾಗ್ಗೆ ಮುಂಬೈಗೆ ಭೇಟಿ ನೀಡುತ್ತಾರೆ. ಗುಪ್ತಚರ ಇಲಾಖೆ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಸದಾ ಕಾಯುತ್ತಿರಬೇಕಾಗುತ್ತೆ.

ಆರತಿ ಸಿಂಗ್ ಯಾರು? ಇವರು 2006ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಕಟ್ಟುನಿಟ್ಟಾದ ಆಫೀಸರ್‌ ಎಂದು ಹೆಸರಾದವರು. ಅಪರಾಧಿಗಳಿಗೆ ಇವರ ಹೆಸರು ಕೇಳಿದರೆ ನಡುಕ. ಆರತಿ ಸಿಂಗ್ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿ. ಪ್ರಸ್ತುತ ಮುಂಬೈನಲ್ಲಿ ಐಜಿ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬದ್ಲಾಪುರದಲ್ಲಿ ನಡೆದಿದ್ದ, ಅಪ್ರಾಪ್ತ ವಯಸ್ಕ ಬಾಲಕಿಯ ಮೇಲಿನ ಲೈಂಗಿಕ ಹಲ್ಲೆ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿಯ ಮುಖ್ಯಸ್ಥರಾಗಿದ್ದರು. ಈ ಹಿಂದೆ ಮುಂಬೈನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು. ಮಹಾರಾಷ್ಟ್ರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇನ್ಸ್‌ಪೆಕ್ಟರ್ ಜನರಲ್ (ಆಡಳಿತ) ಆಗಿ ಸೇವೆ ಸಲ್ಲಿಸಿದ್ದ ಉಂಟು. 

ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ (ಬಿಎಚ್‌ಯು) ಎಂಬಿಬಿಎಸ್ ಪದವೀಧರೆಯಾದ ಆರತಿ ವೈದ್ಯಕೀಯ ಬಿಟ್ಟು ಆಸಕ್ತಿಯಿಂದಲೇ ಐಪಿಎಸ್‌ ಮಾಡಿದರು. ನಂತರ ಅಮರಾವತಿಯ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಕೋವಿಡ್ ಯೋಧೆಯಾಗಿ ರಾಷ್ಟ್ರೀಯ ಪ್ರಶಸ್ತಿಯ ಗೌರವ ಪಡೆದಿದ್ದಾರೆ. ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಮಾಡಿದ ಕೆಲಸಕ್ಕಾಗಿ ಭಾರತ ಸರ್ಕಾರದಿಂದ ಆಂತರಿಕ ಭದ್ರತಾ ಪದಕವನ್ನು ಪಡೆದಿದ್ದಾರೆ. ಲಿಂಗ ತಾರತಮ್ಯವನ್ನು ಎದುರಿಸಿದ ದಿಟ್ಟ ಅಧಿಕಾರಿಗಳು ಎಂದು ಫೋರ್ಬ್ಸ್‌ ನಿಯತಕಾಲಿಕೆಯಲ್ಲಿ ಕಾಣಿಸಿಕೊಂಡ ಕೆಲವೇ ಐಪಿಎಸ್ ಅಧಿಕಾರಿಗಳಲ್ಲಿ ಡಾ. ಆರತಿ ಸಿಂಗ್ ಕೂಡ ಒಬ್ಬರು.

ಆರತಿ ಸಿಂಗ್‌ ಅವರ ಕೆಲಸವೇನು? ಮುಂಬೈ ಅನೇಕ ಭಯೋತ್ಪಾದಕ ದಾಳಿಗಳನ್ನು ಎದುರಿಸಿದೆ. ಗುಪ್ತಚರ ಮಾಹಿತಿಗಳನ್ನು ಸರಿಯಾಗಿ ಗಮನಿಸಿದ್ದರೆ ಮತ್ತು ಸಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ಈ ಕೆಲವು ದಾಳಿಗಳನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು ಅಥವಾ ತಡೆಯಬಹುದಿತ್ತು. ಇನ್ನು ಮುಂದೆ ಹೀಗಾಗದಂತೆ ತಡೆಯಲು ಮುಂಬೈ ಪೊಲೀಸರು ಈ ಹೊಸ ಹುದ್ದೆಯನ್ನು ಪ್ರಾರಂಭಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತರು ಗುಪ್ತಚರ ಮಾಹಿತಿಯನ್ನು ನಿರ್ದಿಷ್ಟವಾಗಿ ನಿರ್ವಹಿಸುತ್ತಾರೆ. 

ಅಪ್ಪನ ಎಲ್ಲಾ ಆಸ್ತಿ ಹೆಣ್ಣುಮಕ್ಕಳಿಗೆ ಸಿಗತ್ತಾ? ಯಾವುದರಲ್ಲಿ ಹಕ್ಕಿಲ್ಲ? ಇಲ್ಲಿದೆ ಫುಲ್​ ಡಿಟೇಲ್ಸ್​

ಮುಂಬೈ ಪೊಲೀಸ್ ಸಾಂಸ್ಥಿಕ ರಚನೆಯಲ್ಲಿ ಇದು ಆರನೇ ಜಂಟಿ ಆಯುಕ್ತ ಹುದ್ದೆ. ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ, ಆಡಳಿತ, ಆರ್ಥಿಕ ಅಪರಾಧಗಳ ವಿಭಾಗ ಮತ್ತು ಸಂಚಾರವನ್ನು ನಿರ್ವಹಿಸಲು ಈಗಾಗಲೇ ಜಂಟಿ ಪೊಲೀಸ್ ಆಯುಕ್ತರು ಇದ್ದಾರೆ. ಇವರು ನೇರವಾಗಿ ಪೊಲೀಸ್ ಆಯುಕ್ತರಿಗೆ ವರದಿ ಮಾಡುತ್ತಾರೆ. ಸ್ಲೀಪರ್ ಸೆಲ್‌ಗಳ ಮೇಲೆ ನಿಗಾ ಇಡುವುದು ಸೇರಿದಂತೆ ಗುಪ್ತಚರ ಸಂಗ್ರಹಣೆಯ ಮೇಲ್ವಿಚಾರಣೆಯ ಜವಾಬ್ದಾರಿ ಇವರದು. ಅಕ್ರಮ ನುಸುಳುಕೋರರು ಹೆಚ್ಚಾಗಿ ನಗರಕ್ಕೆ ಬರುತ್ತಿರುವುದರಿಂದ, ಗುಪ್ತಚರ ಮಾಹಿತಿಯನ್ನು ಸಂಸ್ಕರಿಸುವಲ್ಲಿನ ವಿಳಂಬವನ್ನು ಪರಿಹರಿಸುವುದು ಉದ್ದೇಶ. 

ಈ ತಿಂಗಳ ಆರಂಭದಲ್ಲಿ ಮುಂಬೈ ನಗರಕ್ಕೆ ಪೊಲೀಸ್ ಆಯುಕ್ತರಾಗಿ ದೇವನ್ ಭಾರ್ತಿ ಅವರನ್ನು ನೇಮಿಸಲಾಗಿತ್ತು. ಇಲ್ಲಿಯವರೆಗೆ ಮುಂಬೈ ಪೊಲೀಸರಿಗೆ ನಿರ್ದಿಷ್ಟ ಗುಪ್ತಚರ ಘಟಕವಿರಲಿಲ್ಲ. ಪ್ರತಿಯೊಂದು ಇಲಾಖೆ ಮತ್ತು ಅದರ ಅಧಿಕಾರಿಗಳು ಮಾಹಿತಿದಾರರ ಜಾಲವನ್ನು ಹೊಂದಿದ್ದರು. ಹೊಸ ಅಪರಾಧಗಳು ಮತ್ತು ಗುರಿಗಳ ಯುಗದಲ್ಲಿ ರಚನಾತ್ಮಕ ಗುಪ್ತಚರ ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕದ ಕೊರತೆ ಇತ್ತು. ಅದೀಗ ನಿವಾರಣೆಯಾಗಿದೆ. 

ಫಸ್ಟ್‌ ಟೈಂ 'ಲೈಫ್ ಸೀಕ್ರೆಟ್' ಹಂಚಿಕೊಂಡ ರಾಧಿಕಾ ಪಂಡಿತ್: ಕಾಮೆಂಟ್ ಏನಂತ ಬರ್ತಿದೆ ನೋಡಿ..!