ರಷ್ಯಾ ಮಹಿಳೆಯ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಯೋಧರ ಶೌರ್ಯವನ್ನು ರಷ್ಯಾ ಮಹಿಳೆ ಶ್ಲಾಘಿಸಿದ್ದಾರೆ. ಇದೇ ವೇಳೆ ಭಾರತ ನನ್ನ ಶಾಂತಿಯುತ ಮನೆ. ಭಾರತೀಯ ಸೈನಿಕರ ಕಾರಣದಿಂದ ನಾನು ನೆಮ್ಮದಿಯಾಗಿ ಮಲಗುತ್ತಿದ್ದೇನೆ, ದೇಶ ತೊರೆಯುವುದಿಲ್ಲ ಎಂದು ರಷ್ಯಾ ಮಹಿಳೆ ಹೇಳಿದ್ದಾರೆ.
ನವದೆಹಲಿ(ಮೇ.14) ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ಸಂಘರ್ಷ ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ. ಆದರೆ ಭಾರತದ ನಾಗರೀಕರ ಸಂಪೂರ್ಣ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಭಾರತೀಯ ಸೇನೆ ನೋಡಿಕೊಂಡಿದೆ. ಇದರ ನಡುವೆ ಹಲವು ವಿದೇಶಿಗರು ಭಾರತದಿಂದ ದಿಢೀರ್ ವಾಪಾಸ್ಸಾಗಿದ್ದರು. ಇದರ ನಡುವೆ ರಷ್ಯಾದ ಮಹಿಳೆ ತಾನು ಭಾರತ ಬಿಟ್ಟು ಹೋಗುವುದಿಲ್ಲ. ಭಾರತ ನನ್ನ ತವರಾಗಿದೆ. ಭಾರತೀಯ ಸೈನಿಕರಿಂದ ನಾನು ಮನೆಯಲ್ಲಿ ನೆಮ್ಮದಿಯಾಗಿ ಮಲಗುತ್ತಿದ್ದೇನೆ. ಯಾವುದೇ ಅಡ್ಡಿ ಆತಂಕವಿಲ್ಲದೆ ಇದ್ದೇನೆ ಎಂದು ರಷ್ಯಾ ಮಹಿಳೆ ವಿಡಿಯೋ ಮೂಲಕ ಹೇಳಿದ್ದಾರೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತ ನನ್ನ ತವರು
ರಷ್ಯಾ ಮೂಲದ ಪೊಲಿನಾ ಭಾರತೀಯನ ಮದುವೆಯಾಗಿ ಗುರುಗಾಂವ್‌ನಲ್ಲಿ ನೆಲೆಸಿದ್ದಾರೆ. ಆದರೆ ಭಾರತ ಪಾಕಿಸ್ತಾನ ಗಡಿ ಸಂಘರ್ಷದ ಸುದ್ದಿ ಕೇಳಿದ ರಷ್ಯಾದಲ್ಲಿರುವ ಪೊಲಿನಾ ಅಜ್ಜಿ ಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ರಷ್ಯಾಗೆ ಹಿಂದಿರುಗುವಂತೆ ಮನವಿ ಮಾಡಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಪೊಲಿನಾ ಅಗರ್ವಾಲ್, ದೇಶದ ಜನರು ನೆಮ್ಮದಿಯಿಂದ ನಿದ್ರಿಸಲು ಸೈನಿಕರ ಧೈರ್ಯ ಮತ್ತು ಬದ್ಧತೆಯನ್ನು ಪೋಲಿನಾ ಶ್ಲಾಘಿಸಿದ್ದಾರೆ. 'ನನ್ನ ರಷ್ಯಾದ ಅಜ್ಜಿ ಸುದ್ದಿ ಓದಿ ಮನೆಗೆ ವಾಪಸ್ ಬರಲು ಸೂಚಿಸಿದ್ದರು. ನಾನು ಯಾವ ಮನೆ ಎಂದು ಕೇಳಿದೆ. ನಾನು ಈಗ ನನ್ನ ಮನೆಯಲ್ಲಿದ್ದೇನೆ. ಅದು ಭಾರತದ ಗುರುಗಾಂವ್‌ನಲ್ಲಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
India-Pakistan tension: ಎಚ್ಚರ, ಆಪರೇಷನ್ ಸಿಂದೂರ 3.0 ಈಗ ಶುರುವಾಗಿದೆ!
ಭಾರತೀಯ ಸೈನಿಕರಿಂದ ನೆಮ್ಮದಿಯ ನಿದ್ದೆ
ಭಾರತೀಯ ಸೈನಿಕರ ನಿಸ್ವಾರ್ಥತೆಯನ್ನು ಪೋಲಿನಾ ಶ್ಲಾಘಿಸಿದ್ದಾರೆ. 'ಭಾರತೀಯ ಸೈನಿಕರು ತುಂಬಾ ಸಮರ್ಪಿತರು ಮತ್ತು ವಿಶಾಲ ಹೃದಯವಂತರು. ನಾವು ರಾತ್ರಿ ನೆಮ್ಮದಿಯಿಂದ ನಿದ್ರಿಸಬಹುದು. ಅವರು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ, ನಾವು ಮೊದಲಿನಂತೆ ಬದುಕುತ್ತೇವೆ. ಏನಾದರೂ ಆಗುತ್ತಿದೆ ಎಂದು ನಮಗೆ ಅನಿಸುವುದಿಲ್ಲ.' 'ನಾನು ಅವರಿಗೆ ತುಂಬಾ ಕೃತಜ್ಞಳಾಗಿದ್ದೇನೆ. ಭಾರತವನ್ನು ನನ್ನ ಶಾಂತಿಯುತ ಮನೆ ಎಂದು ಕರೆಯಲು ಸಾಧ್ಯವಾಗುವಂತೆ ಮಾಡಿದ್ದಕ್ಕಾಗಿ ನಾನು ಅವರಿಗೆ ತುಂಬಾ ಕೃತಜ್ಞಳಾಗಿದ್ದೇನೆ' ಎಂದು ಪೋಲಿನಾ ಹೇಳಿದ್ದಾರೆ. ಒಂದೇ ದಿನದಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಹಲವರು ಪೋಲಿನಾಗೆ ಧನ್ಯವಾದ ಹೇಳಿದ್ದಾರೆ. ಇನ್ನು ಕೆಲವರು ಭಾರತೀಯ ಸೇನೆ ಕಾವಲಿದೆ, ನೆಮ್ಮದಿಯಿಂದಿರಿ ಎಂದು ಬರೆದಿದ್ದಾರೆ.
ಪಾಕಿಸ್ತಾನಕ್ಕೆ ತಕ್ಕ ಪಾಠ
ಹಲವು ದೇಶಗಳಲ್ಲಿ ನಿರಂತರ ಯುದ್ಧ ನಡೆಯುತ್ತಿದೆ. ಇದರ ನಡುವೆ ಯುದ್ಧದಿಂದ ದೂರ ಉಳಿಯುವ ಭಾರತದಲ್ಲಿ ಸಂಘರ್ಷ ಆರಂಭಗೊಂಡಿತ್ತು. ಪಾಕಿಸ್ತಾನದ ನರಿ ಬುದ್ಧಿಗೆ ಪಾಠ ಕಲಿಸಲು ಭಾರತ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದರಿಂದ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ದಾಳಿ ಪ್ರತಿದಾಳಿಗಳು ಆರಂಭಗೊಂಡಿತ್ತು. ಪಾಕಿಸ್ತಾನ ಕ್ಷಿಪಣಿ, ಡ್ರೋನ್ ಮೂಲಕ ದಾಳಿ ನಡೆಸಿತ್ತು. ಭಾರತ ಪಾಕಿಸ್ತಾನ ಸಂಘರ್ಷದಿಂದ ವಿಶ್ವದೆಲ್ಲೆಡೆ ಆತಂಕ ಹೆಚ್ಚಿತ್ತು. ಪ್ರಮುಖವಾಗಿ ಎರಡು ಪರಮಾಣು ಬಾಂಬ್ ರಾಷ್ಟ್ರಗಳ ನಡುವಿನ ಯುದ್ಧ ಜಗತ್ತಿನ ಆತಂಕ ಹೆಚ್ಚಿಸಿತ್ತು. ಆದರೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಮೂಲಕ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯಹಾಡಿತ್ತು. ಪಾಕಿಸ್ತಾನದ ದಾಳಿ ಪ್ರಯತ್ನ ವಿಫಲಗೊಳಿಸಿದ ಭಾರತೀಯ ಸೇನೆ, ಪಾಕಿಸ್ತಾನದ 11 ವಾಯುನೆಲೆ ಸೇರಿದಂತೆ ಹಲವು ಪ್ರದೇಶದ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿತ್ತು. ಪಾಕ್ ಮನವಿ ಪುರಸ್ಕರಿಸಿ ಕದನ ವಿರಾಮ ಘೋಷಿಸಿದ ಭಾರತ, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿತ್ತು.


