ಹೆರಿಗೆಯ ಬಳಿಕ ಸೊಂಟದ ಸುತ್ತಲೂ ಬೆಲ್ಟ್ ಅಥವಾ ಬಟ್ಟೆ ಕಟ್ಟಿಕೊಳ್ಳಲೇಬೇಕಾ? ಇದರ ಪ್ರಯೋಜನ ಏನು? ಇದು ಸೇಫಾ? ಇದರಿಂದ ಹೊಟ್ಟೆ ಕರಗತ್ತಾ? ಎಲ್ಲದ್ದಕ್ಕೂ ಸ್ತ್ರೀರೋಗ ತಜ್ಞರಾದ ಡಾ.ದೀಪ್ತಿ ಉತ್ತರಿಸಿದ್ದಾರೆ ನೋಡಿ...
ಹೆಣ್ಣಿನ ಜೀವನದಲ್ಲಿ ಹೆರಿಗೆ ಎನ್ನುವುದು ಪ್ರಮುಖ ಘಟ್ಟ. ಇದು ಹೆಣ್ಣಿಗೆ ಎರಡನೆಯ ಜನ್ಮ ಎಂದೇ ಹೇಳಲಾಗುತ್ತದೆ. ಗರ್ಭಿಣಿ ಆದ ದಿನದಿಂದಲೂ ಹೆಣ್ಣಿನ ದೇಹದಲ್ಲಿ ಆಗುವ ಬದಲಾವಣೆಗಳಿಂದ ಆಕೆಯ ಇಡೀ ಜೀವನ ಕ್ರಮವೇ ಬದಲಾಗಿ ಹೋಗುತ್ತದೆ. 9 ತಿಂಗಳು ಇನ್ನೊಂದು ಜೀವವನ್ನು ಗರ್ಭದಲ್ಲಿ ಇಟ್ಟುಕೊಂಡು ತನ್ನ ಆರೋಗ್ಯದ ಜೊತೆ ಮಗುವಿನ ಆರೋಗ್ಯವನ್ನೂ ಜತನ ಮಾಡುವುದು ಒಂದಾದರೆ, ಹೆರಿಗೆ ಆದ ಮೇಲೆ ಆಕೆಯ ಜೀವನ ಮತ್ತೊಂದು ಘಟ್ಟಕ್ಕೆ ತಲುಪುತ್ತದೆ. ಒಂದು ಕಡೆ ಮಗುವಿನ ಆರೈಕೆ ಜೊತೆಗೆ, ಹೆರಿಗೆ ಸಮಯದಲ್ಲಿ ಆಗುವ ನೋವನ್ನೂ ತಿಂದು, ಏನೂ ಆಗಿಲ್ಲ ಎನ್ನುವಂತೆ ಇರುವುದು ಸುಲಭದ ಮಾತೇನೂ ಅಲ್ಲ. ಅದನ್ನು ಅನುಭವಿಸಿದವರಿಗೇ ಕಷ್ಟ ಗೊತ್ತು. ಮುದ್ದು ಕಂದನ ಮುಖ ನೋಡಿ ತನ್ನ ನೋವನ್ನು ಹೆಣ್ಣು ಮರೆಯುತ್ತಾಳೆ ಎನ್ನುವುದು ನಿಜವಾದರೂ, ನಾರ್ಮಲ್ ಡೆಲಿವರಿಯಲ್ಲಿ ಒಂದು ರೀತಿಯ ನೋವು, ಸಿಸರೆಯನ್ ಆದರೆ ಇನ್ನೊಂದು ರೀತಿಯ ನೋವು... ಒಟ್ಟಿನಲ್ಲಿ ನೋವಿನಲ್ಲಿಯೇ ಕೆಲ ತಿಂಗಳು ಅಮ್ಮನಾದವಳು ಕಳೆಯುವುದು ಅನಿವಾರ್ಯವೇ ಆಗಿರುತ್ತದೆ.
ಸಾಮಾನ್ಯವಾಗಿ ಮಗುವಾದ ಮೇಲೆ ಅದು ಸಾಮಾನ್ಯ ಹೆರಿಗೆಯೇ ಆಗಿರಲಿ ಅಥವಾ ಸಿಸರಿಯನ್ನೇ ಆಗಿರಲಿ ಮೊದಲೆಲ್ಲಾ ಬಟ್ಟೆಯನ್ನು ಹೊಟ್ಟೆಗೆ ಸುತ್ತುತ್ತಿದ್ದರು. ಅದನ್ನು ಸುತ್ತುವುದಕ್ಕೂ ಒಂದು ರೀತಿಯ ಕ್ರಮ ಇತ್ತು. ಎಲ್ಲರಿಗೂ ಬರದ ವಿಷಯವದು. ಇದೇ ಕಾರಣಕ್ಕೆ ಕ್ರಮೇಣ ಹೊಟ್ಟೆಗೆ ಬೆಲ್ಟ್ ಬರಲು ಶುರುವಾಯಿತು. ಈಗಂತೂ ಬೆಲ್ಟ್ ಹಾಕುವವರೇ ಹೆಚ್ಚು. ಹಳ್ಳಿಗಳಲ್ಲಿ ಅಜ್ಜಿಯಂದಿರು ಇದ್ದ ಮನೆಗಳಲ್ಲಿ ಬಟ್ಟೆಯಿಂದ ಈಗಲೂ ಹೊಟ್ಟೆ ಸುತ್ತಲಾಗುತ್ತದೆ. ಹೊಟ್ಟೆಗೆ ಶಕ್ತಿ ಬರಲಿ ಹಾಗೂ ಆಪರೇಷನ್ ಬಳಿಕ ಬೆನ್ನು ನೋವು ಕಾಣಿಸಿಕೊಳ್ಳುವುದು ಸಹಜವಾದ್ದರಿಂದ ಬೆನ್ನಿಗೂ ಶಕ್ತಿ ಬರಲಿ ಎನ್ನುವ ಕಾರಣಕ್ಕೆ ಇದನ್ನು ಹಾಕಲಾಗುತ್ತದೆ.
ಹಾಗಿದ್ದರೆ ಬೆಲ್ಟ್ ಅಥವಾ ಬಟ್ಟೆ ಹಾಕಲೇಬೇಕಾ? ಇದು ಹಾಕದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಅದಕ್ಕೆ ಈಗ ಡಾ.ದೀಪ್ತಿ ಅವರು ಉತ್ತರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ತುಂಬಾ ಜನ ನನಗೆ ಈ ಪ್ರಶ್ನೆ ಕೇಳುತ್ತಿರುತ್ತಾರೆ. ಬೆಲ್ಟ್ ಅಥವಾ ಬಟ್ಟೆ ಹಾಕುವುದರಿಂದ ಏನೂ ಸಮಸ್ಯೆ ಇಲ್ಲ. ಆದರೆ ಕೆಲವರು ಇದನ್ನು ಕಟ್ಟುವುದರಿಂದ ಹೊಟ್ಟೆಯಲ್ಲಿ ಇರುವ ಬೊಜ್ಜು ಕರಗಿ ಹೋಗುತ್ತದೆ, ಹೊಟ್ಟೆ ಒಳಗೆ ಹೋಗುತ್ತದೆ ಎಂದುಕೊಳ್ಳುತ್ತಾರೆ. ಅದು ಇದು ಸರಿಯಲ್ಲ. ಇದನ್ನು ಕಟ್ಟುವ ಉದ್ದೇಶ spinal posture ಚೇಂಜ್ ಆಗಿ ಬೆನ್ನು, ಸೊಂಟ ನೋವು ಜಾಸ್ತಿ ಬರುವ ಕಾರಣ, ಇದನ್ನು ಸಪೋರ್ಟ್ ಆಗಿ ಕೊಡುತ್ತೇವೆ. ಇದು ಬೆನ್ನು ಮತ್ತು ಹೊಟ್ಟೆ ಭಾಗಕ್ಕೆ ಸಹಾಯ ಆಗುತ್ತದೆ ಎಂದಿದ್ದಾರೆ ಡಾ.ದೀಪ್ತಿ.
ಸೀಸರಿಯನ್ ಆದ ಬಳಿಕ ಬೆಲ್ಟ್ ಕಟ್ಟಿಕೊಳ್ಳಬಹುದಾ ಎನ್ನುವುದೂ ಹಲವರು ಪ್ರಶ್ನೆ. ಆದರೆ ಸೀಸರಿಯನ್ ಮಾಡಿದ ಬಳಿಕ ಆ ಜಾಗವನ್ನು ಕಟ್ ಮಾಡುವುದರಿಂದ scar ಮೇಲೆ ಕಟ್ಟಿಕೊಂಡರೆ ಕಟ್ ಮಾಡಿದ ಜಾಗಕ್ಕೆ ಇಡೀ ಒತ್ತಡ ಹೋಗುತ್ತದೆ. ಆದ್ದರಿಂದ ಸೀಸರಿಯನ್ ಆದವರು ಇದನ್ನು ಕಟ್ಟುಕೊಳ್ಳುವಾಗ ಕಟ್ ಮಾಡಿದ ಜಾಗಕ್ಕೆ ತಗಲದಂತೆ ಕಟ್ಟಿಕೊಳ್ಳುವುದು ಉತ್ತಮ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಲೇಬೇಕೆಂದೇನೂ ಇಲ್ಲ. ಬೆನ್ನು ನೋವು, ಹೊಟ್ಟೆ ಭಾಗಕ್ಕೆ (abdomen) support ಚೆನ್ನಾಗಿ ಸಿಗತಾ ಇದೆ ಎಂದರೆ ಕಟ್ಟಿಕೊಳ್ಳದೇ ಇದ್ದರೂ ಪರವಾಗಿಲ್ಲ ಎನ್ನುತ್ತಾರೆ ಅವರು. ಸಿಸರಿಯನ್ ಆದ ಸಮಯದಲ್ಲಿ ಬೆಲ್ಟ್ ಆಪರೇಷನ್ ಮಾಡಿದ ಜಾಗದಲ್ಲಿ ಚುಚ್ಚುವ ಕಾರಣ ಮತ್ತಷ್ಟು ಸಮಸ್ಯೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಬೆಲ್ಟ್ ಬದಲು ಬಟ್ಟೆಯನ್ನು ಸರಿಯಾದ ರೀತಿಯಲ್ಲಿ ಸುತ್ತಿಕೊಂಡರೆ (ಅದನ್ನು ಬಲ್ಲವರು ಇದ್ದರೆ) ಅದೇ ಒಳ್ಳೆಯದು ಎನ್ನುವುದು ಅನುಭವಸ್ಥರ ಮಾತು.
