ಗರ್ಭಾವಸ್ಥೆ, ಹೆರಿಗೆ ಸಮಯದಲ್ಲಿ ಪ್ರತಿ 2 ನಿಮಿಷಕ್ಕೊಂದು ಮಹಿಳೆ ಸಾವು: ವಿಶ್ವಸಂಸ್ಥೆ
ಗರ್ಭಾವಸ್ಥೆ ಹೆಣ್ಣುಮಕ್ಕಳ ಪಾಲಿಗೆ ಮರುಹುಟ್ಟು. ಗರ್ಭದೊಳಗಿಂತ ಜೀವವೊಂದು ಭೂಮಿಗೆ ಬರುವ ಸಂದರ್ಭ ಎಷ್ಟೋ ಹೆಣ್ಣುಮಕ್ಕಳು ಜೀವ ಕಳೆದುಕೊಳ್ಳುತ್ತಾರೆ. ಗರ್ಭಾವಸ್ಥೆ ಅಥವಾ ಹೆರಿಗೆ ಸಮಯದಲ್ಲಿ ಪ್ರತಿ 2 ನಿಮಿಷಕ್ಕೊಮ್ಮೆ ಮಹಿಳೆ ಸಾವನ್ನಪ್ಪುತ್ತಾಳೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಸ್ವಿಟ್ಜರ್‌ಲ್ಯಾಂಡ್: ಮಾತೃತ್ವ ಎಂಬುದು ಒಂದು ಅದ್ಭುತ ಅನುಭವ. ಪುಟ್ಟದೊಂದು ಜೀವವನ್ನು ತಿಂಗಳುಗಳ ಕಾಲ ಗರ್ಭದೊಳಗಿಟ್ಟು ಹೆಣ್ಣು ಅದಕ್ಕೆ ಜೀವ ನೀಡುವ ಪರಿಯೇ ಅದ್ಭುತ. ಆದರೆ ಗರ್ಭಾವಸ್ಥೆ ಅನ್ನೋದು ಅಷ್ಟು ಸುಲಭವಲ್ಲ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವಿವಿಧ ಸಮಸ್ಯೆಗಳು ಕಾಡುತ್ತವೆ. ಹೆರಿಗೆಯ ಸಂದರ್ಭದಲ್ಲೂ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಹೆರಿಗೆಯ ಸಂದರ್ಭ ವಿಪರೀತ ರಕ್ತಸ್ತ್ರಾವವಾಗಿ ಗರ್ಭಿಣಿಯರು ಒದ್ದಾಡುವುದೂ ಇದೆ. ಇನ್ನು ಕೆಲವರು ಹೆರಿಗೆನ ನಂತರವೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಎಷ್ಟೋ ಸಾರಿ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಹೆಣ್ಣು ಸಾವನ್ನಪ್ಪುತ್ತಾಳೆ. ಇದೆಲ್ಲದರ ಮಧ್ಯೆ ವಿಶ್ವ ಸಂಸ್ಥೆ ಬಹಿರಂಗಪಡಿಸಿರೋ ವಿಚಾರ ಎಲ್ಲರೂ ಬೆಚ್ಚಿಬೀಳುವಂತಿದೆ.
ವಿಶ್ವಾದ್ಯಂತ ಪ್ರತಿ ಎರಡು ನಿಮಿಷಗಳಿಗೊಮ್ಮೆ ಗರ್ಭಾವಸ್ಥೆಯಲ್ಲಿ ಮಹಿಳೆ ಸಾವು
ಗರ್ಭಾವಸ್ಥೆಯಲ್ಲಿ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಮಾತ್ರವಲ್ಲ ಮಹಿಳೆಯ (Women) ಬಗ್ಗೆಯೂ ಕುಟುಂಬ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕು. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಇದರೊಂದಿಗೆ ಕಾಲಕಾಲಕ್ಕೆ ತಪಾಸಣೆಗೆ ಒಳಪಡಬೇಕು. ಗರ್ಭಾವಸ್ಥೆಯಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ಈಗ ಹೆಚ್ಚು ಜಾಗೃತಿ ಮೂಡಿಸುತ್ತಿರುವ ಕಾರಣ, ಹೆಚ್ಚಿನ ಜನರು ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿದ್ದೂ ವಿಶ್ವಾದ್ಯಂತ ಪ್ರತಿ ಎರಡು ನಿಮಿಷಗಳಿಗೊಮ್ಮೆ ಮಹಿಳೆ ಗರ್ಭಾವಸ್ಥೆಯಲ್ಲಿ (Pregnancy) ಮತ್ತು ಹೆರಿಗೆಯ ಸಮಯದಲ್ಲಿ ಸಾಯುತ್ತಾಳೆ (Death) ಎಂದು ವಿಶ್ವಸಂಸ್ಥೆ ವರದಿ ಹೇಳುತ್ತದೆ.
Fertility Food; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ
ಈ ಅಂಕಿ ಅಂಶವೆಂದರೆ ಕಳೆದ 20 ವರ್ಷಗಳಲ್ಲಿ ಮಹಿಳೆಯರ ಸಾವಿನ ಪ್ರಮಾಣವು ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ವಿಶ್ವಸಂಸ್ಥೆಯ (UN) ವರದಿಯಲ್ಲಿ 2000 ಮತ್ತು 2015 ರ ನಡುವೆ ಮಹಿಳೆಯರ ಸಾವಿನ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ. 2016 ಮತ್ತು 2020 ರ ನಡುವೆ, ಸಾವಿನ ಪ್ರಮಾಣವು ಸ್ಥಿರವಾಗಿದೆ. ಅದೇ ಸಮಯದಲ್ಲಿ, ಕೆಲವು ಸ್ಥಳಗಳಲ್ಲಿ, ಈ ಅವಧಿಯಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ದಿನಕ್ಕೆ ಸುಮಾರು 800 ಅಥವಾ ಪ್ರತಿ 2 ನಿಮಿಷಕ್ಕೆ ಓರ್ವ ಗರ್ಭಿಣಿ ಸಾವು
2020ರಲ್ಲಿ ಜಾಗತಿಕವಾಗಿ 287,000 ಗರ್ಭಿಣಿ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ದಿನಕ್ಕೆ ಸುಮಾರು 800 ಸಾವುಗಳಿಗೆ ಸಮನಾಗಿರುತ್ತದೆ ಅಥವಾ ಪ್ರತಿ 2 ನಿಮಿಷಕ್ಕೆ ಒಂದು ಸಾವಿಗೆ ಸಮನಾಗಿರುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು WHO ವರದಿಯ ಲೇಖಕಿ ಡಾ. ಜೆನ್ನಿ ಕ್ರೆಸ್ವೆಲ್ ಹೇಳಿದ್ದಾರೆ. 2000 ಮತ್ತು 2015ರ ನಡುವೆ ದರಗಳು ಗಣನೀಯವಾಗಿ ಕುಸಿದವು. ಆದ್ರೆ, 2016 ಮತ್ತು 2020 ರ ನಡುವೆ ಕೆಲವು ಪ್ರದೇಶಗಳಲ್ಲಿ ಈ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗರ್ಭಾವಸ್ಥೆಯಲ್ಲಿ ತಲೆನೋವು ಕಾಡೋದು ಯಾಕೆ ಗೊತ್ತಾ?
ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಕಳೆದ 20 ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣವು 75 ಪ್ರತಿಶತದಷ್ಟು ಹೆಚ್ಚಾಗಿದೆ. 2000 ರಲ್ಲಿ 100,000 ಮಕ್ಕಳ ಜನನಗಳಿಗೆ ಸರಿಸುಮಾರು 12 ತಾಯಂದಿರು ಮರಣ ಹೊಂದಿದರೆ, 2020 ರಲ್ಲಿ 100,000 ಮಕ್ಕಳ ಜನನಗಳಿಗೆ 21 ತಾಯಂದಿರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.. ಅತಿ ಹೆಚ್ಚು ತಾಯಂದಿರ ಮರಣವು ಉಪ-ಸಹಾರನ್ ಆಫ್ರಿಕಾದಲ್ಲಿ ವರದಿಯಾಗಿದೆ. ಪ್ರತಿ 100,000 ಜೀವಂತ ಜನನಗಳಿಗೆ ಅಂದಾಜು 545 ತಾಯಂದಿರು ಮರಣ ಹೊಂದಿದ್ದಾರೆ. ಜಾಗತಿಕವಾಗಿ ಅಂದಾಜು 10 ರಲ್ಲಿ 7 ತಾಯಂದಿರ ಸಾವುಗಳು ಈ ಪ್ರದೇಶದಲ್ಲಿ ಸಂಭವಿಸುತ್ತವೆ.
WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಬಗ್ಗೆ ಮಾತನಾಡಿ, 'ಗರ್ಭಧಾರಣೆಯು ಎಲ್ಲಾ ಮಹಿಳೆಯರಿಗೆ ಅಪಾರ ಭರವಸೆ ಮತ್ತು ಸಕಾರಾತ್ಮಕ ಅನುಭವದ ಸಮಯವಾಗಿದ್ದರೂ, ದುಃಖಕರವೆಂದರೆ ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ಇದು ಆಘಾತಕಾರಿ ಮತ್ತು ಅಪಾಯಕಾರಿ ಅನುಭವವಾಗಿದೆ. ಈ ಹೊಸ ಅಂಕಿಅಂಶಗಳು ಪ್ರತಿ ಮಹಿಳೆ ಮತ್ತು ಹೆಣ್ಣು ಮಗುವಿಗೆ ನಿರ್ಣಾಯಕ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ತುರ್ತು ಅವಶ್ಯಕತೆಯಿದೆ ಎಂದು ತೋರಿಸುತ್ತದೆ' ಎಂದು ತಿಳಿಸಿದ್ದಾರೆ.