Miss England Beauty Pageant: ಮೇಕಪ್ ಇಲ್ಲದೇ ಸ್ಪರ್ಧಿಸಿ ತೀರ್ಪುಗಾರರ ಮನಗೆದ್ದ ಮೆಲಿಸಾ

 ನೈಜ ಸೌಂದರ್ಯವೇ ಸಹಜ ಅದೇ ಸುಂದರ ಎಂಬುದನ್ನು ಯಾವುದೇ ಮೇಕಪ್‌ ಇಲ್ಲದೇ ಇಂಗ್ಲೆಂಡ್‌ನ ನೈಜ ಸುಂದರಿಯೊಬ್ಬರು ತೋರಿಸಿಕೊಟ್ಟಿದ್ದಾರೆ.

20 year old Melisa Raouf compete in miss england beauty pageant without makeup akb

ಮೇಕಪ್ ಯಾರಿಗಿಷ್ಟ ಇಲ್ಲ ಹೇಳಿ, ಕೆಲವು ಗಂಡಸರಿಗೆ ಹೇಗೆ ಕುಡಿತದ ಗೀಳಿದೆಯೋ ಅದೇ ರೀತಿ ಕೆಲವು ಮಹಿಳೆಯರಿಗೆ ಮೇಕಪ್‌ನ ಗೀಳಿದೆ. ಮೇಕಪ್ ಇಲ್ಲದೇ ಬಹುತೇಕ ಮಹಿಳೆಯರು ಮನೆಯಿಂದ ಹೆಜ್ಜೆ ಹೊರಗಿಡುವುದಿಲ್ಲ. ಮೇಕಪ್ ಇಲ್ಲದೇ ಕನಿಷ್ಟ ಕಾಡಿಗೆ ಲಿಪ್‌ಸ್ಟಿಕ್ ಇಲ್ಲದೇ ಮನೆಯಿಂದ ಹೊರ ಹೋಗುವವರ ಸಂಖ್ಯೆ ತೀರಾ ವಿರಳ. ಆದರೆ ನೈಜ ಸೌಂದರ್ಯವೇ ಸಹಜ ಅದೇ ಸುಂದರ ಎಂಬುದನ್ನು ಯಾವುದೇ ಮೇಕಪ್‌ ಇಲ್ಲದೇ ಇಂಗ್ಲೆಂಡ್‌ನ ನೈಜ ಸುಂದರಿಯೊಬ್ಬರು ತೋರಿಸಿಕೊಟ್ಟಿದ್ದಾರೆ.

ಸೌಂದರ್ಯ ಸ್ಪರ್ಧೆ ಬಿಡಿ, ಸಾಮಾನ್ಯ ಸಣ್ಣ ಪುಟ್ಟ ಕಾರ್ಯಕ್ರಮಕ್ಕೆ ಮೇಕಪ್ ಇಲ್ಲದೇ ಹೋಗುವುದು ಎಂದರೆ ಹೆಣ್ಣು ಮಕ್ಕಳು ಹೌಹಾರುತ್ತಾರೆ. ಇಂತಹ ಪರಿಸ್ಥಿತಿ ಇರುವಾಗ ಇಂಗ್ಲೆಂಡ್‌ನ ಯುವತಿಯೊಬ್ಬರು, ಅದೂ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಮೇಕಪ್ ಇಲ್ಲದೇ ಭಾಗವಹಿಸಿದ್ದು, ಇದು ಎಲ್ಲರನ್ನು ನಿಬ್ಬೆರಗು ಮಾಡುವಂತೆ ಮಾಡಿದೆ. ಸೌಂದರ್ಯ ಸ್ಪರ್ಧೆಯ ಇತಿಹಾಸದಲೇ ಇದೇ ಮೊದಲ ಬಾರಿಗೆ ಮೇಕಪ್‌ ಧರಿಸದೇ ಮಹಿಳೆಯೊಬ್ಬರು ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 94 ವರ್ಷಗಳ ಇತಿಹಾಸವಿರುವ ಮಿಸ್‌ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬರು ಮೇಕಪ್ ಧರಿಸದೇ ಭಾಗವಹಿಸಿರುವುದು ಇದೇ ಮೊದಲು.

ಅಂದಹಾಗೆ ಹೀಗೆ ಮೇಕಪ್ ಧರಿಸದೇ ಸಹಜ ಸೌಂದರ್ಯದಿಂದ ತಮ್ಮನ್ನು ಗುರುತಿಸಿಕೊಂಡ ಯುವತಿ ಹೆಸರು ಮೆಲಿಸಾ ರೂಫ್‌, ಕೇವಲ 20 ವರ್ಷದ ಮೆಲಿಸಾ ಮಿಸ್ ಇಂಗ್ಲೆಂಡ್ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ಪುಗಾರರ ಮನ ಗೆದ್ದಿದ್ದು, ಮಿಸ್ ಇಂಗ್ಲೆಂಡ್ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್‌ನಲ್ಲಿ ಮಿಸ್ ಇಂಗ್ಲೆಂಡ್ ಸ್ಪರ್ಧೆ ನಡೆಯಲಿದ್ದು, ಅದರಲ್ಲಿ ಮೆಲಿಸಾ ಭಾಗವಹಿಸಲಿದ್ದಾರೆ. 

 

ಇನ್ನು ತಮ್ಮ ಈ ವಿಶೇಷ ಸಾಧನೆ ಬಗ್ಗೆ ಮಾತನಾಡಿದ ಮೆಲಿಸಾ, ನನಗೂ ಮೇಕಪ್ ಇಲ್ಲದೇ ಹೊರ ಹೋಗುವುದು ಎಂದರೆ ಆತ್ಮವಿಶ್ವಾಸ ಕುಗ್ಗುತ್ತಿತ್ತು. ಆದರೆ ನಿಜವಾದ ಸೌಂದರ್ಯವನ್ನು ಜಗತ್ತಿಗೆ ತೋರಿಸಬೇಕು ಎಂಬ ಉದ್ದೇಶದಿಂದ ಹೀಗೆ ಮೇಕಪ್ ಧರಿಸದೇ ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಈಗ ಸೆಮಿಫೈನಲ್‌ಗೆ ಆಯ್ಕೆಯಾಗಿರುವುದರಿಂದ ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಎಲ್ಲಾ ಹೆಣ್ಣು ಮಕ್ಕಳು ಅವರದೇ ರೀತಿಯಲ್ಲಿ ಸುಂದರಿಯರಾಗಿದ್ದಾರೆ ಎಂದು ಮೆಲಿಸಾ ಹೇಳಿದ್ದಾರೆ.

ಮೆಲಿಸಾ ಅವರ ಫೋಟೋವನ್ನು ಮಿಸ್ ಇಂಗ್ಲೆಂಡ್‌ ಸಮಿತಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ರಾಜ್ಯಶಾಸ್ತ್ರದ ವಿದ್ಯಾರ್ಥಿನಿಯಾಗಿರುವ ಮೆಲಿಸಾ ಈ ಮೂಲಕ ವಿಶ್ವದ ಹಲವು ಸೌಂದರ್ಯ ಉತ್ಪನ್ನಗಳಿಗೆ ಸವಾಲೊಡ್ಡಿದ್ದಾರೆ ಎಂದರೆ ತಪ್ಪಾಗಲಾರದು. 

ಉತ್ತಮ ಗುಣ ವ್ಯಕ್ತಿತ್ವಕ್ಕೆ ಕಳೆ ನೀಡಿದರೆ, ಅದರ ಜೊತೆಗಿನ ಸೌಂದರ್ಯ ವ್ಯಕ್ತಿತ್ವಕ್ಕೆ ಮತ್ತಷ್ಟು ಕಳೆ ನೀಡುತ್ತದೆ. ಆದಾಗ್ಯೂ ಮೇಕಪ್ ಬಹುತೇಕ ಮಹಿಳೆಯರ ಆತ್ಮವಿಶ್ವಾಸದ ಸಂಕೇತವಾಗಿದೆ. ಆದಾಗ್ಯೂ ಮೆಲಿಸಾ ಅವರು ಮೇಕಪ್‌ ಧರಿಸದೇ ನೈಜ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆಯುವ ಮೂಲಕ ಮೇಕಪ್ ಧರಿಸದೇ ಸಹಜವಗಿ ಕಾಣಲು ಬಯಸುವ ಅನೇಕ ಮಹಿಳೆಯರಿಗೆ ಸ್ಪೂರ್ತಿ ತುಂಬಿದ್ದಾರೆ.  

Latest Videos
Follow Us:
Download App:
  • android
  • ios