ಪತಿಯ ಜೀವ ಉಳಿಸಲು ಮೂತ್ರಪಿಂಡ ದಾನ ಮಾಡಿದ ಮಹಿಳೆಗೆ ಗಂಡನಿಂದ ಮೋಸವಾಗಿದ್ದು, ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಪ್ರೀತಿ ಮನುಷ್ಯರನ್ನು ಕುರುಡರನ್ನಾಗಿ ಮಾಡುತ್ತದೆ. ಪ್ರೀತಿಯಲ್ಲಿ ಬಿದ್ದವರು ತಮ್ಮ ಪ್ರೀತಿಗಾಗಿ ಬೇಕಾದಷ್ಟು ತ್ಯಾಗಗಳನ್ನು ಮಾಡುತ್ತಾರೆ ಆದರೆ ಅವರಿಗೆ ಕೊನೆಗೆ ಏನು ಸಿಗುವುದು? ಬಹುತೇಕ ಪ್ರೇಮಕತೆಗಳಲ್ಲಿ ತ್ಯಾಗಕ್ಕೆ ಪ್ರತಿಯಾಗಿ ಪ್ರೀತಿ ಸಿಗುವುದಿಲ್ಲ, ಅನೇಕರು ಪ್ರೀತಿಗಾಗಿ ಹಲವು ತ್ಯಾಗಗಳನ್ನು ಮಾಡಿ ಕಡೆಗೆ ಮೋಸ ಹೋಗುತ್ತಾರೆ. ತಾವು ಮೋಸ ಹೋದ ನಂತರವಷ್ಟೇ ಅವರಿಗೆ ತಾನು ಕುರುಡಾಗಿ ನಂಬಿದ್ದ ಆಕೆ/ಅವಳು ಮೋಸಗಾತಿ ಮೋಸಗಾರ ಎಂಬುದು ಗೊತ್ತಾಗುತ್ತದೆ. ಅದೇ ರೀತಿ ಇಲ್ಲೊಂದು ಮೋಸ ಕತೆ ವೈರಲ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತಮ್ಮ ಪ್ರೀತಿಪಾತ್ರ ಜೀವ ಉಳಿಸುವುದಕ್ಕಾಗಿ ಕೆಲವರು ಎಂಥಹಾ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಅದೇ ರೀತಿ 35 ವರ್ಷದ ಮಹಿಳೆ ಉಮ್ಮೆ ಸಹ್ಯಾದಿನ ಟುನಿ ಎಂಬಾಕೆ ತನ್ನ ಒಂದು ಕಿಡ್ನಿಯನ್ನು ದಾನ ಮಾಡುವ ಮೂಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ಪತಿಯನ್ನು ರಕ್ಷಿಸಿದ್ದಳು. ಆದರೆ ಹೆಂಡತಿಯ ಕಿಡ್ನಿ ದಾನ ಪಡೆದ ನಂತರ ಹುಷಾರಾದ ಗಂಡ ಮಾಡಿದ ಅವಾಂತರ ನೋಡಿದರೆ ಯಾವ ಹೆಣ್ಣು ಕೂಡ ತನ್ನ ಗಂಡನಿಗೆ ಕಿಡ್ನಿ ನೀಡುವುದಕ್ಕೆ ಪಕ್ಕಾ ಯೋಚನೆ ಮಾಡಿಯೇ ಮಾಡುತ್ತಾಳೆ. ಹಾಗಿದ್ರೆ ಈಕೆಯ ಗಂಡ ಮಾಡಿದ್ದೇನು?
ಪತ್ನಿಯಿಂದ ಕಿಡ್ನಿ ದಾನ ಪಡೆದ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡ ಗಂಡ ನಂತರ ಅನೈತಿಕ ಸಂಬಂಧದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಬರೀ ಇಷ್ಟೇ ಅಲ್ಲ ಆತ ಆನ್‌ಲೈನ್ ಬೆಟ್ಟಿಂಗ್ ಆಟವನ್ನು ಆಡಲು ಶುರು ಮಾಡಿದ್ದ. ಬರೀ ಇಷ್ಟೇ ಅಲ್ಲ, ಶಿವನ ಪಾದ ಸೇರಬೇಕಿದ್ದ ತನಗೆ ಕಿಡ್ನಿ ನೀಡಿ ಉಳಿಸಿಕೊಂಡ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿ ಅವಳ ಮೇಲೆ ಹಲ್ಲೆ ಮಾಡಿದ್ದಲ್ಲದೇ ತನ್ನ ಪ್ರೇಯಸಿಯ ಜೊತೆ ವಾಸಿಸಲು ಶುರು ಮಾಡಿದ.
ಉಮ್ಮೆ ಸಹ್ಯಾದಿನ ಟುನಿ 2006ರಲ್ಲಿ ಮಲೇಷ್ಯಾದ ತಾರೀಕ್ ಎಂಬಾತನನ್ನು ಮದುವೆಯಾಗಿದ್ದಳು. ವರ್ಷದ ನಂತರ ಅವರಿಗೆ ಒಬ್ಬ ಮಗನೂ ಜನಿಸಿದ್ದ. ಆದರೆ 2008ರಲ್ಲಿ ತಾರೀಕ್‌ನ ಆರೋಗ್ಯ ಹದಗೆಟ್ಟಿತ್ತು. ಅವನ ಎರಡು ಕಿಡ್ನಿಗಳು ವೈಫಲ್ಯ ಕಂಡಿದ್ದವು. ಅವನ ಕಿಡ್ನಿಗಳೆರಡು ಪ್ರಯೋಜನಕ್ಕೆ ಬರಲ್ಲ ಎಂದು ವೈದ್ಯರು ಸೂಚಿಸಿದ್ದರು. ಈ ವೇಳೆ ಮಗ ಸಣ್ಣವನಿದ್ದ, ಹಾಗಿದ್ದೂ ಉಮ್ಮೆ ಸಹ್ಯಾದಿನ ಟುನಿ ಆತನನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕರೆತರಲು ನಿರ್ಧರಿಸಿದಳು. ಅಲ್ಲದೇ ಆತನನ್ನು ಭಾರತಕ್ಕೆ ಕರೆತಂದಳು ಕೂಡ.
ಅವನನ್ನು ಉಳಿಸಿಕೊಳ್ಳಲು ವರ್ಷಗಳ ಹೋರಾಟದದಲ್ಲಿ ಆಕೆ ತನ್ನ ಬಳಿ ಇದ್ದ ಚಿನ್ನಾಭರಣಗಳ ಮಾರಾಟ ಮಾಡಿದಳು, ತನ್ನೆಲ್ಲಾ ಸೇವಿಂಗ್ಸ್‌ಗಳನ್ನು ಆತನ ಚಿಕಿತ್ಸೆಗೆ ಖರ್ಚು ಮಾಡಿದಳು ಬರೀ ಇಷ್ಟೇ ಅಲ್ಲ 2019 ರಲ್ಲಿ ಆತನನ್ನು ಉಳಿಸಲು ತನ್ನ ಸ್ವಂತ ಮೂತ್ರಪಿಂಡವನ್ನೇ ಆಕೆ ದಾನ ಮಾಡಿದಳು. ಆದರೆ ಇದಾದ ನಂತರ ಆತ ಚಿಗುರಿಕೊಂಡಿದ್ದು, ತನ್ನ ನಿಜ ಬುದ್ಧಿಯನ್ನು ತೋರಿಸಲು ಶುರು ಮಾಡಿದ್ದ.
ಆರೋಗ್ಯ ಸುಧಾರಿಸಿಕೊಂಡು ಮೊದಲಿನಂತಾಗುತ್ತಿದ್ದಂತೆ ಆತ ತಾರೀಕ್‌ನ ನಡವಳಿಕೆ ವಿಚಿತ್ರವೆಂಬಷ್ಟು ಬದಲಾಯ್ತು. ಆತ ಆಕೆಯ ಮೇಲೆ ದೌರ್ಜನ್ಯ ನಡೆಸಲು ಶುರು ಮಾಡಿದ, ಆಕೆಯ ದುಡಿಮೆ ಎಲ್ಲವನ್ನು ಕೇಳಲು ಶುರು ಮಾಡಿದ, ಇರುವ ಮನೆಯನ್ನು ತನಗೆ ನೀಡುವಂತೆ ಕೇಳಿದ, ಬರೀ ಇಷ್ಟು ಸಾಲದು ಎಂಬಂತೆ ಆತ ತಾಹ್ಮಿನಾ ಎಂಬ ಮಹಿಳೆಯ ಜೊತೆ ಅಕ್ರಮ ಸಂಬಂಧವನ್ನು ಇರಿಸಿಕೊಂಡ, ಜೊತೆಗೆ ಆನ್‌ಲೈನ್ ಬೆಟ್ಟಿಂಗ್ ಚಟವನ್ನು ಬೆಳೆಸಿಕೊಂಡ.
ಇದನ್ನೆಲ್ಲಾ ನೋಡಿಕೊಂಡು ಇರಲಾರದೆ ಹೆಂಡತಿ ಟುನಿ ವಿರೋಧಿಸುವುದಕ್ಕೆ ತೊಡಗಿದಾಗ ಆತ ಮತ್ತಷ್ಟು ಕ್ರೂರಿಯಾಗುತ್ತಿದ್ದ, ವಿಚ್ಛೇದನ ನೀಡುವುದಾಗಿಯೂ ಬೆದರಿಸುತ್ತಿದ್ದ. ಆದರೆ ವರ್ಷಗಳ ಕಾಲ ಗಂಡನ ಈ ಅನಾಚಾರವನ್ನು ಸಹಿಸಿಕೊಂಡು ಬಂದ ಟುನಿ ಕಡೆಗೂ ಆತನ ವಿರುದ್ಧ 2023ರಲ್ಲಿ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದಳು.
ತಾರೀಕ್‌ನ ಬಂಧನವೂ ಆಯ್ತು. ಆದರೆ ಆತ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತೆ ತನಗೆ ವಿಚ್ಛೇದನ ನೀಡುವಂತೆ ಹಾಗೂ ಮನೆಯನ್ನು ನೀಡುವಂತೆ ಒತ್ತಾಯಿಸಲು ಶುರು ಮಾಡಿದ. ಈತನ ವಿರುದ್ಧ ಪತ್ನಿ ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಇಂತಹ ಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬಾರದಿರಲಿ ಎಂದು ಆಶಯ ವ್ಯಕ್ತಪಡಿಸುತ್ತಾಳೆ.
ಈ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತರಹೇವಾರಿ ಹಾಸ್ಯಮಯ ಕಾಮೆಂಟ್‌ಗಳಿಗೆ ಕಾರಣವಾಗಿದೆ. ಈಕೆಯ ದುಃಖದ ಕತೆ ಕೇಳಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕರು ನೀವು ನೀಡಿದ ಕಿಡ್ನಿಯನ್ನು ಆತನಿಂದ ವಾಪಸ್ ಪಡೆಯುವಂತೆ ಕೇಳಿದ್ದಾರೆ. ಯಾರಿಗೆ ಕಿಡ್ನಿ ನೀಡಿದರು ಗಂಡನಿಗೆ ಮಾತ್ರ ನೀಡಬೇಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ನನ್ನ ಗಂಡನಿಗೆ ನಾನು ಎಷ್ಟೇ ಪ್ರೀತಿ ಕೊಟ್ಟರೂ ನಾನು ನನ್ನ ಮೂತ್ರಪಿಂಡವನ್ನೇ ಕೊಡುವುದಿಲ್ಲ. ಆದರೆ ಅವನು ಮೂತ್ರಪಿಂಡ ವೈಫಲ್ಯದಿಂದ ಸಾಯುವವರೆಗೂ ನಾನು ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜಾಸ್ತಿ ನಿಷ್ಠೆಯಿಂದ ಇರುವವರಿಗೆ ಕಡೆಗೆ ಇದೇ ಗತಿಯಾಗುತ್ತದೆ ಇದೊಂದು ದುಃಖದ ಸಂಗತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.
