ಗ್ಯಾಸ್ ಸಿಲಿಂಡರ್ ಕೊರತೆಯ ನೆಪದಲ್ಲಿ ಹೋಟೆಲ್‌ಗಳು ಗ್ರಾಹಕರನ್ನು ಲೂಟಿ ಮಾಡುತ್ತಿವೆ. ಬೆಂಗಳೂರಿನ ಕೊತ್ತನೂರು ಬಳಿಯ ಕೆಫೆಯೊಂದು, ಅಡುಗೆಗೆ ಬಳಸದ ನಿಂಬೆ ಜ್ಯೂಸ್‌ಗೂ 'ಗ್ಯಾಸ್ ಚಾರ್ಜ್' ವಿಧಿಸಿದ್ದು, ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಗ್ಯಾಸ್ ಕೊರತೆಯ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಸಾಕ್ಷಿಯಾಗಿದೆ.

ಈಗ ಎಲ್ಲೆಲ್ಲೂ ಗ್ಯಾಸ್​ ಸಿಲಿಂಡರ್​ಗೆ ಹಾಹಾಕಾರ ಸೃಷ್ಟಿಯಾಗುತ್ತಿದೆ. ಮನೆ ಬಳಕೆಯ ಗ್ಯಾಸ್​ ಮೇಲೆ ಇದು ಪರಿಣಾಮ ಅಷ್ಟೊಂದು ಬೀರದಿದ್ದರೂ ಹೋಟೆಲ್​ಗಳ ಸ್ಥಿತಿ ಚಿಂತಾಜನಕವಾಗಿದೆ. ಕೆಲವೊಂದು ಹೋಟೆಲ್​ನವರು ಡಬಲ್​ ದುಡ್ಡು ಕೊಟ್ಟು ಕಾಳಸಂತೆಯಲ್ಲಿ ಸಿಲಿಂಡರ್​ ಪಡೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕಾಳಸಂತೆಯಲ್ಲಿ ಸಿಲಿಂಡರ್​ ಮಾರುತ್ತಿದ್ದಾರೆ. ಇದಾಗಲೇ ಕರ್ನಾಟಕ ಸೇರಿದಂತೆ ರಾಜಕೀಯ ಮುಖಂಡರ ಮೇಲೆ ದಾಳಿ ನಡೆದಿದೆ. ಏನೇ ರೂಲ್ಸ್​ ಮಾಡಿದರೂ, ಇಂಥ ಸಮಯಕ್ಕಾಗಿಯೇ ಕಾಯುತ್ತಿರುವ ಒಂದಷ್ಟು ಮಂದಿ ಕೊರತೆ ಸೃಷ್ಟಿಸಿ ದುಡ್ಡು ಮಾಡಲು ನೋಡಿಕೊಳ್ಳುತ್ತಾರೆ.

ಗ್ರಾಹಕರ ಲೂಟಿ

ಅದೇ ಇನ್ನೊಂದೆಡೆ, ಹೋಟೆಲ್​ಗಳಲ್ಲಿ ಗ್ಯಾಸ್​ ಕೊರತೆಯಿಂದಾಗಿ ಆಹಾರ ಪದಾರ್ಥಗಳ ಬೆಲೆಯನ್ನು ಏರಿಸಿದ್ದರೆ, ಬಿಲ್​ ನೀಡುವಾಗ ಗ್ಯಾಸ್​ ಚಾರ್ಜ್​ ಎಂದು ಎಕ್ಸ್​ಟ್ರಾ ಬಿಲ್​ ಹಾಕುತ್ತಿದ್ದಾರೆ. ಹೋಟೆಲ್​ಗಳಲ್ಲಿ ತಿನಿಸು, ಪಾನೀಯ ಬೇಕು ಎನ್ನುವವರು ಇದನ್ನೆಲ್ಲ ಸದ್ಯದ ಮಟ್ಟಿಗೆ ಸಹಿಸಿಕೊಳ್ಳಲೇಬೇಕು. ಹಾಗೆಂದು ಜ್ಯೂಸ್​ಗಳಿಗೂ ಗ್ಯಾಸ್​ ಚಾರ್ಜ್​ ಹಾಕೋದಾ? ಗ್ರಾಹಕರನ್ನು ಪೆಂಗರನ್ನಾಗಿ ಮಾಡಲು, ಗ್ರಾಹಕರನ್ನು ಲೂಟಿ ಮಾಡಲು, ಹಗಲು ದರೋಡೆ ಎಂಬಂತೆ ಬೇಕಾಬಿಟ್ಟೆಯಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಹೋಟೆಲ್​ಗಳು ಸದ್ಯದ ಸ್ಥಿತಿಯಲ್ಲಿ, ಆಹಾರ ಪದಾರ್ಥಗಳ ಮೇಲಿನ ರೇಟ್​ ಸ್ವಲ್ಪ ಹೆಚ್ಚು ಮಾಡುವುದು ಅನಿವಾರ್ಯವೇ ಆಗಿದೆ. ಹಾಗೆಂದು ಸಿಕ್ಕ ಸಿಕ್ಕಂತೆ ಬಾಯಿಗೆ ಬಂದಂತೆ ಗ್ಯಾಸ್​​ ಬಿಲ್​ ಹಾಕಿ ಗ್ರಾಹಕರಿಗೆ ಮರುಳು ಮಾಡುತ್ತಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​

ಅಂಥದ್ದೇ ಒಂದು ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಬೆಂಗಳೂರಿನ ಕೊತ್ತನೂರು ಬಳಿ ಇರುವ ಥಿಯೋ ಕೆಫೆಯ ಬಿಲ್​ ಒಂದರ ಫೋಟೋ ಅನ್ನು ಸೋಷಿಯಲ್​ ಮೀಡಿಯಾ ಬಳಕೆದಾರರು ಶೇರ್​ ಮಾಡಿದ್ದಾರೆ. ಅದರಲ್ಲಿ ಮಿಂಟ್​ ಲಿಂಬೆ ಹಣ್ಣಿನ ಜ್ಯೂಸ್​ ಒಂದಕ್ಕೆ 179 ರೂಪಾಯಿ ಬಿಲ್​ ಮಾಡಿದ್ದಾರೆ. 30-40 ರೂಪಾಯಿ ಒಳಗೆ ರೋಡ್​ ಸೈಡ್​ಗಳಲ್ಲಿ ಸಿಗುವ ಈ ಜ್ಯೂಸ್​ಗೆ ಇಂಥ ಕೆಫೆಗಳಲ್ಲಿ ಐದಾರು ಪಟ್ಟು ಹೆಚ್ಚಿಗೆ ಹಣ ಕೊಟ್ಟು ಕುಡಿಯುವುದು ಕೆಲವರಿಗೆ ಒಗ್ಗಿರತ್ತೆ, ಕೆಲವರಿಗೆ ಪ್ರತಿಷ್ಠೆಯ ಮಾತಾಗಿರುತ್ತದೆ ಎನ್ನುವುದು ಬೇರೆ ಮಾತು ಬಿಡಿ.

ಗ್ಯಾಸ್​ನಲ್ಲಿ ನಿಂಬೆ ಜ್ಯೂಸ್​

ಆದರೆ ಇಲ್ಲಿ ಇರುವ ವಿಚಿತ್ರ ಎಂದರೆ, ಎರಡು ಜ್ಯೂಸ್​ಗೆ ಜಿಎಸ್​ಟಿ ಅದೂ ಇದೂ ಎಲ್ಲಾ ಸೇರಿ 358 ರೂಪಾಯಿ ಆಗಿದೆ. ಇದಕ್ಕೆ ಗ್ಯಾಸ್​ ಚಾರ್ಜ್​ ಎಂದು 17 ರೂಪಾಯಿ ಎಕ್ಸ್​ಟ್ರಾ ಬಿಲ್​ನಲ್ಲಿ ಸೇರಿಸಲಾಗಿದೆ. ಅಂದರೆ ಈ ಕೆಫೆಯಲ್ಲಿ ಲಿಂಬೆ ಹಣ್ಣಿನ ಜ್ಯೂಸ್​ ಅನ್ನೂ ಗ್ಯಾಸ್​ನಲ್ಲಿ ಮಾಡ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಕೆಲವರು ಅತ್ಯಂತ ಕಡಿಮೆ ಬೆಲೆಗೆ ಸಿಗುವ ಜ್ಯೂಸ್​ಗೆ 179 ರೂಪಾಯಿ ಕೊಟ್ಟಿರುವಾಗ 17 ರೂಪಾಯಿ ಎಕ್ಸ್​ಟ್ರಾ ಕೊಟ್ಟರೆ ತಪ್ಪಿಲ್ಲ ಬಿಡಿ ಎಂದು ಟೀಕೆಯನ್ನೂ ಮಾಡುತ್ತಿದ್ದಾರೆ. ಆದರೆ ಗ್ರಾಹಕರನ್ನು ಹೇಗೆ ಗ್ಯಾಸ್​ ಸಿಲಿಂಡರ್​ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಈ ಬಿಲ್​ ಸಾಕ್ಷಿಯಾಗಿದೆ.