ನಾಯಿಯೊಂದು ಕಾರೊಂದನ್ನು ಎರಡು ಕಿಲೋ ಮೀಟರ್‌ಗೂ ಅಧಿಕ ದೂರ ಹಿಂಬಾಲಿಸಿಕೊಂಡು ಹೋದಂತಹ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದ್ದು, ಯಾರೋ ಸಾಕಿದವರೇ ಬಿಟ್ಟು ಹೋದರೇನೋ ಎಂಬ ಅನುಮಾನ ಜನರನ್ನು ಕಾಡಿದೆ.
ನಾಯಿಯೊಂದು ಕಾರೊಂದನ್ನು ಎರಡು ಕಿಲೋ ಮೀಟರ್‌ಗೂ ಅಧಿಕ ದೂರ ಹಿಂಬಾಲಿಸಿಕೊಂಡು ಹೋದಂತಹ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದ್ದು, ಯಾರೋ ಸಾಕಿದವರೇ ಬಿಟ್ಟು ಹೋದರೇನೋ ಎಂಬ ಅನುಮಾನ ಜನರನ್ನು ಕಾಡಿತ್ತು. ನಾಯಿ ಕಾರನ್ನು ಅಸಹಾಯಕತೆಯಿಂದ ಹಿಂಬಾಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಸಾಕಿದವರು ಯಾರೋ ನಾಯನ್ನು ಬಿಟ್ಟು ಹೋಗಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಟ್ವಿಟ್ಟರ್‌ನಲ್ಲಿ @TheViditsharma ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿ, ಇದೊಂದು ಹೃದಯವಿದ್ರಾವಕ ಘಟನೆ ಇಂದು ಮಧ್ಯಾಹ್ನ 12:30 ಕ್ಕೆ, ಫರಿದಾಬಾದ್‌ನ QRG ಆಸ್ಪತ್ರೆಯ ಮುಂದೆ, ಯಾರೋ ನಿರ್ದಯವಾಗಿ ತಮ್ಮ ನಾಯಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಕಾರಿನ ಸಂಖ್ಯೆ HR51 CF 2308 ಇದು ಸ್ಪಷ್ಟವಾದ ಪ್ರಾಣಿ ಹಿಂಸೆ. ಆ ಬಡ ನಾಯಿ ಈಗ ಸಂಚಾರದಿಂದ ಸಾಯುವ ಅಥವಾ ಇತರ ನಾಯಿಗಳಿಂದ ದಾಳಿಗೊಳಗಾಗುವ ಅಪಾಯದಲ್ಲಿದೆ. ದಯವಿಟ್ಟು ಅಪರಾಧಿಯನ್ನು ಗುರುತಿಸಲು ಸಹಾಯ ಮಾಡಿ. ಜೀವ ಉಳಿಸಲು RT ಮಾಡಿ ಎಂದು ಬರೆದು ಈ ವೀಡಿಯೋವನ್ನು ಅವರು ಪೋಸ್ಟ್ ಮಾಡಿದರು.
ಜುಲೈ 5 ರಂದು ಪೋಸ್ಟ್ ಮಾಡಲ್ಪಟ್ಟ ಈ ವೀಡಿಯೋವನ್ನು ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದು, ಅನೇಕರು ರಸ್ತೆಯಲ್ಲಿ ತೊರೆದು ಹೋದ ನಾಯಿಯ ನೆನೆದು ರೋದಿಸ ತೊಡಗಿದ್ದರು. ಹೀಗೆ ನಾಯಿಯನ್ನು ಬಿಟ್ಟು ಹೋದ ವ್ಯಕ್ತಿಯ ಕ್ರೌರ್ಯಕ್ಕೆ ಹಿಡಿಶಾಪ ಹಾಕಿದ್ದರು. ಇಂತಹ ಮನಸ್ಥಿತಿ ಇದ್ದರೆ ನಾಯಿ ಸಾಕುವುದಕ್ಕೆ ಹೋಗಬಾರದು. ಹೀಗೆ ರಸ್ತೆಯಲ್ಲಿ ನಾಯಿಗಳನ್ನು ಬಿಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಎಂದೆಲ್ಲಾ ವೀಡಿಯೋ ನೋಡಿದ ಜನ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದರು.
ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಪ್ರಕರಣವೂ ದಾಖಲಾಗಿ ನಾಯಿ ಹಿಂಬಾಲಿಸಿದ್ದ ವಾಹನದ ಸಂಖ್ಯೆಯ ಮೂಲಕ ಆ ವಾಹನದ ಮಾಲೀಕನನ್ನು ಗುರುತು ಮಾಡಲಾಯ್ತು. ಆದರೆ ಆಗ ತಿಳಿದ ಸತ್ಯಾಂಶವೇ ಬೇರೆ ಆಗಿತ್ತು. ಆ ಕಾರಿನ ಮಾಲೀಕರು ನಾಯಿಯನ್ನು ಅಲ್ಲಿ ಬಿಟ್ಟು ಹೋಗಿರಲಿಲ್ಲ, ಅದು ಅವರ ನಾಯಿಯೂ ಆಗಿರಲಿಲ್ಲ, ಅವರೊಬ್ಬ ನಾಯಿ ಪ್ರೇಮಿಯಾಗಿದ್ದರು. ಮನೆಯಲ್ಲಿಯೂ ಹಲವು ನಾಯಿಗಳನ್ನು ಸಾಕುತ್ತಿದ್ದರು. ಜೊತೆಗೆ ಪ್ರತಿದಿನವೂ ಬೀದಿಯಲ್ಲಿ ಇರುವ ನಾಯಿಗೆ ಅವರು ಆಹಾರ ಹಾಕುತ್ತಿದ್ದರು. ಈ ಹಿಂಬಾಲಿಸಿದ ನಾಯಿಗೂ ಅವರು ಆಹಾರವನ್ನು ನೀಡುತ್ತಿದ್ದರು. ಬೀದಿಯಲ್ಲಿದ್ದ ತನಗೆ ದಿನವೂ ಆಹಾರ ನೀಡುತ್ತಿದ್ದ ಈ ವ್ಯಕ್ತಿಯನ್ನು ನೋಡಿ ನಾಯಿಯೂ ಕೂಡ ಅವರ ಜೊತೆ ಒಂದು ಆತ್ಮೀಯ ಭಾವನೆಯನ್ನು ಬೆಳೆಸಿಕೊಂಡಿತ್ತು. ಹೀಗಾಗಿಯೇ ಈ ಶ್ವಾನ ಅವರ ಸಾನಿಧ್ಯದಲ್ಲಿಯೇ ಇರಲು ಬಯಸಿದ್ದು, ತನಗೆ ಆಹಾರ ನೀಡಿ ಕಾರಿನಲ್ಲಿ ಹೊರಟ ಅವರನ್ನು ತನಗೆಷ್ಟು ಸಾಧ್ಯವೋ ಅಷ್ಟು ದೂರ ಬೆನ್ನಟ್ಟಿ ಹೋಗಿತ್ತು. ಆದರೆ ನೋಡುವವರಿಗೆ ಯಾರೋ ಶ್ವಾನವನ್ನು ಬೀದಿಯಲ್ಲಿ ಬಿಟ್ಟು ಹೋದಂತೆಯೇ ಈ ವೀಡಿಯೋ ಕಾಣಿಸುತ್ತಿದ್ದು, ಜನ ವೀಡಿಯೋ ನೋಡಿ ಭಾವುಕರಾಗಿದ್ದರು. ಜೊತೆಗೆ ತಪ್ಪು ತಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಈಗ ಪೊಲೀಸರ ತನಿಖೆಯ ನಂತರ ಈ ಶ್ವಾನ ಮಾಲೀಕನಿಲ್ಲದ ಬೀದಿ ನಾಯಿ ಎಂದು ತಿಳಿದಿದೆ. ಅಲ್ಲದೇ ತನ್ನನ್ನು ಹೀಗೆ ಹಿಂಬಾಲಿಸಿ ಆತಂಕಕ್ಕೆ ಕಾರಣವಾದ ಈ ಶ್ವಾನವನ್ನು ದತ್ತು ಪಡೆಯಲು ಅಥವಾ ಅದಕ್ಕೇನಾದರು ಬೇರೆ ವ್ಯವಸ್ಥೆ ಮಾಡುವುದಕ್ಕೆ ಅವರು ಮುಂದಾಗಿದ್ದಾರೆ. ಹೀಗಾಗಿ ಇದು ನಾಯಿಯನ್ನು ತೊರೆದು ಹೋದ ಪ್ರಕರಣ ಅಲ್ಲ, ನಾಯಿಯೇ ಪ್ರೀತಿಯಿಂದ ಅವರ ಬೆನ್ನು ಬಿದ್ದಿದ್ದು ಎಂದು ತಿಳಿದು ಜನ ಭಾವುಕರಾಗಿದ್ದಾರೆ. ಜೊತೆಗೆ ಒಂದು ವಿಚಾರವನ್ನು ಹೇಗೆ ನಿರೂಪಣೆ ಮಾಡುತ್ತೇವೆ ಎಂಬುದರಿಂದ ದೃಷ್ಟಿಕೋನ ಹೇಗೆ ಬದಲಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ನಮ್ಮಲ್ಲಿ ಅನೇಕರು ಆತ ನಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಎಂದು ಆತನನ್ನು ಶಪಿಸುತ್ತಿದ್ದರು. ಆದರೆ ಆತ ಒಳ್ಳೆಯ ವ್ಯಕ್ತಿ. ಆ ನಾಯಿಯು ಒಳ್ಳೆಯ ಜೀವಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
_meandmyhuman ಎಂಬ ಇನ್ಸ್ಟಾ ಪೇಜ್‌ನಿಂದ ಆ ನಾಯಿಯನ್ನು ರಕ್ಷಿಸಿದ್ದ ಬಗ್ಗೆಯೂ ಈಗ ವೀಡಿಯೋ ವೈರಲ್ ಆಗಿದ್ದು, ಪ್ರಕರಣ ಶುಭಾಂತ್ಯವಾಗಿದ್ದಕ್ಕೆ ಜನ ಸಂತಸ ವ್ಯಕ್ತಪಡಿಸಿದ್ದಾರೆ.


