ಉಬರ್‌ನಿಂದ 3,300 ಉದ್ಯೋಗಿಗಳ ವಜಾ! ಇನ್ನು ಮುಂದೆ ಚಾಲಕರಿಲ್ಲದ 'ರೋಬೋಟ್ ಟ್ಯಾಕ್ಸಿ'ಗಳದ್ದೇ ಹವಾ? ಡ್ರೈವರ್‌ಗಳ ಅವಲಂಬನೆ ತಪ್ಪಿಸಲು ಕಂಪನಿ ಮಾಸ್ಟರ್ ಪ್ಲಾನ್! ವರ್ಕ್ ಫ್ರಮ್ ಹೋಮ್ ಬಂದ್, ಉದ್ಯೋಗ ಕಡಿತದ ಶಾಕ್: ಉಬರ್ ಸಿಇಒ ದಾರಾ ಖೋಸ್ರೋಶಾಹಿ ಬಿಗ್ ಡಿಸಿಷನ್!
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಬಿಸಿ ಈಗ ಕ್ಯಾಬ್ ದೈತ್ಯ 'ಉಬರ್' ಸಂಸ್ಥೆಗೂ ತಟ್ಟಿದೆ. ತನ್ನ ಒಟ್ಟು ಉದ್ಯೋಗಿಗಳ ಪೈಕಿ ಸುಮಾರು ಶೇ. 10 ರಷ್ಟು ಮಂದಿಯನ್ನು ಉಬರ್ ಕೆಲಸದಿಂದ ತೆಗೆದುಹಾಕಿದೆ. ಈ ಮೂಲಕ ಸುಮಾರು 3,300 ಉದ್ಯೋಗಿಗಳು ಬೀದಿಗೆ ಬೀಳುವಂತಾಗಿದೆ. ವೆಚ್ಚ ಕಡಿತ ಮತ್ತು ಭವಿಷ್ಯದ ಹೊಸ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡುವ ಉದ್ದೇಶದಿಂದ ಉಬರ್ ಈ ಕಠಿಣ ಕ್ರಮ ಕೈಗೊಂಡಿದೆ.
ವಜಾಕ್ಕೆ ಕಾರಣವೇನು?
ಉಬರ್ ಸಿಇಒ ದಾರಾ ಖೋಸ್ರೋಶಾಹಿ ಅವರು ಉದ್ಯೋಗಿಗಳಿಗೆ ಇಮೇಲ್ ಕಳುಹಿಸುವ ಮೂಲಕ ಈ ಬದಲಾವಣೆಗಳನ್ನು ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಉಬರ್ ವೇಗವಾಗಿ ಬೆಳೆದಿದ್ದು, ಇದರಿಂದ ನಿರ್ವಹಣಾ ಹಂತಗಳು (Management Layers) ಸಂಕೀರ್ಣವಾಗಿವೆ. ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳಲು ಮತ್ತು ಆರ್ಥಿಕ ಶಿಸ್ತು ಕಾಪಾಡಲು ಈ ರೀ-ಸ್ಟ್ರಕ್ಚರಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದರ ಅಡಿಯಲ್ಲಿ ಮ್ಯಾನೇಜರ್‌ಗಳ ಸಂಖ್ಯೆಯನ್ನು ಶೇ.20 ರಷ್ಟು ಕಡಿಮೆ ಮಾಡಲಾಗುತ್ತಿದೆ.
ಡ್ರೈವರ್‌ಗಳ ಅವಶ್ಯಕತೆಯೇ ಇರಲ್ವಾ?
ಉಬರ್ ಸಂಸ್ಥೆಯು ಈ ಉದ್ಯೋಗ ಕಡಿತದಿಂದ ಉಳಿತಾಯವಾಗುವ ಹಣವನ್ನು ಸ್ವಯಂಚಾಲಿತ ವಾಹನಗಳ (Autonomous Vehicles) ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದೆ. ಅಂದರೆ ಚಾಲಕರಿಲ್ಲದ 'ರೋಬೋಟ್ಯಾಕ್ಸಿ' (Robotaxi) ಸೇವೆಗೆ ಕಂಪನಿ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕಾಗಿ ಸುಮಾರು 10 ಬಿಲಿಯನ್ ಡಾಲರ್‌ಗೂ ಅಧಿಕ ಹಣವನ್ನು ಖರ್ಚು ಮಾಡಲು ಕಂಪನಿ ಯೋಜಿಸಿದೆ. ಇದು ಚಾಲಕರ ಮತ್ತು ಡೆಲಿವರಿ ಪಾರ್ಟ್ನರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಹಂತವಾಗಿದೆ.
ವರ್ಕ್ ಫ್ರಮ್ ಹೋಮ್ ಅಂತ್ಯ
ಉದ್ಯೋಗ ಕಡಿತದ ಜೊತೆಗೆ ಉಬರ್ ತನ್ನ ಕೆಲಸದ ಸಂಸ್ಕೃತಿಯಲ್ಲೂ ಬದಲಾವಣೆ ತಂದಿದೆ. ಇನ್ನು ಮುಂದೆ ಹೆಚ್ಚಿನ ಸಿಬ್ಬಂದಿ ಕಚೇರಿಗೆ ಮರಳಿ ಕೆಲಸ ಮಾಡಬೇಕಾಗುತ್ತದೆ. ರಿಮೋಟ್ ವರ್ಕ್ ಅಥವಾ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಕೇವಲ ಶೇ. 1 ರಷ್ಟು ಉದ್ಯೋಗಿಗಳಿಗೆ ಮಾತ್ರ ಸೀಮಿತಗೊಳಿಸಲು ಕಂಪನಿ ನಿರ್ಧರಿಸಿದೆ. ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಗರಗಳನ್ನು ಪ್ರಮುಖ ಗ್ಲೋಬಲ್ ಹಬ್‌ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಾರ್ಯಾಚರಣೆಯನ್ನು ಸುಲಭಗೊಳಿಸಲು ಉಬರ್ ತನ್ನ ವಿವಿಧ ವಿಭಾಗಗಳನ್ನು ಒಟ್ಟಿಗೆ ಸೇರಿಸುತ್ತಿದೆ. ರೆಸ್ಟೋರೆಂಟ್, ರೀಟೇಲ್ ಮತ್ತು ಡೈರೆಕ್ಟ್ ಡೆಲಿವರಿ ತಂಡಗಳನ್ನು ವಿಲೀನಗೊಳಿಸಲಾಗುತ್ತಿದೆ. ಇಂಜಿನಿಯರಿಂಗ್ ಮತ್ತು ಸೈನ್ಸ್ ತಂಡಗಳಲ್ಲೂ ಮಹತ್ತರ ಬದಲಾವಣೆಗಳನ್ನು ತರಲಾಗುತ್ತಿದೆ.


